ಜುಲೈನಲ್ಲಿ ಮೂರು ದಶಕದ ಹಿಂದಿನ ದಾಖಲೆ ಮುರಿದ ಮುಂಗಾರು ಮಳೆ, ಕರ್ನಾಟಕದಲ್ಲಿ ಈ ಬಾರಿ ಹೊಸ ಮೈಲಿಗಲ್ಲಿನ ನಿರೀಕ್ಷೆ-bengaluru news karnataka rains 2024 monsoon breaks the record of 30 year in july karnataka sndmc data report ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಜುಲೈನಲ್ಲಿ ಮೂರು ದಶಕದ ಹಿಂದಿನ ದಾಖಲೆ ಮುರಿದ ಮುಂಗಾರು ಮಳೆ, ಕರ್ನಾಟಕದಲ್ಲಿ ಈ ಬಾರಿ ಹೊಸ ಮೈಲಿಗಲ್ಲಿನ ನಿರೀಕ್ಷೆ

ಜುಲೈನಲ್ಲಿ ಮೂರು ದಶಕದ ಹಿಂದಿನ ದಾಖಲೆ ಮುರಿದ ಮುಂಗಾರು ಮಳೆ, ಕರ್ನಾಟಕದಲ್ಲಿ ಈ ಬಾರಿ ಹೊಸ ಮೈಲಿಗಲ್ಲಿನ ನಿರೀಕ್ಷೆ

ಕೆಲವು ವರ್ಷಗಳಿಂದ ಸತತ ಮಳೆ ಕೊರತೆ ಅನುಭವಿಸಿದ್ದ ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿ ಅಂಶಗಳ ಪ್ರಕಾರ, ಜುಲೈನಲ್ಲಿ ಮೂರು ದಶಕದ ಹಿಂದಿನ ದಾಖಲೆಯನ್ನು ಮುಂಗಾರು ಮಳೆ ಮುರಿದಿದೆ. ಇನ್ನೂ ಎರಡು ತಿಂಗಳು ಇದೇ ರೀತಿ ಮಳೆಯಾಗುವ ಸಾಧ್ಯತೆ ಕಂಡುಬಂದಿದೆ.

ಜುಲೈನಲ್ಲಿ ಮೂರು ದಶಕದ ಹಿಂದಿನ ದಾಖಲೆ ಮುರಿದ ಮುಂಗಾರು ಮಳೆ, ಕರ್ನಾಟಕದಲ್ಲಿ ಈ ಬಾರಿ ಹೊಸ ಮೈಲಿಗಲ್ಲಿನ ನಿರೀಕ್ಷೆ ವ್ಯಕ್ತವಾಗಿದೆ. (ಸಾಂಕೇತಿಕ ಚಿತ್ರ)
ಜುಲೈನಲ್ಲಿ ಮೂರು ದಶಕದ ಹಿಂದಿನ ದಾಖಲೆ ಮುರಿದ ಮುಂಗಾರು ಮಳೆ, ಕರ್ನಾಟಕದಲ್ಲಿ ಈ ಬಾರಿ ಹೊಸ ಮೈಲಿಗಲ್ಲಿನ ನಿರೀಕ್ಷೆ ವ್ಯಕ್ತವಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ಹೊಸ ದಾಖಲೆ ಬರೆಯಲು ಹೊರಟಿದೆ. ಮೊದಲ ಎರಡು ತಿಂಗಳ ಅವಧಿಯಲ್ಲೇ ಅಂದರೆ ಜೂನ್, ಜುಲೈನಲ್ಲೇ ಸುರಿದ ಮಳೆಗೆ ಮೂರು ದಶಕದ ಹಿಂದಿನ ದಾಖಲೆ ಮುರಿದು ಹೋಗಿದೆ. ಕಳೆದ ವರ್ಷ ಮುಂಗಾರು ಅವಧಿಯಲ್ಲಿ ವಾಡಿಕೆ ಮಳೆಯ ಪ್ರಮಾಣವು ಶೇ.25ರಷ್ಟು, ಹಿಂಗಾರು ಅವಧಿಯಲ್ಲಿ ಶೇ.38ರಷ್ಟು ಕೊರತೆ ಉಂಟಾಗಿತ್ತು. ಪರಿಣಾಮ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಉಂಟಾಗಿತ್ತು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ನೀರಿನ ಹಾಹಾಕಾರ ಮುಗಿಲುಮುಟ್ಟಿತ್ತು. ಇನ್ನು ಉಳಿದ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕೂಡ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿತ್ತು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ಸಲ ಹಾಗಾಗಿಲ್ಲ. ಮುಂಗಾರು ಅವಧಿಯ ನಾಲ್ಕು ತಿಂಗಳ ಪೈಕಿ ಪ್ರಸಕ್ತ ಜೂನ್ ಮತ್ತು ಜುಲೈ ಅವಧಿಯಲ್ಲಿ ಸುರಿದ ಮಳೆಯ ಪ್ರಮಾಣವು 1994ರ ನಂತರ ಸುರಿದ ಅತಿ ಹೆಚ್ಚು ಹಾಗೂ ದಾಖಲೆಯ ಮಳೆ ಎಂಬುದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ದೃಢಪಡಿಸಿವೆ.

