ಕರ್ನಾಟಕ ಜಲಸಂಪನ್ಮೂಲ ಇಲಾಖೆ ಉದ್ಯೋಗಕ್ಕಾಗಿ ನಕಲಿ ಅಂಕಪಟ್ಟಿ ನೀಡಿದ್ರು 62 ಅಭ್ಯರ್ಥಿಗಳು, 32 ಆರೋಪಿಗಳ ಬಂಧನ, ಉಳಿದವರಿಗೆ ಬಂಧನ ಭೀತಿ-bengaluru news karnataka water resource dept job 62 candidates submited fake marks card 32 arrested mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಜಲಸಂಪನ್ಮೂಲ ಇಲಾಖೆ ಉದ್ಯೋಗಕ್ಕಾಗಿ ನಕಲಿ ಅಂಕಪಟ್ಟಿ ನೀಡಿದ್ರು 62 ಅಭ್ಯರ್ಥಿಗಳು, 32 ಆರೋಪಿಗಳ ಬಂಧನ, ಉಳಿದವರಿಗೆ ಬಂಧನ ಭೀತಿ

ಕರ್ನಾಟಕ ಜಲಸಂಪನ್ಮೂಲ ಇಲಾಖೆ ಉದ್ಯೋಗಕ್ಕಾಗಿ ನಕಲಿ ಅಂಕಪಟ್ಟಿ ನೀಡಿದ್ರು 62 ಅಭ್ಯರ್ಥಿಗಳು, 32 ಆರೋಪಿಗಳ ಬಂಧನ, ಉಳಿದವರಿಗೆ ಬಂಧನ ಭೀತಿ

Bengaluru News; ನಕಲಿ ಅಂಕಪಟ್ಟಿಗಳನ್ನು ನೀಡಿ ಜಲಸಂಪನ್ಮೂಲ ಇಲಾಖೆಯಲ್ಲಿ ಕ್ಲರ್ಕ್ ಹುದ್ದೆ ಗಿಟ್ಟಿಸಿದ್ದ 12 ಜಿಲ್ಲೆಗಳ 62 ಅಭ್ಯರ್ಥಿಗಳ ಪತ್ತೆ ಮಾಡಲಾಗಿದ್ದು, ಈ ಪೈಕಿ 32 ಮಂದಿ ಬಂಧನವಾಗಿದೆ. ಉಳಿದ 30 ಆರೋಪಿಗಳಿಗೆ ಪೊಲೀಸರು ಶೋಧ ನಡೆಸಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಕ್ಲರ್ಕ್‌ ಹುದ್ದೆ ಸೇರುವುದಕ್ಕೆ ನಕಲಿ ಅಂಕ ಪಟ್ಟಿ ನೀಡಿದ್ದ 62 ಅಭ್ಯರ್ಥಿಗಳನ್ನು ಪತ್ತೆ ಹಚ್ಚಲಾಗಿದ್ದು, 32 ಆರೋಪಿಗಳನ್ನು ಬಂಧಿಸಲಾಗಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಕ್ಲರ್ಕ್‌ ಹುದ್ದೆ ಸೇರುವುದಕ್ಕೆ ನಕಲಿ ಅಂಕ ಪಟ್ಟಿ ನೀಡಿದ್ದ 62 ಅಭ್ಯರ್ಥಿಗಳನ್ನು ಪತ್ತೆ ಹಚ್ಚಲಾಗಿದ್ದು, 32 ಆರೋಪಿಗಳನ್ನು ಬಂಧಿಸಲಾಗಿದೆ. (ಸಾಂಕೇತಿಕ ಚಿತ್ರ) (Special Arrangement)

ಬೆಂಗಳೂರು: ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿ ಜಲಸಂಪನ್ಮೂಲ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಆಯ್ಕೆಯಾಗಲು ಪ್ರಯತ್ನಿಸಿದ್ದ 62 ಅಭ್ಯರ್ಥಿಗಳನ್ನು ಪತ್ತೆಹಚ್ಚಲಾಗಿದೆ. ಇದುವರೆಗೆ ಮಧ್ಯವರ್ತಿಗಳು ಸೇರಿದಂತೆ 32 ಮಂದಿಯನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.

