ಅರಣ್ಯ ಇಲಾಖೆ ಭೂಮಿ ಅಕ್ರಮ ಮಾರಾಟ; ಎಚ್‌ಎಂಟಿ ಬಳಿ ಇರುವ 10,000 ಕೋಟಿ ರೂ ಜಮೀನು ವಶಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ-bengaluru news karnataka forest dept moves to recover land illegally transferred by hmt worth rs 10k cr uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಅರಣ್ಯ ಇಲಾಖೆ ಭೂಮಿ ಅಕ್ರಮ ಮಾರಾಟ; ಎಚ್‌ಎಂಟಿ ಬಳಿ ಇರುವ 10,000 ಕೋಟಿ ರೂ ಜಮೀನು ವಶಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

ಅರಣ್ಯ ಇಲಾಖೆ ಭೂಮಿ ಅಕ್ರಮ ಮಾರಾಟ; ಎಚ್‌ಎಂಟಿ ಬಳಿ ಇರುವ 10,000 ಕೋಟಿ ರೂ ಜಮೀನು ವಶಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

HMT Land Issue; ಎಚ್.ಎಂ.ಟಿ. ವಶದಲ್ಲಿರುವ ಬೆಂಗಳೂರಿನ ಪೀಣ್ಯ, ಜಾಲಹಳ್ಳಿ ಅಧಿಸೂಚಿತ ಅರಣ್ಯ ಭೂಮಿ ಅಕ್ರಮ ಮಾರಾಟ ಸರ್ವೋನ್ನತ ನ್ಯಾಯಾಲಯಕ್ಕೆ ಸಲ್ಲಿಸಿರುವ ಡಿನೋಟಿಫಿಕೇಶನ್ ಐ.ಎ. ಹಿಂಪಡೆಯಲು ಆದೇಶ ನೀಡಿದ ಸಚಿವ ಈಶ್ವರ ಖಂಡ್ರೆ, 10 ಸಾವಿರ ಕೋಟಿ ರೂಪಾಯಿ ಅರಣ್ಯ ಭೂಮಿ ಮರುವಶ ಪಡಿಸುವಂತೆ ಸೂಚಿಸಿದ್ದಾರೆ.

ಅರಣ್ಯ ಇಲಾಖೆ ಭೂಮಿ ಅಕ್ರಮ ಮಾರಾಟ; ಎಚ್‌ಎಂಟಿ ಬಳಿ ಇರುವ 10,000 ಕೋಟಿ ರೂ ಜಮೀನು ವಶಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಅರಣ್ಯ ಇಲಾಖೆ ಭೂಮಿ ಅಕ್ರಮ ಮಾರಾಟ; ಎಚ್‌ಎಂಟಿ ಬಳಿ ಇರುವ 10,000 ಕೋಟಿ ರೂ ಜಮೀನು ವಶಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಸಂಸ್ಥೆ ತನ್ನ ಅಧೀನದಲ್ಲಿದ್ದ ಅರಣ್ಯ ಇಲಾಖೆ ಭೂಮಿಯನ್ನು ಅಕ್ರಮವಾಗಿ ವಿವಿಧ ಸರ್ಕಾರಿ ಸಂಸ್ಥೆ, ಇಲಾಖೆಗಳಿಗೆ ಮತ್ತು ಖಾಸಗಿಯವರಿಗೆ ಮಾರಾಟ ಮಾಡಿದೆ. ಈ ಮಾರಾಟ ಅಕ್ರಮ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ಸರ್ವೆ ನಂ.1 ಮತ್ತು 2ರಲ್ಲಿರುವ 10,000 ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ 599 ಎಕರೆ ಅಧಿಸೂಚಿತ ಅರಣ್ಯ ಪ್ರದೇಶವನ್ನು ಮರುವಶಪಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.

ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಕಳುಹಿಸಿದ ಸಚಿವ ಖಂಡ್ರೆ ಅವರು, ಅರಣ್ಯ ನಿಯಮಾವಳಿ 1878ರ ಸೆಕ್ಷನ್ 9ರಡಿಯಲ್ಲಿ ಅರಣ್ಯ ಎಂದು ಘೋಷಣೆಯಾಗಿ, ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಅಂದರೆ 1896ರ ಜೂನ್ 11ರಲ್ಲೇ ಗೆಜೆಟ್ ಅಧಿಸೂಚನೆ ಆಗಿರುವ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿ ಅದು. ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ. ಸಂಸ್ಥೆ ಅಕ್ರಮವಾಗಿ ಆ ಭೂಮಿಯನ್ನು ಸರಕಾರಿ ಇಲಾಖೆಗಳು, ವಿವಿಧ ಸಂಸ್ಥೆಗಳು ಮತ್ತು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಕೂಡಲೇ ಒಟ್ಟು 599 ಎಕರೆ ಅರಣ್ಯ ಭೂಮಿಯ ಪೈಕಿ ಎಚ್.ಎಂ.ಟಿ. ನೀಡಲಾಗಿದೆ ಎನ್ನಲಾದ 469 ಎಕರೆ 32 ಗುಂಟೆಯಲ್ಲಿ ಖಾಲಿ ಇರುವ 281 ಎಕರೆ ಜಮೀನನ್ನು ಮೊದಲು ವಶಕ್ಕೆ ಪಡೆಯಬೇಕು. ಅದಾಗಿ ಉಳಿದ ಭೂಮಿಯ ವಶ ಪಡಿಸಿಕೊಳ್ಳಲು ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಸಚಿವರ ಅಸಮಾಧಾನ

