ಬೆಂಗಳೂರು ಮೆಜೆಸ್ಟಿಕ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ 85 ವರ್ಷದ ವ್ಯಕ್ತಿ ಸಾವು; ಸಾರ್ವಜನಿಕರ ಆಕ್ರೋಶ
ಬೆಂಗಳೂರು ಮೆಜೆಸ್ಟಿಕ್‌ನಲ್ಲಿರುವ ಕೆಂಪೇಗೌಡ ಬಸ್‌ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ 85 ವರ್ಷದ ವ್ಯಕ್ತಿ ಸಾವು ಸಂಭವಿಸಿದೆ. ಈ ಅಪಘಾತದ ಬಳಿಕ ಚಾಲಕರ ನಿರ್ಲಕ್ಷ್ಯದ ಚಾಲನೆ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಮೆಜೆಸ್ಟಿಕ್‌ನಲ್ಲಿರುವ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಗುದ್ದಿದ ಪರಿಣಾಮ ಪ್ರಯಾಣಿಕ ಗಂಗಾರೆಡ್ಡಿ ಎಂಬುವರು ಮೃತಪಟ್ಟಿದ್ದಾರೆ. ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗಂಗಾರೆಡ್ಡಿ ಅವರು, ಬೆಂಗಳೂರಿನ ಬಸವೇಶ್ವರನಗರದಲ್ಲಿ ವಾಸವಿದ್ದರು. ತಮ್ಮ ಊರಿಗೆ ಹೋಗಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಆಗ ಈ ದುರಂತ ಸಂಭವಿಸಿದೆ ಎಂದು ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ.
ಬಸ್ ಚಾಲಕ ರಾಘವೇಂದ್ರ ಅವರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈಗಾಗಲೇ ಚಾಲಕನನ್ನು ಬಂಧಿಸಲಾಗಿದ್ದು, ಬಸ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಹೇಗಾಯಿತು ಅಪಘಾತ
ಗಂಗಾರೆಡ್ಡಿಯವರು ಕೈನಲ್ಲಿ ಚೀಲವೊಂದನ್ನು ಹಿಡಿದುಕೊಂಡು ಬಸ್ ನಿಲ್ದಾಣದ ಸರ್ವೀಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅದೇ ರಸ್ತೆಯಲ್ಲಿ ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ಡಿಪೊಗೆ ಸೇರಿದ್ದ ಕೆಎ 18 ಎಫ್ 0948 ನಂಬರ್ ನ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿತ್ತು. ಆದರೆ ಚಾಲಕ ಸರ್ವೀಸ್ ರಸ್ತೆಯಿಂದ ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ತೆರಳಲು ಅತಿಯಾದ ವೇಗದಿಂದ ಬಸ್ ಚಲಾಯಿಸುತ್ತಿದ್ದ. ನಿಯಂತ್ರಣ ಕಳೆದುಕೊಂಡ ಚಾಲಕನು ಗಂಗಾರೆಡ್ಡಿ ಅವರಿಗೆ ಗುದ್ದಿದ್ದಾನೆ.ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಚಾಲಕರ ನಿರ್ಲಕ್ಷ್ಯಕ್ಕೆ ಪಾದಚಾರಿಗಳು ಜೀವ ತೆತ್ತಿದ್ದಾರೆ.
ಮೆಜೆಸ್ಟಿಕ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನಿಲ್ದಾಣಗಳಲ್ಲಿ ಸಂಚರಿಸಲು ಪ್ರಯಾಣಿಕರು ಭಯಪಡುವ ಪರಿಸ್ಥಿತಿ ಇದೆ. ಹಲವು ಚಾಲಕರು ಅತೀ ವೇಗದಲ್ಲಿ ನಿರ್ಲಕ್ಷ್ಯದಿಂದ ಬಸ್ ಚಲಾಯಿಸುತ್ತಿದ್ದು ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲವೆಂಬ ಆರೋಪವಿದೆ.
ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಆಗಮಿಸುತ್ತಾರೆ. ಇಷ್ಟೊಂದು ಪ್ರಮಾಣದಲ್ಲಿ ಸಾರ್ವಜನಿಕರು ಓಡಾಟ ನಡೆಸುತ್ತಿದ್ದರೂ ಸರ್ಕಾರಿ ಯಮಸ್ವರೂಪಿ ಬಸ್ ಚಾಲಕರು ಅತಿಯಾದ ವೇಗದಲ್ಲಿ ಬಸ್ ಚಾಲನೆ ಮಾಡುತ್ತಾರೆ. ಒಮ್ಮೊಮ್ಮೆ ಪ್ರಯಾಣಿಕರು ಇಲ್ಲಿ ಓಡಾಡುವಾಗ ಕೈ ಯಲ್ಲಿ ಜೀವ ಹಿಡಿದುಕೊಂಡು ಓಡಾಡಿದ ಅನುಭವವಾಗುತ್ತದೆ ಎಂದು ಹೇಳುತ್ತಾರೆ. ಅದರಲ್ಲೂ ವೃದ್ಧರು, ಹೆಂಗಸರು ಮಕ್ಕಳು ಭಯಭೀತರಾಗಿಯೇ ರಸ್ತೆ ದಾಟಬೇಕಾಗುತ್ತದೆ.
ಮೆಜೆಸ್ಟಿಕ್‌ನಲ್ಲಿ ಈ ಹಿಂದೆ ಸಂಭವಿಸಿದ್ದ ಅಪಘಾತಗಳು
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಂಭವಿಸಿದ್ದ ಕೆಲವು ಅಪಘಾತಗಳ ವಿವರ ಇಲ್ಲಿದೆ. 2021 ಜುಲೈ 29 ರಂದು ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಎರಡು ಬಸ್‌ಗಳ ನಡುವೆ ಅಪಘಾತ ಸಂಭವಿಸಿ 45 ವರ್ಷದ ಚಾಲಕ ನಿಂಗಪ್ಪ ಮೃತಪಟ್ಟಿದ್ದರು.
ಇದೇ ವರ್ಷದ ಜುಲೈ 25 ರಂದು ಬಿಎಂಟಿಸಿ ಬಸ್ ಗುದ್ದಿ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಅಸುನೀಗಿದ್ದರು. 2023 ಡಿಸೆಂಬರ್ 25 ರಂದು ನಿಲ್ದಾಣದಲ್ಲಿ ಮತ್ತೆ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಗುದ್ದಿ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದರು.
(ವರದಿ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
