ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಬೆಂಗಳೂರು ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಶ, 150 ಪ್ರಯಾಣಿಕರು ಸೇಫ್
ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ಘಟನೆಯಲ್ಲಿ ವಿಮಾನದಲ್ಲಿದ್ದ 150 ಪ್ರಯಾಣಿಕರು, ಸಿಬ್ಬಂದಿ ಸೇಫ್ ಆಗಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ಡಿಜಿಸಿಎ ಆದೇಶಿಸಿದೆ.
ಬೆಂಗಳೂರು: ಕೇರಳದ ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಇಂಜಿನ್‌ನಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡ ಕಾರಣ ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತುರ್ತು ಭೂಸ್ಪರ್ಶ ಮಾಡಬೇಕಾಗಿ ಬಂತು. 150 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಬೆಳಗ್ಗೆ 10:30 ಕ್ಕೆ ಟೇಕಾಫ್ ಆಗಿತ್ತು. ಆದರೆ, ಸ್ವಲ್ಪ ಹೊತ್ತಿನಲ್ಲೇ ಅದರ ಬಲ ಎಂಜಿನ್‌ನಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಂಡು ಬೆಂಕಿ ಜ್ವಾಲೆ ಉಂಟಾಗಿತ್ತು. ವಿಮಾನದ ನಿಲ್ಧಾಣದ ಗ್ರೌಂಡ್ ಸ್ಟಾಫ್ ಮತ್ತು ನೋಡುಗರಿಗೆ ಇದು ಸ್ಪಷ್ಟವಾಗಿ ಗೋಚರಿಸಿತ್ತು ಎಂದು ಎಎನ್‌ಐ ವರದಿ ಮಾಡಿದೆ.
ಕೊಚ್ಚಿಗೆ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತುರ್ತು ಭೂಸ್ಪರ್ಶ
ಕೊಚ್ಚಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಕೂಡಲೇ, ಗ್ರೌಂಡ್ ಸ್ಟಾಫ್ ವಿಮಾನ ಬಳಿ ಹೋಗಿ ಎಂಜಿನ್‌ನಲ್ಲಿ ಉಂಟಾಗಿದ್ದ ಬೆಂಕಿಯ ಜ್ವಾಲೆಗಳ ಉಪಸ್ಥಿತಿಯನ್ನು ದೃಢಪಡಿಸಿತು. ಇದಾಗುತ್ತಲೇ ವಿಮಾನದಲ್ಲಿದ್ದವರನ್ನು ಅಲ್ಲಿ ತುರ್ತಾಗಿ ಇಳಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಈ ಘಟನೆಯಲ್ಲಿ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂಬುದನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೃಢಪಡಿಸಿದೆ.
ಪ್ರಯಾಣಿಕರನ್ನು ಸುರಕ್ಷಿತ ಸ್ಥಳದಲ್ಲಿ ಉಪಹಾರ ನೀಡಿ ಉಪಚರಿಸಿದ ಬಳಿಕ, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಇನ್ನೊಂದು ವಿಮಾನದಲ್ಲಿ ಕೊಚ್ಚಿಗೆ ಕಳುಹಿಸಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೇಳಿದೆ.
ತನಿಖೆಗೆ ಆದೇಶಿಸಿದ ಡಿಜಿಸಿಎ
ಎಂಜಿನ್ ಬೆಂಕಿಗೆ ಕಾರಣಗಳ ಬಗ್ಗೆ ವಿವರವಾದ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಆದೇಶಿಸಿದೆ. ಆರಂಭಿಕ ತನಿಖೆ, ಪರಿಶೀಲನೆಗಳನ್ನು ವಿಮಾನ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣಗಳ ತುರ್ತು ಸೇವೆಗಳ ಕ್ಷಿಪ್ರ ಕಾರ್ಯವು ಸಂಭಾವ್ಯ ಗಂಭೀರ ಅಪಾಯವನ್ನು ತಪ್ಪಿಸಲು ಸಹಾಯ ಮಾಡಿದೆ ಎಂದು ಕಂಪನಿ ಹೇಳಿದೆ.
ಈ ಘಟನೆಯು ಕಠಿಣ ನಿರ್ವಹಣೆ ತಪಾಸಣೆಗಳ ಪ್ರಾಮುಖ್ಯತೆ ಮತ್ತು ತುರ್ತು ಪ್ರೋಟೋಕಾಲ್‌ಗಳ ಪರಿಣಾಮಕಾರಿತ್ವವನ್ನು ಒತ್ತಿಹೇಳುತ್ತದೆ. ಸುರಕ್ಷತೆಯು ತಮ್ಮ ಪ್ರಮುಖ ಆದ್ಯತೆಯಾಗಿ ಉಳಿದಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಭರವಸೆ ನೀಡಿದೆ.
ತನಿಖೆಗಳು ಮುಂದುವರಿದಂತೆ, ಎಂಜಿನ್ ಬೆಂಕಿಗೆ ನಿಖರವಾದ ಕಾರಣವನ್ನು ನಿರ್ಧರಿಸಲು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರವನ್ನು ಒದಗಿಸಲು ಬದ್ಧವಾಗಿರುವುದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಘೋಷಿಸಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟುತಾಜಾ ಸುದ್ದಿ,ಕ್ರೈಮ್ ಸುದ್ದಿ,ಬೆಂಗಳೂರು ನಗರ ಸುದ್ದಿ,ರಾಜಕೀಯ ವಿಶ್ಲೇಷಣೆ ಓದಿ.