ಭವಾನಿ ರೇವಣ್ಣ ಜಾಮೀನು ಅರ್ಜಿ ಪ್ರಕರಣ; ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಭವಾನಿ ರೇವಣ್ಣ ಜಾಮೀನು ಅರ್ಜಿ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಕರ್ನಾಟಕ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಇದೇ ವೇಳೆ ಷರತ್ತುಬದ್ಧ ಜಾಮೀನು ಮುಂದುವರಿಕೆಯಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ ತಪಾಸಣೆ ಹೆಸರಿನಲ್ಲಿ ಎದೆಗೆ ಮುತ್ತಿಟ್ಟ ವೈದ್ಯನ ಕೃತ್ಯಕ್ಕೆ ಸಂಬಂಧಿಸಿದ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಸಂತ್ರಸ್ತೆಯೊಬ್ಬರ ಅಪಹರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ತೀರ್ಪು ಪ್ರಕಟವಾಗುವವರೆಗೆ ಭವಾನಿ ರೇವಣ್ಣ ಅವರಿಗೆ ನೀಡಿರುವ ಷರತ್ತುಬದ್ಧ ಜಾಮೀನು ಮುಂದುವರೆಯಲಿದೆ ಎಂದೂ ಹೈಕೋರ್ಟ್ ಆದೇಶ ಹೊರಡಿಸಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತೆಯೊಬ್ಬರನ್ನು ಅಪಹರಿಸಿದ ಆರೋಪವನ್ನು ಭವಾನಿ ಎದುರಿಸುತ್ತಿದ್ದಾರೆ. ಸಂತೆಸ್ತ ಮಹಿಳೆಯು ದೂರು ಸಲ್ಲಿಸುವುದನ್ನು ತಡೆಯಲು ಅಪಹರಣ ಮಾಡಿದ್ದಾರೆ ಎಂಬ ಆರೋಪ ಇವರ ಮೇಲಿದೆ.
ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಭವಾನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಪೀಠದಲ್ಲಿದ್ದ ಕೃಷ್ಣ ಎನ್.ದೀಕ್ಷಿತ್ ಅವರ ಏಕ ಸದಸ್ಯಪೀಠ ವಿಚಾರಣೆ ನಡೆಸಿತು. ಪ್ರಾಸಿಕ್ಯೂಷನ್ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದರು.
ನ್ಯಾಯಾಲಯದಲ್ಲಿ ಶುಕ್ರವಾರ ರಾತ್ರಿ 7 ಗಂಟೆಯವರೆಗೂ ವಾದ ವಿವಾದ ನಡೆದಿತ್ತು. ಈ ಹಿಂದೆ ನೀಡಿದ್ದ ಷರತುಬದ್ಧ ಜಾಮೀನಿನಲ್ಲಿ ನ್ಯಾಯಾಲಯ ಮೈಸೂರು ಮತ್ತು ಹಾಸನ ಜಿಲ್ಲೆಗಳನ್ನು ಪ್ರವೇಶಿಸುವಂತಿಲ್ಲ ಎಂಬ ಷರತ್ತನ್ನು ವಿಧಿಸಿ ಜಾಮೀನು ಮಂಜೂರು ಮಾಡಿತ್ತು. ಪ್ರಜ್ವಲ್ ನ್ಯಾಯಂಗ ಬಂಧನದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ.
ತಪಾಸಣೆ ಹೆಸರಿನಲ್ಲಿ ಎದೆಗೆ ಮುತ್ತಿಟ್ಟ ವೈದ್ಯ; ಎಫ್ ಐ ಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ
ಎದೆ ನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬರಿಗೆ ತಪಾಸಣೆ ನಡೆಸುವಾಗ ಎದೆಯ ಭಾಗವನ್ನು ಅನುಚಿತವಾಗಿ ಸ್ಪರ್ಶಿಸಿ ಮುತ್ತು ಕೊಡುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬೆಂಗಳೂರಿನ ಡಾ.ಚೇತನ್ ಕುಮಾರ್ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ರದ್ದುಪಡಿಸಲು ಹೈ ಕೋರ್ಟ್ ನಿರಾಕರಿಸಿದೆ.
