DA Hike: ತುಟ್ಟಿ ಭತ್ಯೆ ಶೇಕಡ 3.75 ಏರಿಕೆ ಮಾಡಿದ ಕರ್ನಾಟಕ ಸರ್ಕಾರ, ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್
DA Hike: ಕರ್ನಾಟಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇಕಡ 3.75ರಷ್ಟು ಹೆಚ್ಚಳ (DA Hike) ವಾಗಿದೆ. ಇದೇ ರೀತಿ, ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಯ ಬೋಧಕ ಸಿಬ್ಬಂದಿ ಹಾಗೂ ಎನ್‌ಜೆಪಿಸಿ ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ತುಟ್ಟಿ ಭತ್ಯೆ (ಡಿಎ)ಯನ್ನೂ ಶೇಕಡ 4ರಷ್ಟು ಹೆಚ್ಚಾಗಿದೆ.
ಬೆಂಗಳೂರು: ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇಕಡ 3.75ರಷ್ಟು ಹೆಚ್ಚಿಸಿ ಕರ್ನಾಟಕ ಸರ್ಕಾರ ಆದೇಶ ಪ್ರಕಟಿಸಿದೆ. ಇದರೊಂದಿಗೆ ಕರ್ನಾಟಕದ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) ಶೇಕಡ 38.75ಕ್ಕೆ ಏರಿಕೆಯಾಗಿದೆ.
ಈ ಮೂಲಕ ಕರ್ನಾಟಕ ಸರ್ಕಾರವು ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್ ನೀಡಿದೆ.
ಇದೇ ರೀತಿ, ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಯ ಬೋಧಕ ಸಿಬ್ಬಂದಿ ಹಾಗೂ ಎನ್‌ಜೆಪಿಸಿ ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ತುಟ್ಟಿ ಭತ್ಯೆ (ಡಿಎ)ಯನ್ನೂ ಶೇಕಡ 4ರಷ್ಟು ಏರಿಕೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಪ್ರಕಟಿಸಿದೆ. ಇದರೊಂದಿಗೆ ಈ ಉದ್ಯೋಗಿಗಳ ತುಟ್ಟಿ ಭತ್ಯೆಯು ಶೇಕಡ 46ಕ್ಕೆ ಹೆಚ್ಚಳವಾಗಿದೆ.
ಕರ್ನಾಟಕ ಸರ್ಕಾರದ ಯಾವ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮತ್ತು ಡಿಎ ಏರಿಕೆ ಎಷ್ಟು
ಕರ್ನಾಟಕ ಸರ್ಕಾರದ 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ 2023ರ ಜುಲೈ 1ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆ ದರವನ್ನು ಶೇಕಡ 3.75ರಷ್ಟು ಅಂದರೆ ಈಗ ಇರುವಂತಹ ಶೇಕಡ 35ರಿಂದ ಶೇಕಡ 38.75ಕ್ಕೆ ಹೆಚ್ಚಿಲಾಗಿದೆ.
ಕರ್ನಾಟಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಲೆಕ್ಕಾಚಾರದಲ್ಲಿ ಮೂಲ ವೇತನ ಎಂದರೇನು
ತುಟ್ಟಿಭತ್ಯೆಯನ್ನು ಸರ್ಕಾರಿ ನೌಕರರ ಈಗ ಇರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ಮೂಲವೇತನ ಎಂದರೆ,
- ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವರಿಗೆ ಸ್ಥಗಿತ ವೇತನ ಬಡ್ತಿಯನ್ನು ನೀಡಲಾಗಿದ್ದರೆ, ಆ ಸ್ಥಗಿತ ವೇತನ ಬಡ್ತಿ.
