Rameshwaram Cafe Blast: ರಾಮೇಶ್ವರಂ ಕೆಫೆ ಭೀಕರ ಬಾಂಬ್ ಸ್ಫೋಟದ ಸಿಸಿಟಿವಿ ದೃಶ್ಯಬಹಿರಂಗ; ಇಲ್ಲಿದೆ ವಿಡಿಯೋ
ಬೆಂಗಳೂರು ಕುಂದಲಹಳ್ಳಿ ಸಮೀಪದ ಬ್ರೂಕ್‌ಫೀಲ್ಡ್ ರಾಮೇಶ್ವರಂ ಕೆಫೆಯಲ್ಲಿ ಇಂದು (ಮಾ.1) ಮಧ್ಯಾಹ್ನ ಸಂಭವಿಸಿದ ಭೀಕರ ಬಾಂಬ್ ಸ್ಫೋಟದ ಸಿಸಿಟಿವಿ ದೃಶ್ಯ ಬಹಿರಂಗವಾಗಿದೆ. ಆರಂಭದಲ್ಲಿ ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟವಾಗಿರಬಹುದು ಎಂದು ಶಂಕಿಸಲಾಗಿತ್ತು. ಇದು ಬಾಂಬ್ ಸ್ಫೋಟ ಎಂಬುದನ್ನು ಡಿಜಿಪಿ ಅಲೋಕ್ ಮೋಹನ್ ಖಚಿತಪಡಿಸಿದರು. ಅದರ ಸಿಸಿಟಿವಿ ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರು: ಕುಂದಲಹಳ್ಳಿ ಬ್ರೂಕ್‌ಫೀಲ್ಡ್ ದಿ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾ.1) ಮಧ್ಯಾಹ್ನ ಸಂಭವಿಸಿದ ಭೀಕರ ಬಾಂಬ್ ಸ್ಫೋಟದ ಸಿಸಿಟಿವಿ ದೃಶ್ಯ ಬಹಿರಂಗವಾಗಿದೆ. ಸ್ವಲ್ಪ ಹೊತ್ತು ಮೊದಲು ಸ್ಫೋಟ ಸಂಭವಿಸಿದ ನಂತರ ಹೊರಗೆ ಇದ್ದವರು ಚಿತ್ರೀಕರಿಸಿದ್ದ ವಿಡಿಯೋ ಬಹಿರಂಗವಾಗಿತ್ತು.
ಎಫ್‌ಎಸ್‌ಎಲ್ ತಂಡ ಮತ್ತು ಪೊಲೀಸರ ತಂಡ ಸ್ಥಳಪರಿಶೀಲನೆ ಮಾಡಿದ್ದು, ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಇದರ ವಿಶ್ಲೇಷಣೆ ಮಾಡಿದ ಬಳಿಕ ಸಿಲಿಂಡರ್ ಸ್ಫೋಟ ಅಥವಾ ಬಾಯ್ಲರ್ ಸ್ಫೋಟದ ಸಾಧ್ಯತೆ ಅಲ್ಲಗಳೆಯಲಾಗಿದೆ. ಇದು ಬಾಂಬ್ ಸ್ಪೋಟ ಎಂಬುದು ಖಚಿತವಾಗಿದೆ ಎಂದು ಡಿಜಿಪಿ ಅಲೋಕ್ ಮೋಹನ್ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡುತ್ತ ತಿಳಿಸಿದ್ದರು.
ಬಹಿರಂಗವಾಗಿರುವ ಸಿಸಿಟಿವಿ ದೃಶ್ಯ 1 ನಿಮಿಷ 2 ಸೆಕೆಂಡ್ ಇದ್ದು, ಸ್ಫೋಟದ ತೀವ್ರತೆಯನ್ನು ಸೆರೆಹಿಡಿದಿದೆ. ಚಂದ್ರು ಅನಿರುದ್ಧ್ ಎಂಬುವವರು ಈ ವಿಡಿಯೋ ತುಣಕನ್ನು ಎಕ್ಸ್‌ನಲ್ಲಿ ಶೇರ್ ಮಾಡಿದ್ದಾರೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಸಿಸಿಟಿವಿ ದೃಶ್ಯ
ರಾಮೇಶ್ವರಂ ಕೆಫೆಯ ಸಿಸಿಟಿವಿ ದೃಶ್ಯಗಳು ಬಹಿರಂಗವಾಗಿದೆ. ಇದರ ತುಣಕನ್ನು ಚಂದ್ರು ಅನಿರುದ್ಧ ಸಂಜೆ 6.13ಕ್ಕೆ ಎಕ್ಸ್‌ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ, ಕ್ಯಾಮೆರಾ 9 ಎಂಬ ಬರೆಹ ಕಾಣುತ್ತಿದೆ. ಇದು ಕೈ ತೊಳೆಯುವ ಸಿಂಕ್ ಇಟ್ಟ ಜಾಗದಲ್ಲಿದೆ.
