Court News: ಡೆತ್ ಸರ್ಟಿಫಿಕೇಟ್ ಕೊಡೋಕೆ ಬಿಬಿಎಂಪಿ ಮೀನ ಮೇಷ, ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್
ಬೆಂಗಳೂರಿನಲ್ಲಿ ಮಳೆ ನೀರಿನ ಚರಂಡಿಗೆ ಬಿದ್ದು ಕೊಚ್ಚಿಕೊಂಡು ಹೋದ ವ್ಯಕ್ತಿಯ ಮನೆಯವರಿಗೆ ಆರು ವರ್ಷಗಳಿಂದ ಡೆತ್ ಸರ್ಟಿಫಿಕೇಟ್ ಕೊಡದ ಬಿಬಿಎಂಪಿಯನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದಕೊಂಡಿದೆ. 30 ದಿನಗಳ ಒಳಗೆ ಡೆತ್ ಸರ್ಟಿಫಿಕೇಟ್ ಹಸ್ತಾಂತರಿಸುವಂತೆ ಸೂಚಿಸಿದೆ.
ಮಳೆ ನೀರಿನ ಚರಂಡಿಯಲ್ಲಿ 2017ರಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿಯ ಮನೆಯವರಿಗೆ ಕಾಣೆಯಾದ ವ್ಯಕ್ತಿಯ ಡೆತ್ ಸರ್ಟಿಫಿಕೇಟ್ ಕೊಡುವುದಕ್ಕೆ ಮೀನ ಮೇಷ ಎಣಿಸುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಕಾಣೆಯಾದ ವ್ಯಕ್ತಿಯ ಕುಟುಂಬಕ್ಕೆ 30 ದಿನಗಳ ಒಳಗೆ ಡೆತ್ ಸರ್ಟಿಫಿಕೇಟ್ ಹಸ್ತಾಂತರಿಸಬೇಕು ಎಂದು ಬಿಬಿಎಂಪಿಗೆ ಸೂಚನೆ ಕೊಟ್ಟಿದೆ.
ಸಂತ್ರಸ್ತನ ಮೃತದೇಹ ಸಿಕ್ಕಿಯೇ ಇಲ್ಲ. ಆದಾಗ್ಯೂ ಬಿಬಿಎಂಪಿ ಆತನ ಪತ್ನಿಗೆ ಪರಿಹಾರ ಧನವನ್ನು ಕೊಟ್ಟಿತ್ತು. ಆದರೆ, ಡೆತ್ ಸರ್ಟಿಫಿಕೇಟ್ ನೀಡಲು ನಿರಾಕರಿಸಿತ್ತು. ಮರಣದ ಕಾರಣವನ್ನು ಡಾಕ್ಟರ್ ಪ್ರಮಾಣೀಕರಿಸದ ಹೊರತು ಡೆತ್ ಸರ್ಟಿಫಿಕೇಟ್ ನೀಡಲಾಗದು ಎಂದು ಸಮಜಾಯಿಷಿ ನೀಡಿತ್ತು.
ಇದನ್ನೂ ಓದಿ| ಗೃಹಲಕ್ಷ್ಮಿ ಯೋಜನೆ ನೋಂದಣಿ ತಾತ್ಕಾಲಿಕ ಸ್ಥಗಿತ ವದಂತಿ, ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಸ್ಪಷ್ಟೀಕರಣ; ತೆರೆಮರೆ ಕಥೆ ಇದು
ಬಿಬಿಎಂಪಿಯ ನಡೆಯನ್ನು ತಾರ್ಕಿಕವಲ್ಲದ್ದು ಎಂದು ಹೇಳಿದ ಹೈಕೋರ್ಟ್, ಮೃತದೇಹ ಸಿಗದೇ ಇದ್ದಾಗ, ಡೆತ್ ಸರ್ಟಿಫಿಕೇಟ್‌ಗಾಗಿ ನಿಗದಿತ ಮಾನದಂಡ ಪೂರೈಸುವಂತೆ ಸಂತ್ರಸ್ತರ ಕುಟುಂಬದ ಮೇಲೆ ಒತ್ತಡ ಹೇರುವುದು ಸಮಂಜಸವಲ್ಲ. ಅಂತಹ ನಡೆ ಅನ್ಯಾಯವಾದುದು ಎಂದು ವ್ಯಾಖ್ಯಾನಿಸಿತು.
