ಇನ್‌ಫ್ಲುಯೆನ್ಸರ್‌ಗಳಿಗೂ ಸಿಗಲಿದೆ ಕರ್ನಾಟಕ ಸರ್ಕಾರದ ಜಾಹೀರಾತು, ಅರ್ಹತೆ, ಮಾನದಂಡಗಳೇನು, ವಾರ್ತಾ ಇಲಾಖೆ ಪಟ್ಟಿಗೆ ಸೇರುವುದು ಹೇಗೆ-bengaluru news karnataka govt to give advt to social media influencers and all kinds of digital media uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಇನ್‌ಫ್ಲುಯೆನ್ಸರ್‌ಗಳಿಗೂ ಸಿಗಲಿದೆ ಕರ್ನಾಟಕ ಸರ್ಕಾರದ ಜಾಹೀರಾತು, ಅರ್ಹತೆ, ಮಾನದಂಡಗಳೇನು, ವಾರ್ತಾ ಇಲಾಖೆ ಪಟ್ಟಿಗೆ ಸೇರುವುದು ಹೇಗೆ

ಇನ್‌ಫ್ಲುಯೆನ್ಸರ್‌ಗಳಿಗೂ ಸಿಗಲಿದೆ ಕರ್ನಾಟಕ ಸರ್ಕಾರದ ಜಾಹೀರಾತು, ಅರ್ಹತೆ, ಮಾನದಂಡಗಳೇನು, ವಾರ್ತಾ ಇಲಾಖೆ ಪಟ್ಟಿಗೆ ಸೇರುವುದು ಹೇಗೆ

Karnataka Digital Advt Guidelines 2024; ಕರ್ನಾಟಕ ಸರ್ಕಾರ ನೂತನ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ 2024 ಜಾರಿಗೊಳಿಸಿದೆ. ಇನ್ಮೇಲೆ ಇನ್‌ಫ್ಲುಯೆನ್ಸರ್‌ಗಳಿಗೂ ಸಿಗಲಿದೆ ಕರ್ನಾಟಕ ಸರ್ಕಾರದ ಜಾಹೀರಾತು, ಅರ್ಹತೆ, ಮಾನದಂಡಗಳೇನು, ವಾರ್ತಾ ಇಲಾಖೆ ಪಟ್ಟಿಗೆ ಸೇರುವುದು ಹೇಗೆ ಎಂಬಿತ್ಯಾದಿ ವಿವರ ಇಲ್ಲಿದೆ.

ಇನ್‌ಫ್ಲುಯೆನ್ಸರ್‌ಗಳಿಗೂ ಸಿಗಲಿದೆ ಕರ್ನಾಟಕ ಸರ್ಕಾರದ ಜಾಹೀರಾತು. ಇದಕ್ಕೆ ಬೇಕಾದ ಅರ್ಹತೆ, ಮಾನದಂಡಗಳೇನು, ವಾರ್ತಾ ಇಲಾಖೆ ಪಟ್ಟಿಗೆ ಸೇರುವುದು ಹೇಗೆ ಎಂಬ ವಿವರ ಈ ವರದಿಯಲ್ಲಿದೆ.
ಇನ್‌ಫ್ಲುಯೆನ್ಸರ್‌ಗಳಿಗೂ ಸಿಗಲಿದೆ ಕರ್ನಾಟಕ ಸರ್ಕಾರದ ಜಾಹೀರಾತು. ಇದಕ್ಕೆ ಬೇಕಾದ ಅರ್ಹತೆ, ಮಾನದಂಡಗಳೇನು, ವಾರ್ತಾ ಇಲಾಖೆ ಪಟ್ಟಿಗೆ ಸೇರುವುದು ಹೇಗೆ ಎಂಬ ವಿವರ ಈ ವರದಿಯಲ್ಲಿದೆ.

ಬೆಂಗಳೂರು: ಕರ್ನಾಟಕದಲ್ಲಿಇನ್ನು ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳಿಗೂ ಸೇರಿ ಎಲ್ಲ ರೀತಿಯ ಡಿಜಿಟಲ್ ಮಾಧ್ಯಮಗಳಿಗೆ ಸರ್ಕಾರಿ ಜಾಹೀರಾತು ನೀಡಲು ಅವಕಾಶ ಮಾಡಿಕೊಡುವ ನೂತನ ಜಾಹೀರಾತು ನೀತಿಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.

'ಕರ್ನಾಟಕ ಡಿಜಿಟಲ್‌ ಜಾಹೀರಾತು ಮಾರ್ಗಸೂಚಿ–2024’ (Karnataka Digital Advt Guidelines 2024) ಅನ್ನು ಸರ್ಕಾರ ಜಾರಿಗೊಳಿಸಿದ್ದು, ಎಲ್ಲ ಸ್ವರೂಪದ ಡಿಜಿಟಲ್‌ ಮಾಧ್ಯಮಗಳಿಗೆ ಸರ್ಕಾರಿ ಜಾಹೀರಾತು ನೀಡಲು ಈ ಹೊಸ ನೀತಿಯು ಅನುವು ಮಾಡಿಕೊಡಲಿದೆ.

