ಕನ್ನಡ ಸುದ್ದಿ  /  ಕರ್ನಾಟಕ  /  ಪೆಟ್ರೋಲ್, ಡೀಸೆಲ್ ತೆರಿಗೆ ಏರಿಕೆ; ಕರ್ನಾಟಕದ ತೆರಿಗೆ ಪಾಲು ಎಲ್ಲಿ, ಅದನ್ನು ಕೇಳಿ, ಬಿಜೆಪಿಯವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು- 10 ಅಂಶ

ಪೆಟ್ರೋಲ್, ಡೀಸೆಲ್ ತೆರಿಗೆ ಏರಿಕೆ; ಕರ್ನಾಟಕದ ತೆರಿಗೆ ಪಾಲು ಎಲ್ಲಿ, ಅದನ್ನು ಕೇಳಿ, ಬಿಜೆಪಿಯವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು- 10 ಅಂಶ

ಕೇಂದ್ರ ಸರ್ಕಾರವು ಜಿಎಸ್‌ಟಿ ಜಾರಿಗೊಳಿಸಿ ಏಕಸ್ವಾಮ್ಯ ಮಾಡಿಕೊಂಡಿರುವುದರಿಂದ ರಾಜ್ಯಗಳ ಪರಮಾಧಿಕಾರವಾಗಿದ್ದ ತೆರಿಗೆ ಸಂಗ್ರಹದ ಅವಕಾಶಗಳು ಇಲ್ಲವಾಗಿದೆ. ಪೆಟ್ರೋಲ್, ಡೀಸೆಲ್ ತೆರಿಗೆ ಏರಿಕೆ ಕುರಿತು ಬಿಜೆಪಿಯವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಕರ್ನಾಟಕದ ತೆರಿಗೆ ಪಾಲು ಎಲ್ಲಿ ಎಂಬ ಪ್ರಶ್ನೆಯೂ ಸೇರಿ10 ಅಂಶ ಇಲ್ಲಿದೆ.

ಪೆಟ್ರೋಲ್, ಡೀಸೆಲ್ ತೆರಿಗೆ ಏರಿಕೆ; ಕರ್ನಾಟಕದ ತೆರಿಗೆ ಪಾಲು ಎಲ್ಲಿ, ಅದನ್ನು ಕೇಳಿ ಎಂದು ಬಿಜೆಪಿಯವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಪೆಟ್ರೋಲ್, ಡೀಸೆಲ್ ತೆರಿಗೆ ಏರಿಕೆ; ಕರ್ನಾಟಕದ ತೆರಿಗೆ ಪಾಲು ಎಲ್ಲಿ, ಅದನ್ನು ಕೇಳಿ ಎಂದು ಬಿಜೆಪಿಯವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರು: ಪೆಟ್ರೋಲ್ - ಡೀಸೆಲ್ ದರ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ಶುರುವಾದ ಕೂಡಲೇ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ, ದಕ್ಷಿಣ ಭಾರತದ ರಾಜ್ಯಗಳಿಗಿಂತ ನಮ್ಮ ಕರ್ನಾಟಕದಲ್ಲಿ ಇಂಧನ ಬೆಲೆ ಕಡಿಮೆ ಇದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು. ತೈಲ ದರ ಹೆಚ್ಚಳವನ್ನು ಸಮರ್ಥಿಸಿಕೊಂಡರು.

ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತೆರಿಗೆ ಹೆಚ್ಚಳದ ಅನಿವಾರ್ಯತೆಯನ್ನು ಕೇಂದ್ರದ ಮೋದಿ ಸರ್ಕಾರ ಹೇಗೆ ಸೃಷ್ಟಿಸಿತು, ರಾಜ್ಯದ ಪಾಲಿನ ಹಣವನ್ನು ಕೊಡದೇ ಇರುವುದರಿಂದ ಸೃಷ್ಟಿ ಆಗಿರುವ ಪರಿಸ್ಥಿತಿಯನ್ನು ವಿವರಿಸಿದರು.

ಪೆಟ್ರೋಲ್, ಡೀಸೆಲ್ ತೆರಿಗೆ ಏರಿಕೆ; ಸಮರ್ಥನೆಗೆ 10 ಕಾರಣ ಕೊಟ್ಟ ಸಿಎಂ ಸಿದ್ದರಾಮಯ್ಯ

1) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2015 ರ ಬಳಿಕ ಕಚ್ಚಾ ತೈಲದ ಬೆಲೆ ಅರ್ಧಕ್ಕರ್ಧ ಕಡಿಮೆ ಆದಾಗಲೂ ಅವರ ಲಾಭವನ್ನು ದೇಶದ ಜನರಿಗೆ ನೀಡದೆ ಮೋದಿ ಸರ್ಕಾರ ಇಂಧನ ಬೆಲೆಯನ್ನು ನಿರಂತರವಾಗಿ ಏರಿಸುತ್ತಾ ಹೋಗಿದೆ.