ಈ ಪ್ರಕರಣ ಕುರಿತು ಡಾ. ಚೇತನ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವೈದ್ಹಯರು ಮತ್ತು ಮಹಿಳಾ ರೋಗಿಗಳ ಸಂಬಂಧ ಹೇಗಿರಬೇಕು ಎಂದು ಮನವರಿಕೆ ಆಡಿಕೊಟ್ಟಿದ್ದಾರೆ. ವೈದ್ಯರು ಮತ್ತು ಮಹಿಳಾ ರೋಗಿಗಳು ಆಸ್ಪತ್ರೆಗೆ ಆಗಮಿಸಿದಾಗ ಪುರುಷ ವೈದ್ಯರ ವರ್ತನೆ ಉನ್ನತ ಮಟ್ಟದಿಂದ ಕೂಡಿರಬೇಕು ಎಂದು ಅವರು ಹೇಳಿದ್ದಾರೆ.
ವೈದ್ಯರಿಗೆ ರೋಗಿಗಳ ದೇಹ ಪರಿಶೀಲಿಸುವ ಹಕ್ಕು ಇರುತ್ತದೆ. ಇದನ್ನು ಶ್ರೇಷ್ಠವಾದ ಕರ್ತವ್ಯ ಎಂದು ಪರಿಗಣಿಸಬೇಕು. ವೈದ್ಯರು ರೋಗಿಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ರೋಗಿಗಳು ಇಟಟ್ಟಿರುವ ನಂಬಿಕೆಯನ್ನು ವೈದ್ಯರು ಉಳಿಸಿಕೊಳ್ಳಬೇಕು ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬಾರತೀಯ ವೈದ್ಯಕೀಯ ಮಂಡಳಿ ರೂಪಿಸಿರುವ ಮಾರ್ಗಸೂಚಿಗಳನ್ನು ಈ ಪ್ರಕರಣದಲ್ಲಿ ವೈದ್ಯರು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಎದ್ದು ಕಾಣುತ್ತಿದೆ. ಆದ್ದರಿಂದ ಈ ಪ್ರಕರಣ ಕುರಿತು ತನಿಖೆ ನಡೆಯುವುದು ಅವಶ್ಯವಾಗಿದೆ. ಎಂದು ಡಾ.ಚೇತನ್ ಕುಮಾರ್ ಅವರ ಅರ್ಜಿಯನ್ನು ವಜಾಗೊಳಿಸಿದೆ.
2024ರ ಮಾರ್ಚ್ 21ರಂದು ಬೆಂಗಳೂರಿನ ಡಾ.ಚೇತನ್ ಕುಮಾರ್ ಎಂಬುವರು ನಡೆಸುತ್ತಿದ್ದ ಆಸ್ಪತ್ರಗೆ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಇವರು ಎದೆ ನೋವಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ತಪಾಸಣೆ ನಡೆಸಿದ ಡಾ.ಚೇತನ್ ಕುಮಾರ್ ಪರೀಕ್ಷೆಯ ವರದಿಗಳನ್ನು ವಾಟ್ಸ್ ಆಪ್ ಮೂಲಕ ಕಳುಹಿಸಿ ಹೆಚ್ಚಿನ ತಪಾಸಣೆಗೆ ಆಗಮಿಸಲು ಸೂಚಿಸಿದ್ದರು.
ತಪಾಸಣೆಯ ಸಂದರ್ಭದಲ್ಲಿ ವೈದ್ಯ ಚೇತನ್ ಕುಮಾರ್ ಮಹಿಳೆಯ ಉಡುಪನ್ನು ಸಡಿಲಿಸಿ ಎಡಭಾಗದ ವಕ್ಷಸ್ಥಳಕ್ಕೆ ಮುತ್ತಿಕ್ಕಿದ್ದರು. ಮಹಿಳೆಯು ಆಸ್ಪತ್ರೆಯಿಂದ ಹೊರಬಂದು ಕುಟುಂಬದ ಸದಸ್ಯರಿಗೆ ವೈದ್ಯರ ಅನುಚಿತ ವರ್ತನೆ ಕುರಿತು ಮಾಹಿತಿ ನೀಡುತ್ತಾರೆ. ನಂತರ ಅವರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಡಾ.ಚೇತನ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
