Bengaluru News: ಶೀಘ್ರವೇ ಕಂಪ್ಯೂಟರ್ ಆಧಾರಿತವಾಗಿ ಕೆಪಿಎಸ್‌ಸಿ ಪರೀಕ್ಷೆ; ಪರೀಕ್ಷಾ ವೆಚ್ಚ ತಗ್ಗಿಸಿ, ಕ್ಷಿಪ್ರ ಫಲಿತಾಂಶ ನೀಡುವ ಉದ್ದೇಶ
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ವು ಈ ವರ್ಷದಿಂದಲೇ ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಪದ್ಧತಿ ಜಾರಿಗೊಳಿಸಲು ಚಿಂತನೆ ನಡೆಸಿದೆ. ಪರೀಕ್ಷಾ ವೆಚ್ಚ ಕಡಿಮೆ ಮಾಡುವುದು, ಕ್ಷಿಪ್ರ ಫಲಿತಾಂಶ ನೀಡುವ ಉದ್ದೇಶದೊಂದಿಗೆ ಕೆಪಿಎಸ್‌ಸಿ ಈ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಪರೀಕ್ಷೆಯ ಮಾದರಿ ಶೀಘ್ರದಲ್ಲೇ ಬದಲಾಗಲಿದೆ. ಒಎಂಆರ್ ಶೀಟ್ ಬಳಸುವ ಪದ್ಧತಿ ಬಿಟ್ಟು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ನಡೆಸಲು ಸಿದ್ಧತೆ ನಡೆದಿದೆ.
ಇದೇ ಜೂನ್ - ಜುಲೈ ತಿಂಗಳುಗಳಲ್ಲಿ ವಿವಿಧ ಇಲಾಖಾ ಪರೀಕ್ಷೆಗಳನ್ನು ಕೆಪಿಎಸ್‌ಸಿ ನಡೆಸಲಿದೆ. ಈ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಾಗಿರಲಿವೆ ಎಂದು ಕೆಪಿಎಸ್‌ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಕನ್ನಡಪ್ರಭ ವರದಿ ಮಾಡಿದೆ.
ನೇಮಕ ಪ್ರಕ್ರಿಯೆಗಳನ್ನು ಕ್ಷಿಪ್ರವಾಗಿ ಪೂರ್ಣಗೊಳಿಸುವುದಕ್ಕೆ ಈ ಕ್ರಮ ನೆರವಾಗಲಿದೆ. ಇದೇ ಮೊದಲ ಸಲ ಕಂಪ್ಯೂಟರ್ ಆಧಾರಿತ ಪರೀಕ್ಷೆ'ಯನ್ನು (ಸಿಬಿಟಿ) ಅಳವಡಿಸಿಕೊ೦ಡು ‘ಕಾಗದರಹಿತ ಪರೀಕ್ಷೆ' ನಡೆಸಲು ಬೇಕಾದ ಸಿದ್ದತೆಗಳನ್ನು ಕೆಪಿಎಸ್‌ಸಿ ಮಾಡಿದೆ ಎಂದು ವರದಿ ಹೇಳಿದೆ.
ಇದರ ನಂತರ ನಡೆಯುವ ಎಲ್ಲ ಪರೀಕ್ಷೆಗಳು ಕೂಡ ಕಾಗದ ರಹಿತವಾಗಿರಲಿದ್ದು, ಕಂಪ್ಯೂಟರ್ ಆಧಾರಿತವಾಗಿಯೇ ನಡೆಯಲಿದೆ. ಈಗ ಚಾಲ್ತಿಯಲ್ಲಿರುವ ಪರೀಕ್ಷಾ ಪದ್ಧತಿಯಲ್ಲ ಒಎಂಆರ್ ಶೀಟ್‌ಗಳ ಬಳಕೆ ಇದೆ. ಇದರ ಮುದ್ರಣ, ಸಾಗಣೆ, ದಾಸ್ತಾನು ಮತ್ತು ಪರೀಕ್ಷೆ ಬಳಿಕ ಅವುಗಳ ಸ್ಕ್ಯಾನಿಂಗ್ ಸೇರಿ ಹೆಚ್ಚು ಕೆಲಸ ಹಿಡಿಯುವ ಕಾರಣ, ಕಂಪ್ಯೂಟರ್ ಆಧಾರಿತ ಪರೀಕ್ಷೆ ಹೆಚ್ಚು ಪರಿಣಾಮಕಾರಿ ಎಂಬುದನ್ನು ಕೆಪಿಎಸ್‌ಸಿ ಮನಗಂಡಿದೆ ಎಂದು ವರದಿ ವಿವರಿಸಿದೆ.
