ವಾಲ್ಮೀಕಿ ನಿಗಮ ಹಗರಣ; ಗೊಂದಲದ ನಡುವೆ ಸಚಿವ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ ನಾಗೇಂದ್ರ, ಮುಜುಗರ ತಪ್ಪಿಸಲು ಸ್ವ ಇಚ್ಛೆಯ ನಿರ್ಧಾರ
ಕನ್ನಡ ಸುದ್ದಿ  /  ಕರ್ನಾಟಕ  /  ವಾಲ್ಮೀಕಿ ನಿಗಮ ಹಗರಣ; ಗೊಂದಲದ ನಡುವೆ ಸಚಿವ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ ನಾಗೇಂದ್ರ, ಮುಜುಗರ ತಪ್ಪಿಸಲು ಸ್ವ ಇಚ್ಛೆಯ ನಿರ್ಧಾರ

ವಾಲ್ಮೀಕಿ ನಿಗಮ ಹಗರಣ; ಗೊಂದಲದ ನಡುವೆ ಸಚಿವ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ ನಾಗೇಂದ್ರ, ಮುಜುಗರ ತಪ್ಪಿಸಲು ಸ್ವ ಇಚ್ಛೆಯ ನಿರ್ಧಾರ

ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಚಿವ ಸ್ಥಾನಕ್ಕೆ ಬಿ ನಾಗೇಂದ್ರ ರಾಜೀನಾಮೆ ಸಲ್ಲಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದರೊಂದಿಗೆ ಸಿದ್ದರಾಮಯ್ಯ ಸಚಿವ ಸಂಪುಟದ ಮೊದಲ ವಿಕೆಟ್ ಭ್ರಷ್ಟಾಚಾರ ಪ್ರಕರಣಕ್ಕೆ ಪತನವಾಗಿದೆ. ರಾಜೀನಾಮೆ ಸಲ್ಲಿಸುವ ವಿಚಾರವನ್ನು ಸಚಿವ ಬಿ ನಾಗೇಂದ್ರ ಸ್ವತಃ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ವಾಲ್ಮೀಕಿ ನಿಗಮ ಹಗರಣ; ಗೊಂದಲದ ನಡುವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ
ವಾಲ್ಮೀಕಿ ನಿಗಮ ಹಗರಣ; ಗೊಂದಲದ ನಡುವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವನ್ನು ಎದುರಿಸುತ್ತಿದ್ದ ಬಿ. ನಾಗೇಂದ್ರ ಅವರು ಗುರುವಾರ (ಜೂನ್ 6) ಕೊನೆಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದರು.

ಬೆಂಗಳೂರಿನಲ್ಲಿ ಸಂಜೆ 5 ಗಂಟೆಗೆ ವಿಧಾನಸೌಧಕ್ಕೆ ಆಗಮಿಸಿದ ಬಿ ನಾಗೇಂದ್ರ ಅವರು, ಸುದ್ದಿಗೋಷ್ಠಿ ನಡೆಸಿ, ತಮ್ಮ ರಾಜೀನಾಮೆ ವಿಚಾರವನ್ನು ಬಹಿರಂಗಪಡಿಸಿದರು. ಕಳೆದ 10 ದಿನಗಳಿಂದ ವಿರೋಧ ಪಕ್ಷದವರು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು. ಮಾಧ್ಯಮಗಳಲ್ಲೂ ಈ ವರದಿಗಳು ಪ್ರಕಟವಾಗಿವೆ. ಹೀಗಾಗಿ ತಾನು ಕೂಡ ಇದರ ಬಗ್ಗೆ ಸ್ಪಷ್ಟೀಕರಣ ನೀಡಲು ಸುದ್ದಿಗೋಷ್ಠಿ ನಡೆಸುತ್ತಿರುವುದಾಗಿ ಹೇಳಿದರು.

ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ, ಸ್ವ ಇಚ್ಛೆಯಿಂದ ಯಾವುದೇ ಒತ್ತಡ ಇಲ್ಲದೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ. ಯಾರಿಗೂ ಮುಜುಗರವಾಗಬಾರದು ಈ ನಿರ್ಧಾರಕ್ಕೆ ಬಂದಿದ್ದೇನೆ. ಇಂದು ರಾತ್ರಿ 7.30ಕ್ಕೆ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಅಲ್ಲಿ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ. ಅದನ್ನು ಸ್ವೀಕರಿಸುವುದು ಅಥವಾ ಬಿಡುವುದು ಅವರಿಗೆ ಸೇರಿದ್ದು ಎಂದು ಹೇಳಿದರು

ಸಚಿವ ಸ್ಥಾನದಲ್ಲಿದ್ದರೆ ತನಿಖೆಗೆ ಅಡ್ಡಿಯಾಗಬಹುದು. ಈ ವಿಚಾರವಾಗಿ ಬಹಳ ಆಲೋಚನೆ ಮಾಡಿ ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ನಾಗೇಂದ್ರ ಹೇಳಿದರು.

ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಿನ್ನ ಹೇಳಿಕೆ

ನಾಗೇಂದ್ರ ಅವರ ರಾಜೀನಾಮೆ ವಿಚಾರದಲ್ಲಿ ಬಹಳ ಗೊಂದಲ ಸೃಷ್ಟಿಯಾಗಿತ್ತು. ರಾಜೀನಾಮೆ ವಿಚಾರದಲ್ಲಿ ಬಹಳ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಒಮ್ಮತ ಇದ್ದಂತೆ ಇರಲಿಲ್ಲ.

