ಮಳೆ ಕೊರತೆ, ಬಿಸಿಯಿಂದ ಕೈಕೊಟ್ಟ ಬೆಳೆಗಳು; ಬೆಂಗಳೂರಿನಲ್ಲಿ 60 ರೂ ಇದ್ದ ಕೆಜಿ ಬೀನ್ಸ್ 240 ರೂಪಾಯಿ, ಗಗನಕ್ಕೇರಿದ ತರಕಾರಿ ಬೆಲೆ
ಕೆಜಿ ಬೀನ್ಸ್ 60 ರೂಪಾಯಿ ಇತ್ತು. ಆದರೆ ಈಗ ಬೆಂಗಳೂರಿನಲ್ಲಿ ಕೆಜಿ ಬೀನ್ಸ್ 240 ರೂಪಾಯಿಗೆ ಏರಿಕೆಯಾಗಿದೆ. ಮಳೆ ಕೊರತೆ, ರಣ ಬಿಸಿಲಿನ ಪರಿಣಾಮ ಬೆಳೆ ತೆಗೆಯಲು ಆಗುತ್ತಿಲ್ಲ. ಇದು ಪೂರೈಕೆ ಕೊರತೆಗೆ ಕಾರಣವಾಗಿದ್ದು, ತರಕಾರಿ, ಸೊಪ್ಪಿನ ಬೆಲೆಗಳು ಗಗನಕ್ಕೇರಿವೆ.
ಬೆಂಗಳೂರು: ಮಳೆ ಕೊರತೆ (Rain Shortage), ರಣ ಬಿಸಿಲಿನ (Heatwave) ಪರಿಣಾಮ ರೈತರು ಬೆಳೆಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆಯಲು ಸಾಧ್ಯವಾಗುತ್ತಿಲ್ಲ. ತಾಪಮಾನ (Temperature) ಏರಿಕೆಯಿಂದ ಶೇಕಡಾ 40 ರಷ್ಟು ಬೆಳೆ ಬರುವುದು ಕಷ್ಟಕರ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ತರಕಾರಿ ಬೆಲೆಗಳ ಏರಿಳಿತಕ್ಕೆ ಕಾರಣವಾಗಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿವೆ (Vegetables Price In Bangalore). ಏಪ್ರಿಲ್ ಅಂತ್ಯದ ವೇಳೆಗೆ 100 ರೂಪಾಯಿ ಇದ್ದ ಬೀನ್ಸ್ ಸೋಮವಾರ (ಮೇ 13) 200ರ ಗಡಿ ದಾಟಿದೆ. ಸೂಪರ್ ಮಾರ್ಕೆಟ್ ಹಾಗೂ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಕೆಜಿ ಬೀನ್ಸ್ 220 ರೂಪಾಯಿಯಿಂದ 240 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಹಾಗೂ ಮಂಡ್ಯದಿಂದ ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಪೂರೈಕೆಯಾಗುತ್ತದೆ. ಆದರೆ ಕೆಲವು ದಿನಗಳಿಂದ ತರಕಾರಿ ಪೂರೈಕೆಯಲ್ಲಿ ಕೊರತೆಯುಂಟಾಗಿದೆ. ಇದು ಬೆಲೆಗಳ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ತರಕಾರಿ ಜೊತೆಗೆ ಸೊಪ್ಪುಗಳ ಬೆಲೆಗಳು ಏರಿಕೆಯಾಗಿವೆ.
