JDS Strategy: ಲೋಕಸಭಾ ಚುನಾವಣೆಗೆ ಜೆಡಿಎಸ್ ಪುನಶ್ಚೇತನ ತಂತ್ರ, ಕಿರು ವಿರಾಮದ ಬಳಿಕ ಹೆಚ್‌ಡಿಕೆ ಸಕ್ರಿಯ, ಭಾನುವಾರ ಬೃಹತ್ ಸಮಾವೇಶ
ಲೋಕಸಭೆ ಚುನಾವಣೆ, ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರತೊಡಗಿವೆ. ಅಲ್ಪ ವಿರಾಮದ ಬಳಿಕ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸಕ್ರಿಯರಾಗಿದ್ದು, ಭಾನುವಾರ ಸಮಾವೇಶದಲ್ಲಿ ಜತೆಯಾಗಲು ನಾಯಕರು, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾತ್ಯತೀತ ಜನತಾದಳ (ಜೆಡಿಎಸ್) ಪುನಶ್ಚೇತನಕ್ಕೆ ಪಕ್ಷದ ವರಿಷ್ಠರು ತಂತ್ರ ರೂಪಿಸಿದ್ದು, ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಅಲ್ಪ ಅನಾರೋಗ್ಯದ ಬಳಿಕ ವಿರಾಮ ಪಡೆದು ಚೇತರಿಸಿಕೊಂಡ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಭಾನುವಾರ (ಸೆ.10) ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದಾರೆ.
ಈ ವಿದ್ಯಮಾನದ ನಡುವೆ ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರ ಕೂಡ ಮುನ್ನೆಲೆಗೆ ಬಂದಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈ ಕುರಿತು ಒಂದು ಹೇಳಿಕೆ ನೀಡಿದ್ದು, ಸ್ಥಾನ ಹಂಚಿಕೆ ಕೂಡ ತೀರ್ಮಾನ ಆಗಿದೆ. ಜೆಡಿಎಸ್ 4 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಅಲ್ಲಿ ಬಿಜೆಪಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲಿದೆ. ಒಟ್ಟು 28 ಸ್ಥಾನಗಳನ್ನು ಗೆಲ್ಲುವುದಕ್ಕೆ ಎನ್‌ಡಿಎ ಯೋಜನೆ ರೂಪಿಸಿಕೊಂಡಿರುವುದು ಗಮನಸೆಳೆದಿದೆ.
ದೃಢ ಸಂಕಲ್ಪ ಮಾಡೋಣ ದೃಢ ಹೆಜ್ಜೆ ಇಡೋಣ: ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್
ನಿಮ್ಮೆಲ್ಲರ ಪ್ರೀತಿ, ಹಾರೈಕೆ, ದೈವದ ಕರುಣೆ, ತಂದೆ ತಾಯಿಯವರ ಆಶೀರ್ವಾದದಿಂದ ನನ್ನ ಆರೋಗ್ಯ ಅತ್ಯುತ್ತಮವಾಗಿ ಸುಧಾರಿಸಿದೆ. ಜೆಡಿಎಸ್ ಪಕ್ಷದ ಚಟುವಟಿಕೆಗಳಲ್ಲಿ ಮತ್ತೆ ಸಕ್ರಿಯವಾಗಿ ಭಾಗಿಯಾಗುತ್ತಿದ್ದೇನೆ. ನಾವೆಲ್ಲರೂ ಪಣತೊಟ್ಟು ಹೊರಡೋಣ, ಪಕ್ಷವನ್ನು ಚೈತನ್ಯಶೀಲವಾಗಿ ಮರಳಿ ಕಟ್ಟೋಣ ಎಂದು ಹೇಳುತ್ತ 5 ಟ್ವೀಟ್‌ಗಳ ಸರಣಿಯನ್ನು ಕುಮಾರಸ್ವಾಮಿ ಪ್ರಕಟಿಸಿದ್ಧಾರೆ.
ಕರ್ನಾಟಕ ಸಂಕಷ್ಟದಲ್ಲಿದೆ. ತೀವ್ರ ಬರ-ನೆರೆ, ಅನಧಿಕೃತ ಲೋಡ್ ಶೆಡ್ಡಿಂಗ್, ಕಾವೇರಿ ಬಿಕ್ಕಟ್ಟಿನಿಂದ ತತ್ತರಿಸುತ್ತಿದೆ. ಅನ್ನ ಕೊಡುವ ರೈತರನ್ನು, ತೆರಿಗೆ ತೆರುವ ನಾಗರಿಕರನ್ನು ಕಾಲ ಕಸದಂತೆ ಕಡೆಗಣಿಸಲಾಗಿದೆ. ಈ ದುರಿತ ದಿನಗಳಲ್ಲಿ ನಾವು ಜನರ ಜತೆ ಬದ್ಧತೆಯಿಂದ ನಿಲ್ಲಬೇಕು. ಜನಪರ ನಿಲುವು, ಹೋರಾಟ ನಮ್ಮೆಲ್ಲರ ಹೊಣೆ, ನೈತಿಕ ಜವಾಬ್ದಾರಿ ಎಂದು ಅವರು ಹೇಳಿಕೊಂಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆ.10ರಂದು ಬೆಳಗ್ಗೆ ಜೆಡಿಎಸ್ ಮಹತ್ವದ ಸಭೆ
ಸೋತಿದ್ದೇವೆ, ನಿಜ.ಸೋಲೇ ಕೊನೆಯಲ್ಲ. ಹೋರಾಟದ ಹಾದಿಯಲ್ಲಿ ನಾವೆಲ್ಲರೂ ಸ್ಥೈರ್ಯ,ಅರ್ಪಣಾಭಾವದಿಂದ ಹೆಜ್ಜೆ ಹಾಕಲೇಬೇಕು.ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿಗಳು,ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡರ ಸಾನ್ನಿಧ್ಯದಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಸೆ.10ರ ಭಾನುವಾರ ಬೆಳಗ್ಗೆ 10.30ಗಂಟೆಗೆ ಮಹತ್ವದ ಸಭೆ ಕರೆದಿದ್ದೇವೆ.