ಬ್ರ್ಯಾಂಡ್ ರಾಯಭಾರಿಗಳು, ಪ್ರಾಯೋಜಿತ ಪೋಸ್ಟ್‌ಗಳು, ಅತಿಥಿ ಬ್ಲಾಗ್‌, ಕಂಟೆಂಟ್‌ ಸಹಯೋಗ, ವಿಷಯಾಧಾರಿತ ಅಭಿಯಾನ, ಕಾರ್ಯಕ್ರಮ ಪ್ರಚಾರ, ವಿಮರ್ಶೆ ಮತ್ತು ಹ್ಯಾಶ್‌ಟ್ಯಾಗ್‌ ಅಭಿಯಾನಗಳ ಸ್ವರೂಪದಲ್ಲಿ ಇನ್‌ಫ್ಲುಯೆನ್ಸರ್‌ಗಳಿಗೆ ಜಾಹೀರಾತು ಸಿಗಲಿದೆ.

ಕರ್ನಾಟಕ ಸರ್ಕಾರದ ಜಾಹೀರಾತು ಪಡೆಯಲು ಡಿಜಿಟಲ್ ಮಾಧ್ಯಮಗಳಿಗೆ ಬೇಕಾದ ಅರ್ಹತೆಗಳಿವು

ಡಿಜಿಟಲ್ ಮಾಧ್ಯಮ ಘಟಕವು ಡಿಜಿಟಲ್ ಜಾಹೀರಾತು ಪಡೆಯಲು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಕಡ್ಡಾಯವಾಗಿ ಎಂಪ್ಯಾನೆಲ್ ಮಾಡಬೇಕು ಅಂದರೆ ಇಲಾಖೆಯ ಪಟ್ಟಿಗೆ ಸೇರ್ಪಡೆಯಾಗಿರಬೇಕು. ಪಟ್ಟಿಗೆ ಸೇರ್ಪಡೆ ಮಾಡುವುದಕ್ಕೆ ಡಿಜಿಟಲ್ ಮಾಧ್ಯಮಗಳು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು.

1) ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ರಿಜಿಸ್ಟ್ರಾ‌ ಆಫ್ ಕಂಪನೀಸ್‌ನಿಂದ ಮಾನ್ಯವಾದ ಸಂಯೋಜನೆಯ ಪ್ರಮಾಣಪತ್ರ.

2) ಜಿಎಸ್‌ಟಿ ನೋಂದಣಿ ಪ್ರಮಾಣಪತ್ರ/ಸಂಖ್ಯೆ.

3) ಹಿಂದಿನ ಒಂದು ಹಣಕಾಸು ವರ್ಷದ ಲೆಕ್ಕಪರಿಶೋಧಕ ವರದಿ (ವಹಿವಾಟು) ಮತ್ತು ಕನಿಷ್ಠ ಮೂರು ವರ್ಷಗಳ ಆದಾಯ ತೆರಿಗೆ ಪಾವತಿ ದಾಖಲೆ

4) ಯಾವುದೇ ಸಮಯದ ಅಂತರವಿಲ್ಲದೆ ಒಂದು ವರ್ಷದವರೆಗೆ ನಿರಂತರ ಪ್ರಕಟಣೆ ಮಾಡಿರುವ ದಾಖಲೆಗಳು,

5) ಡಿಜಿಟಲ್ ಮಾಧ್ಯಮ ಘಟಕದ ಟ್ರಾಫಿಕ್‌ನ ದಾಖಲೆ.

6) ಕರ್ನಾಟಕ ರಾಜ್ಯ ಮಾಧ್ಯಮ ಪಟ್ಟಿಯಲ್ಲಿರಲು ಉಲ್ಲೇಖಿಸಿರುವ ಅರ್ಹತೆಗಳು.

ಇದಲ್ಲದೆ, ವಾರ್ತಾ ಇಲಾಖೆಯ ಪಟ್ಟಿಗೆ ಸೇರ್ಪಡೆಯಾಗಬೇಕಾದರೆ, ಡಿಜಿಟಲ್ ಮಾಧ್ಯಮ ಘಟಕವು ಈ ಕೆಳಗಿನ ಮಾನದಂಡಗಳನ್ನೂ ಪೂರೈಸಬೇಕು.

