ಬೆಂಗಳೂರಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ, ಇಂದು, ನಾಳೆ ಈ ರಸ್ತೆಗಳಲ್ಲಿ ಸಂಚಾರ ದಟ್ಟಣೆ, ಸಂಚಾರ ಸಲಹೆ ಗಮನಿಸಿ
Bengaluru Traffic Advisory; ಬೆಂಗಳೂರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಸಡಗರ. ಇಸ್ಕಾನ್ ಸೇರಿ ಪ್ರಮುಖ ಕೃಷ್ಣ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುವ ಕಾರಣ ಆ ಭಾಗದ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ಸಂಚಾರ ಪೊಲೀಸರು ಈ ಕುರಿತು ಸಂಚಾರ ಸಲಹೆ ನೀಡಿದ್ದು, ಗಮನಹರಿಸುವುದು ಒಳಿತು.
ಬೆಂಗಳೂರು: ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ಮತ್ತು ಮಂಗಳವಾರಕ್ಕೆ ಸಂಬಂಧಿಸಿ ಬೆಂಗಳೂರು ನಗರ ಸಂಚಾರ ಪೊಲೀಸರು ಹೊಸ ಸಂಚಾರ ಸಲಹೆಯನ್ನು ಪ್ರಕಟಿಸಿದ್ದಾರೆ. ವಾಹನ ಸಂಚಾರ ವ್ಯತ್ಯಯವಾಗುವ ಪ್ರಮುಖ ರಸ್ತರೆಗಳ ವಿವರವನ್ನು ಒದಗಿಸಿದ್ದು, ಪ್ರಯಾಣಿಕರು ಅದರ ಬದಲಿಗೆ ತೆಗೆದುಕೊಳ್ಳಬಹುದಾದ ಪರ್ಯಾಯ ಮಾರ್ಗಗಳನ್ನು ಪಟ್ಟಿ ಮಾಡಿ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಈಗಾಗಲೇ ಕುಪ್ರಸಿದ್ಧಿಗೆ ಒಳಗಾಗಿರುವ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಕೃಷ್ಣ ಜನ್ಮಾಷ್ಟಮಿ ಆಚರಣೆಯ ಮಧ್ಯೆ ಸುಗಮ ವಾಹನ ಸಂಚಾರವನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಬೆಂಗಳೂರು ಸಂಚಾರ ಪೊಲೀಸರ ಈ ಮಾರ್ಗಸೂಚಿ ಮುಖ್ಯವೆನಿಸಿದೆ.
ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸೋಪ್ ಫ್ಯಾಕ್ಟರಿ ಜಂಕ್ಷನ್‌ನಿಂದ ಮಹಾಲಕ್ಷಿ ಮೆಟ್ರೋ ನಿಲ್ದಾಣದವರೆಗೆ ಪಿಕ್ ಅಪ್ ಮತ್ತು ಡ್ರಾಪ್ ಮಾಡುವುದನ್ನು ಸಂಚಾರ ಪೊಲೀಸರು ನಿರ್ಬಂಧಿಸಿದ್ದಾರೆ. ಇಸ್ಕಾನ್ ದೇವಸ್ಥಾನಕ್ಕೆ ಸಾರ್ವಜನಿಕರನ್ನು ಕರೆತರುವ ಆಟೋ ಕ್ಯಾಬ್ ಚಾಲಕರು ಮತ್ತು ಸಾರ್ವಜನಿಕರು ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದಿಂದ ಸೋಪ್ ಫ್ಯಾಕ್ಟರಿ ಕಡೆಗೆ ಹೋಗುವ ರಸ್ತೆಯಲ್ಲಿ ಪಿಕ್ ಅಪ್ ಡ್ರಾಪ್ ಮಾಡಬಹುದಾಗಿದೆ.
