ಕನ್ನಡ ಸುದ್ದಿ  /  ಕರ್ನಾಟಕ  /  Bbmp Split: ಮತ್ತೆ ಮುನ್ನಲೆಗೆ ಬಂದ ಬಿಬಿಎಂಪಿ ವಿಭಜನೆ ಪ್ರಸ್ತಾವ; ಬೆಂಗಳೂರು ಪಾಲಿಕೆಗೆ ಚುನಾವಣೆ ನಡೆಯುವುದೇ?

BBMP Split: ಮತ್ತೆ ಮುನ್ನಲೆಗೆ ಬಂದ ಬಿಬಿಎಂಪಿ ವಿಭಜನೆ ಪ್ರಸ್ತಾವ; ಬೆಂಗಳೂರು ಪಾಲಿಕೆಗೆ ಚುನಾವಣೆ ನಡೆಯುವುದೇ?

Bengaluru BBMP News: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಐದು ಸಣ್ಣ ಪಾಲಿಕೆಗಳನ್ನಾಗಿ ರಚಿಸುವ ಪ್ರಸ್ತಾಪಕ್ಕೆ ಮತ್ತೆ ಚಾಲನೆ ದೊರಕಿದೆ.

BBMP Split: ಮತ್ತೆ ಮುನ್ನಲೆಗೆ ಬಂದ ಬಿಬಿಎಂಪಿ ವಿಭಜನೆ ಪ್ರಸ್ತಾವ
BBMP Split: ಮತ್ತೆ ಮುನ್ನಲೆಗೆ ಬಂದ ಬಿಬಿಎಂಪಿ ವಿಭಜನೆ ಪ್ರಸ್ತಾವ

ಬೆಂಗಳೂರು: ಈ ಹಿಂದೆ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿಬಿಎಂಪಿಗೆ ಚುನಾವಣೆ ನಡೆಸಲು ಆತುರದಲ್ಲಿದೆ. ಆದರೆ ಬಿಬಿಎಂಪಿಗೆ ನಡೆಸಬೇಕೇ ಅಥವಾ ಐದು ಸಣ್ಣ ಪಾಲಿಕೆಗಳನ್ನು ರಚಿಸಿ ನಡೆಸಬೇಕೇ ಎಂಬ ಗೊಂದಲದಲ್ಲಿದೆ. ಬಲ್ಲ ಮೂಲಗಳ ಪ್ರಕಾರ ಈ ಮಸೂದೆಯ ಕರಡು ಸಿದ್ದವಾಗುತ್ತಿದೆ. ಶೀಘ್ರದಲ್ಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ಅವರು ಮೊದಲು ಅವಧಿಗೆ ಮುಖ್ಯಮಂತ್ರಿಯಾಗಿದ್ದ ನವಂಬರ್‌ 2014ರಲ್ಲೇ ಬಿಬಿಎಂಪಿ ಪುನರ್‌ ರಚನಾ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಜುಲೈ 2015ರಲ್ಲಿ ವರದಿ ಸಲ್ಲಿಸಿತ್ತು. ಆದರೆ ಬಿಜೆಪಿ ಬಿಬಿಎಂಪಿ ವಿಭಜನೆಯನ್ನು ಬಲವಾಗಿ ವಿರೋಧಿಸುತ್ತಾ ಬಂದಿತ್ತು. ತನ್ನ ಅವಧಿಯಲ್ಲಿ ಬಿಜೆಪಿ ಈ ವರದಿಯನ್ನು ಶೈತ್ಯಾಗಾರಕ್ಕೆ ತಳ್ಳಿತ್ತು. ನಂತರ ಈ ಸಮಿತಿ 2018ರಲ್ಲಿ ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ಶೀಘ್ರದಲ್ಲೇ ಬಿಬಿಎಂಪಿಯನ್ನು ವಿಭಜನೆ ಮಾಡುವ ಸಂಬಂಧ ಸರ್ಕಾರ ಮತ್ತೊಮ್ಮೆ ಸಭೆ ಸೇರುವ ನಿರೀಕ್ಷೆ ಇದೆ. ಪಾಲಿಕೆಯನ್ನು ಐದು ಭಾಗಗಳಾಗಿ ರಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ತಪ್ಪುಗಳಾದಾಗ ಎಲ್ಲರೂ ಸರಕಾರವನ್ನು ಟೀಕಿಸುವುದು ಸಹಜ. ಆದರೆ ಒಂದು ಬೆಂಗಳೂರಿನ ನಾಗರೀಕರ ಹಿತದ ದೃಷ್ಟಿಯೀಂದ ಸಮರ್ಪಕ ವ್ಯವಸ್ಥೆಯೊಂದನ್ನು ರಚಿಸಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ. ಆದರೆ ಈಗಿರುವ ಬಿಬಿಎಂಪಿಯನ್ನು ಉಳಿಸಿಕೊಳ್ಳುವುದೇ ಅಥವಾ ನಾಲ್ಕೈದು ಭಾಗಗಳನ್ನಾಗಿ ಮಾಡಲಾಗುವುದೇ ಎಂದು ತಿಳಿದು ಬಂದಿಲ್ಲ.

