ಸ್ವಾತಂತ್ರ್ಯ ದಿನಾಚರಣೆ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್ ಸಜ್ಜು; ಈ ಬಾರಿ ಅಂಬೇಡ್ಕರ್ ಪ್ರತಿಮೆಯೇ ಪ್ರಮುಖ ಆಕರ್ಷಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಸ್ವಾತಂತ್ರ್ಯ ದಿನಾಚರಣೆ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್ ಸಜ್ಜು; ಈ ಬಾರಿ ಅಂಬೇಡ್ಕರ್ ಪ್ರತಿಮೆಯೇ ಪ್ರಮುಖ ಆಕರ್ಷಣೆ

ಸ್ವಾತಂತ್ರ್ಯ ದಿನಾಚರಣೆ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್ ಸಜ್ಜು; ಈ ಬಾರಿ ಅಂಬೇಡ್ಕರ್ ಪ್ರತಿಮೆಯೇ ಪ್ರಮುಖ ಆಕರ್ಷಣೆ

ಹೂವಿನ ಸಂಸತ್ ಭವನದ ಎದುರು 12 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣವಾಗುತ್ತಿದೆ. ಗಾಜಿನ ಮನೆಯ ಬಲತುದಿಯಲ್ಲಿ ಮಧ್ಯ ಪ್ರದೇಶದಲ್ಲಿರುವ ಮಹೌನ್‌ನಲ್ಲಿರುವ ಅಂಬೇಡ್ಕರ್ ಜನ್ಮಭೂಮಿ ಸ್ಮಾರಕ ನಿರ್ಮಾಣವಾಗುತ್ತಿದೆ. (ವರದಿ: ಮಾರುತಿ ಎಚ್.)

ಸ್ವಾತಂತ್ರ್ಯ ದಿನಾಚರಣೆ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್ ಸಜ್ಜು; ಈ ಬಾರಿ ಅಂಬೇಡ್ಕರ್ ಪ್ರತಿಮೆಯೇ ಪ್ರಮುಖ ಆಕರ್ಷಣೆ
ಸ್ವಾತಂತ್ರ್ಯ ದಿನಾಚರಣೆ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್ ಸಜ್ಜು; ಈ ಬಾರಿ ಅಂಬೇಡ್ಕರ್ ಪ್ರತಿಮೆಯೇ ಪ್ರಮುಖ ಆಕರ್ಷಣೆ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಈ ವರ್ಷ ಭಾರತ ರತ್ನ ಡಾ ಬಿ.ಆರ್.ಅಂಬೇಡ್ಕರ್ ಪರಿಕಲ್ಪನೆಯಡಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಗಾಜಿನ ಮನೆಯಲ್ಲಿ ದೆಹಲಿಯಲ್ಲಿರುವ ಸಂಸತ್ ಭವನದ ಮಾದರಿಯನ್ನು ಪುಷ್ಪಗಳಿಂದ ಅಲಂಕರಿಸಲಾಗುತ್ತಿದೆ. ಸಂಸತ್ ಭವನದ ಮಧ್ಯದಲ್ಲಿರುವ ಗೋಪುರದ ಮೇಲೆ ದೇಶದ ರಾಷ್ಟ್ರೀಯ ಲಾಂಛನದ ಮಾದರಿಯೂ ಇರಲಿದೆ. ಸಂಸತ್ ಭವನದ ಪುಷ್ಪದ ಪ್ರತಿರೂಪಕ್ಕೆ 1.8 ಲಕ್ಷ ಪಿಂಕ್ ಮತ್ತು ಕಿತ್ತಳೆ ಬಣ್ಣದ ಗುಲಾಬಿ ಹೂಗಳು, ಬಿಳಿ, ಪಿಂಕ್ ಮತ್ತು ಹಳದಿ ವರ್ಣಗಳ 1.2 ಲಕ್ಷ ಸೇವಂತಿಗೆ ಹೂಗಳನ್ನು ಬಳಸಲಾಗುತ್ತಿದೆ.

ಹೂವಿನ ಸಂಸತ್ ಭವನದ ಎದುರು 12 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣವಾಗುತ್ತಿದೆ. ಗಾಜಿನ ಮನೆಯ ಬಲತುದಿಯಲ್ಲಿ ಮಧ್ಯ ಪ್ರದೇಶದಲ್ಲಿರುವ ಮಹೌನ್‌ನಲ್ಲಿರುವ ಅಂಬೇಡ್ಕರ್ ಜನ್ಮಭೂಮಿ ಸ್ಮಾರಕ ನಿರ್ಮಾಣವಾಗುತ್ತಿದೆ. ಇದರಲ್ಲಿ ಅಂಬೇಡ್ಕರ್ ಅವರ ಕುಳಿತಿರುವ ಭಂಗಿಯ ಪ್ರತಿಮೆಯನ್ನು ಅಳವಡಿಸಲಾಗುತ್ತಿದೆ. ಇದಕ್ಕಾಗಿ ಒಂದು ಬಾರಿಗೆ 1.7 ಲಕ್ಷ ವಿವಿಧ ಮಾದರಿಯ ಹೂಗಳನ್ನು ಬಳಕೆ ಮಾಡಲಾಗುತ್ತಿದೆ.

