ವಿಕ್ಟೋರಿಯಾ ಆಸ್ಪತ್ರೆ ನಿರ್ಮಾಣ ಕಾಮಗಾರಿ, ಆಯತಪ್ಪಿ ಬಿದ್ದು ಕಾರ್ಮಿಕ ಸಾವು; ಶಾಲಾ ಆವರಣದಲ್ಲಿ ಚಾಕು ಹಿಡಿದು ಹೊಡೆದಾಟ 4 ಆರೋಪಿಗಳ ಸೆರೆ
ಕನ್ನಡ ಸುದ್ದಿ  /  ಕರ್ನಾಟಕ  /  ವಿಕ್ಟೋರಿಯಾ ಆಸ್ಪತ್ರೆ ನಿರ್ಮಾಣ ಕಾಮಗಾರಿ, ಆಯತಪ್ಪಿ ಬಿದ್ದು ಕಾರ್ಮಿಕ ಸಾವು; ಶಾಲಾ ಆವರಣದಲ್ಲಿ ಚಾಕು ಹಿಡಿದು ಹೊಡೆದಾಟ 4 ಆರೋಪಿಗಳ ಸೆರೆ

ವಿಕ್ಟೋರಿಯಾ ಆಸ್ಪತ್ರೆ ನಿರ್ಮಾಣ ಕಾಮಗಾರಿ, ಆಯತಪ್ಪಿ ಬಿದ್ದು ಕಾರ್ಮಿಕ ಸಾವು; ಶಾಲಾ ಆವರಣದಲ್ಲಿ ಚಾಕು ಹಿಡಿದು ಹೊಡೆದಾಟ 4 ಆರೋಪಿಗಳ ಸೆರೆ

ಬೆಂಗಳೂರು ಅಪರಾಧ ಸುದ್ದಿ; ವಿಕ್ಟೋರಿಯಾ ಆಸ್ಪತ್ರೆ ನಿರ್ಮಾಣ ಕಾಮಗಾರಿ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕನೊಬ್ಬನ ಸಾವು ಸಂಭವಿಸಿದೆ. ಪ್ರತ್ಯೇಕ ಪ್ರಕರಣದಲ್ಲಿ ಶಾಲಾ ಆವರಣದಲ್ಲಿ ಡ್ಯಾಗರ್‌, ಚಾಕುವಿನಿಂದ ಹೊಡೆದಾಟದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. (ವರದಿ-ಎಚ್. ಮಾರುತಿ, ಬೆಂಗಳೂರು)

ವಿಕ್ಟೋರಿಯಾ ಆಸ್ಪತ್ರೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕನೊಬ್ಬನ ಸಾವು ಸಂಭವಿಸಿದೆ.
ವಿಕ್ಟೋರಿಯಾ ಆಸ್ಪತ್ರೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕನೊಬ್ಬನ ಸಾವು ಸಂಭವಿಸಿದೆ.

ಬೆಂಗಳೂರು: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಆಯತಪ್ಪಿ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. 40 ವರ್ಷದ ಮುನಿರಾಜು ಮೃತ ಕಾರ್ಮಿಕ. ಕಾಮಗಾರಿ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪಕ್ಕಾಗಿ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆ ಆವರಣದಲ್ಲಿ 1000 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ ಮುನಿರಾಜು 11ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಕಾಲುಜಾರಿ ಮತ್ತೊಂದು ಮಹಡಿಯ ಮೇಲೆ ಬಿದ್ದರು. ಜತೆಯಲ್ಲಿದ್ದ ಕಾರ್ಮಿಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ವಿಶ್ವೇಶ್ವರಪುರ ಪೊಲೀಸ್‌ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಖೋಖೋ ಪಂದ್ಯಾವಳಿ; ಶಾಲಾ ಆವರಣದಲ್ಲೇ ರೌಡಿಸಂ, ಚಾಕು, ಡ್ಯಾಗರ್‌ ಹಿಡಿದು ಹೊಡೆದಾಟ

ಬೆಂಗಳೂರು ಹೊರವಲಯದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಿಳಿಶಿವಾಲೆ ಸಮೀಪದ ಸರ್ಕಾರಿ ಶಾಲಾ ಆವರಣದಲ್ಲಿ ನಡೆಯುತ್ತಿರುವ ಪ್ರೌಢಶಾಲೆಗಳ ಕ್ಲಸ್ಟರ್‌ ಮಟ್ಟದ ಖೋಖೋ ಪಂದ್ಯಾವಳಿ ನಡೆಯುವಾಗ ಚಾಕು, ಡ್ಯಾಗರ್‌ ಮತ್ತು ದೊಣ್ಣೆ ಮತ್ತು ವಿಕೆಟ್‌ ಗಳಿಂದ ಹೊಡೆದಾಡಿಕೊಂಡ ಘಟನೆ ವರದಿಯಾಗಿದೆ. ಈ ಜಟಾಪಟಿಯಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.

