ಕನ್ನಡ ಸುದ್ದಿ  /  ಕರ್ನಾಟಕ  /  Bbmp News: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಈ ವರ್ಷವೂ ಚುನಾವಣೆ ಇಲ್ಲ; ಪುರಪಿತೃಗಳಿಗೆ ಮತ್ತೆ ನಿರಾಶೆ ಕಟ್ಟಿಟ್ಟ‌ ಬುತ್ತಿ

BBMP News: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಈ ವರ್ಷವೂ ಚುನಾವಣೆ ಇಲ್ಲ; ಪುರಪಿತೃಗಳಿಗೆ ಮತ್ತೆ ನಿರಾಶೆ ಕಟ್ಟಿಟ್ಟ‌ ಬುತ್ತಿ

BBMP divide Bill: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಈ ವರ್ಷವೂ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ಪುರಪಿತೃಗಳಾಗುವ ಆಕಾಂಕ್ಷಿಗಳಿಗೆ ನಿರಾಶೆ ಕಟ್ಟಿಟ್ಟ ಬುತ್ತಿಯಾಗಿದೆ. (ವರದಿ: ಎಚ್‌. ಮಾರುತಿ, ಬೆಂಗಳೂರು)

BBMP News: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಈ ವರ್ಷವೂ ಚುನಾವಣೆ ಇಲ್ಲ  (HT Archives)
BBMP News: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಈ ವರ್ಷವೂ ಚುನಾವಣೆ ಇಲ್ಲ (HT Archives) (HT_PRINT)

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಈ ವರ್ಷವೂ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ಪುರಪಿತೃಗಳಾಗುವ ಆಕಾಂಕ್ಷಿಗಳಿಗೆ ನಿರಾಶೆ ಕಟ್ಟಿಟ್ಟ ಬುತ್ತಿಯಾಗಿದೆ. ಕಾಂಗ್ರೆಸ್‌ ಪಕ್ಷದೊಳಗೆ ವಿರೋಧ ವ್ಯಕ್ತವಾಗುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಪಾಲಿಕೆಯನ್ನು ಇಬ್ಭಾಗ ಮಾಡುವ ಮಸೂದೆಯನ್ನು ಮಂಡಿಸುವ ಸಾಧ್ಯತೆಗಳಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಜುಲೈ 15 ಅಥವಾ 22ರಿಂದ ಅಧಿವೇಶನ ಆರಂಭವಾಗಲಿದ್ದು ಬಿಬಿಎಂಪಿ ವಿಭಜನೆಯ ಮಸೂದೆಯೂ ಸೇರಿದಂತೆ ವಿವಾದತ್ಮಕ ಮಸೂದೆಗಳನ್ನು ಮಂಡಿಸದಿರಲು ಸರ್ಕಾರ ನಿರ್ಧರಿಸಿದೆ. ಆದರೆ ಸಹಕಾರ ವಲಯದಲ್ಲಿ ಜಾತಿ ಆಧಾರಿತ ಮೀಸಲಾತಿ ತರುವ ಮಸೂದೆ ಮಂಡನೆಯಾಗುವ ಸಾದ್ಯತೆಗಳಿವೆ.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.‌ಪಾಟೀಲ್‌ ನೇತೃತ್ವದ ಸಮಿತಿ ನೀಡಿರುವ ವರದಿ ಇನ್ನೂ ಪರಿಶೀಲನಾ ಹಂತದಲ್ಲಿದೆ. ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಗರ ಪಾಲಿಕೆಯನ್ನು ಮೂರರಿಂದ ಐದು ಪಾಲಿಕೆಗಳನ್ನಾಗಿ ವಿಭಜಿಸುವ ಸಂಬಂಧ ಸಾಧಕ ಭಾದಕಗಳನ್ನು ಕುರಿತು ಸಮಾಲೋಚನೆಯಲ್ಲಿ ತೊಡಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬಿಬಿಎಂಪಿ ವಿಭಜನೆ ಕುರಿತು ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಮತ್ತು ತಜ್ಞರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ವಿದೇಶಗಳ ಉದಾಹರಣೆ ನೀಡುತ್ತಾ ವಿಭಜನೆ ಮಾಡುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದರೆ ಇನ್ನೂ ಕೆಲವರು ಇದರಿಂದ ಯಾವುದೇ ಪ್ರಯೋಜನ ಇಲ್ಲ. ಬದಲಾಗಿ ಒಂದೊಂದು ಭಾಷಿಕ ಮತ್ತು ಒಂದೊಂದು ಧರ್ಮದವರಿಗೆ ಪ್ರತ್ಯೇಕ ಪಾಲಿಕೆಗಳನ್ನು ದಯಪಾಲಿಸಿದಂತಾಗುತ್ತದೆ ಎಂಬ ವಾದವನ್ನೂ ಮುಂದಿಟ್ಟಿದ್ದಾರೆ.

