ಕನ್ನಡ ಸುದ್ದಿ  /  ಕರ್ನಾಟಕ  /  Water Crisis: ಮಳೆ ಕೊರತೆಯಿಂದ ಅಂತರ್ಜಲ ಕುಸಿತ; ಕರ್ನಾಟಕ ಗ್ರಾಮೀಣ ಪ್ರದೇಶದಲ್ಲೂ ಬಿಗಡಾಯಿಸಿದ ನೀರಿನ ಸಮಸ್ಯೆ

Water Crisis: ಮಳೆ ಕೊರತೆಯಿಂದ ಅಂತರ್ಜಲ ಕುಸಿತ; ಕರ್ನಾಟಕ ಗ್ರಾಮೀಣ ಪ್ರದೇಶದಲ್ಲೂ ಬಿಗಡಾಯಿಸಿದ ನೀರಿನ ಸಮಸ್ಯೆ

Water Problem: ಕಡಿಮೆ ಮಳೆಯಿಂದಾಗಿ ರಾಜ್ಯದಲ್ಲಿ 7400 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಈ ಪೈಕಿ ತುಮಕೂರು ಜಿಲ್ಲೆಯಲ್ಲೇ ಅತಿ ಹಳ್ಳಿಗಳಲ್ಲಿ ಜನರು ನೀರಿಗಾಗಿ ಸಾಕಷ್ಟು ಸರ್ಕಸ್ ಮಾಡ್ತಿದ್ದಾರೆ. (ವರದಿ: ಎಚ್.ಮಾರುತಿ)

ರಾಜಧಾನಿ ಬೆಂಗಳೂರಿನಲ್ಲೂ ಜನ ನೀರಿಗಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲೂ ಜನ ನೀರಿಗಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. (PTI)

ಬೆಂಗಳೂರು: ನೀರಿನ ಸಮಸ್ಯೆ (Water Problem) ಕೇವಲ ರಾಜ್ಯ ರಾಜಧಾನಿ ಬೆಂಗಳೂರನ್ನು ಮಾತ್ರ ಕಾಡುತ್ತಿಲ್ಲ. ಬೀದರ್‌ನಿಂದ ಚಾಮರಾಜನಗರದವರೆಗೆ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಈ ಸಮಸ್ಯೆ ದಟ್ಟವಾಗಿದೆ. ಇತ್ತೀಚಿನ ಮಾಹಿತಿಗಳ ಪ್ರಕಾರ ರಾಜ್ಯದ 7400 ಕ್ಕೂ ಹೆಚ್ಚು ಗ್ರಾಮಗಳು ಮತ್ತು 1200 ವಾರ್ಡ್‌ಗಳಲ್ಲಿ ನೀರಿನ ಅಭಾವ ತಲೆದೋರಿದೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಯೂ ಸೇರಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಗಳ ಪ್ರಕಾರ ಎಲ್ಲ 31 ಜಿಲ್ಲೆಗಳೂ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಆದರೆ ಕೆಲವು ಪ್ರದೇಶಗಳಲ್ಲಿ ಸಮಸ್ಯೆಯ ಬಿಗಡಾಯಿಸಿದ್ದರೆ ಇನ್ನೂ ಕೆಲವು ಪ್ರದೇಶಗಳಲ್ಲಿ ಸುಧಾರಿಸಿರಬಹುದು ಅಷ್ಟೇ.

ಟ್ರೆಂಡಿಂಗ್​ ಸುದ್ದಿ

ತುಮಕೂರು ಜಿಲ್ಲೆಯ 746 ಗ್ರಾಮಗಳು, ಬೆಂಗಳೂರು ನಗರ ಜಿಲ್ಲೆಯ 274 ಗ್ರಾಮಗಳು ಮತ್ತು 120 ವಾರ್ಡ್‌ಗಳಲ್ಲಿ ಪರಿಸ್ಥಿತಿ ತೀವ್ರವಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು ರಾಜ್ಯಾದ್ಯಂತ 6,416 ಬೋರ್‌ವೆಲ್‌ಗಳನ್ನು ಸರ್ಕಾರ ಗುರುತಿಸಿದೆ. ಈಗಾಗಲೇ 3000 ದಷ್ಟು ಬೋರ್‌ವೆಲ್‌ಗಳ ಮಾಲೀಕರ ಜೊತೆ ನೀರು ಸರಬರಾಜು ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ಸಮಸ್ಯೆಯನ್ನು ಎದುರಿಸಲು ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಯಲ್ಲಿ ಅಂದಾಜು 850 ಕೋಟಿ ರೂ. ಹಣವಿದೆ. ತಹಶೀಲ್ದಾರ್‌ಗಳ ಬಳಿಯೂ ಹಣದ ಕೊರತೆ ಇಲ್ಲ. ಅಗತ್ಯವಿರುವ ಪ್ರದೇಶಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಸರ್ಕಾರ ರಾಜ್ಯದ ಎಲ್ಲ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಉಂಟಾಗಬಾರದು. ಎಷ್ಟೇ ಹಣ ಖರ್ಚಾದರೂ ಸರ್ಕಾರ ನೀಡಲು ಸಿದ್ದವಿದೆ ಎಂದು ತಿಳಿಸಿದ್ದಾರೆ. ಅನಿವಾರ್ಯ ಸಂದರ್ಭಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದ್ದು, ಈಗಾಗಲೇ 140 ಕೋಟಿ ರೂ.ಗಳನ್ನು ಇದೇ ಉದ್ದೇಶಕ್ಕೆ ಬಿಡುಗಡೆ ಮಾಡಲಾಗಿದೆ.

