ಕನ್ನಡ ಸುದ್ದಿ  /  ಕರ್ನಾಟಕ  /  Sslc Result 2024: ಸದಾ ಓದಿನಲ್ಲಿ ಮುಳುಗಬೇಡಿ; ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಿ; ಟಾಪರ್ ಮಾನ್ಯತಾ ಎಸ್ ಮಯ್ಯ

SSLC Result 2024: ಸದಾ ಓದಿನಲ್ಲಿ ಮುಳುಗಬೇಡಿ; ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಿ; ಟಾಪರ್ ಮಾನ್ಯತಾ ಎಸ್ ಮಯ್ಯ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬೆಂಗಳೂರಿನ ಮಾನ್ಯತಾ ಎಸ್ ಮಯ್ಯ ಟಾಪರ್ ಆಗಿ ಹೊರಹೊಮ್ಮಿದೆ. ಸದಾ ಓದಿನಲ್ಲಿ ಮುಳುಗಬೇಡಿ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಹೆಚ್ಚು ಅಂಕ ಗಳಿಸಲು ಸಹಾಯವಾಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ. (ವರದಿ: ಎಚ್ ಮಾರುತಿ)

ಸದಾ ಓದಿನಲ್ಲಿ ಮುಳುಗಬೇಡಿ, ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಂಡಾಗ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಹಾಯವಾಗುತ್ತೆ ಎಂದು ಬೆಂಗಳೂರಿನ ಎಸ್‌ಎಸ್‌ಎಲ್‌ಸಿ ಟಾಪರ್ ಮಾನ್ಯತಾ ಎಸ್ ಮಯ್ಯ ಹೇಳಿದ್ದಾರೆ.
ಸದಾ ಓದಿನಲ್ಲಿ ಮುಳುಗಬೇಡಿ, ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಂಡಾಗ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಹಾಯವಾಗುತ್ತೆ ಎಂದು ಬೆಂಗಳೂರಿನ ಎಸ್‌ಎಸ್‌ಎಲ್‌ಸಿ ಟಾಪರ್ ಮಾನ್ಯತಾ ಎಸ್ ಮಯ್ಯ ಹೇಳಿದ್ದಾರೆ.

ಬೆಂಗಳೂರು: ವಿದ್ಯಾರ್ಥಿಗಳ ಪ್ರಮುಖ ಘಟ್ಟ ಅಂತಲೇ ಹೇಳಲಾಗುವ ಎಸ್‌ಎಸ್‌ಎಲ್‌ಸಿ ಫಲಿತಾಂಶ (Karnataka SSLC Result 2024) ಇಂದು (ಮೇ 9, ಗುರುವಾರ) ಪ್ರಕಟವಾಗಿದ್ದು, ನಗರದ ನಾಲ್ವರು ಟಾಪರ್‌ಗಳ ಪೈಕಿ ಬೆಂಗಳೂರಿನ ಬಸವನಗುಡಿ ವಿವಿಪುರಂನಲ್ಲಿರುವ ಎನ್‌ಇಟಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಮಾನ್ಯತಾ ಎಸ್ ಮಯ್ಯ (Bangalore SSLC Toppers) ಅವರೂ ಒಬ್ಬರು. ಇವರು 625 ಕ್ಕೆ 623 ಅಂಕಗಳನ್ನು ಗಳಿಸಿದ್ದಾರೆ. ಈ ವರ್ಷವೂ 8 ರಿಂದ 9 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಗೆ ಸೇರುತ್ತಾರೆ. ಇವರೂ ನಿಮ್ಮ ಹಾಗೆ ಟಾಪ್ ವಿದ್ಯಾರ್ಥಿಯಾಗಿ ಹೊರ ಹೊಮ್ಮಲು ಏನು ಕಿವಿ ಮಾತು ಹೇಳುತ್ತೀರಿ ಎಂಬ ಪ್ರಶ್ನೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ, ಸದಾ ಪುಸ್ತಕಗಳಲ್ಲಿ, ಓದಿನಲ್ಲಿ ಮುಳುಗಬೇಡಿ. ಆಗ ನೀವೂ ರ‍್ಯಾಂಕ್ ಪಡೆಯಬಹುದು ಎನ್ನುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಮಾನ್ಯತಾ ಬಸವನಗುಡಿಯ ನಿವಾಸಿ ಉದ್ಯಮಿ ಸತ್ಯನಾರಾಯಣ ಮಯ್ಯ ಮತ್ತು ಇಂದಿರಾ ಅವರ ಪುತ್ರಿ. ಇವರ ಸಹೋದರಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಮಾನ್ಯತಾ ಎಸ್ ಮಯ್ಯ ಅವರಿಗೆ ಕಂಪ್ಯೂಟರ್ ಸೈನ್ಸ್ ಓದಿ ಅದರಲ್ಲೇ ಸಾಧನೆ ಮಾಡುವ ಹಿರಿದಾಸೆ ಇದೆ. ಈ ಹಿಂದಿನ ತರಗತಿಗಳಲ್ಲಿ ಓದುತ್ತಿದ್ದ ಹಾಗೆಯೇ ಸಹಜವಾಗಿ ಓದುತ್ತಿದ್ದೆ ಎನ್ನುತ್ತಾರೆ. ಶಾಲೆಯಲ್ಲಿ ಚೆನ್ನಾಗಿ ಪಾಠ ಹೇಳಿ ಕೊಡುತ್ತಿದ್ದರು. ಬೆಳಗ್ಗೆ 5.30ಕ್ಕೆ ಟ್ಯೂಷನ್‌ಗೆೆ ಹೋಗುತ್ತಿದ್ದೆ. ಇದೂ ಹೆಚ್ಚಿನ ಅಂಕ ಗಳಿಸಲು ಸಹಾಯವಾಯಿತು ಎಂದು ಹೇಳುತ್ತಾರೆ.