ಟ್ರೆಂಡಿಂಗ್​ ಸುದ್ದಿ

ಕೇಂದ್ರ ಸರ್ಕಾರ ವಿಧಿಸಿರುವ ಅಬಕಾರಿ ಸುಂಕದ ವಿವರ (ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿರುವ ಅಂಕಿ ಅಂಶ)

ವರ್ಷಪೆಟ್ರೋಲ್ ಮೇಲೆ ಅಬಕಾರಿ ಸುಂಕ (ಲೀಟರ್‌ಗೆ)ಡೀಸೆಲ್‌ ಮೇಲೆ ಅಬಕಾರಿ ಸುಂಕ (ಲೀಟರ್‌ಗೆ)
ಜೂನ್ 20149.48 ರೂಪಾಯಿ3.56 ರೂಪಾಯಿ
ಮೇ 202032.98 ರೂಪಾಯಿ31.83 ರೂಪಾಯಿ
ಮೇ 202219.90 ರೂಪಾಯಿ15.50 ರೂಪಾಯಿ

2) ಜನರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಸಂಪನ್ಮೂಲ ಕ್ರೋಢೀಕರಣದ ಉದ್ದೇಶದೊಂದಿಗೆ ಪೆಟ್ರೋಲ್‌, ಡೀಸೆಲ್‌ ಮಾರಾಟ ತೆರಿಗೆಯಲ್ಲಿ 3 ರೂ. ಗಳಷ್ಟು ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರ 3 ರೂ. ಗಳಷ್ಟು ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಮಾಡಿದ್ದರೂ, ದಕ್ಷಿಣದ ಇತರ ರಾಜ್ಯಗಳು ಹಾಗೂ ಬಿಜೆಪಿ ಆಡಳಿತ ಇರುವ ರಾಜ್ಯಗಳಿಗಿಂತ ಕಡಿಮೆ ಇದೆ.

ಕರ್ನಾಟಕ vs ನೆರೆ ರಾಜ್ಯಗಳ ಇಂಧನ ದರದ ಅಂಕಿ ನೋಟ (ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಶೇರ್ ಮಾಡಿದ್ದು)

ಎಲ್ಲಿಪೆಟ್ರೋಲ್ ದರ ಡೀಸೆಲ್ ದರ 
  ತೆರಿಗೆ ಏರಿಕೆ ಮೊದಲುತೆರಿಗೆ ಏರಿಕೆ ನಂತರತೆರಿಗೆ ಏರಿಕೆಗೆ ಮೊದಲುತೆರಿಗೆ ಏರಿಕೆ ನಂತರ
ಬೆಂಗಳೂರು (ಕರ್ನಾಟಕ)99.85 ರೂಪಾಯಿ102.85 ರೂಪಾಯಿ85.95 ರೂಪಾಯಿ88.94 ರೂಪಾಯಿ
ಹೊಸೂರು (ತಮಿಳುನಾಡು)102.84 ರೂಪಾಯಿ94.41 ರೂಪಾಯಿ
ಕಾಸರಗೋಡು (ಕೇರಳ)106.66 ರೂಪಾಯಿ95.60 ರೂಪಾಯಿ
ಅನಂತಪುರ (ಆಂಧ್ರಪ್ರದೇಶ)109.44 ರೂಪಾಯಿ97.29 ರೂಪಾಯಿ
ಹೈದರಾಬಾದ್ (ತೆಲಂಗಾಣ)107.40 ರೂಪಾಯಿ95.64 ರೂಪಾಯಿ
ಕಾಗಲ್ (ಮಹಾರಾಷ್ಟ್ರ)104.46 ರೂಪಾಯಿ91.01 ರೂಪಾಯಿ