ಪೂರ್ವ ಮುಂಗಾರು ಅವಧಿಯಲ್ಲಿ ಕೂಡ ಅಂದರೆ ಮೇ ತಿಂಗಳ ಮಧ್ಯಭಾಗದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾದರೂ ಜೂನ್ ತಿಂಗಳಲಲ್ಲಿ ವಾಡಿಕೆ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿತ್ತು. ಜುಲೈನಲ್ಲಿ ಸುರಿದ ಮಳೆ ಜೂನ್ ತಿಂಗಳ ಕೊರತೆ ನೀಗಿಸಿದ್ದಲ್ಲದೇ, ಜುಲೈನ ವಾಡಿಕೆ ಮಳೆಗಿಂತ ಹೆಚ್ಚುವರಿ ಮಳೆ ಸುರಿದಿದೆ.

ಕರ್ನಾಟಕದಲ್ಲಿ 2024ರ ಜೂನ್, ಜುಲೈ ಮಳೆ ಪ್ರಮಾಣ

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಜೂನ್ ಮತ್ತು ಜುಲೈ ಅವಧಿಯಲ್ಲಿ 202 ಮಿ.ಮೀ.ಮಳೆಯಾಗಿದ್ದು, ವಾಡಿಕೆಗಿಂತ ಶೇ.42ರಷ್ಟು ಹೆಚ್ಚು ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ 283 ಮಿ.ಮೀ ಮಳೆಯಾಗಿದ್ದು, ಇದು ಶೇ.31 ರಷ್ಟು ಹೆಚ್ಚು. ಅದೇ ರೀತಿ ಮಲೆನಾಡಿನಲ್ಲಿ 1,199 ಮಿ.ಮೀ ಮಳೆಯಾಗಿದ್ದು ಇದು ಶೇ.28ರಷ್ಟು ಹೆಚ್ಚು. ಇನ್ನು ಕರಾವಳಿಯಲ್ಲಿ 2,409 ಮಿ.ಮೀ. ಮಳೆಯಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ ಶೇ.24ರಷ್ಟು ಹೆಚ್ಚಿನ ಮಳೆಯಾಗಿದೆ. ಒಟ್ಟಾರೆ ವಾಡಿಕೆ ಪ್ರಕಾರ, ರಾಜ್ಯದಲ್ಲಿ 463 ಮಿ.ಮೀ. ಮಳೆಯಾಗಬೇಕು. ಆದರೆ, ಈ ಬಾರಿ, 593 ಮಿ.ಮೀ ಮಳೆಯಾಗಿದ್ದು. ಶೇ.28ರಷ್ಟು ಹೆಚ್ಚಿನ ಮಳೆ ಬಿದ್ದಿದೆ. 1994ರಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.30ರಷ್ಟು ಹೆಚ್ಚಿನ ಮಳೆಯಾಗಿತ್ತು.

30 ವರ್ಷದಲ್ಲಿ ಕೊರತೆಯೇ ಅಧಿಕ: ಕರ್ನಾಟಕದಲ್ಲಿ 1994ರಿಂದ 2024ರ ಜೂನ್, ಜುಲೈ ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದ ವರ್ಷಗಳೇ ಹೆಚ್ಚಾಗಿವೆ. 18 ವರ್ಷ ಜುಲೈನಲ್ಲಿ ವಾಡಿಕೆ ಪ್ರಮಾಣಕ್ಕಿಂತ ಮಳೆ ಕಡಿಮೆಯಾಗಿದೆ. ಪ್ರಸಕ್ತ ವರ್ಷ ಸೇರಿದಂತೆ 12 ವರ್ಷ ಮಾತ್ರ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ.

ಇನ್ನು ಕರಾವಳಿಯಲ್ಲಿಯೂ ಎರಡು ದಶಕದ ದಾಖಲೆ ಮಳೆ ದಾಖಲಾಗಿದೆ. ಜುಲೈ ಅಂತ್ಯದ ವರೆಗೆ ಪ್ರಕಾರ 1940 ಮಿ.ಮೀ ವಾಡಿಕೆ ಮಳೆಯಾಗಬೇಕು. ಆದರೆ, ಈ ಬಾರಿ 2409 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.24ರಷ್ಟು ಹೆಚ್ಚಾಗಿದೆ. 1999ರಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.30ರಷ್ಟು ಹೆಚ್ಚಿನ ಮಳೆಯಾಗಿತ್ತು. ಆ ನಂತರ ಇಷ್ಟೊಂದು ಮಳೆಯಾದ ವರದಿಯಾಗಿಲ್ಲ. 2003ರಲ್ಲಿ ಶೇ.10ರಷ್ಟು ಹಾಗೂ 2013ರಲ್ಲಿ ಶೇ.17ರಷ್ಟು ಹೆಚ್ಚಿನ ಮಳೆಯಾಗಿದೆ ಎಂಬುದು ಕೆಎಸ್‌ಎನ್ ಡಿಎಂಸಿ ಅಂಕಿ ಅಂಶದ ವರದಿ ವಿವರಿಸಿದೆ. 

ಮಂಡ್ಯದಲ್ಲಿ ಈ ಸಲ ಅತಿ ಹೆಚ್ಚು ಮಳೆ: ಈವರೆಗಿನ ಮುಂಗಾರುಮಳೆ ಪ್ರಕಾರ, ಮಂಡ್ಯ ಜಿಲ್ಲೆಯಲ್ಲಿ ವಾಡಿಕೆಯಂತೆ 109.2 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ 175.4 ಮಿ.ಮೀ ನಷ್ಟು ಮಳೆಯಾಗಿದ್ದು, ಬರೋಬ್ಬರಿ ಶೇ.61ರಷ್ಟು ಹೆಚ್ಚಿನ ಮಳೆಯಾಗಿದೆ. ಉಳಿದಂತೆ ಬೆಳಗಾವಿಯಲ್ಲಿ ವಾಡಿಕೆಗಿಂತ ಶೇ.60ರಷ್ಟು ಹೆಚ್ಚಿನ ಮಳೆಯಾಗಿದೆ. ಹೀಗೆ, ರಾಜ್ಯದ 31 ಜಿಲ್ಲೆಗಳ ಪೈಕಿ 14 ಜಿಲ್ಲೆಯಲ್ಲಿ ವಾಡಿಕೆಯಷ್ಟು, 16 ಜಿಲ್ಲೆಯಲ್ಲಿ ( ಶೇ.+20 ರಿಂದ ಶೇ.+59 ರಷ್ಟು) ಹಾಗೂ ಒಂದು ಜಿಲ್ಲೆಯಲ್ಲಿ (ಶೇ+60 ರಷ್ಟು) ಮಳೆ ದಾಖಲಾಗಿದೆ.