ಕನ್ನಡ ಸುದ್ದಿ  /  Karnataka  /  Bengaluru News Karnataka Legislative Council Bypoll Congress Candidate P Puttanna Wins Setback For Bjp Jds Alliance Mrt

ವಿಧಾನ ಪರಿಷತ್‌ ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣಗೆ ಗೆಲುವು, ಬಿಜೆಪಿ ಜೆಡಿಎಸ್‌ಗೆ ಸೋಲು

ವಿಧಾನ ಪರಿಷತ್‌ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣಗೆ ಗೆಲುವು ಉಂಟಾಗಿದ್ದು, ಬಿಜೆಪಿ ಜೆಡಿಎಸ್ ಮೈತ್ರಿ ಸೋಲು ಅನುಭವಿಸಿದೆ. ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಕಪಾಳಮೋಕ್ಷ ಎಂದು ಸಿಎಂ ಸಿದ್ದರಾಮಯ್ಯ ವ್ಯಾಖ್ಯಾನಿಸಿದರು. (ವರದಿ- ಎಚ್. ಮಾರುತಿ, ಬೆಂಗಳೂರು)

ಕರ್ನಾಟಕ ವಿಧಾನ ಪರಿಷತ್‌ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣಗೆ ಗೆಲುವು, ಬಿಜೆಪಿ ಜೆಡಿಎಸ್‌ಗೆ ಸೋಲು ಉಂಟಾಗಿದೆ.
ಕರ್ನಾಟಕ ವಿಧಾನ ಪರಿಷತ್‌ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣಗೆ ಗೆಲುವು, ಬಿಜೆಪಿ ಜೆಡಿಎಸ್‌ಗೆ ಸೋಲು ಉಂಟಾಗಿದೆ.

ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ ಗೆಲುವು ಸಾಧಿಸಿದ್ದಾರೆ. ಇದು ಇವರ ಸತತ ಐದನೇ ಗೆಲುವು.

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್‌ ಅವರನ್ನು 1,507 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪುಟ್ಟಣ್ಣ 8,260 ಮತಗಳನ್ನು ಗಳಿಸಿದ್ದರೆ ಪಡೆದರೆ, ರಂಗನಾಥ್‌ 6,753 ಮತಗಳನ್ನು ಪಡೆದಿದ್ದಾರೆ.

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. 2023ರ ನವಂಬರ್‌ನಲ್ಲಿ ಎನ್‌ಡಿಎ ಒಕ್ಕೂಟ ಸೇರಿದ ನಂತರ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟಕ್ಕೆ ಇದು ಮೊದಲ ಚುನಾವಣೆ. ಈ ಮೊದಲ ಪ್ರಯತ್ನಕ್ಕೆ ಸೋಲು ಉಂಟಾಗಿರುವುದು ಉಭಯ ಪಕ್ಷಗಳ ಮುಖಂಡರಿಗೆ ಶಾಕ್ ನೀಡಿದಂತಾಗಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಗೆ ಫೆ.16ರಂದು ಮತದಾನ ನಡೆದಿತ್ತು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ವ್ಯಾಪ್ತಿಯ ಶಿಕ್ಷಕ ಮತದಾರರು ಮತದಾನ ಮಾಡಿದ್ದರು. ಒಟ್ಟು 19,152 ಮತಗಳ ಪೈಕಿ 16,544 ಮಂದಿ ಮತ ಚಲಾಯಿಸಿದರು.. ಇವರಲ್ಲಿ 6,504 ಪುರುಷರು ಮತ್ತು 10,040 ಮಹಿಳಾ ಮತದಾರರು ಮತ ಚಲಾಯಿಸಿದರು.

ಈ ಹಿಂದೆ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದರು. ಅಂದಿನಿಂದ ಖಾಲಿ ಉಳಿದಿದ್ದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಇದೀಗ ಮತ್ತೆ ಪುಟ್ಟಣ್ಣ ಗೆಲುವು ಸಾಧಿಸಿದ್ದಾರೆ. ಅವರ ಅವಧಿ 2026 ನವೆಂಬರ್ 11ರವರೆಗಿದೆ.

2020 ರಲ್ಲಿ ನಡೆದ ಚುನಾವಣೆಯಲ್ಲಿ ಪುಟ್ಟಣ್ಣ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ ಎ. ಪಿ. ರಂಗನಾಥ್ ಜೆಡಿಎಸ್ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು.

ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಮುಖಭಂಗ

ಈ ಸೋಲಿನ ಕಾರಣ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಮುಖಭಂಗವಾಗಿದೆ. ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಪುಟ್ಟಣ್ಣ ಬೆಂಗಳೂರಿನ ರಾಜಾಜಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿಯ ಎಸ್. ಸುರೇಶ್ ಕುಮಾರ್ ವಿರುದ್ದ ಸ್ಪರ್ಧಿಸಿ ಸೋತಿದ್ದರು. ಇದೀಗ ಮತ್ತೆ ಪುಟ್ಟಣ್ಣ ಅವರೇ ಸ್ಪರ್ಧಿಸಿ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಪುಟ್ಟಣ್ಣ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿಕಟವರ್ತಿ. ಇದೇ ಕಾರಣಕ್ಕೆ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಈ ಹಿಂದೆ ಮೂರು ಬಾರಿ ಪುಟ್ಟಣ್ಣ ಜೆಡಿಎಸ್ ನಿಂದ ವಿಧಾನ ಪರಿಷತ್‌ ಗೆ ಆಯ್ಕೆಯಾಗಿದ್ದರು. 2020 ರಲ್ಲಿ ಪುಟ್ಟಣ್ಣ ಬಿಜೆಪಿ ಸೇರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಇದು ವೈಯಕ್ತಿಕ ಸೋಲು: ಇದು ಎನ್ ಡಿ ಎ ಸೋಲಲ್ಲ, ನನ್ನ ವೈಯಕ್ತಿಕ ಸೋಲು ಎಂದು ರಂಗನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆಯಲ್ಲಿ ಸೋಲು ಕಂಡ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದೆ. ಬಿ ಇ ಓ ಮತ್ತು ಡಿಡಿ ಪಿಐ ಗಳನ್ನು ಪಕ್ಷದ ಪರವಾಗಿ ಬಳಸಿಕೊಂಡಿದೆ ಎಂದೂ ಅವರು ಆಪಾದಿಸಿದರು.

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ತಿರಸ್ಕಾರ- ಸಿದ್ದರಾಮಯ್ಯ

ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವೆ ಮೈತ್ರಿಯಾಗಿದೆಯೇ ವಿನಃ ಇದಕ್ಕೆ ಮತದಾರರ ಒಪ್ಪಿಗೆ ಇಲ್ಲ ಎಂಬುದನ್ನು ವಿಧಾನ ಪರಿಷತ್ ಉಪಚುನಾವಣೆ ಫಲಿತಾಂಶ ಸ್ಪಷ್ಟಪಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಜಾತ್ಯತೀತ ಮುಖವಾಡ ಕಳಚಿದೆ, ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರ ಕಪಾಳಮೋಕ್ಷ ಮಾಡಿದ್ದಾನೆ ಎಂದು ಅವರು ಮೈತ್ರಿಕೂಟವನ್ನು ಲೇವಡಿ ಮಾಡಿದ್ದಾರೆ.

ಈ ಗೆಲುವು ನಮ್ಮ ಸರ್ಕಾರದ 9 ತಿಂಗಳ ಜನಪರವಾದ ಆಡಳಿತ ಮತ್ತು ಸರ್ಕಾರದ ಬಗ್ಗೆ ಪ್ರಜ್ಞಾವಂತ ಮತದಾರರು ಇಟ್ಟಿರುವ ವಿಶ್ವಾಸದ ಗೆಲುವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ತಮ್ಮ‌ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಹೊರತಾಗಿಯೂ ಸೋಲು ಕಂಡಿವೆ.

ಸ್ವಾರ್ಥ ಸಾಧನೆಯೊಂದೇ ಗುರಿಯಾಗಿರುವ ಈ ಅಪವಿತ್ರ ಮೈತ್ರಿಗೆ ಗ್ಯಾರಂಟಿ, ವಾರೆಂಟಿ ಯಾವುದೂ ಇಲ್ಲ. ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಮತ್ತವರ ಕುಟುಂಬ ಕೇಸರಿಶಾಲು ಕಿತ್ತೆಸೆಯುವುದು ನಿಶ್ಚಿತ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point