ಕನ್ನಡ ಸುದ್ದಿ  /  Karnataka  /  Bengaluru News Karnataka Government Issued Circular That Schools Themselves Should Pay The Fees Mrt

ಅಂದು ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್, ನೀರು ಕೊಡುವ ಘೋಷಣೆ; ಇದೀಗ ಶಾಲೆಗಳೇ ಶುಲ್ಕ ಭರಿಸಲು ಸರ್ಕಾರ ಸುತ್ತೋಲೆ

ಕಳೆದ ವರ್ಷದ ನವೆಂಬರ್ 1 ರಂದು ಸರ್ಕಾರಿ ಶಾಲೆಗಳ ವಿದ್ಯುತ್, ನೀರಿನ ಶುಲ್ಕವನ್ನ ಸರ್ಕಾರವೇ ಭರಿಸುವುದಾಗಿ ಘೋಷಣೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಇದೀಗ ಶಾಲೆಗಳೇ ಶುಲ್ಕ ಭರಿಸಲು ಸುತ್ತೋಲೆ ಹೊರಡಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿನ ವಿದ್ಯುತ್ ಮತ್ತು ಕುಡಿಯುವ ನೀರಿನ ಶುಲ್ಕವನ್ನು ಸರ್ಕಾರವೇ ಭರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವರ್ಷ ಹೇಳಿದ್ದರು. ಇದೀಗ ಶಾಲೆಗಳೇ ಶುಲ್ಕ ಭರಿಸಲು ಸುತ್ತೋಲೆ ಹೊರಡಿಸಲಾಗಿದೆ.
ಸರ್ಕಾರಿ ಶಾಲೆಗಳಲ್ಲಿನ ವಿದ್ಯುತ್ ಮತ್ತು ಕುಡಿಯುವ ನೀರಿನ ಶುಲ್ಕವನ್ನು ಸರ್ಕಾರವೇ ಭರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವರ್ಷ ಹೇಳಿದ್ದರು. ಇದೀಗ ಶಾಲೆಗಳೇ ಶುಲ್ಕ ಭರಿಸಲು ಸುತ್ತೋಲೆ ಹೊರಡಿಸಲಾಗಿದೆ.

ಬೆಂಗಳೂರು: ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 2024ರ ಮಾರ್ಚ್ 24ರ ವರೆಗೆ ವಿದ್ಯುತ್‌ ಮತ್ತು ನೀರಿನ ಶುಲ್ಕವನ್ನು ಭರಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು 2023ರ ನವೆಂಬರ್ 1 ರಂದು ತಮ್ಮ ಕನ್ನಡ ರಾಜ್ಯೋತ್ಸದ ಭಾಷಣದಲ್ಲಿ ಘೋಷಣೆ ಮಾಡಿದ್ದರು. ಆದರೆ ಇದೀಗ ಶಾಲೆಗಳೇ ಶುಲ್ಕ ಭರಿಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ (ಎಸ್‌ಎಸ್‌ಕೆ) ಅನುದಾನ ಬಳಸಿಕೊಂಡು ವಿದ್ಯುತ್, ಕುಡಿಯುವ ನೀರಿನ ಶುಲ್ಕ ಭರಿಸಬೇಕು ಎಂದು ಸರ್ಕಾರಿ ಶಾಲಾ-ಕಾಲೇಜುಗಳ ಎಸ್‌ಎಸ್‌ಕೆ ನಿರ್ದೇಶಕರು ಸೂಚನೆ ನೀಡಿದ್ದಾರೆ. ಸರ್ಕಾರಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಏಪ್ರಿಲ್ 1ರಿಂದ ಉಚಿತ ವಿದ್ಯುತ್‌ ಹಾಗೂ ನೀರು ಪೂರೈಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ. 2024–25ನೇ ಸಾಲಿನಿಂದ ಸರಬರಾಜು ಮಾಡುವ ವಿದ್ಯುತ್‌ ಹಾಗೂ ನೀರಿಗೆ ಅಗತ್ಯವಿರುವ ವಾರ್ಷಿಕ ವೆಚ್ಚದ ಪ್ರಸ್ತಾವವನ್ನು ಇಂಧನ ಹಾಗೂ ನಗರಾಭಿವೃದ್ಧಿ ಇಲಾಖೆಗಳೇ ನೇರವಾಗಿ ಆರ್ಥಿಕ ಇಲಾಖೆಗೆ ಸಲ್ಲಿಸಿ ಅನುದಾನ ಪಡೆಯಲಿವೆ.