ಈ ಹಿಂದೆ ಅರಣ್ಯ ಸಂರಕ್ಷಣಾ ಕಾಯಿದೆ ಸೆಕ್ಷನ್ 64ಎ ಪ್ರಕಾರ ಭೂಮಿ ವಶಪಡಿಸುವ ಪ್ರಕ್ರಿಯೆ ನಡೆದಿದ್ದು, ಭೂಮಿ ತೆರವಿಗೆ ಆದೇಶವಾಗಿದೆ. ಆದರೂ, ಈವರೆಗೆ ಕ್ರಮ ವಹಿಸದ ಅರಣ್ಯಾಧಿಕಾರಿಗಳ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಈ ಕುರಿತು ತನಿಖೆ ನಡೆಸಬೇಕು ಎಂದು ಉನ್ನತಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಅರಣ್ಯ ನಿಯಂತ್ರಣ ಕಾಯಿದೆ 1900ರ ಸೆಕ್ಷನ್ 30ರ ಸಬ್ ಸೆಕ್ಷನ್ (1)ರ ಅಡಿಯಲ್ಲಿ ಯಾವುದೇ ಅರಣ್ಯ ಭೂಮಿಯನ್ನು ದಾನವಾಗಿ ನೀಡಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಯಾವುದೇ ಅರಣ್ಯ ಭೂಮಿಯನ್ನು ಮಂಜೂರಾತಿ ಮಾಡುವ ಮುನ್ನ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಬೇಕು. ಅದಕ್ಕೂ ಮೊದಲು ಆ ಪ್ರದೇಶವನ್ನು ಡಿನೋಟಿಫೈ ಮಾಡಿ, ಗೆಜೆಟ್ ಅಧಿಸೂಚನೆ ಮಾಡಬೇಕು. ಆದರೆ ಎಚ್‌ಎಂಟಿ ಬಳಿ ಇರುವ ಜಮೀನನ್ನು ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಹನುಮಾನ್ ಅವರು 1963ರಲ್ಲಿ ಎಚ್.ಎಂ.ಟಿ.ಗೆ ದಾನಪತ್ರದ ಮೂಲಕ ವರ್ಗಾವಣೆ ಮಾಡಿರುತ್ತಾರೆ ಎನ್ನಲಾಗಿದೆ. ಈ ದಾನಪತ್ರದ ಕುರಿತಂತೆ ಯಾವುದೇ ಗೆಜೆಟ್ ಅಧಿಸೂಚನೆಯೂ ಆಗಿಲ್ಲ. ಅರಣ್ಯೇತರ ಉದ್ದೇಶಕ್ಕೆ ಡಿನೋಟಿಫೈ ಕೂಡ ಆಗಿಲ್ಲ ಎಂಬುದರ ಕಡೆಗೆ ಸಚಿವ ಈಶ್ವರ ಖಂಡ್ರೆ ಗಮನಸೆಳೆದರು.

ಮಧ್ಯಂತರ ಅರ್ಜಿ (ಐಎ) ಹಿಂಪಡೆಯಲು ಸೂಚನೆ

ಎಚ್.ಎಂ.ಟಿ. ಸಂಸ್ಥೆಯು ತನ್ನ ಬಳಿ ಇದ್ದ ಅರಣ್ಯ ಇಲಾಖೆಯ ಭೂಮಿಯನ್ನು ಸರ್ಕಾರಿ ಇಲಾಖೆ/ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿರುವುದು ಅಕ್ರಮವಾಗಿರುತ್ತದೆ. ಈ ಸಂಬಂಧ ಸಚಿವ ಸಂಪುಟದ ಗಮನಕ್ಕೂ ತಾರದೆ 2020ರಲ್ಲಿ ಡಿನೋಟಿಫೈ ಮಾಡಲು ಅನುಮತಿ ಕೋರಿ ಸುಪ್ರೀಂಕೋರ್ಟ್‌ಗೆ ಅರಣ್ಯ ಇಲಾಖೆ ಐಎ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಐಎಯನ್ನು ಹಿಂಪಡೆಯಲು ಕೂಡಲೇ ಕ್ರಮಕೈಗೊಳ್ಳುವಂತೆ ಮತ್ತು ತನಿಖೆ ನಡೆಸುವಂತೆ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸಚಿವ ಈಶ್ವರ ಖಂಡ್ರೆ ಸ್ಪಷ್ಟ ಸೂಚನೆ ನೀಡಿದರು.