ಹೊಸ ಅಪರಾಧ ಕಾನೂನು; ಕರ್ನಾಟಕದ ಶಿಫಾರಸು ಕಡೆಗಣಿಸಿದ ಕೇಂದ್ರ, ತಿದ್ದುಪಡಿ ತರುತ್ತೇವೆ ಎಂದ ರಾಜ್ಯ ಸರ್ಕಾರ- 7 ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಹೊಸ ಅಪರಾಧ ಕಾನೂನು; ಕರ್ನಾಟಕದ ಶಿಫಾರಸು ಕಡೆಗಣಿಸಿದ ಕೇಂದ್ರ, ತಿದ್ದುಪಡಿ ತರುತ್ತೇವೆ ಎಂದ ರಾಜ್ಯ ಸರ್ಕಾರ- 7 ಅಂಶಗಳು

ಹೊಸ ಅಪರಾಧ ಕಾನೂನು; ಕರ್ನಾಟಕದ ಶಿಫಾರಸು ಕಡೆಗಣಿಸಿದ ಕೇಂದ್ರ, ತಿದ್ದುಪಡಿ ತರುತ್ತೇವೆ ಎಂದ ರಾಜ್ಯ ಸರ್ಕಾರ- 7 ಅಂಶಗಳು

ಹೊಸ ಅಪರಾಧ ಕಾನೂನು ಭಾರತಾದ್ಯಂತ ಜಾರಿಗೆ ಬಂದಿದ್ದು, ಸದ್ಯ ಅದುವೇ ಚಾಲ್ತಿಯಲ್ಲಿರಲಿದೆ. ಆದರೆ, ಕರ್ನಾಟಕದ ಶಿಫಾರಸು ಕಡೆಗಣಿಸಿದ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ಕೆಲವು ಅಂಶಗಳಿಗೆ ನಾವು ರಾಜ್ಯದಲ್ಲಿ ತಿದ್ದುಪಡಿ ತರುತ್ತೇವೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ. 7 ಅಂಶಗಳ ವಿವರ ಇಲ್ಲಿದೆ.

ಹೊಸ ಅಪರಾಧ ಕಾನೂನು; ಕರ್ನಾಟಕದ ಶಿಫಾರಸು ಕಡೆಗಣಿಸಿದ ಕೇಂದ್ರ, ತಿದ್ದುಪಡಿ ತರುತ್ತೇವೆ ಎಂದು ರಾಜ್ಯದ ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಹೊಸ ಅಪರಾಧ ಕಾನೂನು; ಕರ್ನಾಟಕದ ಶಿಫಾರಸು ಕಡೆಗಣಿಸಿದ ಕೇಂದ್ರ, ತಿದ್ದುಪಡಿ ತರುತ್ತೇವೆ ಎಂದು ರಾಜ್ಯದ ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು: ಭಾರತದಾದ್ಯಂತ ನಿನ್ನೆ (ಜುಲೈ 1) ಜಾರಿಗೆ ಬಂದಿರುವ 3 ಹೊಸ ಅಪರಾಧ ಕಾನೂನುಗಳ ಕೆಲವು ಅಂಶಗಳನ್ನು ಕರ್ನಾಟಕ ಸರ್ಕಾರ ವಿರೋಧಿಸಿದೆ. ರಾಜ್ಯ ಸರ್ಕಾರ ನೀಡಿದ 23 ಸಲಹೆಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದ ಕಾರಣ, ರಾಜ್ಯದಲ್ಲೇ ಕಾನೂನು ತಿದ್ದುಪಡಿ ತಂದು ಕೇಂದ್ರದ ಕಾನೂನುಗಳನ್ನು ಜಾರಿಗೊಳಿಸಲು ಮುಂದಾಗಿದೆ.