ಆಗಸ್ಟ್ 26ರ ಬೆಳಗ್ಗೆ 8 ಗಂಟೆಯಿಂದ ಆಗಸ್ಟ್ 27ರ ಬೆಳಗ್ಗೆ 6 ಗಂಟೆ ತನಕದ ಸಂಚಾರ ಸಲಹೆ
ಬೆಂಗಳೂರು ಸಂಚಾರ ಪೊಲೀಸರು ಪ್ರಕಟಿಸಿದ ಮಾರ್ಗಸೂಚಿ ಪ್ರಕಾರ, ವಾಹನ ಸಂಚಾರ ವ್ಯತ್ಯಯವು ಸೋಮವಾರ (ಆಗಸ್ಟ್ 26) ಬೆಳಿಗ್ಗೆ 08.00 ರಿಂದ ಮಂಗಳವಾರ (ಆಗಸ್ಟ್ 27) ಬೆಳಿಗ್ಗೆ 6.00 ರವರೆಗೆ ಜಾರಿಯಲ್ಲಿರುತ್ತವೆ ಎಂದು ಬೆಂಗಳೂರು ನಗರದ ಪೂರ್ವ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಐಪಿಎಸ್ ಅಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
ನಗರದಲ್ಲಿ 26ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಪ್ರಯುಕ್ತ ಸಂಚಾರ ನಿರ್ಬಂಧ, ಪರ್ಯಾಯ ರಸ್ತೆಗಳ ವಿವರ, ವಾಹನ ನಿಲುಗಡೆ ಮತ್ತು ನಿಲುಗಡೆ ನಿಷೇಧ ಸಂಬಂಧ ಸಂಚಾರ ಪೊಲೀಸರು ಮಾರ್ಗಸೂಚಿ ಬಿಡುಗಡೆಗೊಳಿಸಿದ್ದಾರೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಪ್ರಸಿದ್ಧ ಇಸ್ಕಾನ್ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ. ಹೀಗಾಗಿ ಮಾರ್ಗಗಳಲ್ಲಿ ಭಾರಿ ಸಂಚಾರ ದಟ್ಟಣೆ ಸಾಧ್ಯತೆ ಇದೆ. ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಸ್ಕಾನ್ ದೇಗುಲದಲ್ಲಿ ಆ.25 ಹಾಗೂ 26ರಂದು ಲಕ್ಷಾಂತರ ಭಕ್ತಾದಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳು ದೇವರ ದರ್ಶನಕ್ಕೆ ಬರುವ ನಿರೀಕ್ಷೆ ಇದೆ. ಹೀಗಾಗಿ ದೇವಾಲಯದ ಸುತ್ತಮುತ್ತಲಿನ ರಸ್ತೆಗಳಲ್ಲಿ ಹೆಚ್ಚಿನ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಸಂಚಾರ ಪೊಲೀಸ್ ವಿಭಾಗ ಸ್ಪಷ್ಟಪಡಿಸಿದೆ.
ಕೆಆರ್ ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಚಾರ ಸಲಹೆ
ಕೆಆರ್ ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರ ಮುಖ್ಯರಸ್ತೆ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಉತ್ಸವದ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಈ ಕೆಳಗಿನ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
– ಕೊಡಿಗೇಹಳ್ಳಿ ಮತ್ತು ಹೂಡಿ ಮುಖ್ಯರಸ್ತೆಯಿಂದ ದೇವಸಂದ್ರ ಮತ್ತು ಕೆಆರ್ ಪುರ ಮಾರುಕಟ್ಟೆ ಕಡೆಗೆ ಹೋಗುವ ವಾಹನಗಳು ಜೈ ಭುವನೇಶ್ವರಿ ಜಂಕ್ಷನ್‌ನಲ್ಲಿರುವ ಲುಲುಸ್ ಬೇಕರಿ ಬಳಿ ಬಲ ತಿರುವು ಪಡೆದು ಅಯ್ಯಪ್ಪನಗರ ಮುಖ್ಯರಸ್ತೆ-ಬಸವನಪುರ ಮುಖ್ಯರಸ್ತೆ-ಭಟ್ಟರಹಳ್ಳಿ ಜಂಕ್ಷನ್ ಮೂಲಕ ಕೆಆರ್ ಪುರ ಮಾರುಕಟ್ಟೆ ಕಡೆಗೆ ಸಾಗಬೇಕು.
ಕೆಆರ್ ಪುರ ಮಾರುಕಟ್ಟೆ ಕಡೆಯಿಂದ ಕೊಡಿಗೇಹಳ್ಳಿ ಮತ್ತು ಹೂಡಿ ಮುಖ್ಯರಸ್ತೆ ಕಡೆಗೆ ಸಾಗುವ ವಾಹನಗಳು ಜಿಆರ್‌ಟಿ ಬಳಿ ಬಲ ತಿರುವು ಪಡೆದು ಬಸವನಪುರ ಮುಖ್ಯರಸ್ತೆ (ಕೃಷ್ಣಾ ಟಾಕೀಸ್ ರಸ್ತೆ) ಮೂಲಕ ಭಟ್ಟರಹಳ್ಳಿ ಜಂಕ್ಷನ್ ಮೂಲಕ ಸಾಗಬೇಕು.
ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸೋಪ್ ಫ್ಯಾಕ್ಟರಿ ಜಂಕ್ಷನ್‌ನಿಂದ ವಿಜಯನಗರ, ನಂದಿನಿಲೇಔಟ್, ಮಹಾಲಕ್ಷ್ಮಿ ಲೇಔಟ್ ಕಡೆ ಹೋಗುವಂತಹ ವಾಹನಗಳು ಸೋಪ್ ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಮುಂದುವರೆದು, 10ನೇ ಕಾಸ್‌ನಲ್ಲಿ ಅಥವಾ ಕೇತಮಾರನಹಳ್ಳಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು, 1ನೇ ಬ್ಲಾಕ್ ರಾಜಾಜಿನಗರ ಸಿಗ್ನಲ್‌ನಲ್ಲಿ ಕಾರ್ಡ್ ರಸ್ತೆಗೆ ಸೇರುವುದು.
ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಸಂದೇಶ ಪ್ರಕಟಿಸುವ ಮೂಲಕವೂ ಸಂಚಾರ ಪೊಲೀಸರು ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದ್ದಾರೆ.