ಶಾಲೆಯ ಆವರಣದಲ್ಲಿ ಖೋಖೋ ಪಂದ್ಯಾವಳಿ ಆಯೋಜಿಸಲಾಗಿತ್ತು. ಹಲವು ಶಾಲೆಗಳ ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗಿಯಾಗಿದ್ದರು. ಖೋಖೋ ವೀಕ್ಷಿಸಲು ಸಾವಿರಾರು ಜನ ಸೇರಿದ್ದರು. ಅವರೆಲ್ಲರ ಎದುರಿನಲ್ಲಿಯೇ ಗಲಾಟೆ ನಡೆದಿರುವುದು ಅಚ್ಚರಿ ಮೂಡಿಸಿದೆ.

ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಭವಿಷ್‌, ನಿರಂಜನ್‌ ಮತ್ತು ಇಬ್ಬರು ಬಾಲಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪರಸ್ಪರ ಡ್ಯಾಗರ್‌ ಮತ್ತು ವಿಕೆಟ್‌ ಹಿಡಿದುಕೊಂಡು ಹೊಡೆದಾಡುತ್ತಿದದ ದೃಶ್ಯವನ್ನು ಸ್ಥಳಿಯರೊಬ್ಬರು ಮೊಬೈಲ್‌ ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ತುಣುಕಿನ ಆಧಾರದ ಮೇಲೆ ಪೊಲೀಸರು ಕ್ಷಿಪ್ರವಾಗಿ ಆಗಮಿಸಿ ಕ್ರಮ ಕೈಗೊಂಡಿದ್ದಾರೆ.

ಖೋಖೋ ನೋಡಲು ಬಂದಿದ್ದ ಶಬ್ಬೀರ್‌ ಎಂಬುವರು ಗಲಾಟೆ ಬಿಡಿಸಲು ಪ್ರಯತ್ನ ಮಾಡಿದ್ದರು. ಅವರಿಗೂ ಚಾಕುವಿನಿಂದ ತಿವಿದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಗಲಾಟೆಗೆ ಕಾರಣವೇನು?: ಪಂದ್ಯಾವಳಿಯಲ್ಲಿ ಸೊಣ್ಣಪ್ಪನಹಳ್ಳಿ ಮತ್ತು ಬಿಳಿಶಿವಾಲೆ ಸಾಲೆಗಳ ತಂಡಗಳನಡುವೆ ಖೋಖೋ ಪಂದ್ಯ ನಡೆಯುತ್ತಿತ್ತು. ತೀರ್ಪುಗಾರರು ತಪ್ಪು ತೀರ್ಪು ನೀಡಿದ್ದಾರೆ ಎಂದು ಸೊಣ್ಣಪ್ಪನಹಳ್ಳಿ ಶಾಲೆಯ ವಿದ್ಯಾರ್ಥಿಗಳು ಮತ್ತು ಅವರ ಬೆಂಬಲಿಗರು ಗಲಾಟೆ ಆರಂಭಿಸಿದ್ದಾರೆ. ನಾಲ್ವರು ಆರೋಪಿಗಳು ಮೈದಾನವನ್ನು ಪ್ರವೇಶಿಸಿ ಚಾಕು ಮತ್ತಿತರ ಆಯಧಗಳನ್ನು ಪ್ರದರ್ಶಿಸಿ ಬೆದರಿಕೆ ಉಂಟು ಮಾಡಿದ್ದಾರೆ. ಈ ರೌಡಿಗಳು ಮದ್ಯ ಸೇವಿಸಿದ್ದರು ಎಂದು ಶಂಕಿಸಲಾಗಿದೆ.

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಅರ್ಚಕನ ಬಂಧನ

ದೇವಾಲಯಕ್ಕೆ ಪೂಜೆಗೆಂದು ಬಂದಿದ್ದ 8 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿಯಲ್ಲಿ ಅರ್ಚಕನೊಬ್ಬನನ್ನು ವಿದ್ಯಾರಣ್ಯಪುರ ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೇವಸ್ಥಾನಕ್ಕೆಆಗಮಿಸಿದ್ದ ಬಾಲಕಿಯನ್ನು 40 ವರ್ಷದ ಅರ್ಚಕ ಪ್ರಕಾಶ್‌ ಎಂಬಾತ ಪಕ್ಕದ ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ವಿಷಯ ತಿಳಿದ ಬಾಲಕಿಯ ತಾಯಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಅರ್ಚಕನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ-ಎಚ್. ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner