ಕಣ್ ಕುಕ್ಕುವ ಹೈಬೀಮ್ ಲೈಟ್ ಬಳಕೆ; ಬೆಂಗಳೂರಲ್ಲಿ 686 ಸೇರಿ ಕರ್ನಾಟಕದಲ್ಲಿ ಒಟ್ಟು 1518 ಕೇಸ್, ಸಂಚಾರ ನಿಯಮ ಪಾಲನೆಗೆ ಸೂಚನೆ
ರಸ್ತೆಯಲ್ಲಿ ರಾತ್ರಿ ಪ್ರಯಾಣ ಬಹಳ ದುಸ್ತರ. ಕಾರಣ ಕಣ್ ಕುಕ್ಕುವ ಹೈಬೀಮ್ ಲೈಟ್ ಬಳಕೆ. ಇದರ ಬಗ್ಗೆ ವ್ಯಾಪಕ ದೂರುಗಳು ವ್ಯಕ್ತವಾದ ಕಾರಣ ಸಂಚಾರ ಪೊಲೀಸರು ಕ್ರಮ ಜರುಗಿಸಲಾರಂಭಿಸಿದ್ದಾರೆ. ಬೆಂಗಳೂರಲ್ಲಿ 686 ಸೇರಿ ಕರ್ನಾಟಕದಲ್ಲಿ ಒಟ್ಟು 1518 ಕೇಸ್ ದಾಖಲಾಗಿವೆ. ಸಂಚಾರ ನಿಯಮ ಪಾಲಿಸಲು ಸೂಚಿಸಿರುವ ಪೊಲೀಸರು ಉಲ್ಲಂಘನೆಗೆ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ರಾತ್ರಿ ಪ್ರಯಾಣಕ್ಕೆ ಕಣ್ ಕುಕ್ಕುವ ಹೈ ಬೀಮ್ ಹೆಡ್‌ಲೈಡ್‌ಗಳನ್ನು ಬಳಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ವ್ಯಕ್ತವಾದ ಕಾರಣ, ಬೆಂಗಳೂರು ಸಂಚಾರ ಪೊಲೀಸರು ಸಂಚಾರ ನಿಯಮ ಪಾಲನೆ ಬಿಗಿಗೊಳಿಸಿದ್ದಾರೆ. ವಾಹನಗಳಲ್ಲಿ ಹೈ ಬೀಮ್ ಲೈಟ್ ಅಳವಡಿಸಿ, ಇತರೆ ವಾಹನ ಸವಾರರಿಗೆ ಅನಾನುಕೂಲ ಉಂಟುಮಾಡುವವರ ವಿರುದ್ಧ ಕೇಸ್ ದಾಖಲಿಸಲಾರಂಭಿಸಿದ್ದು, ರಾಜ್ಯದಲ್ಲಿ ಒಟ್ಟು 1518 ಕೇಸ್ ದಾಖಲಿರುವುದಾಗಿ ಕರ್ನಾಟಕ ಪೊಲೀಸರು ತಿಳಿಸಿದ್ದಾರೆ.
“ಕೇಂದ್ರ ಮೋಟಾರು ವಾಹನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 1518 ಪ್ರಕರಣಗಳನ್ನು ದಾಖಲಿಸಲಾಗಿದೆ. ನಿರಂತರ ಕ್ರಮಕ್ಕಾಗಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆಗಳು” ಎಂದು ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕಣ್ ಕುಕ್ಕುವ ಹೈ ಬೀಮ್ ಲೈಟ್ ಬಳಕೆ; ಬೆಂಗಳೂರಲ್ಲಿ 686, ಮಂಗಳೂರಲ್ಲಿ 98 ಪ್ರಕರಣ
ರಾಜ್ಯದಲ್ಲಿ ದಾಖಲಾಗಿರುವ 1518 ಕೇಸ್‌ಗಳ ಪೈಕಿ ಬೆಂಗಳೂರು ಒಂದರಲ್ಲೇ 686 ಪ್ರಕರಣಗಳು ದಾಖಲಾಗಿದ್ದು, ಮಂಗಳೂರಿನಲ್ಲಿ 98 ಪ್ರಕರಣಗಳು ದಾಖಲಾಗಿವೆ. ಕಾರವಾರದಲ್ಲಿ 131 ಪ್ರಕರಣಗಳು ದಾಖಲಾಗಿದ್ದು, ಉಡುಪಿಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ಹೈ ಬೀಮ್ ಲೈಟ್ ಬಳಕೆ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಬೆಂಗಳೂರು ಪೊಲೀಸರು ಎಚ್ಚರಿಸಿದ್ದಾರೆ. ಅಲ್ಲದೆ, ಹೈ ಬೀಮ್ ಲೈಟ್ ಬಳಸದಂತೆ ಜಾಗೃತಿ ಮೂಡಿಸುವ ಕೆಲಸವನ್ನೂ ಪೊಲೀಸರು ಮಾಡುತ್ತಿದ್ದಾರೆ. ಈಗ ಕೇಸ್ ದಾಖಲಿಸುತ್ತಿರುವ ಕಾರಣ, ನಿಯಮ ಉಲ್ಲಂಘಕರಿಗೆ ಇದೊಂದು ಎಚ್ಚರಿಕೆ ಘಂಟೆಯಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಲ್ಲಾ ವಾಹನ ಚಾಲಕರು ಮತ್ತು ಸವಾರರಿಗೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಲಾಯಿತು ಮತ್ತು ಸಂಚಾರ ನಿಯಮಗಳ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು. ಈ ವಿಶೇಷ ಕಾರ್ಯಾಚರಣೆ ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಮೂಲಗಳು ತಿಳಿಸಿವೆ.
ಫ್ಯಾನ್ಸಿ ಲೈಟ್ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಬೈಕ್‌ಗಳಿಗೆ ಮತ್ತು ಇತರೆ ವಾಹನಗಳಿಗೆ ಫ್ಯಾನ್ಸಿ ಲೈಟಿಂಗ್ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಥರ್ಡ್ ಐ ಎಂಬ ಟ್ವಿಟರ್ ಹ್ಯಾಂಡಲ್ ಸಂಚಾರ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.
“ಈ ಅಕ್ರಮ ಎಲ್ಇಡಿ ದೀಪಗಳ ಮೂಲ ಕಾರಣವನ್ನು ನೀವು ನೋಡಿದರೆ, ಆಟೋಮೊಬೈಲ್ ಅಂಗಡಿಗಳು ಕಣ್‌ಕುಕ್ಕುವ ಎಲ್‌ಇಡಿ ಲೈಟ್‌ಗಳ ಕುರಿತು ಜಾಹೀರಾತು ನೀಡುತ್ತಿವೆ. ಬೆಂಗಳೂರಿನ ಜೆಸಿ ರಸ್ತೆಯಲ್ಲಿ ಈ ರೀತಿ ಅಂಗಡಿಗಳು ಬಹಳಷ್ಟಿವೆ. ಅಲ್ಲಿ ಎಲ್‌ಇಡಿ ಲೈಟ್‌ಗಳಷ್ಟೇ ಅಲ್ಲ, ಇನ್ನಷ್ಟು ಅಕ್ರಮ ಉಪಕರಣಗಳು ಲಭ್ಯ ಇವೆ. ಇಂತಹ ಅಂಗಡಿಗಳ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಥರ್ಡ್ ಐ ಆಗ್ರಹಿಸಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