ವಿಡಿಯೋದಲ್ಲಿರುವ ದೃಶ್ಯಗಳನ್ನು ಗಮನಿಸುವಾಗ, ಕೇಸರಿ ಮತ್ತು ಹಳದಿ ಬಣ್ಣದ ಟೀಶರ್ಟ್ ಧರಿಸಿದ ವ್ಯಕ್ತಿಗಳು ಅವರ ಜೊತೆಗೆ ಪಕ್ಕದ ಕಂಬದ ಮರೆಗೆ ಕೆಲವು ಯುವತಿಯರು ಕುಳಿತು ಆಹಾರ ಸೇವಿಸುತ್ತಿದ್ದಾರೆ. ಹೋಟೆಲ್ ಸಿಬ್ಬಂದಿ ಏನೋ ಕೆಲಸದಲ್ಲಿರುವುದು ಕಾಣುತ್ತದೆ. ಯುವತಿಯೊಬ್ಬರು ಅಲ್ಲಿಂದ ನಿರ್ಗಮಿಸುತ್ತಿರುವುದು ಹಾಗೂ ಮತ್ತೊಬ್ಬ ಸಿಬ್ಬಂದಿ ಬಾಸ್ಕೆಟ್‌ನಲ್ಲಿ ಏನೋ ತಂದು ಅಲ್ಲಿಡುತ್ತಲೇ ಪೂರ್ತಿ ಹೊಗೆ ಆವರಿಸಿಬಿಡುತ್ತದೆ. ಅದು ಸ್ಫೋಟ ನಡೆದ ಸಂದರ್ಭ.
ಇದಾದ ಕೂಡಲೇ ಅಲ್ಲಿ ಎಲ್ಲಾ ಚೆಲ್ಲಾ ಪಿಲ್ಲಿಯಾಗಿರುವುದು ಕಾಣುತ್ತದೆ. ಅದರ ಬೆನ್ನಿಗೆ ಮತ್ತೊಂದು ಸ್ಫೋಟ ಸಂಭವಿಸುತ್ತದೆ. ಆಗ ಬೆಂಕಿ ಮೇಲೇಳುತ್ತದೆ. ನಾಲ್ಕಾರು ಜನ ಎತ್ತಿ ಎಸೆದಂತೆ ಅತ್ತಿತ್ತ ಬಿದ್ದರು. ಮಹಿಳೆಯೊಬ್ಬರು ಕಂಬದ ಬುಡದಲ್ಲಿ ಬಿದ್ದು ನರಳಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಬ್ಯಾಗ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ರಾಮೇಶ್ವರಂ ಕೆಫೆ ಎಂಡಿ ದಿವ್ಯಾ ರಾಘವೇಂದ್ರ ರಾವ್
ಸ್ಫೋಟ ಸಂಭವಿಸಿದ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದ ದಿ ರಾಮೇಶ್ವರಂ ಕೆಫೆ ಎಂಡಿ ದಿವ್ಯಾ ರಾಘವೇಂದ್ರ ರಾವ್ ಅವರು, ಹೋಟೆಲ್‌ನಲ್ಲಿರುವ ವಸ್ತುಗಳಿಂದ ಸ್ಫೋಟ ಸಂಭವಿಸಿಲ್ಲ. ಸಿಲಿಂಡರ್, ಬಾಯ್ಲರ್ ಎಲ್ಲವೂ ಸುರಕ್ಷಿತವಾಗಿದ್ದವು. ಸ್ಫೋಟ ಸಂಭವಿಸಿದ ಸ್ಥಳದಿಂದ ಬ್ಯಾಗ್, ಐಡಿ ಕಾರ್ಡ್ ಮತ್ತು ಬ್ಯಾಟರಿ ಸಿಕ್ಕಿದೆ. ಎಲ್ಲವೂ ಸುಟ್ಟ ಸ್ಥಿತಿಯಲ್ಲಿದೆ. ಕ್ಯಾಶ್ ಕೌಂಟರ್ ಹತ್ತಿರ ಒಂದು ಬ್ಯಾಗ್ ಇತ್ತು ಎಂದು ಅನುಮಾನ ವ್ಯಕ್ತಪಡಿಸುತ್ತ ಹೇಳಿದ್ದರು.
ಈ ರೀತಿ ಅನುಮಾನಾಸ್ಪದ ಬ್ಯಾಗ್ ಕೆಫೆಯಲ್ಲಿ ಕಂಡುಬರುತ್ತಿರುವುದು ಇದೇ ಮೊದಲಲ್ಲ. ಹಿಂದೆ ಎರಡು ಬಾರಿ ಈ ರೀತಿ ಆಗಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆವು ಎಂದು ದಿವ್ಯಾ ರಾಘವೇಂದ್ರ ರಾವ್ ಹೇಳಿದ್ದರು.
(This copy first appeared in Hindustan Times Kannada website. To read more like this please logon to kannada.hindustantimes.com)