ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ವಿಧಾನಪರಿಷತ್‌ ಚುನಾವಣೆ; ಬಿಜೆಪಿಗೆ ಹಿನ್ನೆಡೆ, ಆದರೂ ಸಂಖ್ಯಾಬಲದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟವೇ ಬಲಿಷ್ಠ

ಕರ್ನಾಟಕ ವಿಧಾನಪರಿಷತ್‌ ಚುನಾವಣೆ; ಬಿಜೆಪಿಗೆ ಹಿನ್ನೆಡೆ, ಆದರೂ ಸಂಖ್ಯಾಬಲದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟವೇ ಬಲಿಷ್ಠ

ಕರ್ನಾಟಕ ವಿಧಾನಪರಿಷತ್‌ ಚುನಾವಣೆ ಮುಗಿದಿದ್ದು, ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ಆದರೂ ಸಂಖ್ಯಾಬಲದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟವೇ ಬಲಿಷ್ಠವಾಗಿ ಉಳಿದುಕೊಂಡಿದೆ. ಇನ್ನು, ಆಡಳಿತಾರೂಢ ಕಾಂಗ್ರೆಸ್‌ ಬಹುಮತಕ್ಕೆ ಇನ್ನೂ ಒಂದು ವರ್ಷ ಕಾಯಲೇಕಾದ ಪರಿಸ್ಥಿತಿ ಇದೆ. (ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)

ಕರ್ನಾಟಕ ವಿಧಾನಪರಿಷತ್‌ ಚುನಾವಣೆ; ಬಿಜೆಪಿಗೆ ಹಿನ್ನೆಡೆ, ಆದರೂ ಸಂಖ್ಯಾಬಲದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟವೇ ಬಲಿಷ್ಠ (ಸಾಂಕೇತಿಕ ಚಿತ್ರ)
ಕರ್ನಾಟಕ ವಿಧಾನಪರಿಷತ್‌ ಚುನಾವಣೆ; ಬಿಜೆಪಿಗೆ ಹಿನ್ನೆಡೆ, ಆದರೂ ಸಂಖ್ಯಾಬಲದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟವೇ ಬಲಿಷ್ಠ (ಸಾಂಕೇತಿಕ ಚಿತ್ರ)

ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆಯ ಆಸುಪಾಸಿನಲ್ಲಿ ವಿಧಾನಪರಿಷತ್‌ಗೆ ಚುನಾವಣೆ ನಡೆದಿದ್ದು ಅದರ ಫಲಿತಾಂಶವೂ ಬಂದಿದೆ. ವಿಧಾನ ಪರಿಷತ್‌ನಲ್ಲಿ ಈಗಲೂ ಬಿಜೆಪಿ ಜೆಡಿಎಸ್‌ ಮೈತ್ರಿಕೂಟವೇ ಬಹುಮತ ಹೊಂದಿದೆ. ಆಡಳಿತ ಪಕ್ಷಕ್ಕೆ ಪ್ರಮುಖ ಮಸೂದೆಗಳ ಅಂಗೀಕಾರ ಕಷ್ಟಸಾಧ್ಯವಾಗಲಿದೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಸರಕಾರ ಬಹುಮತ ಸಾಧಿಸಲು ಇನ್ನೂ ಒಂದು ವರ್ಷ ಕಾಯಬೇಕಿದೆ. ಹಾಗೆಂದು ಬಿಜೆಪಿ ಸಂತೋಷ ಪಡುವಂತಹುದ್ದೇನೂ ಇಲ್ಲ.

ಟ್ರೆಂಡಿಂಗ್​ ಸುದ್ದಿ

75 ಸದಸ್ಯರ ವಿಧಾನಪರಿಷತ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್‌ 34, ಬಿಜೆಪಿ 30, ಜೆಡಿಎಸ್ 8 ಸದಸ್ಯ ಬಲ ಹೊಂದಿದೆ. ಬಿಜೆಪಿ 30, ಜೆಡಿಎಸ್‌ನ 8 ಸದಸ್ಯರು ಸೇರಿ ಎನ್‌ಡಿಎ ಮೈತ್ರಿಕೂಟವಾದರೆ ಆಗ 38 ಸದಸ್ಯ ಬಲ ಹೊಂದಿದಂತಾಗುತ್ತದೆ.

ಚುನಾವಣೆ ನಡೆದ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 4 ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ 1 ಸ್ಥಾನ ಗಳಿಸಲು ಮಾತ್ರ ಸಾಧ್ಯವಾಗಿದೆ. ಚುನಾವಣೆ ನಡೆದ ತಲಾ ಮೂರು ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 3, ಬಿಜೆಪಿ 1 ಮತ್ತು 2ರಲ್ಲಿ ಜೆಡಿಎಸ್‌ ಗೆಲುವು ಸಾಧಿಸಿದೆ. ಬಿಜೆಪಿ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಭಿನ್ನಮತದ ನಡುವೆಯೂ ಬಿಜೆಪಿ ಒಂದು ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.

ವಿಧಾನ ಪರಿಷತ್‌ನ ಈ ಚುನಾವಣೆ ನಿರ್ಣಾಯಕ ಏಕೆ?

ಆಡಳಿತಾರೂಢ ಪಕ್ಷಕ್ಕೆ ಈ ಚುನಾವಣೆ ನಿರ್ಣಾಯಕವಾಗಿತ್ತು. ಒಂದು ವೇಳೆ ಚುನಾವಣೆ ನಡೆದ ಎಲ್ಲ 6 ಸ್ಥಾನಗಳನ್ನು ಗೆದ್ದಿದ್ದರೆ ಕಾಂಗ್ರೆಸ್‌ ಗೆ ಬಹುಮತ ಲಭಿಸುತ್ತಿತ್ತು.