ರಾಜ್ಯದ 23 ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಾ ಬರುತ್ತಿದೆ. ಅಂದಾಜು 120 ಟಿಎಂಸಿ ನೀರಿನ ಸಂಗ್ರಹ ಇರಬಹುದು ಎಂದು ಹೇಳಲಾಗುತ್ತಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು 56 ಟಿಎಂಸಿಗಳಷ್ಟು ಕಡಿಮೆಯಾಗಿದೆ. ನೀರಿನ ಯೋಜನೆಗಳು ಮಂದಗತಿಯಲ್ಲಿ ಸಾಗುತ್ತಿರುವುದೂ ನೀರಿನ ಅಭಾವಕ್ಕೆ ಕಾರಣವಾಗಿದೆ. ಉದಾಹರಣೆಗೆ ರಾಜ್ಯದ 31 ಜಿಲ್ಲೆಗಳಲ್ಲಿ ಪೈಪ್‌ಗಳ ಮೂಲಕ ನೀರು ಸರಬರಾಜು ಮಾಡುವ 40,300 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ 3,315 ಯೋಜನೆಗಳು ಮಾತ್ರ ಪೂರ್ಣಗೊಂಡಿವೆ. ಅಂದರೆ ಶೇ.10ರಷ್ಟು ಪ್ರಗತಿಯನ್ನೂ ಸಾಧಿಸಲು ಸಾಧ್ಯವಾಗಿಲ್ಲ.

ಕೊಡಗಿನ ಅಂಚಿನಲ್ಲಿರುವ ಅನೇಕ ಗ್ರಾಮಗಳಲ್ಲಿ ನೀರಿನ ಅಭಾವ ಇದೆ ಎಂದರೆ ನಂಬಲು ಕಷ್ಟವಾಗಬಹುದು. ಕಾವೇರಿ ಹರಿಯುವ ಮಂಡ್ಯದ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಇನ್ನು ಕಿತ್ತೂರು ಕರ್ನಾಟಕದ ಸಮಸ್ಯೆಯನ್ನು ಹೇಳುವಂತೆಯೇ ಇಲ್ಲ. ಇಲ್ಲಿ ಉಷ್ಣಾಂಶ 40 ಡಿಗ್ರಿ ದಾಟಿದ್ದು ಜಿಲ್ಲೆಯ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿವೆ. ನೂರಾರು ಗ್ರಾಮಗಳು ನೀರಿನ ಅಭಾವದಿಂದ ತತ್ತರರಿಸುತ್ತಿದ್ದು, ಜಿಲ್ಲಾಡಳಿತಗಳು ಹೆಣಗಾಡುತ್ತಿವೆ.

ಬೆಳಗಾವಿ, ಧಾರವಾಡ ಶಿವಮೊಗ್ಗದ ಗ್ರಾಮಗಳಲ್ಲಿ ನೀರಿನ ಅಭಾವ ತಲೆದೋರಿದೆ. ಸರಕಾರ ಕುಡಿಯುವ ನೀರನನು ಒದಗಿಸಲು ಆದ್ಯತೆ ನೀಡುತ್ತಿದೆ. ಉತ್ತರ ಕನಾಟಕದ ಬಹುತೇಕ ಜಿಲ್ಲೆಗಲ್ಲಿ ಬರ ಪರಿಸ್ಥಿತಿ ಶೇ.10-80ರಷ್ಟು ಹೆಚ್ಚಳವಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಏಪ್ರಿಲ್‌ನಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ನಿರೀಕ್ಷಿಸಿದೆ. (ವರದಿ: ಎಚ್.ಮಾರುತಿ)

IPL_Entry_Point