3) ಡಾ. ಮನಮೋಹನ್‌ ಸಿಂಗ್‌ ಅವರ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 113 ಡಾಲರ್‌ ಇತ್ತು. 2015 ರಲ್ಲಿ ಈ ಬೆಲೆ ಅರ್ಧಕ್ಕರ್ಧ ಕಡಿಮೆಯಾದರೂ, ಬೆಲೆ ಇಳಿಸಿ, ಜನರ ಹೊರೆ ಕಡಿಮೆ ಮಾಡುವ ಕಾಳಜಿಯನ್ನು ನರೇಂದ್ರ ಮೋದಿಯವರು ತೋರಲಿಲ್ಲ. ಬಿಜೆಪಿಯವರು ಯಾರ ವಿರುದ್ಧ ಹೋರಾಡಬೇಕು. ತೈಲ ದರ ಹೋಲಿಕೆಗಳು ಹೀಗಿತ್ತು ನೋಡಿ

ತೈಲೋತ್ಪನ್ನ ಬೆಲೆ 2014 vs 2024 (ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಶೇರ್ ಮಾಡಿದ್ದು)

ಉತ್ಪನ್ನ2014ರ ಜೂನ್ 2024ರ ಜೂನ್ 
ಕಚ್ಚಾ ತೈಲ102.05 ಡಾಲರ್/ ಬ್ಯಾರೆಲ್‌82.35 ಡಾಲರ್ / ಬ್ಯಾರೆಲ್
ಪೆಟ್ರೋಲ್ (ಮುಂಬಯಿ)72.26 ರೂಪಾಯಿ/ಲೀಟರ್‌104.21 ರೂಪಾಯಿ/ ಲೀಟರ್
ಡೀಸೆಲ್ (ಮುಂಬಯಿ)57.28 ರೂಪಾಯಿ/ ಲೀಟರ್‌92.15 ರೂಪಾಯಿ/ ಲೀಟರ್‌
ಎಲ್‌ಪಿಜಿ (14.2 ಕಿಲೋ)410 ರೂಪಾಯಿ805.5 ರೂಪಾಯಿ

4) ರಾಜ್ಯದ ಜನರ ಪಾಲಿನ‌ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿದ್ದರೆ ನಮಗೆ ತೆರಿಗೆ ಹೆಚ್ವಿಸುವ ಅಗತ್ಯವೇ ಬೀಳುತ್ತಿರಲಿಲ್ಲ. ರಾಜ್ಯ ಸರ್ಕಾರ ಅಲ್ಪ ಪ್ರಮಾಣದ ತೆರಿಗೆ ಹೆಚ್ಚಳ ಮಾಡಿದೆ. ಈ ಬಗ್ಗೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕು ಎಲ್ಲಿದೆ.

5) ತೆರಿಗೆ ಅನ್ಯಾಯವಾದಾಗ ಸಂಸದರು ಈ ವಿಷಯದ ಕುರಿತು ಮಾತನಾಡಿಲ್ಲ. ರಾಜ್ಯಕ್ಕೆ 15ನೇ ಹಣಕಾಸು ಆಯೋಗವು ವಿಶೇಷ ಅನುದಾನ ನೀಡುವಂತ ಶಿಫಾರಸು ಮಾಡಿದ್ದರೂ, ಕೇಂದ್ರ ಸರ್ಕಾರ ನೀಡಿಲ್ಲ. ಕರ್ನಾಟಕ ರಾಜ್ಯಕ್ಕೆ ಕೇಂದ್ರದ ಬಿಜೆಪಿ ಸರ್ಕಾರದಿಂದ ನಿರಂತರ ಅನ್ಯಾಯವಾಗುತ್ತ ಬಂದಿದ್ದರೂ, ಬಿಜೆಪಿಯವರು ದನಿ ಎತ್ತಿಲ್ಲ?

6) ಭದ್ರಾ ಮೇಲ್ದಂಡೆ ಯೋಜನೆಗೆ ಆಯವ್ಯಯದಲ್ಲಿ ನಿರ್ಮಲಾ ಸೀತಾರಾಮನ್‌ ಅವರು 5,000 ಕೋಟಿ ರೂ. ಒದಗಿಸುವುದಾಗಿ ಘೋಷಿಸಿದರೂ, ಬಿಡಿಗಾಸೂ ನೀಡಿಲ್ಲ. ಈ ವಿಷಯಗಳ ಕುರಿತು ಬಿಜೆಪಿಯವರು ದನಿ ಎತ್ತಿದ್ದಾರೆಯೇ

7) ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಹೆಚ್ಚಳದಿಂದ ಸಂಗ್ರಹವಾಗುವ ಅಂದಾಜು ಮೂರು ಸಾವಿರ ಕೋಟಿ ರೂಪಾಯಿಗಳು ರಾಜ್ಯದ ಖಜಾನೆಗೆ ಸಂದಾಯವಾಗುತ್ತದೆ, ಆ ಹಣ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗವಾಗುತ್ತದೆ ಅದು ನಮ್ಮ ಜೇಬಿಗೆ ಹೋಗುವುದಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಪ್ರತಿಯೊಂದು ಯೋಜನೆಗಳಲ್ಲಿಯೂ 40% ತೆರಿಗೆ ಹಣ ಬಿಜೆಪಿ ನಾಯಕರ ಜೇಬಿಗೆ ಹೋಗುತ್ತಿತ್ತು.

8) ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 60 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಇಷ್ಟೂ ಹಣ ರಾಜ್ಯದ ಎಲ್ಲಾ ಜಾತಿ-ಸಮುದಾಯಗಳ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೋಗುತ್ತದೆ. ಸದ್ಯದ ಅಲ್ಪ ಪ್ರಮಾಣದ ಡೀಸೆಲ್-ಪೆಟ್ರೋಲ್ ತೆರಿಗೆ ಹೆಚ್ಚಳದಿಂದ ನಮಗೆ ಹೆಚ್ಚುವರಿಯಾಗಿ ಸಂಪನ್ಮೂಲ ಸಂಗ್ರಹ ಆಗುವುದು ಕೇವಲ 3 ಸಾವಿರ ಕೋಟಿ ರೂಪಾಯಿ ಮಾತ್ರ. ಈ ಬೆಲೆ ಏರಿಕೆಯಿಂದ 3000 ಕೋಟಿ ಆದಾಯ ಬರಬಹುದು. ಗ್ಯಾರಂಟಿ ಯೋಜನೆಗಳಿಗೆ 60000 ಕೋಟಿ ಬೇಕು. ಯಾರಿಗೆ ಕೊಡುತ್ತಾ ಇದ್ದೇವೆ? ಶ್ರೀಮಂತರಿಗೆ ಕೊಡುತ್ತಾ ಇದ್ದೀವಾ? ಅಂಬಾನಿ, ಅದಾನಿಗಳಿಗೆ ಸಾಲ ಮನ್ನಾ ಮಾಡ್ತಾ ಇದ್ದೀವಾ? ರೈತರ ಸಾಲ ಮನ್ನ ಮಾಡಿ ಎಂದರೆ ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ಇವರಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇದೆಯೇ

9) ಕೇಂದ್ರ ಸರ್ಕಾರ ಜಿ.ಎಸ್.ಟಿ. ವ್ಯವಸ್ಥೆ ಜಾರಿಗೊಳಿಸಿದ ನಂತರ ರಾಜ್ಯ ಸರ್ಕಾರಗಳ ಸಂಪನ್ಮೂಲ ಕ್ರೋಢೀಕರಣಕ್ಕೆ ಇರುವ ಅವಕಾಶ ಸೀಮಿತಗೊಂಡಿದೆ. ಕೇಂದ್ರ ಸರ್ಕಾರ ಜಿ.ಎಸ್.ಟಿ. , ಆದಾಯ ತೆರಿಗೆ, ಕೇಂದ್ರ ಅಬಕಾರಿ ಸುಂಕ ಮೊದಲಾದ ಮೂಲಗಳಿಂದ ತೆರಿಗೆ ಸಂಗ್ರಹಿಸುತ್ತದೆ. ರಾಜ್ಯ ಸರ್ಕಾರಕ್ಕೆ ಕೇವಲ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ವಾಹನ ತೆರಿಗೆ, ಪೆಟ್ರೋಲ್‌, ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹಾಗೂ ಮದ್ಯದ ಮೇಲಿನ ಮಾರಾಟ ತೆರಿಗೆ ಹೊರತು ಪಡಿಸಿ ಯಾವುದೇ ಮೂಲಗಳಿಲ್ಲ.

10) ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಪೆಟ್ರೋಲ್‌ ಮೇಲೆ ಕೇಂದ್ರ ಅಬಕಾರಿ ಸುಂಕ 9.48 ರೂಗಳಷ್ಟಿತ್ತು. 2020ರ ಮೇ ನಲ್ಲಿ 32.98 ರೂ.ಗಳಿಗೆ ಹೆಚ್ಚಾಗಿದೆ. ಈ ಮಟ್ಟದ ಏರಿಕೆ ವಿರುದ್ಧ ಬಿಜೆಪಿಯವರಾಗಲೀ, ಆರ್.ಅಶೋಕ್ ಆಗಲಿ ಬಾಯಿ ಬಿಟ್ಟಿಲ್ಲ. ಅವರಿಗೆ ಅರ್ಥ ಆಗಿದ್ದರೆ ತಾನೆ.