ಕೋರಮಂಗಲದ ಬಿಲೆನಿಯರ್ ಸ್ಟ್ರೀಟ್‌ನ ಮನೆಯ ಮೇಲೆ ದಾಳಿ, ಅಳಿವಿನಂಚಿನ ಭಾರತೀಯ ನಕ್ಷತ್ರ ಆಮೆಗಳ ವಶ; ಮತ್ತೊಂದು ಪ್ರಕರಣದಲ್ಲಿ ಗಿಳಿಗಳ ಜಪ್ತಿ
ಬೆಂಗಳೂರು ಕೋರಮಂಗಲದ ಬಿಲೆನಿಯರ್ ಸ್ಟ್ರೀಟ್‌ನ ಮನೆಯ ಮೇಲೆ ದಾಳಿ ನಡೆಸಿದ ಸಿಐಡಿ ಪೊಲೀಸರು, ಅಳಿವಿನಂಚಿನಲ್ಲಿರುವ ಭಾರತೀಯ ನಕ್ಷತ್ರ ಆಮೆಗಳ ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಗಿಳಿಗಳ ಜಪ್ತಿ ಮಾಡಲಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಕಾನೂನು ಪ್ರಕಾರ ರಕ್ಷಣೆಗೊಳಪಟ್ಟಿರುವ ತಳಿಗಳಾದ ಭಾರತೀಯ ಸ್ಟಾರ್ ಆಮೆಗಳು ಮತ್ತು ಗಿಳಿಗಳನ್ನು ಹೊಂದಿದ್ದ ಬೆಂಗಳೂರಿನ ಮೂವರು ವ್ಯಕ್ತಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಕೋರಮಂಗಲದ 3ನೇ ಬ್ಲಾಕ್ ನಲ್ಲಿರುವ ಬಿಲೆನಿಯರ್ ಸ್ಟ್ರೀಟ್ ನಲ್ಲಿರುವ ಒಂದು ಮನೆಯ ಮೇಲೆ ದಾಳಿ ನಡೆಸಲಾಗಿದೆ. ಈ ರಸ್ತೆಯಲ್ಲಿ ದೇಶದ ಪ್ರಮುಖ ಉದ್ಯಮಿಗಳು ವಾಸಿಸುತ್ತಿದ್ದಾರೆ.
ಈ ಮನೆಯಿಂದ 9 ಭಾರತೀಯ ಸ್ಟಾರ್ ಆಮೆಗಳು ಮತ್ತು ನಾಲ್ಕು ಗಿಳಿಗಳನ್ನು ರಕ್ಷಿಸಲಾಗಿದೆ. ಇತ್ತೀಚೆಗೆ 1972ರ ವನ್ಯಜೀವಿ ರಕ್ಷಣಾ ಕಾಯಿದೆಯ ಷೆಡ್ಯೂಲ್-1 ರ ಪ್ರಕಾರ ಗಂಭೀರ ಅಳಿವಿನಂಚಿನಲ್ಲಿರುವ ತಳಿಗಳಾದ ಭಾರತೀಯ ಸ್ಟಾರ್ ಆಮೆಗಳನ್ನು ಷೆಡ್ಯೂಲ್-1 ಕ್ಕೆ ಸೇರ್ಪಡೆ ಮಾಡಲಾಗಿದೆ. ಈ ತಳಿಗಳನ್ನು ಮನೆಯಲ್ಲಿಟ್ಟುಕೊಂಡಿದ್ದರೆ 7 ವರ್ಷಗಳ ಸೆರೆವಾಸ ಮತ್ತು ದಂಡವನ್ನು ವಿಧಿಸಲು ಅವಕಾಶವಿದೆ. -ಭಾರತೀಯ ಗಿಳಿಗಳನ್ನು ಅಳಿವಿನಂಚಿನಲ್ಲಿರುವ ತಳಿ ಎಂದು ಪರಿಗಣಿಸಿದ್ದು, ಷೆಡ್ಯೂಲ್-2ರಲ್ಲಿ ಸೇರ್ಪಡೆ ಮಾಡಲಾಗಿದೆ.
ಕೋರಮಂಗಲದ ಬಂಗಲೆಯ ವ್ಯವಸ್ಥಾಪಕ ಬಾಲಾಜಿ ಎಂಬಾತನನ್ನು ಬಂಧಿಸಲಾಗಿದ್ದು ಈ ಮನೆಯಿಂದ 3 ಭಾರತೀಯ ಸ್ಟಾರ್ ಆಮೆಗಳನ್ನು ರಕ್ಷಿಸಲಾಗಿದೆ. ಬಂಗಲೆಯ ಮಾಲೀಕ ರೂಹಿ ಓಂ ಪ್ರಕಾಶ್ ಎಂಬುವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇವರು ದೇಶದ ಪ್ರಮುಖ ಇ ಕಾಮರ್ಸ್ ಕಂಪನಿಯೊಂದರ ಸಹಭಾಗಿತ್ವ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಾಣಿಗಳನ್ನು ಮನೆಯಲ್ಲಿಟ್ಟುಕೊಂಡರೆ ಮನೆಯಲ್ಲಿರುವವರಿಗೆ ಅದೃಷ್ಟ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ ಎಂದು ಜ್ಯೋತಿಷಿಯೊಬ್ಬನ ಮಾತನ್ನು ನಂಬಿ ಇವರು ಆಮೆಗಳನ್ನು ಸಾಕಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪಂತರ ಪಾಳ್ಯದಲ್ಲಿ 6 ನಕ್ಷತ್ರ ಆಮೆಗಳ ವಶ, ಎಂಎಸ್ ಪಾಳ್ಯದಲ್ಲಿ 4 ಗಿಳಿಗಳ ವಶ
ಎರಡನೇ ಪ್ರಕರಣದಲ್ಲಿ ಸಿಐಡಿ ಪೊಲೀಸರು ಬೆಂಗಳೂರು ಪಶ್ಚಿಮ ಬಾಗದ ಪಂತರ ಪಾಳ್ಯದ ಸಾಕು ಪ್ರಾಣಿಗಳ ವ್ಯಾಪಾರಿ ಕಾರ್ತೀಕ್ ಎಂಬಾತನನ್ನು ಬಂಧಿಸಿ ಆತನಿಂದ 6 ಭಾರತೀಯ ಸ್ಟಾರ್ ಆಮೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂರನೇ ಪ್ರಕರಣದಲ್ಲಿ ಮತ್ತೊಬ್ಬ ಸಾಕು ಪ್ರಾಣಿಗಳ ವ್ಯಾಪಾರಿ ಎಂಎಸ್ ಪಾಳ್ಯದ ಚಿಕ್ಕಬೆಟ್ಟಹಳ್ಳಿಯ ಶ್ರೀನಿವಾಸ್ ಎಂಬಾತನನ್ನು ಬಂಧಿಸಿ ನಾಲ್ಕು ಭಾರತೀಯ ಗಿಳಿಗಳನ್ನು ಜಪ್ತಿ ಮಾಡಲಾಗಿದೆ.
ವನ್ಯಜೀವಿ ಕಾಯಿದೆ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಕುರಿತು ಅರಿವು ಮೂಡಿಸುತ್ತಿದ್ದರೂ ವನ್ಯಜೀವಿ ಕಾಯಿದೆಯ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಆಮೆಗಳನ್ನು ಎಲ್ಲಿಂದ ಮತ್ತು ಯಾರಿಂದ ತರಲಾಯಿತು ಎಂಬ ಬಗ್ಗೆ ತನಿಖೆ ನಡೆಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.