ಬಿಬಿಎಂಪಿಗೆ ಚುನಾವಣೆ ನಡೆದು ಈಗಾಗಲೇ 4 ವರ್ಷಗಳು ಕಳೆದಿವೆ. ಈ ಹಿಂದೆ ಆಡಳಿತ ನಡೆಸಿದ ಪಕ್ಷಗಳು ಒಂದಿಲ್ಲೊಂದು ಸಬೂಬು ಹೇಳುತ್ತಾ ಚುನಾವಣೆಯನ್ನು ಮುಂದೂಡುತ್ತಾ ಬಂದಿದ್ದವು. ಪಾಲಿಕೆ ವಿಭಜನೆಯ ಮಸೂದೆ ಮಂಡನೆಯಾಗದಿದ್ದಲ್ಲಿ ಈ ವರ್ಷವೂ ಚುನಾವಣೆ ನಡೆಯುವುದು ಅನುಮಾನವಾಗಿದೆ.

ಬೆಂಗಳೂರಿನ ಎಲ್ಲರಿಂದಲೂ ಒಮ್ಮತದ ಅಭಿಪ್ರಾಯ ಮೂಡಬೇಕಿದೆ. ಶಿವಕುಮಾರ್‌ ಈಗಾಗಲೇ ಬೆಂಗಳೂರಿನ ಮಾಜಿ ಮಹಾಪೌರರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಅವರೂ ವಿಸ್ತೃತ ಚರ್ಚೆಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಪಾಲಿಕೆಗೆ ಚುನಾವಣೆ ನಡೆಸಿ ನಂತರ ವಿಭಜನೆ ಕುರಿತು ಚರ್ಚೆ ನಡೆಸುವುದು ಉತ್ತಮ. ಆಗ ಪಾಲಿಕೆ ಸದಸ್ಯರೂ ಚರ್ಚೆಯಲ್ಲಿ ಭಾಗವಹಿಸಬಹುದಾಗಿದೆ ಎಂಬ ಸಲಹೆಯನ್ನು ಕೆಲವು ಮಾಜಿ ಮೇಯರ್‌ ಗಳು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಬಿಎಂಪಿಗೆ ಚುನಾವಣೆ ನಡೆಯಲೇಬೇಕೆಂದು ಬಿಜೆಪಿ ಮತ್ತು ಜೆಡಿಎಸ್‌ ಪಟ್ಟು ಹಿಡಿಯುವ ಸಾಧ್ಯತೆಗಳು ಕಡಿಮೆ. ಆ ಪಕ್ಷಗಳ ಸದಸ್ಯರಿಗೂ ಪಾಲಿಕೆಯಲ್ಲಿ ಚುನಾಯಿತ ಮಂಡಳಿ ಇರುವುದು ಬೇಕಿಲ್ಲ.

ಸಹಕಾರ ಸಂಘಗಳಲ್ಲಿ ತಲಾ ಒಂದು ಸ್ಥಾನವನ್ನು ಎಸ್‌, ಸಿ ಮತ್ತು ಎಸ್‌ ಟಿ ಮತ್ತು ಮಹಿಳೆಯರಿಗೆ ಮೀಸಲಿಡುವ ಸಂಬಂಧ ಕುರಿತಾದ ಮಸೂದೆ ಬಾಕಿ ಉಳಿದಿದೆ. ಬಜೆಟ್‌ ಅಧಿವೇಶನ ಸಂದರ್ಭದಲ್ಲಿ ವಿಧಾನಪರಿಷತ್‌ ಈ ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸಿತ್ತು. ಇದೀಗ ಸಮಿತಿಯು ಸಮ್ಮತಿ ಸೂಚಿಸಿದ್ದು, ಮುಂಬರುವ ಅಧಿವೇಶನದಲ್ಲಿ ಮಂಡನೆಯಾಗಲಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ನಡೆದ ಸಚಿವ ಸಂಪುಟದಲ್ಲಿ ಬಜೆಟ್‌ ಗೆ ದಿನಾಂಕವನ್ನು ನಿಗಧಿಪಡಿಸುವ ಅಧಿಕಾರವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿತ್ತು. ಆರು ತಿಂಗಳೊಳಗೆ ಅದಿವೇಶನ ನಡೆಯಬೇಕಿದ್ದು, ಆಗಸ್ಟ್‌ ಗೆ ಈ ಅವಧಿ ಮುಕ್ತಾಯವಾಗಲಿದ್ದು, ಈ ತಿಂಗಳಲ್ಲಿ ಅಧಿವೇಶನ ಆರಂಭವಾಗುವುದು ಖಚಿತವಾಗಿದೆ.

  • ವರದಿ: ಎಚ್‌. ಮಾರುತಿ, ಬೆಂಗಳೂರು