ಐಷಾರಾಮಿ ಗೇಟೆಡ್ ಕಮ್ಯೂನಿಟಿಗೂ ತಟ್ಟಿದ ಬೆಂಗಳೂರು ನೀರಿನ ಸಮಸ್ಯೆ ಬಿಸಿ; ರೆಡ್ಡಿಟ್ ಪೋಸ್ಟ್ ವೈರಲ್
ಬೆಂಗಳೂರಿನ ನೀರಿನ ಸಮಸ್ಯೆ ಐಷಾರಾಮಿ ಗೇಟೆಡ್ ಕಮ್ಯೂನಿಟಿಯವರಿಗೂ ತಟ್ಟಿದೆ. ಈ ಕುರಿತ ರೆಡ್ಡಿಟ್ ಪೋಸ್ಟ್ ಒಂದು ವೈರಲ್ ಆಗಿದ್ದು, ಹೆಚ್ಚು ಚರ್ಚೆಗೆ ಒಳಗಾಗಿದೆ. ಈ ಪೋಸ್ಟ್‌ನಲ್ಲಿರುವ ವಿಚಾರವನ್ನು ಗೇಟೆಡ್ ಕಮ್ಯೂನಿಟಿಯ ಸೊಸೈಟಿ ನಿರಾಕರಿಸಿದೆ. ಏನಿದೆ ಅಂಥದ್ದು ಅದರಲ್ಲಿ…
ಬೆಂಗಳೂರು: ಕರ್ನಾಟಕದ ಐಷಾರಾಮಿ ಗೇಟೆಡ್ ಕಮ್ಯೂನಿಟಿ ನಿವಾಸಿಗಳು ಬೆಂಗಳೂರಿನಲ್ಲಿ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ರೆಡ್ಡಿಟ್ ಪೋಸ್ಟ್‌ನ ಸ್ಕ್ರೀನ್ ಶಾಟ್ ಎಕ್ಸ್‌ನಲ್ಲಿ ಶೇರ್ ಮಾಡಲ್ಪಟ್ಟಿದ್ದು, ಅದು ವೈರಲ್ ಆಗಿತ್ತು.
ಬೆಂಗಳೂರಿನ ಐಷಾರಾಮಿ ಗೇಟೆಡ್ ಕಮ್ಯೂನಿಟಿಗಳಲ್ಲಿ "ಪರಿಸ್ಥಿತಿಯು ವಾಸಯೋಗ್ಯ ಎಂದು ಕರೆಯಬಹುದಾದ ಮಿತಿಗಳನ್ನು ಮೀರಿದೆ". ಶೌಚಕ್ಕೆ ವೆಟ್ ವೈಪ್, ತೊಳೆಯಲು ಬಳಸಿದ ನೀರು ಬಳಸುವಂತೆ ಸೂಚಿಸಲಾಗುತ್ತಿದೆ ಎಂದು ಎಕ್ಸ್ ಬಳೆದಾರರೊಬ್ಬರು ಮಾಡಿರುವ ಟ್ವೀಟ್‌ನಲ್ಲಿರುವ ರೆಡ್ಡಿಟ್ ಪೋಸ್ಟ್‌ನ್ ಸ್ಕ್ರಿನ್ ಶಾಟ್ ವಿವರಿಸಿದೆ.
ಆದರೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ ಎಂದು ತೋರುತ್ತದೆ. ಹೆಚ್ಚಿನ ಬಾಡಿಗೆದಾರರು ಅಪಾರ್ಟ್‌ಮೆಂಟ್‌ಗಳನ್ನು ಖಾಲಿ ಮಾಡಿದ್ದಾರೆ. ಶೌಚದ ವಾಸನೆ ಮಾರು ದೂರ ಬಡಿಯುತ್ತಿದೆ. ಹತ್ತಿರದ ಫಾರಂ ಮಾಲ್ ಹೋಗುವ ನಿವಾಸಿಗಳ ಸಾಲುಗಳನ್ನು ನೋಡುವುದು ವಿರಳವಲ್ಲ ಎಂದು ಅಂಶವೂ ಅದರಲ್ಲಿದೆ ಎಂದು ಇಂಡಿಯಾ ಟುಡೇ ಸ್ಕ್ರೀನ್ ಶಾಟ್ ಸಹಿತ ವರದಿ ಪ್ರಕಟಿಸಿದೆ.
ಆ ರೆಡ್ಡಿಟ್ ಪೋಸ್ಟ್‌ನಲ್ಲಿ, ಬಳಕೆದಾರರು ಬೆಂಗಳೂರಿನ ಕನಕಪುರ ರಸ್ತೆಯ ಐಷಾರಾಮಿ ಕಾಂಪ್ಲೆಕ್ಸ್ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಬಳಿಯ ಫೋರಂ ಮಾಲ್ ಬಗ್ಗೆ ಮಾತನಾಡುತ್ತಿದ್ದರು ಎಂದು ವರದಿಯಾಗಿದೆ. ರೆಡ್ಡಿಟ್ ಬಳಕೆದಾರರು ಪ್ರೆಸ್ಟೀಜ್ ಫಾಲ್ಕನ್ ನಗರದ ನಿವಾಸಿಯಾಗಿದ್ದರು.
