Bengaluru Traffic: ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಎಐ, ಅಪರಾಧ ತಡಗೆ ಸಿಸಿ ಕ್ಯಾಮೆರಾ ಅಳವಡಿಕೆ ಖಾತರಿಪಡಿಸಿದ ಕರ್ನಾಟಕ ಸರ್ಕಾರ
ಬೆಂಗಳೂರಿನ ಮಾಲ್‌ಗಳು, ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸುತ್ತಮುತ್ತಲಿನ ಎಲ್ಲಾ ಜನಸಂದಣಿ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸರ್ಕಾರ ಬಯಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ. ಇದಲ್ಲದೆ, ಬೆಂಗಳೂರಿನ ಸಂಚಾರ ದಟ್ಟಣೆ ನಿರ್ವಹಣೆಗಾಗಿ ಎಐ ಬಳಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಎಂಬ ಹೆಸರು ಕೇಳಿದ ಕೂಡಲೇ ಒಂದಷ್ಟು ಜನರಿಗೆ ಟ್ರಾಫಿಕ್ ನೆನಪಾಗದೇ ಇರದು. ಅದೇ ರೀತಿ ಅಪರಾಧ ಕೃತ್ಯಗಳಿಗೂ ಕೊರತೆ ಇಲ್ಲ. ಈಗ ಕರ್ನಾಟಕ ಸರ್ಕಾರವು, ಬೆಂಗಳೂರಿನ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಟ್ರಾಫಿಕ್ ನಿರ್ವಹಣೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಲು ಮುಂದಾಗಿದೆ.
ಈ ವಿಚಾರವನ್ನು ಕರ್ನಾಟಕದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ವಿಧಾನಮಂಡಲಕ್ಕೆ ತಿಳಿಸಿದ್ದಾರೆ.
ಅಪರಾಧ ತಡೆಗಟ್ಟುವ ಸಲುವಾಗಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ 10,000 ಸಿಸಿಟಿವಿ ಕ್ಯಾಮೆರಾಗಳನ್ನು ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುವ ಕೆಲಸ ಪೂರ್ಣಗೊಳಿಸಲಾಗುವುದು. ಈಗಾಗಲೇ 7,500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗೃಹ ಇಲಾಖೆಯು ನಿರ್ಭಯ ಯೋಜನೆಯಡಿ ಶೀಘ್ರದಲ್ಲೇ ಇನ್ನೂ 2,500 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಗುರುವಾರ ವಿಧಾನ ಮಂಡಲಕ್ಕೆ ತಿಳಿಸಿದರು.
ಡಾ.ಜಿ.ಪರಮೇಶ್ವರ ಅವರು ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ವೇಳೆ, ಮಾಲ್‌ಗಳು, ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸುತ್ತಮುತ್ತಲಿನ ಎಲ್ಲಾ ಜನಸಂದಣಿ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸರ್ಕಾರ ಬಯಸಿದೆ ಎಂದು ವಿವರಿಸಿದರು.
ಬೆಂಗಳೂರು ಮಹಾನಗರದಲ್ಲಿ ವಿವಿಧೆಡೆ ಈಗ ಅಳವಡಿಸಲಾಗಿರುವ ಕ್ಯಾಮೆರಾಗಳು ಹೆಚ್ಚಿನ ರೆಸಲ್ಯೂಶನ್ ಹೊಂದಿವೆ. ಚಿತ್ರಗಳನ್ನು ಝೂಮ್ ಇನ್ ಮಾಡಿದಾಗ, ಫ್ರೇಮ್‌ನಲ್ಲಿರುವ ವ್ಯಕ್ತಿಯ ಗಡಿಯಾರದಲ್ಲಿ ಸಮಯವನ್ನು ಸಹ ಸೆರೆಹಿಡಿಯಬಹುದು. ಹಾಗಾಗಿ ಈ ಕ್ಯಾಮೆರಾಗಳನ್ನು ಸಂಚಾರದ ಮೇಲೆ ನಿಗಾ ಇಡಲು ಮಾತ್ರವಲ್ಲದೆ ಅಪರಾಧಗಳನ್ನು ತಡೆಯಲು ಕೂಡ ಬಳಸಲಾಗುತ್ತದೆ ಎಂದು ಅವರು ವಿಧಾನ ಪರಿಷತ್‌ನಲ್ಲಿ ವಿವರಿಸಿದರು.
ಇತ್ತೀಚೆಗಷ್ಟೇ ಮುಖ್ಯಮಂತ್ರಿಗಳು ಸೆಂಟ್ರಲ್ ಕಮಾಂಡ್ ಸೆಂಟರ್ ಅನ್ನು ಉದ್ಘಾಟಿಸಿದರು, ಅಲ್ಲಿಂದ ಎಲ್ಲಾ ಕ್ಯಾಮೆರಾಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಎಂಎಲ್‌ಸಿ ಭಾರತಿ ಶೆಟ್ಟಿ ಅವರು ಸಂಚಾರ ನಿಯಂತ್ರಣ ಮತ್ತು ಕಸ ನಿರ್ವಹಣೆ ಸೇರಿದಂತೆ ಬೆಂಗಳೂರು ನಗರದ ಒಟ್ಟಾರೆ ಆಡಳಿತದ ಬಗ್ಗೆ ಕಾಳಜಿಯಿಂದ ಕೇಳಿದ ಪ್ರಶ್ನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಷ್ಟೇ ಅಲ್ಲ, ಬೆಂಗಳೂರು ಉಸ್ತುವಾರಿ ಸಚಿವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಉತ್ತರಿಸಿದ್ದು, ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳ ಅಗತ್ಯವನ್ನು ಒತ್ತಿ ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವವರಿಗೆ ಅದರಲ್ಲೂ ಕಟ್ಟಡ ನಿರ್ಮಾಣದ ಅವಶೇಷಗಳನ್ನು ಹಾಕುವವರಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ನಾವು ದೆಹಲಿ ಮತ್ತು ಹೈದರಾಬಾದ್‌ನಂತಹ ವಿವಿಧ ನಗರಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಮಾದರಿಗಳನ್ನು ಅಧ್ಯಯನ ಮಾಡುತ್ತಿದ್ದೇವೆ. ಇದೇ ವಿಚಾರವಾಗಿ ಇಂದೋರ್‌ಗೂ ಭೇಟಿ ನೀಡಲಿದ್ದೇನೆ. ಎಲ್ಲಾ ಪಾಲುದಾರರಿಂದ ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ಒಂಬತ್ತು ಸಂಸ್ಥೆಗಳೊಂದಿಗೆ ಚರ್ಚಿಸಿದೆ. ನಿನ್ನೆಯೂ ಸಭೆ ಇತ್ತು. ಟ್ರಾಫಿಕ್ ನಿಯಂತ್ರಿಸಲು ಮತ್ತು ಅಪರಾಧಗಳನ್ನು ನಿಯಂತ್ರಿಸಲು ನಾವು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಯನ್ನು ಬಳಸುತ್ತೇವೆ. ಬೆಂಗಳೂರಿನ ಐದು ಪ್ರವೇಶ ಕೇಂದ್ರಗಳಾದ ಮೈಸೂರು ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆ, ಬಳ್ಳಾರಿ ರಸ್ತೆ ಮತ್ತು ಕೋಲಾರ ರಸ್ತೆಗಳಲ್ಲಿ ಟ್ರಾಫಿಕ್ ಅನ್ನು ನಿಯಂತ್ರಿಸಲು ದೀರ್ಘಾವಧಿಯ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಅವರು ವಿವರಿಸಿದರು.