ಇವರಲ್ಲಿ 11 ಮಧ್ಯವರ್ತಿಗಳು, ವಿವಿಧ ಇಲಾಖೆಗಳ 3 ನೌಕರರು ಮತ್ತು ಅಭ್ಯರ್ಥಿಗಳು ಸೇರಿದ್ದಾರೆ. ಇವರ ವಿರುದ್ಧ ಬೆಂಗಳೂರು ನಗರ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ನಕಲಿ ಅಂಕಪಟ್ಟಿ ನೀಡಿ ವಂಚನೆ- ಏನಿದು ಪ್ರಕರಣ

ಜಲಸಂಪನ್ಮೂಲ ಇಲಾಖೆಯು 2022ನೇ ಸಾಲಿನ ಅಕ್ಟೋಬರ್ ತಿಂಗಳಿನಲ್ಲಿ 'ಸಿ' ವೃಂದದ ದ್ವಿತೀಯ ದರ್ಜೆ ಸಹಾಯಕ ಬ್ಲಾಕ್‌ಲಾಗ್ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕಾರ ಆನ್‌ಲೈನ್ ಮೂಲಕ 182 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು.

ಈ ಹುದ್ದೆಗಳಿಗೆ ಅರ್ಹತೆ ಇಲ್ಲದಿದ್ದರೂ 12 ಜಿಲ್ಲೆಗಳ 62 ಅಭ್ಯರ್ಥಿಗಳು ವಾಮಮಾರ್ಗದ ಮೂಲಕ ಉದ್ಯೋಗ ಪಡೆಯುವ ದುರುದ್ದೇಶದಿಂದ ನಕಲಿ ಅಂಕಪಟ್ಟಿಗಳನ್ನು ಸಲ್ಲಿಸಿದ್ದರು. ಇವರು ನಕಲಿ ಅಂಕಪಟ್ಟಿ ತಯಾರಿಸುವ ಜಾಲದೊಂದಿಗೆ ಸಂಪರ್ಕ ಸಾಧಿಸಿ ಪ್ರತಿ ವಿಷಯದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವಂತೆ ದ್ವಿತೀಯ ಪಿಯುಸಿ, 12ನೇ ತರಗತಿಯ ಸಿ.ಬಿ.ಎಸ್.ಸಿ ಮತ್ತು ದ್ವಿತೀಯ ಪಿಯುಸಿಗೆ ತತ್ಸಮಾನವಾದ ಎನ್.ಐ.ಓ.ಎಸ್ ಅಂಕಪಟ್ಟಿಗಳನ್ನು ಸೃಷ್ಟಿಸಿಕೊಂಡಿದ್ದರು. ನಂತರ ಈ ಅಂಕಪಟ್ಟಿಗಳನ್ನು ಜಲಸಂಪನ್ಮೂಲ ಇಲಾಖೆಗೆ ಆನ್‌ಲೈನ್‌ ಮೂಲಕ ಸಲ್ಲಿಸಿದ್ದರು.

ದಾಖಲಾತಿಗಳ ಪರಿಶೀಲನೆಯನ್ನು ನಡೆಸಿದಾಗ ಈ 62 ಮಂದಿ ಸಲ್ಲಿಸಿದ್ದ ಅಂಕಪಟ್ಟಿಗಳು ನಕಲಿ ಎನ್ನುವುದು ಸಾಬೀತಾಗಿತ್ತು. ಆಗ ಇಲಾಖೆಯು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ 2023ರ ಜುಲೈ 28 ರಂದು ದೂರನ್ನು ಸಲ್ಲಿಸಿತ್ತು. ಈ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಘಟಕದ ಅಧಿಕಾರಿಗಳು, 12 ಜಿಲ್ಲೆಗಳಿಂದ 62 ಅಭ್ಯರ್ಥಿಗಳ ಪೈಕಿ ಕಲಬುರಗಿ ಜಿಲ್ಲೆಯಿಂದ 25, ಹಾಸನ ಜಿಲ್ಲೆಯಿಂದ 12, ವಿಜಯಪುರ ಜಿಲ್ಲೆಯಿಂದ 3, ಬೀದರ್ ಜಿಲ್ಲೆಯಿಂದ 6, ಬೆಳಗಾವಿ ಜಿಲ್ಲೆಯಿಂದ 3, ಯಾದಗಿರಿ ಜಿಲ್ಲೆಯಿಂದ 2, ಚಿತ್ರದುರ್ಗ, ಕೋಲಾರ, ರಾಯಚೂರು, ರಾಮನಗರ ಮತ್ತು ವಿಜಯನಗರ ಜಿಲ್ಲೆಯಿಂದ ತಲಾ ಒಬ್ಬರು ನಕಲಿ ದ್ವಿತೀಯ ಪಿಯುಸಿ/ತತ್ಸಮಾನವಾದ ಅಂಕಪಟ್ಟಿಗಳನ್ನು ಸಲ್ಲಿಸಿರುವುದನ್ನು ಪತ್ತೆ ಮಾಡಿರುತ್ತಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 17 ಮೊಬೈಲ್ ಫೋನ್‌, ರೂ. 40 ಲಕ್ಷ ಮೌಲ್ಯದ ಒಂದು ಕಂಪ್ಯೂಟರ್‌ ಹಾರ್ಡ್‌ಡಿಸ್ಕ್‌ ಮತ್ತು ಎರಡು ಕಾರಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಂಗಿಯ ಮನೆಯಲ್ಲೇ ಕಳ್ಳತನ ಮಾಡಿದ್ದ ಅಕ್ಕನ ಬಂಧನ

