ಕನ್ನಡ ಸುದ್ದಿ  /  ಕರ್ನಾಟಕ  /  ವಿಧಾನ ಪರಿಷತ್ ಚುನಾವಣೆ; ಮೇಲ್ಮನೆಯ 6 ಸ್ಥಾನಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ, ಕಾಂಗ್ರೆಸ್‌ನಲ್ಲಿ ಹುಮ್ಮಸ್ಸು, ಮೈತ್ರಿ ಗೊಂದಲ ಬಿಜೆಪಿಗೆ

ವಿಧಾನ ಪರಿಷತ್ ಚುನಾವಣೆ; ಮೇಲ್ಮನೆಯ 6 ಸ್ಥಾನಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ, ಕಾಂಗ್ರೆಸ್‌ನಲ್ಲಿ ಹುಮ್ಮಸ್ಸು, ಮೈತ್ರಿ ಗೊಂದಲ ಬಿಜೆಪಿಗೆ

ವಿಧಾನ ಪರಿಷತ್ ಚುನಾವಣೆ; ಮೇಲ್ಮನೆಯ 6 ಸ್ಥಾನಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಪ್ರಕಟವಾಗಿದೆ. ಲೋಕಸಭೆ ಚುನಾವಣೆಯ ಪ್ರಚಾರದ ಮೇಲುಗೈ ಕಾರಣ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಹುಮ್ಮಸ್ಸು ಒಂದೆಡೆ, ಮೈತ್ರಿ ಗೊಂದಲದಲ್ಲಿ ಬಿಜೆಪಿ ಇರುವಂತೆ ಗೋಚರಿಸಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ವಿಧಾನ ಪರಿಷತ್ ಚುನಾವಣೆ; ಮೇಲ್ಮನೆಯ 6 ಸ್ಥಾನಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಶುರುವಾಗಿದೆ.  (ಸಾಂಕೇತಿಕ ಚಿತ್ರ)
ವಿಧಾನ ಪರಿಷತ್ ಚುನಾವಣೆ; ಮೇಲ್ಮನೆಯ 6 ಸ್ಥಾನಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಶುರುವಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ಎರಡೂ ಹಂತದ ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ವಿಧಾನಪರಿಷತ್ತಿನ 6 ಸ್ಥಾನಗಳ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ರಾಜಕೀಯ ಪಕ್ಷಗಳ ಮುಖಂಡರು ಮತ್ತೊಂದು ಚುನಾವಣೆ ಗೆಲ್ಲಲು ಶ್ರಮ ಹಾಕಬೇಕಿದೆ. ಈಶಾನ್ಯ, ನೈಋತ್ಯ, ಬೆಂಗಳೂರು ಪದವೀಧರರ ಮೂರು ಕ್ಷೇತ್ರಗಳು, ಆಗ್ನೇಯ ಕ್ಷೇತ್ರ, ನೈಋತ್ಯ, ದಕ್ಷಿಣ ಶಿಕ್ಷಕರ ಮೂರು ಸೇರಿ ಒಟ್ಟು 6 ಕ್ಷೇತ್ರಗಳಿಗೆ ಜೂ. 3ರಂದು ಚುನಾವಣೆ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಇಂದಿನಿಂದ (ಮೇ 9) ಅಧಿಸೂಚನೆ ಜಾರಿಯಾಗಲಿದ್ದು ನಾಮಪತ್ರ ಸಲ್ಲಿಕೆಯೂ ಆರಂಭವಾಗಲಿದೆ. ಬೆಳಗಾವಿ ಕಂದಾಯ ವಿಭಾಗವನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಈ ಚುನಾವಣೆ ನಡೆಯಲಿದ್ದು, ನೀತಿಸಂಹಿತೆ ಮುಂದುವರೆಯಲಿದೆ. ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆಯ ದಿನವಾಗಿದ್ದು, ಮೇ 17ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 20ರಂದು ನಾಮಪತ್ರ ವಾಪಸ್‌ ಪಡೆಯಲು ಕಡೆಯ ದಿನವಾಗಿದೆ. ಜೂ.3ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಜೂ.6ರಂದು ಮತ ಎಣಿಕೆ ನಡೆಯಲಿದೆ. ವಿಧಾನಪರಿಷತ್‌ ಚುನಾವಣಾ ವೇಳಾಪಟ್ಟಿ ಮೇ2ರಂದು ಪ್ರಕಟವಾಗಿದ್ದು, ಅಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.

ಬಿಜೆಪಿಯ ಆಯನೂರು ಮಂಜುನಾಥ್ ಮತ್ತು ಜೆಡಿಎಸ್ ನ ಮರಿತಿಬ್ಬೇಗೌಡ ಅವರ ರಾಜೀನಾಮೆಯಿಂದ ತೆರವಾಗಿರುವ ಎರಡು ಸ್ಥಾನ ಹಾಗೂ ಡಾ.ಚಂದ್ರಶೇಖರ ಬಿ.ಪಾಟೀಲ, ಎ.ದೇವೇಗೌಡ, ಡಾ. ವೈ. ಎ. ನಾರಾಯಣಸ್ವಾಮಿ, ಎಸ್‌. ಎಲ್‌ ಬೋಜೇಗೌಡ ಅವರು ಜೂ.21 ರಂದು ನಿವೃತ್ತಿ ಹೊಂದುವುದರಿಂದ ತೆರವಾಗುವ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಪರಿಷತ್ ಚುನಾವಣೆಗೆ ಈ ಬಾರಿ ಕಾಂಗ್ರೆಸ್ ಮುಂದು

ಸಾಮಾನ್ಯವಾಗಿ ಮೇಲ್ಮನೆಯ ಸ್ಥಾನಗಳಿಗೆ ನಡೆಯುವ ಚುನಾವಣೆಯನ್ನು ಕಾಂಗ್ರೆಸ್ ಮುಖಂಡರು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಈ ಬಾರಿ ಹಠಕ್ಕೆ ಬಿದ್ದಂತೆ ಕಾಣುತ್ತಿರುವ ಕಾಂಗ್ರೆಸ್ ದಕ್ಷಿಣ ಶಿಕ್ಷಕರ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಈಗಾಗಲೇ ಪ್ರಚಾರವನ್ನು ಆರಂಭಿಸಿದ್ದಾರೆ.