ಸಂಸತ್ ಭವನದ ಹಿಂಬದಿಯಲ್ಲಿ 2200 ಚ. ಅಡಿ ಪ್ರದೇಶದಲ್ಲಿ ಮುಂಬೈ ನ ದಾದರ್ ನಲ್ಲಿರುವ ಅಂಬೇಡ್ಕರ್ ಚೈತ್ಯ ಭೂಮಿ ಸ್ಮಾರಕದ ಪ್ರವೇಶ ದ್ವಾರ, ಧರ್ಮ ಸ್ಥಂಭ ಮತ್ತು ಸ್ತೂಪಗಳ ಪುಷ್ಪ ಮಾದರಿ ಅರಳಲಿದೆ. ಅಂಬೇಡ್ಕರ್ ಅವರ ನಿವಾಸ ರಜಾಗೃಹ, ಮತ್ತು ಅವರ ಧೀಕ್ಷಾಭೂಮಿ ಸ್ಮಾರಕದ ಪ್ರತಿಕೃತಿ ನಿರ್ಮಾಣವಾಗಲಿದೆ. ಇದಕ್ಕಾಗಿ 1.85 ಲಕ್ಷ ವಿವಿಧ ಮಾದರಿಯ ಪುಷ್ಪಗಳನ್ನು ಬಳಸಲಾಗುತ್ತಿದೆ.

ಜೊತೆಗೆ ಗಾಜಿನ ಮನೆಯ ಅಂಕಣದಲ್ಲಿ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಬಿಂಬಿಸುವ ಕಲಾಕೃತಿಗಳ ಪ್ರದರ್ಶನ ಇರಲಿದೆ. ಅಂಬೇಡ್ಕರ್ ಅವರ ಪತ್ನಿ ರಮಾಬಾಯಿ ಮತ್ತು ಸವಿತಾ ಅಂಬೇಡ್ಕರ್ ಅವರ ಪ್ರತಿಮೆಗಳು, ಮಹಾಡ್ ಸತ್ಯಾಗ್ರಹ ಬಿಂಬಿಸುವ ಕಲಾಕೃತಿ, ರಾಮ್ ದೇವಾಲಯ ಪ್ರವೇಶ ಸತ್ಯಾಗ್ರಹ, ಕೋರೆ ಗಾಂವ್ ಜಯಸ್ತಂಭ, ಹಿರಾಕುಡ್ ಅಣೆಕಟ್ಟು, ಸಂವಿಧಾನ ಪೀಠಿಕೆ, ಅಂಬೇಡ್ಕರ್ ಅವರಿಗೆ ಪ್ರೇರಕ ಶಕ್ತಿಗಳಾದ ಪೋಷಕರು, ಬುದ್ಧ, ಕಬೀರ ಮತ್ತು ಫುಲೆ ದಂಪತಿಗಳ ಪ್ರತಿಮೆಗಳನ್ನು ಪ್ರದರ್ಶಿಸಲಾಗುವುದು.

ಅಂಬೇಡ್ಕರ್ ಅವರ ಜೀವನ, ಸಾಧನೆ ಯಶಸ್ಸು ಕುರಿತ ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಕೊಲಂಬಿಯಾ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಹೂಗಳನ್ನು ತರಿಸಲಾಗಿದೆ. ಜೊತೆಗೆ ಆಕರ್ಷಕ ಬೋನ್ಸಾಯ್, ಇಕಾಬೇನಾ ಪ್ರದರ್ಶನವಿರುತ್ತದೆ. ಗಾಜಿನ ಮನೆಯ ಹೊರ ಭಾಗದಲ್ಲೂ ಹೂವಿನ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಬ್ಯಾಂಡ್ ಸ್ಟ್ಯಾಂಡ್, ರಾಕ್ ಗಾರ್ಡನ್ ಸೆಲ್ಫಿ ಪಾಯಿಂಟ್ ಇದ್ದೇ ಇರುತ್ತದೆ. ಮೊದಲ ಆರು ದಿನಗಳ ನಂತರ ಹೂಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ.

ಈ ಬಾರಿ ಸುಮಾರು 10 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ನಿರೀಕ್ಷಿಸಲಾಗಿದೆ. ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರು ಬರುವ ನಿರೀಕ್ಷೆ ಇದೆ. ಪಾರ್ಕಿಂಗ್ ವ್ಯವಸ್ಥೆ ಹಾಗೂ ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶಾಲೆಯ ಗುರುತಿನ ಚೀಟಿ ತೋರಿಸಿದರೆ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವಯಸ್ಕರಿಗೆ ರೂ 80 ಪ್ರವೇಶ ಶುಲ್ಕ ನಿಗದಿಯಾಗಿದೆ.

ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇದು 214ನೇ ಫಲಪುಷ್ಪ ಪ್ರದರ್ಶನವಾಗಿದ್ದು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ತಿಳಿಸಿದ್ದಾರೆ. ಇಡೀ ಪ್ರದರ್ಶನಕ್ಕೆ ಏಕ ಕಾಲಕ್ಕೆ 7-8 ಲಕ್ಷ ವೈವಿಧ್ಯಮಯ ಹೂಗಳನ್ನು ಬಳಕೆ ಮಾಡಲಾಗುತ್ತಿದೆ. ಅಂಥೋರಿಯಂ, ಲಿಲ್ಲಿ, ಆರ್ಕಿಡ್, ಜರ್ ಬೆರಾ, ಸೇವಂತಿಗೆ, ದ್ರಸಿನಾ, ಜನಾಡೋ ಹೂಗಳು ಮನ ಸೆಳೆಯಲಿವೆ.

Whats_app_banner