ಪರೀಕ್ಷಾ ಪದ್ಧತಿಯಲ್ಲಿ ಸಿಬಿಟಿ ಅಳವಡಿಸುವುದರಿಂದ ಮಾನವ ಸಂಪನ್ಮೂಲದ ಬಳಕೆ, ವೆಚ್ಚ, ಸಮಯ ಮತ್ತು ಕಾಗದ ಬಳಕೆಯಲ್ಲಿ ಉಳಿತಾಯವಾಗಲಿದೆ. ಎಲ್ಲದಕ್ಕೂ ಮಿಗಲಾಗಿ ಬೇಗ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸುವುದು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾಗಿ ವರದಿ ಹೇಳಿದೆ.
ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಅಳವಡಿಕೆಯಾಗುವ ಸಿಬಿಟಿ ಏನಿದು
ಕಂಪ್ಯೂಟರ್ ಆಧಾರಿತ ಪರೀಕ್ಷೆ (ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಎಂಬುದರ ಸಂಕ್ಷಿಪ್ತ ರೂಪ ಸಿಬಿಟಿ) ಎಂಬುದು ಈ ಮೂರು ಪದಗಳಲ್ಲೇ ಇರುವಂತೆ ಕಂಪ್ಯೂಟರ್ ಬಳಸಿ ನಡೆಸುವಂತಹ ಪರೀಕ್ಷೆ. ಇಲ್ಲಿ ಪೇಪರ್ ಬಳಕೆ ಇರುವುದಿಲ್ಲ. ಬಹುಆಯ್ಕೆಯ ಉತ್ತರಗಳ ಪೈಕಿ ಸರಿ ಉತ್ತರ ಆಯ್ಕೆ ಮಾಡುವ ಕ್ರಮ ಇರುತ್ತದೆ. ಪ್ರಶ್ನೆ ಪತ್ರಿಕೆಯನ್ನು ಕೆಪಿಎಸ್‌ಸಿ ತಯಾರಿಸುತ್ತದೆ. ಪರಿಣತ ಏಜೆನ್ಸಿಗಳ ನೆರವು ಪಡೆದುಕೊಂಡು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಪರೀಕ್ಷೆಗೆ ಮೊದಲು ಅಭ್ಯರ್ಥಿಗಳಿಗೆ ಅಣಕು ಪರೀಕ್ಷೆ ಎದುರಿಸುವುದಕ್ಕೆ ಅವಕಾಶ ನೀಡಲಾಗುತ್ತದೆ. ಪರೀಕ್ಷೆ ಹೇಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕ್ರಮ ನೆರವಾಗುತ್ತದೆ.
ಈಗಾಗಲೇ ಈ ಪದ್ಧತಿಯನ್ನು ಅಳವಡಿಸಿಕೊಂಡು ಸ್ಟಾಫ್ ಸೆಲೆಕ್ಷನ್ ಕಮಿಷನ್, ಬ್ಯಾಂಕಿಂಗ್ ನೇಮಕ, ಸ್ಪರ್ಧಾತ್ಮಕ ಪರೀಕ್ಷೆ, ಪ್ರವೇಶ ಪರೀಕ್ಷೆಗಳು ನಡೆಯುತ್ತಿವೆ. ದೇಶದ ಅನೇಕ ಸಂಸ್ಥೆಗಳು ಕೂಡ ಸಿಬಿಟಿ ನಡೆಸುತ್ತಿವೆ. ಕೆಪಿಎಸ್‌ಸಿ ಈ ಪ್ರಯತ್ನಕ್ಕೆ ಈಗ ಕೈ ಹಾಕಿದೆ ಎಂದು ವರದಿ ವಿವರ ನೀಡಿದೆ.