ಟ್ರೆಂಡಿಂಗ್​ ಸುದ್ದಿ

2018ರಲ್ಲಿ ಸಲ್ಲಿಸಲಾದ ಮಸೂದೆಯಲ್ಲಿ ಒಂದಕ್ಕಿಂತ ಹೆಚ್ಚು ಪಾಲಿಕೆಗಳನ್ನು ರಚಿಸಬೇಕು. ಮೂರು ಹಂತದ ಆಡಳಿತ ವ್ಯವಸ್ಥೆ ಇದ್ದರೆ ಸ್ಥಳೀಯ ಆಡಳಿತ ವ್ಯವಸ್ಥೆ ನಾಗರಿಕರಿಗೆ ಹತ್ತಿರವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿತ್ತು. ಸಮಿತಿ ರೂಪಿಸಿದ ಮೂರು ಹಂತದ ಆಡಳಿತ ವ್ಯವಸ್ಥೆಯಲ್ಲಿ ಮೊದಲ ಹಂತದಲ್ಲಿ ಕೆಳ ಹಂತದಲ್ಲಿ ವಾರ್ಡ್‌ ಕಮಿಟಿಗಳನ್ನು ರಚಿಸಬೇಕು. ಮಧ್ಯದ ಹಂತದಲ್ಲಿ ಪಾಲಿಕೆಗಳಿರಬೇಕು ಮತ್ತು ಕೊನೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಇರಬೇಕು ಎಂದು ಶಿಫಾರಸ್ಸು ಮಾಡಿತ್ತು. ಬೆಂಗಳೂರು 712 ಚದುರ ಕಿಮೀ ವಿಸ್ತೀರ್ಣದಲ್ಲಿದ್ದು, ಸುಮಾರು 400 ವಾರ್ಡ್‌ ಗಳಿರಬೇಕು ಎಂದೂ ಸಮಿತಿ ಹೇಳಿತ್ತು.

ಯಾವ ಪಕ್ಷಕ್ಕೂ ಪಾಲಿಕೆ ಮತ್ತು ಕಾರ್ಪೋರೇಟರ್‌ ಗಳಿರುವುದು ಬೇಕಿಲ್ಲ ಎನ್ನುವುದು ಗುಟ್ಟೇನೂ ಅಲ್ಲ. ತಮ್ಮ ಆಟಾಟೋಪಕ್ಕೆ ಪಾಲಿಕೆ ಸದಸ್ಯರು ಮಗ್ಗುಲು ಮುಳ್ಳಾಗುತ್ತಾರೆ. ಎನ್ನುವುದು ಸಚಿವರು ಮತ್ತು ಶಾಸಕರಿಗೆ ಚೆನ್ನಾಗಿ ಅರಿವಿದೆ. ಹಿಂದೆ ಆಡಳಿತ ನಡೆಸಿದ ಸರ್ಕಾರಗಳೆಲ್ಲವೂ ಒಂದಿಲ್ಲೊಂದು ಕಾರಣವನ್ನು ಮುಂದೊಡ್ಡಿ ಚುನಾವಣೆಯನ್ನು ಮುಂದೂಡುತ್ತಾ ಬಂದಿವೆ. ಲೋಕಸಭಾ ಚುನಾವಣಾ ಫಲಿತಾಂಶ ಅವಲೋಕಿಸಿದರೆ ಈಗಲೂ ಸರಕಾರ ಚುನಾವಣೆ ನಡೆಸುತ್ತದೆ ಎಂಭ ಖಾತ್ರಿ ಇಲ್ಲ. ಬೆಂಗಳೂರಿನ ಮೂರು ಮತ್ತು ಮಹಾನಗರಕ್ಕೆ ಹೊಂದಿಕೊಂಡಿರುವ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ವಿಭಜನೆ ಹೆಸರಿನಲ್ಲಿ ಸಾಧ್ಯವಾದಷ್ಟೂ ದಿನ ಬಿಬಿಎಂಪಿ ಚುನಾವಣೆಯನ್ನು ಸರ್ಕಾರ ಮುಂದೂಡುವುದರಲ್ಲಿ ಯಾವುದೇ ಸಂಶಯಗಳಿಲ್ಲ.