ಡಿಜಿಟಲ್ ಘಟಕವು ಕಡ್ಡಾಯವಾಗಿ:

1) ಭಾರತದ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಂಪನೀಸ್‌ನಲ್ಲಿ ನೋಂದಣಿಯಾದ ಕಾನೂನುಬದ್ಧ ಸಂಘಟಿತ ಘಟಕವಾಗಿರಬೇಕು- ಪ್ರೈವೇಟ್ ಲಿಮಿಟೆಡ್ ಕಂಪನಿ, ಪಬ್ಲಿಕ್ ಲಿಮಿಟೆಡ್ ಕಂಪನಿ, ಪಾಲುದಾರಿಕೆ, ಲಿಮಿಟೆಡ್ ಲಯಬಿಲಿಟಿ ಪಾಲುದಾರಿಕೆಯ ಕಂಪನಿಯೂ ಆಗಿರಬಹುದು.

2) ವಾರ್ತಾ ಇಲಾಖೆ ಪಟ್ಟಿಗೆ ಸೇರ್ಪಡೆಯಾಗುವ ಸಮಯದಲ್ಲಿ ಕನಿಷ್ಠ ಒಂದು ವರ್ಷವಾಗಿರಬೇಕು. ಕನಿಷ್ಠ ಒಂದು ವರ್ಷ ಕಾಲ ಯಾವುದೇ ಸಮಯದ ಅಂತರವಿಲ್ಲದೆ ನಿರಂತರವಾಗಿ ಕಂಟೆಂಟ್ ಪಕಟಿಸಿರಬೇಕು.

3) ಕರ್ನಾಟಕ ಅಥವಾ ಕೇಂದ್ರ ಸರ್ಕಾರ ಅಥವಾ ಅದರ ಏಜೆನ್ಸಿಗಳ ಎಲ್ಲ ಶಾಸನಬದ್ಧ ಅವಶ್ಯಕತೆಗಳನ್ನು ಅನುಸರಿಸಲು ವಿಫಲವಾದರೆ ಅಂತಹ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಪಟ್ಟಿಯಿಂದ ರದ್ದುಗೊಳಿಸಲಾಗುತ್ತದೆ.

4) ಭಾರತದ ಕಾನೂನನ್ನು ಉಲ್ಲಂಘಿಸುವ ಪದ, ದೃಶ್ಯಗಳು, ಆಡಿಯೋ ಅಥವಾ ಅಂತಹ ಯಾವುದೇ ವಿಷಯವನ್ನು ಪಕಟಿಸಿರಬಾರದು.

ಡಿಜಿಟಲ್ ಜಾಹೀರಾತು ಪಡೆಯಲು ಮಾನದಂಡವೇನು?

ಯಾವುದಾದರೂ ಒಂದು ಸಾಮಾಜಿಕ ಜಾಲತಾಣಗಳಲ್ಲಿ ನಿಗದಿತ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿರುವ ಇನ್‌ಫ್ಲುಯೆನ್ಸರ್‌ಗಳಿಗೆ ಸರ್ಕಾರಿ ಜಾಹೀರಾತು ದೊರೆಯಲಿದೆ. ಇನ್‌ಫ್ಲುಯೆನ್ಸರ್‌ಗಳ ಪೈಕಿ ಮೂರು ವರ್ಗೀಕರಣ ಮಾಡಲಾಗಿದ್ದು, ಇದರಂತೆ, ಫಾಲೋವರ್‌ಗಳ ಸಂಖ್ಯೆ 1 ಲಕ್ಷದಿಂದ 5 ಲಕ್ಷದವರೆಗೆ ಇದ್ದರೆ ‘ನ್ಯಾನೊ’, 5 ಲಕ್ಷದಿಂದ 10 ಲಕ್ಷದವರೆಗೆ ‘ಮೈಕ್ರೊ’ ಮತ್ತು 10 ಲಕ್ಷಕ್ಕಿಂತ ಹೆಚ್ಚು ಇದ್ದರೆ ‘ಮ್ಯಾಕ್ರೊ’ ಇನ್‌ಫ್ಲುಯೆನ್ಸರ್‌ಗಳು ಎಂದು ವರ್ಗೀಕರಿಸಲಾಗಿದೆ.

ವಾರ್ತಾ ಇಲಾಖೆಯು ನೋಂದಾಯಿತ ಏಜೆನ್ಸಿಗಳ ಮೂಲಕ ಜಾಹೀರಾತು ನೀಡಲಿದೆ. ಕೇಂದ್ರ ಸರ್ಕಾರದ ಡಿಜಿಟಲ್ ಜಾಹೀರಾತು ನೀತಿಯ ಅಡಿಯಲ್ಲಿ ನಿಗದಿಪಡಿಸಲಾದ ಅಥವಾ ಇಲಾಖೆಯೇ ಸ್ವತಂತ್ರವಾಗಿ ನಿಗದಿಪಡಿಸಿದ ದರದಲ್ಲಿ ಜಾಹೀರಾತು ಸಿಗಲಿದೆ.