ಇತ್ತೀಚೆಗಷ್ಟೇ ವಿಧಾನಸಭೆಯಿಂದ ವಿಧಾನಪರಿಷತ್‌ ಗೆ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 7, ಬಿಜಪಿ 3 ಮತ್ತು ಜೆಡಿಎಸ್‌ ಗೆ 1 ಸ್ಥಾನ ಲಭಿಸಿತ್ತು, ಆದರೂ ಕಾಂಗ್ರೆಸ್‌ ಗೆ ಬಹುಮತ ಇನ್ನೂ ಸಾಧ್ಯವಾಗಿಲ್ಲ. ಬಹುಮತ ಇಲ್ಲದಿರುವ ಕಾರಣಕ್ಕೆ ಪ್ರಮುಖ ಮಸೂದೆಗಳು ವಿಧಾನಪರಿಷತ್‌ ನಲ್ಲಿ ಅಂಗೀಕಾರವಾಗದೆ ಬಾಕಿ ಉಳಿದುಕೊಂಡಿವೆ. ಕಾಂಗ್ರೆಸ್‌ ಇನ್ನು ಬಹುಮತ ಗಳಿಸಬೇಕಾದರೆ 2026ರ ಜೂನ್‌- ಜುಲೈವರೆಗೆ ಕಾಯಲೇಬೇಕು. ಲಖನ್‌ ಜಾರಕಿಹೊಳಿ ಸ್ವತಂತ್ರ ಸದಸ್ಯರಾಗಿದ್ದು, ಬಸವರಾಜ ಹೊರಟ್ಟಿ ವಿಧಾನಪರಿಷತ್‌ ಸಭಾಪತಿಗಳಾಗಿದ್ದಾರೆ. ಈ ಮಧ್ಯೆ ಕೋಟಾ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದು, ಅವರು ಪ್ರತಿನಿಧಿಸುತ್ತಿದ್ದ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಸ್ಥಾನ ತೆರವಾಗಿದ್ದು, 6 ತಿಂಗಳಲ್ಲಿ ಚುನಾವಣೆ ನಡೆಯಬೇಕಿದೆ.

ನೂತನವಾಗಿ ಆಯ್ಕೆಯಾದ ಸದಸ್ಯರು

ಬೆಂಗಳೂರು ಪದವೀಧರರ ಕ್ಷೇತ್ರದಿಂದ ಕಾಂಗ್ರೆಸ್‌ ನ ರಾಮೋಜಿ ಗೌಡ ಆಯ್ಕೆಯಾಗಿದ್ದಾರೆ. ಇವರು ಹಾಲಿ ಬಿಜೆಪಿ ಸದಸ್ಯ ಅ.ದೇವೇಗೌಡ ಅವರನ್ನು 11,841 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ನೈಋತ್ಯ ಪದವೀಧರರ ಕ್ಷೇತ್ರದಿಂದ ಡಾ.ಧನಂಜಯ ಸರ್ಜಿ ಅವರು ಕಾಂಗ್ರೆಸ್‌ ಪಕ್ಷದ ಅಯನೂರು ಮಂಜುನಾಥ್‌ ಅವರನ್ನು 24,111 ಮತಗಳ ಭಾರಿ ಅಂತರದಿಂದ ಸೋಲಿಸಿದ್ದಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಕೆ.ವಿವೇಕಾನಂದ ಅವರು ಕಾಂಗ್ರೆಸ್‌ ನ ಮರಿತಿಬ್ಬೇಗೌಡ ಅವರನ್ನು 4,622 ಮತಗಳ ಅಂತರದಲ್ಲಿ ಮಣಿಸಿದ್ದಾರೆ. ಮರಿತಿಬ್ಬೇಗೌಡ ಅವರು 5 ನೇ ಬಾರಿಗೆ ಆಯ್ಕೆ ಬಯಸಿದ್ದರು.

ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ ನ ಎಸ್.‌ ಎಲ್.‌ ಭೊಜೇಗೌಡ ಅವರು ಕಾಂಗ್ರೆಸ್‌ ನ ಕೆ.ಕೆ.ಮಂಜುನಾಥ್‌ ವಿರುದ್ಧ 4,562 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಮತ್ತೊಂದು ಭದ್ರಕೋಟೆ ಆಗ್ನೇಯ ಶಿಕ್ಷಕರ ಕ್ಷೇತ್ರ. ಇಲ್ಲಿ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರು ಸತತ ಮೂರು ಬಾರಿ ಗೆಲುವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್‌ ಪಕ್ಷದ ಡಿ.ಟಿ.ಶ್ರೀನಿವಾಸ್‌ ಅವರನ್ನು ಸೋಲಿಸಿ ವಿಧಾನಪರಿಷತ್‌ ಪ್ರವೇಶಿಸಿದ್ದಾರೆ. ಇವರು ಕಾಂಗ್ರೆಸ್‌ ನ ಮಾಜಿ ಶಾಸಕಿ ಪೂರ್ಣಿಮಾ ಅವರ ಪತಿ.

ಈಶಾನ್ಯ ಪದವೀಧರರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್‌ ಅವರು ಹಾಲಿ ಸದಸ್ಯ ಬಿಜೆಪಿ ಅಭ್ಯರ್ಥಿ ಅಮರನಾಥ್‌ ಪಾಟೀಲ್‌ ಅವರನ್ನು ಪರಾಭವಗೊಳಿಸಿದ್ದಾರೆ.

(ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

ಟಿ20 ವರ್ಲ್ಡ್‌ಕಪ್ 2024