Viral Video; ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತನಿಗೆ ಹೃದಯಾಘಾತ, ಕುಸಿದು ಬಿದ್ದು ನಿಧನ
Viral News; ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತ ಸಿಕೆ ರವಿಚಂದ್ರನ್ ಅವರಿಗೆ ಹಠಾತ್ ಹೃದಯಾಘಾತವಾಗಿದ್ದು, ಕುಳಿತಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಇದರ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಆದೇಶ ನೀಡಿರುವುದನ್ನು ವಿರೋಧಿಸಿ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತ ಸಿ.ಕೆ. ರವಿಚಂದ್ರನ್ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಕುಸಿದ್ದು ಬಿದ್ದು ನಿಧನರಾದರು.
ಸೋಮವಾರ (ಆಗಸ್ಟ್ 19) ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಈ ಘಟನೆ ನಡೆದಿದ್ದು, ಕುಸಿದು ಬಿದ್ದ ಸಿ.ಕೆ. ರವಿಚಂದ್ರನ್ ಅವರನ್ನು ಕೂಡಲೇ ಸಮೀಪದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಗೆ ಕಳುಹಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಈ ದುರಂತದ ವಿಡಿಯೋ ವೈರಲ್ ಆಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಸಂಘ ಸುದ್ದಿಗೋಷ್ಠಿ ಏರ್ಪಡಿಸಿತ್ತು.
ಕಾಂಗ್ರೆಸ್ ಕಾರ್ಯಕರ್ತನಿಗೆ ಹೃದಯಾಘಾತವಾದ ಕ್ಷಣದ ವೈರಲ್ ವಿಡಿಯೋ ಇಲ್ಲಿದೆ
ಲಭ್ಯ ವಿಡಿಯೋವನ್ನು ಗಮನಿಸಿದರೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಸಂಘ ಸುದ್ದಿಗೋಷ್ಠಿ ಶುರುವಾಗುತ್ತಿದ್ದಂತೆ ಪ್ರಾಸ್ತಾವಿಕವಾಗಿ ಮಾತು ಆರಂಭಿಸಿದವರು ಸಿಕೆ ರವಿಚಂದ್ರನ್. ಒಬ್ಬೊಬ್ಬರನ್ನೇ ಪರಿಚಯ ಮಾಡಿಕೊಡುತ್ತ ಬಳಿಕ ಸುದ್ಧಿಗೋಷ್ಠಿಯ ಪೀಠಿಕೆ ಶುರುಮಾಡಿದ್ದರು.
ಆಗ ಇದ್ದಕ್ಕಿದ್ದಂತೆ ಅವರ ಕಾಲಮೇಲಿದ್ದ ಮೊಬೈಲ್ ಕೆಳಗೆ ಬಿತ್ತು. ಮುಖದಲ್ಲಿ ನೋವು ಕಾಣಿಸಿಕೊಂಡಿತು. ಬಿದ್ದ ಮೊಬೈಲ್ ಮೇಲೆತ್ತಲು ಬಗ್ಗಿದವರು ಹಾಗೆಯೇ ನೆಲಕ್ಕೆ ಕುಸಿದು ಬಿದ್ದರು. ಕೂಡಲೇ ಅಲ್ಲಿದ್ದವರು ಅವರನ್ನು ಮೇಲೆತ್ತಲು ಪ್ರಯತ್ನಿಸಿದ್ದು ಕಾಣಿಸಿತು.
ಯಾವುದಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿ
ಟಿಜೆ ಅಬ್ರಾಹಂ, ಸ್ನೇಹಮಯಿ ಕೃಷ್ಣ, ಪ್ರದೀಪ್ ಕುಮಾರ್ ಕೊಟ್ಟ ಮನವಿ ಪತ್ರಗಳ ಆಧಾರದ ಮೇಲೆ ರಾಜ್ಯಪಾಲರು ಜುಲೈ 26ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ಕೊಟ್ಟಿದ್ದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಸಂಘ ಸುದ್ದಿಗೋಷ್ಠಿ ಏರ್ಪಡಿಸಿತ್ತು.
ರಾಜ್ಯಪಾಲರು ತನಿಖಾ ವರದಿ ಆಧರಿಸಿ ಮುಖ್ಯಮಂತ್ರಿಗೆ ನೋಟಿಸ್ ನೀಡಬಹುದು. ಆದರೆ ಈ ಪ್ರಕರಣದಲ್ಲಿ ರಾಜ್ಯಪಾಲರು ಕಾನೂನು ಚೌಕಟ್ಟು ಮೀರಿ ಮುಖ್ಯಮಂತ್ರಿಯವರಿಗೆ ನೋಟಿಸ್ ನೀಡಿದ್ದಾರೆ.
ಒಬ್ಬ ಹಿಂದುಳಿದ ನಾಯಕ 5 ವರ್ಷಗಳು ಪೂರ್ಣಗೊಳಿಸಿ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರವುದನ್ನು ಸಹಿಸಲಾರದೆ ಮಾಡಿರುವ ಪಿತೂರಿ ಇದು. ಕರ್ನಾಟಕದ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಜನಾರ್ಧನ್ ರೆಡ್ಡಿ ಅವರು ವಿರುದ್ಧ ವಿಚಾರಣೆಗೆ ಅನುಮಿತ ನೀಡಿದ ರಾಜ್ಯಪಾಲರು ಈಗೇಕೆ ತರಾತುರಿಯ ಕ್ರಮ ಕೈಗೊಂಡರು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಸಂಘ ತನ್ನ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದೆ.
ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರನ್ನು ತೆಗೆದರೆ ಸರಕಾರ ಬೀಳಸಬಹುದು. ಮತ್ತು ರಾಜ್ಯದಲ್ಲಿ 136 ಕ್ಷೇತ್ರಗಳಲ್ಲಿ ಗೆದ್ದಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಪತನ ಮಾಡಬಹುದು. ಇದು ಹುನ್ನಾರವೇ ಹೊರತು, ನಿಜವಾದ ಹಗರಣವಲ್ಲ. ಮುಖ್ಯಮಂತ್ರಿಯವರು ಇದರಲ್ಲಿ ನೇರವಾಗಿ ಭಾಗಿಯಾಗಿಲ್ಲ. ಮುಡಾ ಅಕ್ರಮದಲ್ಲಿ ಅವರ ಪಾತ್ರವಿಲ್ಲ. ಅವರ ಧರ್ಮಪತ್ನಿ ಪಾರ್ವತಿ ಅವರಿಗೆ ಸೇರಿದ 3.27 ಎಕರೆ ಜಮೀನು ಪಡೆದು ಸೈಟ್‌ಗಳನ್ನಾಗಿ ಮಾಡಿ ಹಂಚಲಾಗಿದೆ. ಪ್ರತಿಫಲವಾಗಿ ಕೆಲವು ಸೈಟ್‌ಗಳನ್ನು ಅವರಿಗೆ ನೀಡಲಾಗಿದೆ ಎಂದು ಸಂಘ ತನ್ನ ಪತ್ರಿಕಾ ಹೇಳಿಕೆಯಲ್ಲಿ ಸಿದ್ದರಾಮಯ್ಯ ಪರ ತನ್ನ ನಿಲುವು ಪ್ರದರ್ಶಿಸಿದೆ.