ಕರ್ನಾಟಕದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಹೆಚ್.ಕೆ. ಪಾಟೀಲ್ ಅವರು, ಕೇಂದ್ರ ಸರ್ಕಾರ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬ ಮೂರು ಹೊಸ ಕಾನೂನು ಜಾರಿಗೆ ತಂದಿದೆ. ನೈತಿಕವಾಗಿ ಹೇಳುವುದಾದರೆ, ಯಾವ ಸರ್ಕಾರ ಕಾನೂನು ಮಾಡುತ್ತದೆ. ಆ ಸರ್ಕಾರಕ್ಕೆ ಮಾತ್ರವೇ ಅದನ್ನು ಅವರ ಅವಧಿಯಲ್ಲಿ ಜಾರಿ ಮಾಡುವ ಹಕ್ಕು ಇರುವಂಥದ್ದು. ಆದರೆ, ಹಿಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರ ಇದೀಗ ಎನ್‌ಡಿಎ ಸರ್ಕಾರ ಜಾರಿಗೊಳಿಸಿದ್ದು ಸರಿಯಲ್ಲ ಎಂದು ನಿನ್ನೆ (ಜುಲೈ 1) ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಹೊಸ ಅಪರಾಧ ಕಾನೂನುಗಳಲ್ಲಿ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚು. ಗೊಂದಲ ಮೂಡಿಸುವ ತಿದ್ದುಪಡಿಗಳೂ ಸಾಕಷ್ಟಿವೆ. ಜನಾಭಿಪ್ರಾಯ ಮತ್ತು ವಕೀಲರ ಅಭಿಪ್ರಾಯ ನಿರ್ಲಕ್ಷಿಸಿ ಕಾನೂನು ರೂಪಿಸಿದ್ದಾರೆ. ಹೀಗಾಗಿ ಈ ಕಾನೂನುಗಳನ್ನು ರಾಜ್ಯ ಸರ್ಕಾರ ವಿರೋಧಿಸುತ್ತದೆ. ಈ ಕಾನೂನುಗಳನ್ನು ತಿದ್ದುಪಡಿ ಮಾಡಬೇಕಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್‌ ಸ್ಪಷ್ಟಪಡಿಸಿದರು.

ಕೇಂದ್ರ ಕಾನೂನು ತಿದ್ದುಪಡಿ; ರಾಜ್ಯಕ್ಕಿದೆ ಅಧಿಕಾರ ಎಂದ ಸಚಿವರು

ಕೇಂದ್ರ ಸರ್ಕಾರ ಕಾನೂನು ಜಾರಿಗೊಳಿಸಿದ್ದರೂ, ಆಯಾ ರಾಜ್ಯಗಳಿಗೆ ಅನುಗುಣವಾಗಿ ಅವುಗಳನ್ನು ತಿದ್ದುಪಡಿ ಮಾಡಿ ಅನುಷ್ಠಾನಗೊಳಿಸುವ ಅಧಿಕಾರ ರಾಜ್ಯಗಳಿಗೆ ಇದೆ. ಸಂವಿಧಾನದತ್ತ ಅಧಿಕಾರ ಬಳಸಿ ತಿದ್ದುಪಡಿ ಮಾಡಲು ಅವಕಾಶ ಇದೆ.

ಬೆಂಗಳೂರು ಪೊಲೀಸ್ ಆಯುಕ್ತರು ಹೊಸ ಕಾನೂನು ಜಾರಿ ಮಾಡುತ್ತೇವೆ ಎಂದು ಹೇಳಿರಬಹುದು. ಕಾನೂನುಗಳಿಗೆ ತಿದ್ದುಪಡಿ ಮಾಡುವ ಅವಕಾಶ ಇದ್ದು, ಅದನ್ನು ನಾವು ಮಾಡುತ್ತೇವೆ. ಸದ್ಯ ಹೊಸ ಕಾನೂನಿನ ಪ್ರಕಾರ ಎಫ್‌ಐಆರ್ ಆಗುತ್ತಿದ್ದು ತಿದ್ದುಪಡಿ ಆದ ಬಳಿಕ ಅದರಂತೆ ಪಾಲಿಸಬೇಕಾಗುತ್ತದೆ ಎಂದು ಸಚಿವ ಎಚ್‌ ಕೆ ಪಾಟೀಲ್ ಹೇಳಿದರು.

7 ಅಂಶಗಳ ತಿದ್ದುಪಡಿ ವಿಚಾರ ಮುಂದಿಟ್ಟ ಕಾನೂನು ಸಚಿವ ಪಾಟೀಲ್‌

1) ಸರ್ಕಾರದ ಕ್ರಮಗಳನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡುವುದು ಈ ಹೊಸ ಕಾನೂನಿನ ಪ್ರಕಾರ ಅಪರಾಧವಾಗಿದೆ. ಆದರೆ ಆತ್ಮಹತ್ಯೆ ಮಾಡುವುದು ಅಪರಾಧ ಅಲ್ಲ. ಇದು ದುರ್ದೈವದ ಸಂಗತಿ. ಹೋರಾಟಗಾರರನ್ನು ತಿರಸ್ಕಾರ ಭಾವದಿಂದ ಈ ಕಾನೂನು ಕಾಣುತ್ತಿದೆ. ಹೀಗಾಗಿ ಉಪವಾಸ ಸತ್ಯಾಗ್ರಹ ಅಪರಾಧವಲ್ಲ ಎಂದು ತಿದ್ದುಪಡಿ ತರುತ್ತೇವೆ.