ತಂಗಿಯ ಮನೆಯಲ್ಲೇ ಕಳ್ಳತನ ಮಾಡಿದ್ದ ಮಹಿಳೆಯನ್ನು ಆಡುಗೋಡಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ಆಕೆಯಿಂದ 5.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ದೂರುದಾರರು ತಮ್ಮ ಪತಿಗೆ ಆರೋಗ್ಯ ಸರಿ ಇಲ್ಲದ ಕಾರಣ ತಮ್ಮ ಅಕ್ಕನ ಮನೆಗೆ ವಿಶ್ರಾಂತಿ ಪಡೆಯಲು ಹೋಗಿರುತ್ತಾರೆ. ಐದು ದಿನಗಳ ನಂತರ ಮನೆಗೆ ಮರಳಿ ಬಂದು ನೋಡಿದಾಗ ಲಾಕರ್‌ನಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಕಳ್ಳತನವಾಗಿದೆ ಎಂದು ಅಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಾ ದೂರುದಾರರ ಅಕ್ಕನನ್ನು ವಿಚಾರಣೆಗೊಳಪಡಿಸುತ್ತಾರೆ.

ಮೆಡಿಕಲ್ ಸ್ಟೋರ್ ನಿಂದ ಔಷಧಿಯನ್ನು ತರುವಂತೆ ದೂರುದಾರರು ತಮ್ಮ ಸಹೋದರಿಗೆ ತಮ್ಮದೇ ದ್ವಿಚಕ್ರ ವಾಹನದ ಕೀ ನೀಡುತ್ತಾರೆ. ಅದರಲ್ಲಿ ಮನೆಯ ಕೀ ಸಹ ಇರುತ್ತದೆ. ಇದನ್ನು ಗಮನಿಸಿದ ಆರೋಪಿ ಮಹಿಳೆ, ಬೊಮ್ಮನಹಳ್ಳಿ ಹತ್ತಿರವಿರುವ ಹೊಸರೋಡ್‌ನಲ್ಲಿ ವಾಸವಿರುವ ತನ್ನ ದೊಡ್ಡಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ತನ್ನ ದೂರುದಾರ ಸಹೋದರಿಯ ಮನೆಯಿಂದ ಸ್ವಲ್ಪ ದೂರದಲ್ಲಿ ವಾಹನ ನಿಲ್ಲಿಸಿ, ಔಷಧಿಯನ್ನು ತೆಗೆದುಕೊಂಡು ಬರುತ್ತೇನೆ. ಅದುವರೆಗೂ ಅಲ್ಲೇ ಇರಲು ಹೇಳಿ ದೂರುದಾರರ ಮನೆಗೆ ಬರುತ್ತಾರೆ. ಮನೆಯ ಬಾಗಿಲನ್ನು ತೆಗೆದು ಒಳಗೆ ಪ್ರವೇಶಿಸಿ ಬೀರುವಿನ ಲಾಕರ್‌ ಮುರಿದು ಅದರಲ್ಲಿಟ್ಟಿದ್ದ ಚಿನ್ನದ ಆಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾಳೆ. ವಿಚಾರಣೆಯಲ್ಲಿ ತಪ್ಪನ್ನು ಒಪ್ಪಿಕೊಂಡಿರುತ್ತಾಳೆ. 42 ಗ್ರಾಂ ತೂಕದ ಚಿನ್ನಾಭರಣಗಳನ್ನು ಜ್ಯುವೆಲರಿ ಶಾಪ್‌ಗಳಲ್ಲಿ ಅಡಮಾನ ಇಟ್ಟಿರುತ್ತಾಳೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)