ಕರ್ನಾಟಕದಲ್ಲಿ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯನ್, ಕಬಾಬ್‌ಗಳಿಗೆ ಕೃತಕ ಬಣ್ಣ ಬಳಕೆ ನಿಷೇಧ; ಉಲ್ಲಂಘನೆಗೆ 7 ವರ್ಷ ಜೈಲು, 10 ಲಕ್ಷ ರೂ ದಂಡ
ಕರ್ನಾಟಕದಲ್ಲಿ ಇನ್ನು ಕಲರ್ ಕಲರ್ ಕಾಟನ್ ಕ್ಯಾಂಡಿ, ಆಕರ್ಷಕ ಬಣ್ಣದ ಗೋಬಿ ಮಂಚೂರಿ, ಕಬಾಬ್ ಸಿಗಲ್ಲ. ಹೌದು, ಆಹಾರ ತಯಾರಿಗೆ ನಿಷೇಧಿತ ಕೃತಕ ಬಣ್ಣ, ಆರೋಗ್ಯಕ್ಕೆ ಹಾನಿಕಾರಕ ಬಣ್ಣ ಬಳಕೆ ಮಾಡುವುದನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ. ಉಲ್ಲಂಘನೆಗೆ ಕಠಿಣ ಶಿಕ್ಷೆಯೂ ಇರುವುದಾಗಿ ಎಚ್ಚರಿಸಿದೆ. ಆ ಮಾಹಿತಿ ಇಲ್ಲಿದೆ.
ಗೋಬಿ ಮಂಚೂರಿಯನ್ (gobi manchurian) ಮತ್ತು ಕಾಟನ್ ಕ್ಯಾಂಡಿ (cotton candy) ಯಂತಹ ಜನಪ್ರಿಯ ಭಕ್ಷ್ಯಗಳ ತಯಾರಿಕೆ ನಿಷೇಧಿತ ಕೃತಕ ಬಣ್ಣ ಬಳಸುವುದನ್ನು ಕರ್ನಾಟಕ ಸರ್ಕಾರ (Karnataka Govt) ಸೋಮವಾರದಿಂದ ಅನ್ವಯವಾಗುವಂತೆ ನಿಷೇಧಿಸಿದೆ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಪರಾಧ ಸಾಬೀತಾದರೆ 7 ವರ್ಷದಿಂದ ಜೀವಾವಧಿ ತನಕ ಜೈಲು ಶಿಕ್ಷೆ, 10 ಲಕ್ಷ ರೂಪಾಯಿ ದಂಡವೂ ವಿಧಿಸುವುದಕ್ಕೆ ಅವಕಾಶ ಇದೆ ಎಂದು ಸರ್ಕಾರ ತಿಳಿಸಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದರಲ್ಲದೆ, ತಮ್ಮ ಇಲಾಖೆಯಿಂದ ಹೊರಡಿಸಿದ ಅಧಿಕೃತ ಆದೇಶದ ಪ್ರತಿಯನ್ನೂ ಪ್ರಕಟಿಸಿದರು.
“ನಾವು ಗೋಬಿ ಮಂಚೂರಿಯನ್ ಖಾದ್ಯದ ಗುಣಮಟ್ಟ ಪರೀಕ್ಷಿಸುವುದಕ್ಕಾಗಿ ವಿಶೇಷ ತಪಾಸಣಾ ದಾಳಿ ನಡೆಸಿದ್ದೆವು. ಅಲ್ಲಿ ಆ ಖಾದ್ಯ ತಯಾರಿಸುವುದಕ್ಕೆ ಹಾನಿಕಾರಕ ರೋಡಮೈನ್-ಬಿ ಅನ್ನು ಬಳಸಲಾಗುತ್ತಿದೆ ಎಂಬುದು ದೃಢಪಟ್ಟಿದೆ. ಇದು ಆರೋಗ್ಯಕ್ಕೆ ಅಪಾಯಕಾರಿಯಾದ ಕೃತಕ ಬಣ್ಣ. ಆದ್ದರಿಂದಲೇ ಅದರ ಬಳಕೆಯನ್ನು ನಿಷೇಧಿಸಲು ನಿರ್ಧರಿಸಿದ್ದೇವೆ. ಸರ್ಕಾರದ ಆದೇಶವನ್ನು ಪಾಲಿಸದಿದ್ದಲ್ಲಿ ಏಳು ವರ್ಷ ಅಥವಾ ಜೀವಾವಧಿ ಶಿಕ್ಷೆ ಆಗಬಹುದು. 10 ಲಕ್ಷ ರೂಪಾಯಿವರೆಗೆ ದಂಡವನ್ನೂ ವಿಧಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಸುದ್ದಿಗಾರರಿಗೆ ತಿಳಿಸಿದರು.