2023–24ನೇ ಶೈಕ್ಷಣಿಕ ಸಾಲಿನ ಮಾರ್ಚ್‌ವರೆಗಿನ ವಿದ್ಯುತ್‌ ಹಾಗೂ ನೀರಿನ ಶುಲ್ಕ ಪಾವತಿಗಾಗಿ ಅಗತ್ಯವಿರುವ ಜಿಲ್ಲಾವಾರು ಅನುದಾನದ ಪ್ರಸ್ತಾವವನ್ನು ಪ್ರಾಥಮಿಕ ಪ್ರೌಢ ಶಾಲೆಗಳು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಹಾಗೂ ಪದವಿಪೂರ್ವ ಕಾಲೇಜುಗಳು ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಬೇಕು ಎಂದು ಮೊದಲು ಸೂಚಿಸಲಾಗಿತ್ತು. ಈಗ ಎಸ್‌ಎಸ್‌ಕೆ ಅನುದಾನದಲ್ಲೇ ಬಳಸಿಕೊಳ್ಳುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಸರ್ಕಾರದ ಈ ಸುತ್ತೋಲೆಯನ್ನು ಶಾಲಾ ಅಭಿವೃದ್ದಿ ಮಂಡಲಿ ಮತ್ತು ನಿರ್ವಹಣಾ ಸಮಿತಿಗಳು (ಎಸ್ ಡಿಎಂಸಿ) ವಿರೋಧಿಸಿವೆ. ಪ್ರಸ್ತುತ ಶಾಲೆಗಳಿಗೆ ನೀಡುವ ಅನುದಾನವು ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ ಆಟದ ಮೈದಾನ ಮೊದಲಾದ ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ಸಾಕಾಗುವುದಿಲ್ಲ. ಇನ್ನು ನೀರು, ವಿದ್ಯುತ್ ಶುಲ್ಕ ಪಾವತಿಸಿದರೆ ಈ ವೆಚ್ಚಗಳಿಗೆ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಶಾಲೆಗಳಿಗೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಿರುವುದು ನಿಜವಾದರೂ ಎಲ್ಲ ವೆಚ್ಚಗಳನ್ನು ಸರಿದೂಗಿಸುವುದು ಕಷ್ಟವಾಗುತ್ತಿದೆ. ಈ ವರ್ಷದ ವೆಚ್ಚವನ್ನೂ ಸರ್ಕಾರವೇ ಭರಿಸಬೇಕು ಎಂದು ಎಸ್‌ಡಿಎಂಸಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

2023ರ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಮತ್ತು ನೀರನ್ನು ಉಚಿತವಾಗಿ ಕೊಡುವುದಾಗಿ ಘೋಷಿಸಿದ್ದರು. ಇದನ್ನೇ ಬಜೆಟ್‌ನಲ್ಲಿಯೂ ಪ್ರಸ್ತಾಪಿಸಿದ್ದರು. ಈ ಸಂಬಂಧ ಆದೇಶ ಹೊರಡಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಮುಖ್ಯಮಂತ್ರಿಗಳ ಸಲಹೆಯಂತೆ ಅಧಿಕಾರಿಗಳು 2023ರ ಡಿಸೆಂಬರ್‌ನಲ್ಲಿ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರಿಗೆ ಪತ್ರ ಬರೆದು ಬಾಕಿ ಇರುವ ವಿದ್ಯುತ್ ಮತ್ತು ನೀರಿನ ಶುಲ್ಕ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದರು. ಡಿಸೆಂಬರ್‌ನಲ್ಲಿ ನೀಡಿದ್ದ ಸೂಚನೆಯನ್ವಯ ಮಾರ್ಚ್ 2024ರವರೆಗಿನ ವಿದ್ಯುತ್ ಮತ್ತು ನೀರಿನ ಶುಲ್ಕವನ್ನು ಎಸ್‌ಸ್‌ಕೆ ಅನುದಾನದಲ್ಲಿ ಭರಿಸುವಂತೆ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

