ಕನ್ನಡ ಸುದ್ದಿ  /  ಕರ್ನಾಟಕ  /  7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದರೆ ರಾಜ್ಯ ಸರ್ಕಾರಿ ನೌಕರರ ವೇತನ ಶೇ 27 ಏರಿಕೆ, ಬೊಕ್ಕಸಕ್ಕೆ ಆರ್ಥಿಕ ಹೊರೆ ಹೆಚ್ಚಳ

7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದರೆ ರಾಜ್ಯ ಸರ್ಕಾರಿ ನೌಕರರ ವೇತನ ಶೇ 27 ಏರಿಕೆ, ಬೊಕ್ಕಸಕ್ಕೆ ಆರ್ಥಿಕ ಹೊರೆ ಹೆಚ್ಚಳ

ಕರ್ನಾಟಕದಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಿ, 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದರೆ ರಾಜ್ಯ ಸರ್ಕಾರಿ ನೌಕರರ ವೇತನ ಶೇ 27 ಏರಿಕೆಯಾಗಲಿದೆ. ಅದೇ ರೀತಿ, ಬೊಕ್ಕಸಕ್ಕೆ ಆರ್ಥಿಕ ಹೊರೆ ಹೆಚ್ಚಳವಾಗಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದರೆ ರಾಜ್ಯ ಸರ್ಕಾರಿ ನೌಕರರ ವೇತನ ಶೇ 27 ಏರಿಕೆ, ಬೊಕ್ಕಸಕ್ಕೆ ಆರ್ಥಿಕ ಹೊರೆ ಹೆಚ್ಚಳವಾಗಲಿದೆ.
7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದರೆ ರಾಜ್ಯ ಸರ್ಕಾರಿ ನೌಕರರ ವೇತನ ಶೇ 27 ಏರಿಕೆ, ಬೊಕ್ಕಸಕ್ಕೆ ಆರ್ಥಿಕ ಹೊರೆ ಹೆಚ್ಚಳವಾಗಲಿದೆ.

ಬೆಂಗಳೂರು: ಕರ್ನಾಟಕದ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ.27ರಷ್ಟು ವೇತನ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಲುವ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ನೌಕರರ ವೇತನ ಹೆಚ್ಚಳ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆದಿದ್ದು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದೆ.

7ನೇ ವೇತನ ಆಯೊಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಒತ್ತಡ ಹೇರುತ್ತಲೇ ಬಂದಿದೆ. ವೇತನ ಹೆಚ್ಚಳಕ್ಕೆ ಸರ್ಕಾರ ಆಸಕ್ತಿ ವಹಿಸಿದೆಯಾದರೂ ಇದರಿಂದ ಉಂಟಾಗುವ ಆರ್ಥಿಕ ಹೊರೆಯನ್ನು ಸರಿದೂಗಿಸುವ ಸಂಬಂಧ ಮುಖ್ಯಮಂತ್ರಿಗಳು ಲೆಕ್ಕಾಚಾರ ಹಾಕತೊಡಗಿದ್ದಾರೆ.

ಈಗಾಗಲೇ ಇಂಧನ ಬೆಲೆ ಹೆಚ್ಚಿಸುವ ಮೂಲಕ ಸಾರ್ವಜನಿಕರ ಕೋಪಕ್ಕೆ ತುತ್ತಾಗಿರುವ ಸರ್ಕಾರ ಮತ್ತೆ ಯಾವುದೇ ರೀತಿಯ ಬೆಲೆ ಏರಿಕೆಯ ಸಾಹಸಕ್ಕೆ ಕೈ ಹಾಕಲಾರದು. ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವೇತನ ಹೆಚ್ಚಳ ಕುರಿತ ಅಜೆಂಡಾ ಅಧಿಕೃತವಾಗಿ ಇರಲಿಲ್ಲವಾದರೂ ಅನೌಪಚಾರಿಕ ಚರ್ಚೆ ನಡೆದಿದೆ. ಅಧಿಕೃತವಾಗಿ ಚರ್ಚಿಸಿ ಅಂದೇ ನಿರ್ಣಯ ಕೈಗೊಳ್ಳಬೇಕಿತ್ತು ಎಂದು ನೌಕರರು ವಾದಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸರ್ಕಾರಿ ನೌಕರರ ಬೇಡಿಕೆ ಹೊಸದಲ್ಲ

ಸರ್ಕಾರಿ ನೌಕರರ ಬೇಡಿಕೆ ಹೊಸದೇನೂ ಅಲ್ಲ. 2022ರಿಂದಲೂ ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಬಂದಿದ್ದಾರೆ. ಅಂದಿನ ಬಿಜೆಪಿ ಸರ್ಕಾರ 2022ರ ಮೇ ತಿಂಗಳಲ್ಲಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ ರಾವ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ವಿಧಾನಸಭಾ ಚುನಾವಣೆಗಳು ಎದುರಾದ ಕಾರಣ ಈ ಸಮಿತಿಯ ಕಾಲಾವಧಿಯನ್ನು 6 ತಿಂಗಳು ವಿಸ್ತರಿಸಲಾಗಿತ್ತು.