ಏನಿದು ಕೃತಕ ಬಣ್ಣ ರೋಡಮೈನ್ ಬಿ
ಗೋಬಿ ಮಂಚೂರಿಯನ್ ಮತ್ತು ಕಾಟನ್ ಕ್ಯಾಂಡಿಗೆ ಬಳಸುವ ಕೃತಕ ಬಣ್ಣ ರೋಡಮೈನ್ ಬಿ ಈಗ ಚರ್ಚೆಯ ವಿಷಯ. ಇದು ಅಪಾಯಕಾರಿ ಯಾಕೆ? ಎಂಬಿತ್ಯಾದಿ ಪ್ರಶ್ನೆ ಸಹಜ.
ರೋಡಮೈನ್ - ಬಿ ಎಂಬುದು ಜವಳಿ ಬಣ್ಣ. ಇದು ಕಾಗದದ ಉದ್ಯಮದಲ್ಲಿ ಬಳಸಲಾಗುವ ರಾಸಾಯನಿಕ ಬಣ್ಣದ ಏಜೆಂಟ್. ಗೋಬಿ ಮಂಚೂರಿಯನ್‌ನಲ್ಲಿ ಇದನ್ನು ಬಳಸುವುದರ ಮೂಲಕ ಆಹಾರದ ನೋಟದ ಆಕರ್ಷಣೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಅದರಲ್ಲಿ ಯಶಸ್ವಿಯಾದ ಕಾರಣ, ಆರೋಗ್ಯದ ಮೇಲೆ ಅದರಿಂದಾಗುವ ಪರಿಣಾಮ ಅರಿಯದೆ ಬಹುತೇಕ ಗೋಬಿಮಂಚೂರಿಯನ್ ತಯಾರಕರು ಈ ಬಣ್ಣವನ್ನು ಬಳಸುತ್ತಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ ನಿರೀಕ್ಷಿಸಿ
ಕರ್ನಾಟಕದಲ್ಲಿ ಇನ್ನು ಮುಂದೆ ನಿಷೇಧಿತ ಬಣ್ಣ ಬಳಸಿಕೊಂಡು ತಯಾರಿಸುವ ಕಾಟನ್ ಕ್ಯಾಂಡಿ ಹಾಗೂ ಕೃತಕ ಬಣ್ಣ ಬಳಸಿ ತ ಯಾರಿಸುವ ಗೋಬಿ ಮಂಚೂರಿಯನ್ ನಿಷೇಧ ಮಾಡುತ್ತಿದ್ದೇವೆ. ಈ ಬಗ್ಗೆ ಅಧಿಕೃತ ಆದೇಶವನ್ನೂ ಹೊರಡಿಸಲಾಗಿದೆ. ಇದರ ಕಟ್ಟುನಿಟ್ಟಿನ ಪಾಲನೆಗೆ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆರೋಗ್ಯ ಇಲಾಖೆ ಅಧಿಕಾರಿಗಳು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ದಾಳಿ ಮಾಡಿ ಆಹಾರ ಪರಿಶೀಲನೆ ನಡೆಸಬಹುದು. ಯಾವುದೇ ಆಹಾರ ತಯಾರಕರು, ಯಾವುದೇ ವ್ಯಾಪಾರಿಗಳು, ಹೋಟೆಲ್ ಇತರೆಡೆ ನಿಯಮ ಮೀರಿ ಕೃತಕ ಬಣ್ಣ ಬಳಸಿ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ ತಯಾರಿಸಿ ಮಾರಾಟ ಮಾಡುವುದು ಪತ್ತೆಯಾದರೆ, ಅಂಥವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಕಲರ್ ಕಲರ್ ಕಾಟನ್ ಕ್ಯಾಂಡಿ, ಆಕರ್ಷಕ ಗೋಬಿ ಮಂಚೂರಿ ಆರೋಗ್ಯಕ್ಕೆ ಒಳ್ಳೆಯದಲ್ಲ