ವರ್ಷದ ಆರಂಭದಲ್ಲಿ ಬೀನ್ಸ್ ಕೆಜಿಗೆ 60 ರೂಪಾಯಿ, ಕಳೆದ ತಿಂಗಳು 80 ರೂಪಾಯಿಯಂತೆ ಮಾರಾಟ ಮಾಡಲಾಗಿತ್ತು. ಆದರೆ ಈಗ ಕೆಜಿ ಬೀನ್ಸ್ 240 ರೂಪಾಯಿ ಇದೆ. ಹೋಲ್‌ಸೇಲ್ ಬೆಲೆ ಕೆಜಿಗೆ 200 ರೂಪಾಯಿ ಇದೆ. ಆದರೆ ಚಿಲ್ಲರೆ ಬೆಲೆ 240ರ ಗಡಿಗೆ ಬಂದು ನಿಂತಿದೆ ಎಂದು ತರಕಾರಿ ಅಂಗಡಿಯ ವ್ಯಾಪಾರಿಯೊಬ್ಬರು ವಿವರಿಸಿದ್ದಾರೆ. ಕಳೆದ ಕೆಲವು ದಿನಗಳ ದಿನಷ್ಟೇ ಒಂದು ಕಟ್ ಸೊಪ್ಪಿನ ಬೆಲೆ 15 ರೂಪಾಯಿ ಇತ್ತು. ಆದರೆ ಈಗ 25 ರೂಪಾಯಿ ಆಗಿದೆ ಎಂದು ಮಹಿಳಾ ಗ್ರಾಹಕರೊಬ್ಬರು ಹೇಳಿದ್ದಾರೆ.
ತರಕಾರಿ ಬೆಲೆಗಳನ್ನು ನೋಡುವುದಾದರೆ ಕೆಜಿ ಟೊಮೆಟೊ 15 ರಿಂದ 30 ರೂಪಾಯಿ ವರೆಗೆ ಇದೆ. ಈರುಳ್ಳಿ ಕೂಡ ಕೆಜಿಗೆ 15 ರಿಂದ 30 ರೂಪಾಯಿ ಆಸುಪಾಸಿನಲ್ಲಿದೆ. ನಾಟಿ ಬೆಳ್ಳುಳ್ಳಿ 260 ರಿಂದ 280 ರೂಪಾಯಿ, ಸೊಪ್ಪುಗಳು ಒಂದು ಕಟ್ಟಿಗೆ 25 ರೂಪಾಯಿ, ಕೆಜಿ ನುಗ್ಗೆಕಾಯಿ 80 ರೂಪಾಯಿ, 1ಕೆಜಿ ಹಸಿ ಮೆಣಸಿನಕಾಯಿ 100 ರಿಂದ 120 ರೂಪಾಯಿ, ಕ್ಯಾಪ್ಸಿಕಂ ಕೆಜಿಗೆ 100 ರಿಂದ 120 ರೂಪಾಯಿ, ಗೆಡ್ಡೆಕೋಸು ಕೆಜಿಗೆ 100 ರಿಂದ 120 ರೂಪಾಯಿ, ಆಲೂಗಡ್ಡೆ ಕೆಜಿಗೆ 40 ರೂಪಾಯಿ, ಒಂದು ಕೆಜಿ ಬದನೆಕಾಯಿ 40 ರೂಪಾಯಿ, ಕೆಜಿ ಕ್ಯಾರೆಟ್ 50 ರಿಂದ 60 ರೂಪಾಯಿ, ಬೀಟ್‌ರೂಟ್ ಕೆಜಿಗೆ 50 ರಿಂದ 60 ರೂಪಾಯಿ, ಸೌತೆಕಾಯಿ ಕೆಜಿಗೆ 30 ರಿಂದ 40 ರೂಪಾಯಿ ಇದೆ.
ಮಾರುಕಟ್ಟೆಗೆ ತರಕಾರಿಯೇ ಬರುತ್ತಿಲ್ಲ. ಹೀಗಾಗಿ ಬೆಲೆ ಜಾಸ್ತಿಯಾಗಿದೆ. ಇನ್ನಷ್ಟು ಬೆಲೆಗಳು ಹೀಗೆ ಮುಂದುವರಿಯಲಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಮಳೆ ಬಂದು ಭೂಮಿ ತಂಪಾದರೆ ಬೆಳೆಗಳಿಂದ ಉತ್ತಮ ಫಸಲು ಸಾಧ್ಯವಾಗುತ್ತದೆ. ಆಗ ಪೂರೈಕೆಯೂ ಹೆಚ್ಚಾಗಿ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆಗಳು ಕಡಿಮೆಯಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಗ್ರಾಹಕರ ಜೇಬಿಗೆ ಕತ್ತರಿ ಗ್ಯಾರಂಟಿ ಎನ್ನುವಂತಾಗಿದೆ.