- 2018ರ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ) ನಿಯಮಗಳ ಪೈಕಿ ನಿಯಮ 3 (ಸಿ)ಯನ್ನು ಓದಿಕೊಂಡು 7ನೇ ನಿಯಮದ (3)ನೇ ಉಪನಿಯಮದ ಮೇರೆಗೆ ನೌಕರರಿಗೆ ನೀಡಲಾದ ವೈಯಕ್ತಿಕ ವೇತನ ಯಾವುದಾದರೂ ಇದ್ದರೆ ಆ ವೈಯಕ್ತಿಕ ವೇತನ
- ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಸರ್ಕಾರಿ ನೌಕರನಿಗೆ ಮಂಜೂರು ಮಾಡಲಾಗಿರುವ ಹೆಚ್ಚುವರಿ ವೇತನ ಬಡ್ತಿ ಯಾವುದಾದರೂ ಇದ್ದರೆ ಅವು ಮೂಲ ವೇತನದ ವ್ಯಾಪ್ತಿಗೆ ಸೇರುತ್ತವೆ.
ಮೂಲ ವೇತನಕ್ಕೆ ಮೇಲೆ ಸೂಚಿಸಿದ್ದು ಹೊರತು ಪಡಿಸಿ ಬೇರಾವುದನ್ನೂ ಸೇರಿಸುವಂತೆ ಇಲ್ಲ.
ಕರ್ನಾಟಕ ಸರ್ಕಾರ ಮಾಡಿದ ಡಿಎ ಹೆಚ್ಚಳ ಯಾವ ನೌಕರರಿಗೆ ಅನ್ವಯ
- ಕರ್ನಾಟಕ ಸರ್ಕಾರದ ನಿವೃತ್ತಿ ವೇತನದಾರರು/ ಕುಟುಂಬ ನಿವೃತ್ತಿ ವೇತನದಾರರಿಗೆ
- ಕರ್ನಾಟಕ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು / ಕುಟುಂಬ ನಿವೃತ್ತಿ ವೇತನದಾರರಿಗೆ
- ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತಿ ವೇತನದಾರರಿಗೆ
- ಕರ್ನಾಟಕ ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿಗಳ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಯಲ್ಲಿರುವ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರಿಗೆ
- ಕರ್ನಾಟಕ ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿ ಪೂರ್ಣಾವಧಿ ನೌಕರರಾಗಿ ಇರುವಂಥವರಿಗೆ
ಕರ್ನಾಟಕ ಸರ್ಕಾರ ಮಾಡಿದ ಡಿಎ ಹೆಚ್ಚಳ ಅನ್ವಯವಾಗುತ್ತದೆ.
ಡಿಎ ಹೆಚ್ಚಳಕ್ಕೆ ಸಂಬಂಧಿಸಿ ಪ್ರತ್ಯೇಕ ಆದೇಶ ಯಾವ ನೌಕರರಿಗೆ
ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಗಳಲ್ಲಿ ಹಾಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್‌ಜೆಪಿಸಿ ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳಿಗೆ ಡಿಎ ಹೆಚ್ಚಳಕ್ಕೆ ಸಂಬಂಧಿಸಿ ಪ್ರತ್ಯೇಕ ಆದೇಶವನ್ನು ಕರ್ನಾಟಕ ಸರ್ಕಾರ ಪ್ರಕಟಿಸಲಿದೆ.
ಕರ್ನಾಟಕ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ನೇರ ಖಾತೆಗೆ ಜಮೆ ಮಾಡ್ತಾರಾ ಅಥವಾ ನಗದು ರೂಪದಲ್ಲಿ ಕೊಡ್ತಾರಾ
ಕರ್ನಾಟಕ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ನೇರ ಖಾತೆಗೆ ಜಮೆ ಮಾಡುವುದಿಲ್ಲ. ಸದ್ಯ ಕರ್ನಾಟಕ ಸರ್ಕಾರ ಹೊರಡಿಸಿರುವ ಆದೇಶ ಪ್ರಕಾರ ತುಟ್ಟಿ ಭತ್ಯೆಯನ್ನು ನಗದು ರೂಪದಲ್ಲೇ ಪಾವತಿಸಬೇಕು.