ಈ ರೆಡ್ಡಿಟ್ ಪೋಸ್ಟ್ ವೈರಲ್ ಆದ ಕೂಡಲೇ, ಪ್ರೆಸ್ಟೀಜ್ ಫಾಲ್ಕನ್ ಸಿಟಿ ಈ ಹೇಳಿಕೆಗಳನ್ನು ನಿರಾಕರಿಸಿತು. ಅಂತಹ ಹೇಳಿಕೆಗಳು ವಿಶ್ವಾಸಾರ್ಹತೆಯನ್ನು ಹೊಂದಿಲ್ಲ ಎಂದು ಹೇಳಿದೆ. ಇದಾದ ನಂತರ, ಆ ಪೋಸ್ಟ್ ಅನ್ನು ಸಹ ಅಳಿಸಲಾಗಿದೆ.
ರೆಡ್ಡಿಟ್ ಪೋಸ್ಟ್‌ನ ಸ್ಕ್ರೀನ್ ಶಾಟ್
ಬೆಂಗಳೂರು ಬರ ಪರಿಸ್ಥಿತಿ; ಜಿಮ್, ಕಚೇರಿಗಳಿಗೆ ತೆರಳಿ ನಿತ್ಯ ವಿಧಿ ಪೂರೈಸುತ್ತಿರುವ ಜನ
ಬೆಂಗಳೂರಿನಲ್ಲಿ ಕೆಲವು ಜನರು ಟವೆಲ್ ಮತ್ತು ಬಟ್ಟೆಗಳೊಂದಿಗೆ ಜಿಮ್‌ಗಳಿಗೆ ಹೋಗುತ್ತಿದ್ದಾರೆ. ಅಲ್ಲೇ ಸ್ನಾನ ಮಾಡಿ ಉಡುಪು ಬದಲಾಯಿಸಿಕೊಂಡು ತಮ್ಮ ಕೆಲಸಗಳಿಗೆ ತೆರಳುತ್ತಿದ್ದಾರೆ ಎಂದು ಎಕ್ಸ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಐಷಾರಾಮಿ ಗೇಟೆಡ್ ಕಮ್ಯೂನಿಟಿಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಕೋಟಿ ರೂಪಾಯಿಗಿಂತ ಹೆಚ್ಚು ಹಣ ಕೊಟ್ಟು ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇಎಂಐ ಕೂಡ ಪಾವತಿಸುತ್ತಿದ್ದಾರೆ. ಅದರೆ, ನೀರಿನಂತಹ ಮೂಲಸೌಕರ್ಯವೇ ಇಲ್ಲದಿರುವುದು ಅಣಕವಾಡಿದಂತೆ ಎಂದು ಬಳಕೆದಾರರು ಖೇದ ವ್ಯಕ್ತಪಡಿಸಿದ್ದಾರೆ.
"ಪ್ರಾಮಾಣಿಕ ಸಲಹೆ: ಶಾಶ್ವತವಾಗಿ ಟ್ಯಾಂಕರ್ ನೀರಿನ ಮೇಲೆ ಅವಲಂಬಿತವಾಗಿರುವ ಬೆಂಗಳೂರಿನ ಫ್ಲ್ಯಾಟ್ ಖರೀದಿಸಬೇಡಿ. ಈ ರೀತಿ ಬಳಲುವುದಕ್ಕಿಂತ ಮನಸ್ಸಿನ ಶಾಂತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುವುದು ಉತ್ತಮ" ಎಂದು ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
ಈ ಹೇಳಿಕೆಯನ್ನು ನಿರಾಕರಿಸಿದ ಬೆಂಗಳೂರು ಸೊಸೈಟಿ ಪ್ರೆಸ್ಟೀಜ್ ಫಾಲ್ಕನ್ ಸಿಟಿ, "ಇಂತಹ ಹೇಳಿಕೆಗಳು ವಿಶ್ವಾಸಾರ್ಹತೆಯನ್ನು ಹೊಂದಿಲ್ಲ ಮತ್ತು ಪರಿಸ್ಥಿತಿಯ ನೈಜ ಸಂದರ್ಭಗಳನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿವೆ" ಎನ್ನುತ್ತ ಬಿಡುಗಡೆ ಮಾಡಿದ ಹೇಳಿಕೆಯನ್ನು ಇಂಡಿಯಾ ಟುಡೇ ಹಂಚಿಕೊಂಡಿದೆ.
ನೀರು ದುರ್ಬಳಕೆ ತಡೆಗೆ ಜಲ ಮಂಡಳಿ ಕಠಿಣ ಕ್ರಮ
ನೀರಿನ ಬಿಕ್ಕಟ್ಟನ್ನು ಎದುರಿಸುವುದಕ್ಕಾಗಿ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರಿನ ದುರ್ಬಳಕೆ ತಡೆಯಲು ಕಠಿಣ ಕ್ರಮ ತೆಗೆದುಕೊಂಡಿದೆ.
ಇದರಂತೆ, ಕಾರು ತೊಳೆಯಲು, ತೋಟಗಾರಿಕೆ, ನಿರ್ಮಾಣ, ನೀರಿನ ಕಾರಂಜಿಗಳು ಮತ್ತು ರಸ್ತೆ ನಿರ್ಮಾಣ ಮತ್ತು ನಿರ್ವಹಣೆ ಸೇರಿ ಆರು ಚಟುವಟಿಕೆಗಳಿಗೆ ಕುಡಿಯುವ ನೀರಿನ ಬಳಕೆಯನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಈ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವುದು ಕಂಡುಬಂದರೆ ಕನಿಷ್ಠ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಜಲ ಮಂಡಳಿ ಎಚ್ಚರಿಸಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)