ಸರ್ಕಾರ ಕೂಡಲೇ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು 2023ರ ಏಪ್ರಿಲ್‌ ತಿಂಗಳಿನಿಂದಲೇ ಫೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು ಎಂದು ಒತ್ತಡ ಹೇರುತ್ತಿದೆ. ಒಂದು ವೇಳೆ ಸರ್ಕಾರ ವಿಫಲವಾದಲ್ಲಿ ಪ್ರತಿಭಟನೆ ಕುರಿತು ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿಯೂ ಸಂಘ ಎಚ್ಚರಿಕೆ ನೀಡಿದೆ.

ಕಳೆದ ವರ್ಷ ಅಧಿಕಾರದಿಂದ ನಿರ್ಗಮಿಸುವುದಕ್ಕೂ ಮುನ್ನ ಬಿಜೆಪಿ ಸರ್ಕಾರ ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಆದರೆ ಸರ್ಕಾರಿ ನೌಕರರು ಶೇ.40ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಪಡಿಸಿದ್ದರು. ಅಂತಿಮವಾಗಿ ಸುಧಾಕರ ರಾವ್‌ ಸಮಿತಿ ಶೇ.27.5ರಷ್ಟು ವೇತನ ಹೆಚ್ಚಳಕ್ಕೆ ಶೀಫಾರಸ್ಸು ಮಾಡಿದೆ. ಅಂದರೆ ಸರ್ಕಾರಿ ನೌಕರರ ಕನಿಷ್ಠ ವೇತನ 17,000 ರೂ.ಗಳಿಗೆ ಬದಲಾಗಿ 27,000 ರೂ ನಿಗಧಿಯಾಗಲಿದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರವೂ ವೇತನ ಆಯೋಗದ ಶಿಫಾರಸ್ಸುಗಳನ್ನು ಒಪ್ಪಿಕೊಂಡಿದ್ದಾರೆ. ಹಿಂದಿನ ಸರ್ಕಾರ ಈಗಾಗಲೇ ಶೇ.17ರಷ್ಟು ವೇತನ ಹೆಚ್ಚಳ ಮಾಡಿದ್ದು ಹೆಚ್ಚುವರಿಯಾಗಿ ಶೇ.10ರಷ್ಟು ಮಾತ್ರ ಮಾಡಬೇಕಿದ್ದು ಮುಖ್ಯಮಂತ್ರಿಗಳು ತಾತ್ತ್ವಿಕವಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಸುಲಭವಲ್ಲ

ಸರ್ಕಾರದ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಇದೂ ಸುಲಭವಲ್ಲ. ಶೇ.10 ರಷ್ಟು ಹೆಚ್ಚಳಕ್ಕೂ 17,500 ಕೋಟಿ ರೂಗಳು ಬೇಕಾಗಿದ್ದು, ಸರ್ಕಾರ ಇದೇ ಉದ್ದೇಶಕ್ಕೆ 15,000 ಕೋಟಿ ರೂ.ಗಳನ್ನು ಮಾತ್ರ ಒದಗಿಸಿದೆ. 2023-24ರಲ್ಲಿ ನೀಡಲಾಗುತ್ತಿದ್ದ ವೇತನದ ಮೊತ್ತ 65,003 ಕೋಟಿ ರೂ.ಗಳಿಂದ 80,434 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಅಂದರೆ 2,500 ಕೋಟಿ ರೂ.ಗಳ ಹೊರೆ ಎದುರಾಗಿದೆ.

ಚುನಾವಣಾ ಸಂದರ್ಭದಲ್ಲಿ ಸರ್ಕಾರ ವಿವಿಧ ಇಲಾಖೆಗಳಲ್ಲಿ ರಾಜ್ಯಾದ್ಯಂತ ಖಾಲಿ ಉಳಿದಿರುವ ಶೇ.40 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. ಒಂದು ವೇಳೆ ಭರ್ತಿ ಮಾಡಿದರೆ ಮತ್ತೆ ಹೆಚ್ಚುವರಿಯಾಗಿ 20 ಸಾವಿರ ಕೋಟಿ ರೂ.ಗಳ ಆರ್ಥಿಕ ಹೊರೆ ಉಂಟಾಗಲಿದೆ.

ವೇತನವನ್ನೂ ಹೆಚ್ಚಸಿ ಖಾಲಿ ಉಳಿದಿರುವ ಹುದ್ದೆಗಳನ್ನೂ ಭರ್ತಿ ಮಾಡಿದರೆ ಸಂಬಳದ ಮೊತ್ತವೇ 1.1 ಲಕ್ಷ ಕೋಟಿ ರೂ.ತಗುಲಲಿದೆ. ಆದರೆ ಸರ್ಕಾರ ಎರಡೂ ಬೇಡಿಕೆಗಳನ್ನು ಈಡೇರಿಸಲು ಬದ್ಧವಾಗಿದ್ದು, ಬೇಡಿಕೆ ಮತ್ತು ಕೊರತೆಯ ಅಂತರವನ್ನು ದಾಟಲು ಆದಾಯದ ಮೂಲಗಳ ಹುಡುಕಾಟ ನಡೆಸಲಿದ್ದೇವೆ ಎಂದು ಸಚಿವರೊಬ್ಬರು ಹೇಳುತ್ತಾರೆ. ಬಜೆಟ್‌ ನ ಅರ್ಧದಷ್ಟು ಅನುದಾನ ಸರ್ಕಾರಿ ನೌಕರರ ಸಂಬಳ ಮತ್ತು ಪಿಂಚಣಿಗೆ ವ್ಯಯವಾಗುತ್ತದೆ.

(ವರದಿ- ಎಚ್.ಮಾರುತಿ, ಬೆಂಗಳೂರು)