ಬದಲಾದ ಮತ್ತು ಬದಲಾಗುತ್ತಿರುವ ಜೀವನ ಶೈಲಿಯ ಕಾರಣ ಹೊರಗಿನ ಆಹಾರ ಸೇವನೆ ಹೆಚ್ಚಾಗುತ್ತಿದೆ. ಇದು ಆಹಾರ ಉದ್ಯಮದ ಬೆಳವಣಿಗೆಗೂ ಕಾರಣವಾಗಿದೆ. ಆದರೆ, ಕೇವಲ ಲಾಭೋದ್ದೇಶದಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಲರ್ ಕಲರ್ ಕಾಟನ್ ಕ್ಯಾಂಡಿ, ಆಕರ್ಷಕ ಗೋಬಿ ಮಂಚೂರಿಯನ್ ತರಹದ ಆಹಾರಗಳು ಸದ್ದಿಲ್ಲದೇ ಕ್ಯಾನ್ಸರ್ ಮತ್ತು ಇತರೆ ಸಾಂಕ್ರಾಮಿಕವಲ್ಲದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಅನೇಕ ಆರೋಗ್ಯ ಅಧ್ಯಯನ ವರದಿಗಳು ಇದನ್ನು ದೃಢೀಕರಿಸಿವೆ.
ಇವೆಲ್ಲವನ್ನೂ ಅವಲೋಕಿಸಿದ ಬಳಿಕ, ಈ ನಿಷೇಧಿತ ಬಣ್ಣ, ಕೃತಕ ಬಣ್ಣಗಳನ್ನು ಆಹಾರದಲ್ಲಿ ಬಳಸದಂತೆ ನಿಷೇಧಿಸುವ ಆದೇಶವನ್ನು ಸರ್ಕಾರ ಹೊರಡಿಸಿದೆ. ಇದಕ್ಕೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಗೋಬಿ ಮಂಚೂರಿಯನ್‌ನ 171 ಮಾದರಿಗಳನ್ನು ಪರೀಕ್ಷೆಮಾಡಲಾಗಿತ್ತು. ಇದರಲ್ಲಿ 107ರಲ್ಲಿ ರೋಡೋಮೈನ್ ಬಿ ಹಾಗೂ ಟಾರ್ ಟ್ರಾಸೈನ್ಸ್ ನಂತಹ ಅಸುರಕ್ಷಿತ ಕೃತಕ ಬಣ್ಣಗಳನ್ನು ಬಳಸಿರುವುದು ದೃಢವಾಗಿದೆ.
ಅದೇ ರೀತಿ ಕಾಟನ್ ಕ್ಯಾಂಡಿಯಲ್ಲಿ 25 ಮಾದರಿ ಸಂಗ್ರಹಿಸಿ ನಡೆಸಿದ ಪರೀಕ್ಷೆಯಲ್ಲಿ 15 ಮಾದರಿಗಳಲ್ಲಿ ಟಾರ್‌ಟ್ರಾಸೈನ್, ಸನ್ ಸೆಟ್ ಯೆಲ್ಲೋ, ರೋಡಮೈನ್ ಬಿನಂತಹ ಕೃತಕ ಬಣ್ಣ ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆ ನಿಷೇಧಿಸಲಾಗಿದೆ ಎಂದು ಸಚಿವ ಗುಂಡೂರಾವ್ ಹೇಳಿದರು.
ಕೃತಕ ಬಣ್ಣ ಬಳಸದೆ ವೈಟ್ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ ತಯಾರಿಕೆ ಮತ್ತು ಮಾರಾಟಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
(This copy first appeared in Hindustan Times Kannada website. To read more like this please logon to kannada.hindustantimes.com)