ಪರೀಕ್ಷೆ ಹತ್ತಿರ ಬಂದಾಗ ಸ್ವಲ್ಪ ಹೆಚ್ಚಿನ ಶ್ರಮ ಹಾಕಿದ್ದನ್ನು ಹೊರತುಪಡಿಸಿದರೆ ಯಾವತ್ತೂ ಹೆದರಿಕೆ ಉಂಟಾಗಲಿಲ್ಲ. ಎಷ್ಟು ಕಾಲ ಓದುತ್ತೇವೆ ಎನ್ನುವುದು ಮುಖ್ಯ ಅಲ್ಲ, ಹೇಗೆ ಓದುತ್ತೇವೆ ಎನ್ನುವುದು ಮುಖ್ಯ. ನನ್ನ ಪೋಷಕರು ಯಾವತ್ತೂ ರ‍್ಯಾಂಕ್ ಬರಬೇಕು, ಇಷ್ಟೇ ಅಂಕ ಗಳಿಸಬೇಕು ಎಂದು ಒತ್ತಡ ಹೇರಲಿಲ್ಲ ಎನ್ನುತ್ತಾರೆ.

ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ. ಇದರಿಂದ ಮನಸ್ಸು ಉಲ್ಲಾಸ ಭರಿತವಾಗುತ್ತದೆ. ನಾನು ಸಂಗೀತ ಮತ್ತು ನೃತ್ಯ ಅಭ್ಯಾಸ ಮಾಡುತ್ತಿದ್ದೆ. ಈ ಪರೀಕ್ಷೆಗಳಲ್ಲೂ ಉತ್ತೀರ್ಣ ಆಗಿದ್ದೇನೆ ಎಂದು ಮಾನ್ಯತಾ ಹೇಳುತ್ತಾರೆ.

ಯಾವುದೇ ವಿಷಯ ಅರ್ಥವಾಗದಿದ್ದರೆ ತಕ್ಷಣವೇ ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ನಮ್ಮ ಎಲ್ಲ ಅನುಮಾನಗಳನ್ನು ಶಿಕ್ಷಕರು ಬಗೆಹರಿಸುತ್ತಿದ್ದರು. ಹಾಗಾಗಿ ಯಾವುದೇ ಹಂತದಲ್ಲಿ ಪರೀಕ್ಷೆಯ ಭಯ ಕಾಡಲಿಲ್ಲ. ನನ್ನ ಓದಿಗೆ ಅಪ್ಪ, ಅಮ್ಮ ಮತ್ತು ಅಕ್ಕನ ಸಹಕಾರ ಮರೆಯುವುದಿಲ್ಲ. ಪ್ರತಿದಿನ ಧೈರ್ಯ ತುಂಬುತ್ತಿದ್ದರು ಎಂದು ಮಾನ್ಯತಾ ಹೇಳಿದ್ದಾರೆ.

ಇಂದು ಪ್ರಕಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಾನ್ಯತಾ ಎಸ್ ಮಯ್ಯ 625ಕ್ಕೆ 623 ಅಂಕಗಳನ್ನು ಗಳಿಸಿದ್ದಾರೆ. ಸಂಸ್ಕೃತದಲ್ಲಿ 125ಕ್ಕೆ 125 ಗಳಿಸಿದ್ದಾರೆ. ಕನ್ನಡ, ಗಣಿತ ಹಾಗೂ ಸಮಾಜ ವಿಜ್ಞಾನ ತಲಾ 100 ಅಂಕ ಗಳಿಸಿದ್ದಾರೆ. ಇಂಗ್ಲಿಷ್‌ ಹಾಗೂ ವಿಜ್ಞಾನದಲ್ಲಿ ತಲಾ 99 ಅಂಕಗಳನ್ನು ಪಡೆದಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ 2023 ರಲ್ಲಿ 14ನೇ ಸ್ಥಾನ ಬಂದಿದ್ದ ಉಡುಪಿ ಈ ಬಾರಿ (2024) ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದೆ. ಕಳೆದ ಬಾರಿ ಪ್ರಥಮ ಸ್ಥಾನ ಬಂದಿದ್ದ ಚಿತ್ರದುರ್ಗ 21 ನೇ ಸ್ಥಾನಕ್ಕೆ ಕುಸಿದಿದೆ. (ವರದಿ: ಎಚ್ ಮಾರುತಿ)

IPL_Entry_Point