ಈಶಾನ್ಯ ಪದವೀಧರ( ಡಾ| ಚಂದ್ರಶೇಖರ್‌ ಪಾಟೀಲ್‌); ನೈಋತ್ಯ ಪದವೀಧರ(ಆಯನೂರು ಮಂಜುನಾಥ); ಬೆಂಗಳೂರು ಪದವೀಧರ (ರಾಮೋಜಿಗೌಡ); ಆಗ್ನೇಯ ಶಿಕ್ಷಕ( ಕೆ.ಬಿ. ಶ್ರೀನಿವಾಸ್‌); ನೈಋತ್ಯ ಶಿಕ್ಷಕ(ಮಂಜುನಾಥ್‌) ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಬ್ಬಿರುವ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮರಿತಿಬ್ಬೇಗೌಡ ಅವರನ್ನೇ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಅವರು ಇತ್ತೀಚೆಗಷ್ಟೇ ಸದಸ್ಯತ್ವ ಮತ್ತು ಜೆಡಿಎಸ್ ಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಮೈತ್ರಿ ವಿಚಾರದ ಕಾರಣ ಗೊಂದಲದಲ್ಲಿದೆ ಬಿಜೆಪಿ

ವಿಧಾನಪರಿಷತ್ ಚುನಾವಣೆಯಲ್ಲಿ ಸದಾ ಮುಂದಿರುತ್ತಿದ್ದ ಬಿಜೆಪಿ ನಿಷ್ಕ್ರಿಯವಾಗಿರುವ ಹಾಗೆ ಕಂಡು ಬರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದ್ದರೆ ಬಿಜೆಪಿ ಇನ್ನೂ ಗಮನ ಹರಿಸಿಲ್ಲ. ಮೇಲಾಗಿ ಈ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸುವ ಬಗ್ಗೆ ಗೊಂದಲದಲ್ಲಿದೆ. ಪೆನ್ ಡ್ರೈವ್ ಹಗರಣದ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ಹೊಂದಾಣಿಕೆಗೆ ಒಲವು ತೋರುತ್ತಿಲ್ಲ. ಆದರೆ ರಾಜ್ಯ ಬಿಜೆಪಿ ಮುಖಂಡರು ಅಂತಿಮ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿಲ್ಲ. ಎಲ್ಲವೂ ದೆಹಲಿಯಲ್ಲಿ ನಿರ್ಧಾರವಾಗುತ್ತದೆ. ಒಂದು ವೇಳೆ ಮೈತ್ರಿ ಮುಂದುವರೆದರೆ ದಕ್ಷಿಣ ಶಿಕ್ಷಕರ ಕ್ಷೇತ್ರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರವನ್ನು ಬಿಟ್ಟುಕೊಡಬೇಕಾಗಿದೆ.

ಬಿಜೆಪಿ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಸಾಮಾನ್ಯವಾಗಿ ಶಿವಮೊಗ್ಗ ಅಥವಾ ಮಲೆನಾಡು ಭಾಗದವರನ್ನೇ ಕಣಕ್ಕೆ ಇಳಿಸುತ್ತಿತ್ತು. ನೈಋತ್ಯ ಶಿಕ್ಷಕರ ಕ್ಷೇತ್ರವನ್ನು ಕರಾವಳಿ ಭಾಗಕ್ಕೆ ಬಿಟ್ಟುಕೊಡುತ್ತಿತ್ತು. ಆದರೆ ಈ ಬಾರಿ ಕರಾವಳಿಯ ಮಾಜಿ ಶಾಸಕ ರಘುಪತಿ ಭಟ್‌ ಪದವೀಧರ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಮುಂದಾಗಿದ್ದು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಆದರೆ ಯಡಿಯೂರಪ್ಪ ಅವರು ಡಾ. ಧನಂಜಯ್‌ ಸರ್ಜಿ, ಎಸ್‌. ದತ್ತಾತ್ರಿ ಅಥವಾ ಗಿರೀಶ್‌ ಪಟೇಲ್‌ ಅವರಿಗೆ ಟಿಕೆಟ್ ಕೊಡಿಸಲು ಬಯಸಿದ್ದಾರೆ.

ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಪರಿಷತ್‌ ಮಾಜಿ ಸದಸ್ಯ ಅಮರನಾಥ್‌ ಪಾಟೀಲ್‌ ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಹಾಲಿ ಸದಸ್ಯ ಅ. ದೇವೇಗೌಡ ಅವರನ್ನೇ ಅಂತಿಮಗೊಳಿಸುವ ಸಾಧ್ಯತೆಗಳಿವೆ. ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಡಾ. ವೈ.ಎ.ನಾರಾಯಣ ಸ್ವಾಮಿ ಹೆಸರು ಬಹುತೇಕ ಖಚಿತವಾಗಿದೆ.

IPL_Entry_Point