ಬೆಂಗಳೂರು ಕಮಲಾನಗರದ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣ, ಒಂದು ವರ್ಷದ ಬಳಿಕ ಸೆರೆ ಸಿಕ್ಕ ಕಳ್ಳ; ಇನ್ನೆರಡು ಅಪರಾಧ ಸುದ್ದಿಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕಮಲಾನಗರದ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣ, ಒಂದು ವರ್ಷದ ಬಳಿಕ ಸೆರೆ ಸಿಕ್ಕ ಕಳ್ಳ; ಇನ್ನೆರಡು ಅಪರಾಧ ಸುದ್ದಿಗಳು

ಬೆಂಗಳೂರು ಕಮಲಾನಗರದ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣ, ಒಂದು ವರ್ಷದ ಬಳಿಕ ಸೆರೆ ಸಿಕ್ಕ ಕಳ್ಳ; ಇನ್ನೆರಡು ಅಪರಾಧ ಸುದ್ದಿಗಳು

ಬೆಂಗಳೂರು ಅಪರಾಧ ಸುದ್ದಿ: ಬೆಂಗಳೂರು ಕಮಲಾನಗರದ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣದಲ್ಲಿ ಒಂದು ವರ್ಷದ ಬಳಿಕ ಕಳ್ಳ ಸೆರೆ ಸಿಕ್ಕಿದ್ದಾನೆ. ಇನ್ನೆರಡು ಪ್ರತ್ಯೇಕ ಅಪರಾಧ ಸುದ್ದಿಗಳಿದ್ದು, ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಆರೋಪಿ ಹಾಗೂ ಕಚೇರಿಯಿಂದ 25 ಲಕ್ಷ ರೂ. ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.(ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ: ಬೆಂಗಳೂರು ಕಮಲಾನಗರದ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣದಲ್ಲಿ ಒಂದು ವರ್ಷದ ಬಳಿಕ  ಕಳ್ಳ ಸೆರೆ ಸಿಕ್ಕಿದ್ದಾನೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ: ಬೆಂಗಳೂರು ಕಮಲಾನಗರದ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣದಲ್ಲಿ ಒಂದು ವರ್ಷದ ಬಳಿಕ ಕಳ್ಳ ಸೆರೆ ಸಿಕ್ಕಿದ್ದಾನೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕಮಲಾನಗರದ ದೇವಸ್ಥಾನದಲ್ಲಿ ಒಂದು ವರ್ಷದ ಹಿಂದೆ ಕಳವು ಮಾಡಲಾಗಿದ್ದ 38 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಬಸವೇಶ್ವರನಗರ ಪೊಲೀಸರು ಯಶಸ್ವಿಯಾಗಿದ್ದಾರೆ. 2023ರ ಫೆಬ್ರವರಿ 21ರಂದು ಕಳವು ನಡೆದ ಬಗ್ಗೆ ಅರ್ಚಕರು ದೂರು ಸಲ್ಲಿಸಿದ್ದರು.

ಪೊಲೀಸರು ಎಷ್ಟೇ ಶೋಧ ನಡೆಸಿದರೂ ಆರೋಪಿಯ ಪತ್ತೆಯಾಗಿರಲಿಲ್ಲ. ಆದ್ದರಿಂದ ಕಳೆದ ಜೂನ್‌ ತಿಂಗಳಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಈ ಕಳ್ಳತನ ಕುರಿತಂತೆ ಸಿ ವರದಿ ಸಲ್ಲಿಸಿದ್ದರು. ಆದಾಗ್ಯೂ, 2024 ಏಪ್ರಿಲ್ 28ರಂದು ಬಸವೇಶ್ವರನಗರ ಸಮೀಪದ ಶಂಕರ ಮಠ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಓಡಾಡುತ್ತಿರುವ ಬಗ್ಗೆ ಪೊಲೀಸ್ ಬಾತ್ಮೀದಾರರೊಬ್ಬರು ಮಾಹಿತಿ ನೀಡಿದ್ದರು. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತುಮಕೂರು ಮತ್ತು ಮೈಸೂರು ಮತ್ತಿತರ ಸ್ಥಳಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದ.

ಮಂಡ್ಯದ ಗುತ್ತಲ್ ಮುಖ್ಯ ರಸ್ತೆಯಲ್ಲಿರುವ ಆರೋಪಿಯ ಮನೆಯಿಂದ 480 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರು ತುಮಕೂರು ಹಾಗೂ ಬೆಂಗಳೂರಿನ ಗಿರವಿ ಅಂಗಡಿಗಳಲ್ಲಿ ಈತ ಅಡವಿಟ್ಟಿದ್ದ 152 ಗ್ರಾಂ ಚಿನ್ನದ ಆಭರಣ ಹಾಗೂ 1 ಕೆ.ಜಿ.ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನಿಂದ ಒಟ್ಟು 38 ಲಕ್ಷ ರೂ. ಮೌಲ್ಯದ 632 ಗ್ರಾಂ ತೂಕದ ಚಿನ್ನಾಭರಣ, 5 ಲಕ್ಷ ರೂ. ಮೌಲ್ಯದ 22.76 ಗ್ರಾಂ ವಜ್ರ ಹಾಗೂ ಸುಮಾರು ರೂ. 80 ಸಾವಿರ ಮೌಲ್ಯದ 1 ಕೆ.ಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ವಿಭಾಗದ ಉಪ ಪೊಲೀಸ್‌ ಆಯುಕ್ತ ಗಿರೀಶ್‌ ಅವರ ಮಾರ್ಗದರ್ಶನದಲ್ಲಿ ಈ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 27 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಡೇಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡೇಪಾಳ್ಯದ ನಿವಾಸಿಯೊಬ್ಬರು ತಾವು ಮತ್ತು ತಮ್ಮ ಪತ್ನಿ ಸಿನಿಮಾ ನೋಡಿಕೊಂಡು ಬರುವಷ್ಟರಲ್ಲಿ ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ದೂರು ನೀಡಿದ್ದರು. ತಾವು ಮನೆಯಲ್ಲಿ ಇಲ್ಲದಿರುವುದನ್ನು ಅರಿತು ಕಳ್ಳರು ಸುಮಾರು 69 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಪ್ರಕರಣವನ್ನು ಸಿಸಿಬಿ ಯ ಸಂಘಟಿತ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು.

ಬಾತ್ಮೀದಾರರಿಂದ ಲಭ್ಯವಾದ ಮಾಹಿತಿಯನ್ನು ಆಧರಿಸಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಕಲಿ ಕೀ ಬಳಸಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿರುತ್ತಾನೆ.

ತನಿಖೆಯನ್ನು ಮುಂದುವರೆಸಿ, ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಬೇಗೂರು, ಚಂದ್ರಲೇಔಟ್‌, ಹೆಚ್.ಎಸ್.ಆರ್ ಲೇ ಔಟ್, ಹುಳಿಮಾವು, ಬಂಡೆಮಠ, ಕುಮಾರ ಸ್ವಾಮಿ ಲೇ ಔಟ್ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 6 ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯಿಂದ 27 ಲಕ್ಷ ರೂ. ಬೆಲೆ ಬಾಳುವ 422 ಗ್ರಾಂ ತೂಕದ ಚಿನ್ನಾಭರಣ ಹಾಗೂ ಒಂದು ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳಲಾಗಿದೆ.

ಕಚೇರಿಯಲ್ಲೇ 25 ಲಕ್ಷ ರೂ. ಕಳವು ಮಾಡಿದ್ದ ಆರೋಪಿ ಬಂಧನ

ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ 25 ಲಕ್ಷ ರೂ. ಕಳವು ಮಾಡಿದ್ದ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಹಂಪಿನಗರ ನಿವಾಸಿಯೊಬ್ಬರು ದೂರು ಸಲ್ಲಿಸಿ ತಮ್ಮ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಕಚೇರಿಯ ಕ್ಯಾಶ್ ಸೆಕ್ಷನ್ ನಲ್ಲಿಟ್ಟಿದ್ದ 25 ಲಕ್ಷ ರೂಪಾಯಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆಂದು ದೂರನ್ನು ಸಲ್ಲಿಸಿದ್ದರು.

ಕಳವು ಮಾಡಿದ ವ್ಯಕ್ತಿಯನ್ನು ಪೊಲೀಸರು ಮಡಿಕೇರಿ ಟೋಲ್‌ ಗೇಟ್ ಬಳಿ ಪತ್ತೆಮಾಡಿ ವಶಕ್ಕೆ ಪಡೆದುಕೊಂಡಿರುತ್ತಾರೆ. ಆತನನ್ನು ಬೆಂಗಳೂರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿದ ನಗದು ಹಣವನ್ನು ಮೂಡಲಪಾಳ್ಯದಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದ. ಆತನ ಸ್ನೇಹಿತನ ಮನೆಯಿಂದ 25 ಲಕ್ಷ ರೂ. ನಗದು ಹಣವನ್ನು ಪಡಿಸಿಕೊಳ್ಳಲಾಗಿದೆ.

(ವರದಿ- ಎಚ್. ಮಾರುತಿ, ಬೆಂಗಳೂರು)

Whats_app_banner