ಏನಿದು ಪ್ರಕರಣ ಯಾವಾಗ ನಡೆದಿತ್ತು
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠವು ಸರಸ್ವತಿ ಎಸ್‌ಪಿ ಸಲ್ಲಿಸಿದ್ದ ಅಹವಾಲು ಅರ್ಜಿಯ ವಿಚಾರಣೆ ನಡೆಸಿದಾಗ ಈ ರೀತಿ ಹೇಳಿತ್ತು. ಸ್ವರಸ್ವತಿ ಅವರು ತಮ್ಮ ಪತಿ ಶಾಂತಕುಮಾರ್ ಎಸ್ (27) 2017ರ ಮೇ 20ರಂದು ಮಳೆ ನೀರಿನ ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮಹಾಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಶೋಧ ಕಾರ್ಯ ನಡೆದಿತ್ತು. ಮೃತದೇಹ ಪತ್ತೆಯಾಗಿಲ್ಲ ಎಂದು ವರದಿಯನ್ನೂ ಕೊಟ್ಟಿದ್ದರು. ಈ ಘಟನೆ ಬಳಿಕ ಬಿಬಿಎಂಪಿ ಪರಿಹಾರವಾಗಿ 10 ಲಕ್ಷ ರೂಪಾಯಿಯನ್ನೂ ಕೊಟ್ಟಿತ್ತು. ಆದರೆ ಬಿಬಿಎಂಪಿಯು ಜನನ ಮರಣ ನಿಯಮ ಪ್ರಕಾರ ಡೆತ್ ಸರ್ಟಿಫಿಕೇಟ್ ನೀಡಿಲ್ಲ. ಆಸ್ಪತ್ರೆ ಹೊರಗೆ ಮರಣ ಸಂಭವಿಸಿದಾಗ, ಮರಣ ಕಾರಣವನ್ನು ಡಾಕ್ಟರ್ ಸರ್ಟಿಫೈ ಮಾಡಬೇಕು. ಆದರೆ ಮೃತದೇಹ ಸಿಗದ ಕಾರಣ ಅದು ಸಾಧ್ಯವಾಗಿಲ್ಲ ಎಂದು ತಮ್ಮ ಅಹವಾಲಿನಲ್ಲಿ ತಿಳಿಸಿದ್ದರು.
ಕರ್ನಾಟಕ ಹೈಕೋರ್ಟ್ ಹೇಳಿರುವುದೇನು
ಬಿಬಿಎಂಪಿಯು ತನ್ನ ನಿಷ್ಕ್ರಿಯತೆಯನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಸಕಾರಣವಿಲ್ಲದ ವಿಳಂಬವನ್ನು ಮಾನ್ಯ ಮಾಡಲಾಗದು. ಒಂದೊಮ್ಮೆ ದೂರುದಾರರ ಪತಿ ಹಿಂತಿರುಗಿ ಬಂದರೆ ಡೆತ್ ಸರ್ಟಿಫಿಕೇಟ್ ಅನ್ನು ಹಿಂದಿರುಗಿಸಿ ಅದನ್ನು ರದ್ದುಗೊಳಿಸಬಹುದು. ಆದರೆ, ಆರು ವರ್ಷಗಳಿಂದ ಸಿಗದ ಮೃತದೇಹ ಮತ್ತು ಹಿಂದಿರುಗಿ ಬಾರದ ವ್ಯಕ್ತಿಯ ಮರಣ ಪ್ರಮಾಣ ಪತ್ರ ನೀಡಲು ಆರು ವರ್ಷವಾದರೂ ನೀಡದಿರುವುದನ್ನು ಸಮರ್ಥಿಸಲಾಗದು. ಜನನ ಮತ್ತು ಮರಣ ಪ್ರಮಾಣ ಪತ್ರಗಳು ಜನರ ಬದುಕಿನ ಮೇಲೆ ಪರಿಣಾಮ ಬೀರುವಂಥವು. ಡೆತ್ ಸರ್ಟಿಫಿಕೇಟ್ ಇಲ್ಲದೆ ಅವರ ಕುಟುಂಬದವರು ಮುಂದಿನ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂಬುದನ್ನು ಪಾಲಿಕೆ ಮನಗಾಣಬೇಕು ಎಂದು ನ್ಯಾಯಪೀಠ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ| ನೈರುತ್ಯ ಮುಂಗಾರು ಮತ್ತಷ್ಟು ಚುರುಕು: ಕರ್ನಾಟಕದ ಕರಾವಳಿ, ಉತ್ತರ ಭಾಗದಲ್ಲಿ ಭಾರೀ ಮಳೆ ಅಲರ್ಟ್
ಕೆಲವೊಂದು ಸನ್ನಿವೇಶಗಳಲ್ಲಿ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಡೆತ್ ಸರ್ಟಿಫಿಕೇಟ್ ನೀಡಬಹುದು. ಅದಕ್ಕೂ ನಿಯಮದಲ್ಲಿ ಅವಕಾಶವಿದೆ. ಇಷ್ಟು ಇದ್ದಾಗ್ಯೂ, ಅದನ್ನು ಮಾಡದೇ ಇರುವುದು ನಿಷ್ಕ್ರಿಯತೆಯೇ ಹೊರತು ಬೇರೆ ಏನೂ ಅಲ್ಲ. ಆದ್ದರಿಂದ 30 ದಿನಗಳ ಒಳಗೆ ಡೆತ್ ಸರ್ಟಿಫಿಕೇಟ್ ಕೊಡಬೇಕು ಎಂದು ಪಾಲಿಕೆಗೆ ಹೈಕೋರ್ಟ್ ನಿರ್ದೇಶನ ನೀಡಿತು.