ನಾನೂ ಸೇರಿ ಪ್ರತಿಯೊಬ್ಬರೂ ಪಕ್ಷದ ಕಟ್ಟಾಳುಗಳೇ ಎನ್ನವುದನ್ನು ಯಾರೂ ಮರೆಯುವಂತಿಲ್ಲ. ಪಕ್ಷದ ಉಳಿವು, ಗೆಲುವಿಗಾಗಿ ಅವಿರತವಾಗಿ ಶ್ರಮಿಸೋಣ. ತಪ್ಪದೇ ಸಭೆಗೆ ಬನ್ನಿ, ಮುಕ್ತವಾಗಿ ಮಾತನಾಡೋಣ. ಮುಂದಿನ ಹೆಜ್ಜೆಗಳನ್ನು ದೃಢವಾಗಿ ಇಡೋಣ. "ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ.." ಈ ವಿವೇಕವಾಣಿಯೇ ನಮ್ಮ ಪಾಲಿನ ಮೂಲಮಂತ್ರ. ದಯಮಾಡಿ ಎಲ್ಲರೂ ಬನ್ನಿ.. ದೃಢ ಸಂಕಲ್ಪ ಮಾಡೋಣ, ದೃಢ ಹೆಜ್ಜೆಗಳನ್ನು ಇಡೋಣ. ಜೈ ಕರ್ನಾಟಕ, ಜೈ ಜೆಡಿಎಸ್ ಎಂದು ಕುಮಾರಸ್ವಾಮಿ ಟೀಟ್ ಕೊನೆಗೊಳಿಸಿದ್ದಾರೆ.
ದೇವೇಗೌಡರ ನಿವಾಸದಲ್ಲಿ ಬುಧವಾರ ನಡೆಯಿತು ಮಹತ್ವದ ಸಭೆ
ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನಲ್ಲಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ನಿವಾಸದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಉಪಸ್ಥಿತಿಯಲ್ಲಿ ಮಹತ್ವದ ಸಭೆ ನಡೆಯಿತು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ವಿಚಾರದಲ್ಲಿ ಪಕ್ಷದ ಮೂಲಗಳ ಪ್ರಕಾರ, ಎಲ್ಲ ಶಾಸಕರು, ಮಾಜಿ ಶಾಸಕರು, ಪಕ್ಷದ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಬಹುತೇಕ ನಾಯಕರು ಬಿಜೆಪಿ ಜತೆಗಿನ ಮೈತ್ರಿಗೆ ಒಲವು ತೋರಿದ್ದಾರೆ. ಆದಾಗ್ಯೂ, ಅಂತಿಮ ತೀರ್ಮಾನವನ್ನು ಪಕ್ಷದ ವರಿಷ್ಠರಾದ ಹೆಚ್ ಡಿ ದೇವೇಗೌಡ ಅವರು ತೆಗೆದುಕೊಳ್ಳಲಿದ್ದಾರೆ.
ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಜೆಡಿಎಸ್ ಅನ್ನು ಆಹ್ವಾನಿಸದೇ ಇರುವ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠರು ಅಸಮಾಧಾನಗೊಂಡಿದ್ದರು. ಆದಾಗ್ಯೂ, ಬಿಜೆಪಿ ಜತೆಗಿನ ಮೈತ್ರಿ ವಿಚಾರವನ್ನು ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುವ ದೊಡ್ಡ ಸವಾಲು ನಾಯಕರ ಮೇಲೆ ಇದೆ. ಹಳೆ ಮೈಸೂರು ಭಾಗದಲ್ಲಿ ಅಲ್ಪ ಸಂಖ್ಯಾತರ ಬೆಂಬಲ ಜೆಡಿಎಸ್‌ಗೆ ಇದೆ ಎಂಬುದು ಗಮನಾರ್ಹ ವಿಚಾರ.
ಪಕ್ಷ ಏಕಾಂಗಿಯಾಗಿ ಲೋಕಸಭೆಗೆ ಸ್ಪರ್ಧಿಸಲಿದೆ ಎಂದು ಹಲವು ಬಾರಿ ಹೆಚ್ ಡಿ ಕುಮಾರಸ್ವಾಮಿ ಹೇಳುತ್ತಲೇ ಬಂದಿದ್ದರು. ಅದೇ ರೀತಿ ದೇವೇಗೌಡ ಅವರು ಕೂಡ, ಜೆಡಿಎಸ್ ಯಾವುದೇ ರಾಷ್ಟ್ರೀಯ ಪಕ್ಷದ ಅಡಿಯಾಳು ಅಲ್ಲ ಎಂದು ಹೇಳಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕೇವಲ 19 ಸ್ಥಾನಗಳನ್ನು ಗೆಲ್ಲುವುದಕ್ಕಷ್ಟೇ ಸಾಧ್ಯವಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಲೋಕಸಭೆ ಕಣಕ್ಕೆ ಇಳಿಸಿ ಗೆಲ್ಲಿಸಿದ್ದರು ಹೆಚ್ ಡಿ ದೇವೇಗೌಡ ಅವರು. ಸದ್ಯ ರೇವಣ್ಣ ಅವರು ಚುನಾವಣಾ ಅಕ್ರಮಕ್ಕೆ ಸಂಬಂಧಿಸಿ ಅನರ್ಹತೆ ಎದುರಿಸುತ್ತಿದ್ದಾರೆ.