ಶಾಲೆಗಳೇ ವಿದ್ಯುತ್, ನೀರಿನ ಶುಲ್ಕ ಭರಿಸುವ ಬಗ್ಗೆ ಅಧಿಕಾರಿಗಳು ಹೇಳುವುದೇನು?

ಇದನ್ನೂ ಓದಿ: ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು; 833 ಶಾಲೆಗಳ ಪೈಕಿ 119ರಲ್ಲಿ ಘೋಷ ವಾಕ್ಯ ಬದಲಾವಣೆ; ಇಲ್ಲಿದೆ ಚಿತ್ರನೋಟ

ಅಧಿಕಾರಿಗಳು ಇದನ್ನು ಮತ್ತೊಂದು ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಶಾಲೆಗಳಿಗೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಲಾಗಿದ್ದು, ನೀರು ಮತ್ತು ವಿದ್ಯುತ್ ಶುಲ್ಕವನ್ನು ಭರಿಸಲು ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಶಾಲೆಗಳಿಗೆ ಶಿಕ್ಷಣ ಇಲಾಖೆ ಮತ್ತು ಎಸ್ ಎಸ್ ಕೆ ಎರಡೂ ವಾರ್ಷಿಕ ನಿರ್ವಹಣಾ ಮೊತ್ತವನ್ನು ನೀಡುತ್ತಿವೆ. ಈ ಮೊತ್ತವನ್ನು ಈ ಬಾರಿ ಹೆಚ್ಚಿಸಲಾಗಿದೆ. ಆದ್ದರಿಂದ ಶುಲ್ಕಗಳನ್ನು ಪಾವತಿಸಲು ಸೂಚನೆ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ.

ಪ್ರಸ್ತುತ ಲಭ್ಯವಿರುವ ಮಾಹಿತಿಗಳ ಪ್ರಕಾರ ಸರಕಾರಿ ಶಾಲಾ ಕಾಲೇಜುಗಳ ವಿದ್ಯುತ್ ಮತ್ತು ನೀರಿನ ಶುಲ್ಕ ಭರಿಸಲು ವಾರ್ಷಿಕ 24 ಕೋಟಿ ರೂ.ಗಳ ಅವಶ್ಯಕತೆ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಮೊತ್ತವನ್ನು ಪಾವತಿಸಲು ಶಾಲೆಗಳ ಬಳಿ ಹಣ ಇರಲಿಲ್ಲ. ವಿದ್ಯುತ್ ಮತ್ತು ನೀರು ಅತ್ಯಾವಶ್ಯಕವಾಗಿದ್ದು, ಅದೆಷ್ಟೋ ಶಾಲೆಗಳಲ್ಲಿ ಶಿಕ್ಷಕರೇ ತಮ್ಮ ಸಂಬಳದಿಂದ ಭರಿಸುತ್ತಿದ್ದ ನಿದರ್ಶನಗಳಿವೆ. ಪ್ರತಿ ಶಾಲೆಗೆ ವಾರ್ಷಿಕ 8000-40,000 ರೂವರೆಗೆ ಶುಲ್ಕದ ಅವಶ್ಯಕತೆ ಇದೆ.

(This copy first appeared in Hindustan Times Kannada website. To read more like this please logon to kannada.hindustantimes.com )