2) ರಾಷ್ಟ್ರಪಿತ, ರಾಷ್ಟ್ರೀಯ ಲಾಂಛನ, ಬಾವುಟಕ್ಕೆ ಅಗೌರವ ತೋರಿಸಿದವರ ವಿರುದ್ಧ ಕ್ರಮಕ್ಕೆ ತಿದ್ದುಪಡಿ ಮಾಡಲು ಸೂಚಿಸಿದ್ದೆವು. ಆದರೆ, ಕೇಂದ್ರ ಸರ್ಕಾರ ಅದನ್ನು ಪರಿಗಣಿಸಿಲ್ಲ.ಈ ನಿಟ್ಟಿನಲ್ಲಿ ತಿದ್ದುಪಡಿಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.

3) ಸಂಘಟಿತ ಅಪರಾಧ ಎಂದು ಆರೋಪಿಸಿ ವ್ಯಕ್ತಿಗಳ ಮೇಲೆ ಮೊಕದ್ದಮೆ ಹೂಡಲು ತನಿಖಾ ಸಂಸ್ಥೆಗಳಿಗೆ ಏಕಪಕ್ಷೀಯ ಮತ್ತು ವಿವೇಚನಾಧಿಕಾರಕ್ಕೆ ಹೊಸ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ.

4) ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಅಪರಾಧಗಳಿಗೆ 3 ವರ್ಷ ಜೈಲು ಹಾಗೂ ದಂಡಕ್ಕೆ ಅವಕಾಶ ಇದೆ. ಸೈಬರ್ ಅಪರಾಧ, ಹ್ಯಾಕಿಂಗ್, ಆರ್ಥಿಕ ಅಪರಾಧ, ಅಣ್ವಸ್ತ್ರ ಗೌಪ್ಯತೆ ಹಾಗೂ ತಂತ್ರಜ್ಞಾನ ಮೂಲಕ ವಿಧ್ವಂಸಕ ಕೃತ್ಯ ಎಸಗುವ ಅಪರಾಧಗಳಿಗೆ ಪ್ರತ್ಯೇಕ ಅಧ್ಯಾಯದ ಮೂಲಕ ಕ್ರಮಕ್ಕೆ ತಿದ್ದುಪಡಿ ಮಾಡಲಾಗುತ್ತದೆ.

5) ಪೊಲೀಸ್ ಕಸ್ಟಡಿ 15 ದಿನ ಇದ್ದದ್ದು ಈಗ 90 ದಿನ ಆಗಿದೆ. ಇದು ದೀರ್ಘಾವಧಿ ಆಯಿತು. ಇದನ್ನು ಕಡಿತಗೊಳಿಸಲು ಕಾನೂನು ತಿದ್ದುಪಡಿ ಮಾಡಬೇಕಾಗಿದೆ.

6) ಮೃತ ದೇಹದ ಮೇಲೆ ಅತ್ಯಾಚಾರ ಎಸಗುವುದು ಅಕ್ಷಮ್ಯ ಅಪರಾಧವಾಗಿದ್ದು, ಇದರ ವಿವರವನ್ನೂ ಹೊಸ ಕಾನೂನಿನಲ್ಲಿ ಸೇರಿಸಲಾಗಿಲ್ಲ.

7) ಅಪರಾಧ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಆಸ್ತಿ ಪಾಸ್ತಿ ಜಪ್ತಿ ಮಾಡಲು ಮೊದಲು ಕೋರ್ಟ್ ಅನುಮತಿ ಬೇಕಾಗಿತ್ತು. ಆದರೆ ಹೊಸ ಕಾನೂನಿನಲ್ಲಿ ಪೊಲೀಸರಿಗೆ ಪೂರ್ಣ ಅನುಮತಿ ನೀಡಲಾಗಿದೆ.

Whats_app_banner