ಇಂದು ಡಿಕೆ ಶಿವಕುಮಾರ್ ಅವರು ಮಾಧ್ಯಮ ಪತ್ರಿನಿಧಿಗಳ ಜೊತೆಗೆ ಮಾತನಾಡುತ್ತ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಈ ವಿಚಾರ ಗೊತ್ತಿಲ್ಲ. ರಾಜೀನಾಮೆ ನೀಡಬೇಕು ಎಂದು ನಾನು ಸೂಚಿಸಿಲ್ಲ ಎಂದು ಹೇಳಿದ್ದರು. ಆದರೆ, ನಂತರ ಸುದ್ದಿಗೋಷ್ಠಿಯಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗೆ ಮಾತನಾಡಿದ ನಾಗೇಂದ್ರ ಸಂಜೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸುವ ವಿಚಾರ ಪ್ರಕಟಿಸುವುದಾಗಿ ಹೇಳಿದರು. ಇದನ್ನೆ ಡಿಕೆ ಶಿವಕುಮಾರ್ ಅವರೂ ಸ್ಪಷ್ಟಪಡಿಸಿದ್ದರು.

ಬಿ ನಾಗೇಂದ್ರ ರಾಜೀನಾಮೆ ವಿಚಾರ ಕಳೆದ 5 ದಿನಗಳಿಂದ ಚಾಲ್ತಿಯಲ್ಲಿದ್ದು, ಆರಂಭಿಕ ಹಂತದಲ್ಲಿ ಸಚಿವ ರಾಜೀನಾಮೆ ಇಲ್ಲವೇ ಇಲ್ಲ. ಅವರ ಹೆಸರು ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಚಂದ್ರಶೇಖರನ್‌ ಅವರ ಡೆತ್‌ನೋಟ್‌ನಲ್ಲಿ ಇರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸ್ಪಷ್ಟ ಪಡಿಸಿದ್ದರು. ಆದಾಗ್ಯೂ, ನಂತರದ ವಿದ್ಯಮಾನದಲ್ಲಿ ಇಬ್ಬರು ಅಧಿಕಾರಿಗಳು ಕೇಸ್‌ನಲ್ಲಿ ಸಿಲುಕಿದ ಬಳಿಕ, ನಾಗೇಂದ್ರ ರಾಜೀನಾಮೆ ವಿಚಾರ ಮುನ್ನೆಲೆ ಬಂದಿತ್ತು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಹುಕೋಟಿ ಹಗರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ಹಿರಿಯ ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ಚರ್ಚಿಸಲಾಗಿದೆ. ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯುವ ಬಗ್ಗೆ ಮಾತುಕತೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು.

ಏನಿದು ವಾಲ್ಮೀಕಿ ನಿಗಮದ ಹಗರಣ

ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಪಿ ಅವರು ಮೇ 26 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್ ಬರೆದಿಟ್ಟ ಕಾರಣ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಲಿಮಿಟೆಡ್‌ಗೆ ಸೇರಿದ ಅಕ್ರಮ ಹಣ ವರ್ಗಾವಣೆ ವಿಚಾರ ಬೆಳಕಿಗೆ ಬಂದಿದೆ.

ನಾಗೇಂದ್ರ ಅವರ ಇಲಾಖೆಯ ಆಡಳಿತ ನಿಯಂತ್ರಣದಲ್ಲಿರುವ ಸರ್ಕಾರಿ ಸಂಸ್ಥೆಗೆ ಸೇರಿದ 187 ಕೋಟಿ ರೂಪಾಯಿಗಳನ್ನು ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ವರ್ಗಾವಣೆ ಮಾಡಿರುವುದನ್ನು ನೋಟು ಬಹಿರಂಗಪಡಿಸಿದೆ ಮತ್ತು ಅದರಿಂದ 88.62 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ "ಪ್ರಸಿದ್ಧ" IT ಕಂಪನಿಗಳಿಗೆ ಮತ್ತು ಹೈದರಾಬಾದ್ ಮೂಲದ ಸಹಕಾರಿ ಬ್ಯಾಂಕ್‌ಗಳ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಚಂದ್ರಶೇಖರನ್ ಪತ್ನಿ ಕವಿತಾ ಹೇಳಿಕೆ

ಚಂದ್ರಶೇಖರನ್ ಪತ್ನಿ ಕವಿತಾ ಅವರು ಟಿವಿ 9 ಕನ್ನಡದ ಜೊತೆಗೆ ಮಾತನಾಡುತ್ತ, ಪತಿ ಚಂದ್ರಶೇಖರನ್‌ ಅವರ ಡೆತ್‌ನೋಟ್‌ನಲ್ಲಿರುವ ಪ್ರಕಾರ ಸಚಿವರ ಮೌಖಿಕ ಆದೇಶದ ಮೇರೆಗೆ ಎಂಬ ಉಲ್ಲೇಖವಿದೆ. ಅದುಬಿಟ್ಟರೆ ಬೇರೇನೂ ಗೊತ್ತಿಲ್ಲ. ಇಲಾಖೆಯ ಸಚಿವರು ಯಾರು, ಅಧಿಕಾರಿಗಳು ಯಾರು ಎಂಬಿತ್ಯಾದಿ ಮಾಹಿತಿ ಇಲ್ಲ. ಪತಿಯ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕು. ನಮಗೆ ನ್ಯಾಯ ಸಿಗಬೇಕು. ಸಚಿವರ ವಿಚಾರ ನಮಗೆ ಗೊತ್ತಿಲ್ಲ ಎಂದು ಹೇಳಿದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner