ಕರ್ನಾಟಕ ಪೊಲೀಸ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ; ಅಪರಾಧ ನಿಯಂತ್ರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿದ್ದಾರೆ ಪೊಲೀಸರು
ಕರ್ನಾಟಕ ಪೊಲೀಸ್ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಆಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲು ಆದೇಶ ಹೊರಡಿಸಲಾಗಿದೆ. ಕ್ಲಬ್ ಮಟ್ಕಾ ಜೂಜಿಗೆ ಕಡಿವಾಣ ಹಾಕಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಸೂಚನೆ ರವಾನೆಯಾಗಿದೆ. ಸಿಎಂ, ಗೃಹ ಸಚಿವರ ಸಭೆ ನಂತರ ಡಿಜಿಪಿ ಅಲೋಕ್ ಮೋಹನ್ ಈ ಆದೇಶ ಹೊರಡಿಸಿದರು. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಕರ್ನಾಟಕದ ಉದ್ದಗಲಕ್ಕೂ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರು ಕಾಣಿಸಿಕೊಳ್ಳುವುದು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹೀಗಾಗಿ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿದಿನ ಬೆಳಗ್ಗೆ 9ರಿಂದ 11 ಗಂಟೆಯವರೆಗೆ ಹಾಗೂ ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ಪೊಲೀಸ್ ಸಮವಸ್ತ್ರದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಗಸ್ತು ನಡೆಸುವಂತೆ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ,ಪರಮೇಶ್ವರ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ನಂತರ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಈ ವಿಷಯ ತಿಳಿಸಿದ್ದಾರೆ.
ಎಲ್ಲ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಮತ್ತು ಬೆಂಗಳೂರು ಸೇರಿದಂತೆ ಎಲ್ಲ ನಗರಗಳ ಪೊಲೀಸ್ ಕಮೀಷನರೇಟ್ ಗಳ ವ್ಯಾಪ್ತಿಗೆ ಒಳಪಡುವ ಡಿಸಿಪಿಗಳು ಪ್ರತಿದಿನ ಕನಿಷ್ಠ ಒಂದಾದರೂ ಪೊಲೀಸ್ ಠಾಣೆಗೆ ಭೇಟಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಎಲ್ಲ ವಲಯದ ಐಜಿಪಿಗಳು, ಡಿಐಜಿಗಳು ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರೂ ತಮ್ಮ ವ್ಯಾಪ್ತಿಯ ಠಾಣೆಗಳಿಗೆ ಬೇಟಿ ನೀಡಬೇಕು ಎಂದು ಸೂಚಿಸಿದ್ದಾರೆ. ಭೇಟಿ ಸಂದರ್ಭದಲ್ಲಿ ಕಾರ್ಯ ನಿರ್ವಹಣೆ ಪರಿಶೀಲಿಸಬೇಕು. ಜೊತೆಗೆ ಪ್ರಮುಖ ಅಪರಾಧ ಪ್ರಕರಣಗಳು ನಡೆದಾಗ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಹೇಳಿದ್ದಾರೆ.
ಕ್ಲಬ್, ಜೂಜು, ಮಟ್ಕಾ ನಿಯಂತ್ರಣಕ್ಕೆ ಸೂಚನೆ
ಕ್ಲಬ್ ಗಳು, ಜೂಜು, ಮಟ್ಕಾ ಸೇರಿದಂತೆ ಎಲ್ಲ ಸಂಘಟಿತ ಅಪರಾಧಗಳನ್ನು ತತ್‌ಕ್ಷಣವೇ ನಿಲ್ಲಿಸಬೇಕು. ಆರೋಪಿಗಳ ವಿರುದಧ ಕಠಿಣ ಕ್ರಮ ಜರುಗಿಸಲು ಕ್ರಮ ಜರುಗಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಡ್ರಗ್ಸ್ ಹಾವಳಿ ಹೆಚ್ಚುತ್ತಿದ್ದು, ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ವಹಿಸಬೇಕು. ಈ ನಿಟ್ಟಿನಲ್ಲಿ ಶಾಲಾ ಕಾಲೇಝೂಘಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದಕ್ಕಾಗಿ ಇ-ಬೀಟ್ ಸೇವೆಯನ್ನು ಜಾರಿಗೊಳಿಸಬೇಕು. ಇದಕ್ಕಾಗಿ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇ-ಬೀಟ್ ಅಪ್ಲಿಕೇಶನ್ ನಿರ್ವಹಣೆಯನ್ನು ಕಲಿತುಕೊಂಡಿರಬೇಕು ಎಂದು ತಿಳಿಸಿದ್ದಾರೆ.
ಹೆದ್ದಾರಿಗಳಲ್ಲಿ ಗಸ್ತು ತಿರುಗುವ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳ ವಿರುದ್ಧ ಕ್ರಮಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಗತ್ಯ ಕಂಡು ಬಂದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಜಿಲ್ಲಾ ಮತ್ತು ನಗರಮಟ್ಟದ ಪೊಲೀಸ್ ಠಾಣೆಗಳಲ್ಲಿ ನಿಯಮಿತವಾಗಿ ಶಾಂತಿಸಭೆ ಮತ್ತು ಜನಸ್ಪಂದನ ಸಭೆಗಳನ್ನು ಆಯೋಜಿಸಬೇಕು. ಎಲ್ಲ ಸಮುದಾಯದ ಜನರ ಜತೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಬೇಕು ಎಂದೂ ಸೂಚನೆ ನೀಡಿದ್ದಾರೆ.
ಕಾಣೆಯಾಗಿರುವ ಹೆಣ್ಣುಮಕ್ಕಳ ಪತ್ತೆಗೆ ಆದ್ಯತೆ ನೀಡಲು ಆದೇಶ
ಕಾಣೆಯಾಗಿರುವ ಹೆಣ್ಣುಮಕ್ಕಳು ಹಾಗೂ ಮಹಿಳೆಯರ ಪತ್ತೆ ಹಚ್ಚಲು ಎಲ್ಲ ಪೊಲೀಸ್ ಠಾಣೆಗಳಲ್ಲಿ ಆದ್ಯತೆ ನೀಡಬೇಕು. ತಲೆ ಮರೆಸಿಕೊಂಡ ಆರೋಪಿಗಳ ಪತ್ತೆಯನ್ನು ಚುರುಕುಗೊಳಿಸಬೇಕು. ಮುಖ್ಯವಾಗಿ ಕಾರಾಗೃಹಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದೂ ಹೇಳಿದ್ದಾರೆ.
ದ್ವೇಷ ಭಾಷಣ ಹಾಗೂ ಪ್ರಚೋದನಾಕಾರಿ ಘೋಷಣೆ ಕೂಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಶಾಲಾ ಕಾಲೇಜುಗಳ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.