ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 12 ದಿನ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಶುರು; ವಾಹನ ಪಾರ್ಕಿಂಗ್ ವಿವರ ಹೀಗಿದೆ
ಲಾಲ್‌ಬಾಗ್ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನ ಶುರುವಾಗಿದ್ದು, ಇನ್ನು 12 ದಿನ ಬೆಂಗಳೂರು ಸಂಚಾರ ಪೊಲೀಸರು ಈ ಪ್ರದೇಶದ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದಾರೆ. ಎಲ್ಲಿ ಪಾರ್ಕಿಂಗ್ ಮಾಡಬೇಕು ಎಲ್ಲಿ ಮಾಡಬಾರದು ಎಂಬುದರ ವಿವರ ಇಲ್ಲಿದೆ. (ವರದಿ -ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಇಂದಿನಿಂದ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತದ ಫಲಪುಷ್ಪ ಪ್ರದರ್ಶನ ಶುರುವಾಗುತ್ತಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚಣೆಯ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 10 ಲಕ್ಷ ವೀಕ್ಷಕರನ್ನು ನಿರೀಕ್ಷಿಸಲಾಗಿದ್ದು, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಆಗಸ್ಟ್ 8ರಿಂದ 12 ದಿನಗಳ ಕಾಲ ನಡೆಯುವ ಈ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯ ವೀಕ್ಷಕರು ಆಗಮಿಸುವ ಸಾಧ್ಯತೆಗಳಿವೆ. ಸಾರ್ವಜನಿಕರು, ಹೊರ ಜಿಲ್ಲೆ ಹೊರ ರಾಜ್ಯ, ವಿದೇಶಿ ಪ್ರವಾಸಿಗರು ಮತ್ತು ಶಾಲಾ ಮಕ್ಕಳನ್ನು ನಿರೀಕ್ಷಿಸಲಾಗಿದೆ.
ಲಾಲ್ ಬಾಗ್ ಸುತ್ತಮುತ್ತ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು ವಾಹನ ಸವಾರರು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತು ಲಾಲ್ ಬಾಗ್ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಕೆಲವು ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದ ಪಾರ್ಕಿಂಗ್ ವ್ಯವಸ್ಥೆ
1. ಡಾ.ಮರಿಗೌಡ ರಸ್ತೆ: ಅಲ್ ಅಮೀನ್ ಕಾಲೇಜು ಆವರಣದಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
2. ಕೆ.ಎಚ್.ರಸ್ತೆ: ಶಾಂತಿನಗರ ಬಿಎಂಟಿಸಿ ಬಹು ಮಹಡಿ ಕಟ್ಟಡದಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ.
3. ಡಾ.ಮರಿಗೌಡ ರಸ್ತೆ: ಹಾಪ್ ಕಾಮ್ಸ್ ಆವರಣದಲ್ಲಿ ದ್ವಿಚಕ್ರ ಮತ್ತು ಕಾರುಗಳಪಾರ್ಕಿಂಗ್ ಗೆ ಅವಕಾಶ ಇರುತ್ತದೆ.
4. ಜೆ.ಸಿ.ರಸ್ತೆ: ಬಿಬಿಎಂಪಿ ಪಾರ್ಕಿಂಗ್ ನಲ್ಲಿ ಎಲ್ಲ ರೀತಿಯ ವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ ಇರುತ್ತದೆ.
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ವಾಹನಗಳ ನಿಲುಗಡೆ ನಿಷೇಧ
1. ಡಾ.ಮರಿಗೌಡ ರಸ್ತೆಯ ಲಾಲ್ ಬಾಗ್ ಮುಖ್ಯ ರಸ್ತೆಯಿಂದ ನಿಮ್ಹಾನ್ಸ್ ವರೆಗಿನ ಎರಡೂ ಬದಿ,
2. ಕೆ.ಎಚ್.ರಸ್ತೆಯಲ್ಲಿ ಕೆ.ಎಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ ವರೆಗಿನ ಡಬಲ್ ರೋಡ್ ನ ಎರಡೂ ಬದಿ,
3. ಲಾಲ್ ಬಾಗ್ ರಸ್ತೆಯ ಸುಬ್ಬಯ್ಯ ಸರ್ಕಲ್ ನಿಂದ ಲಾಲ್ ಬಾಗ್ ಮುಖ್ಯ ದ್ವಾರದವರೆಗಿನ ರಸ್ತೆಯ ಎರಡೂ ಬದಿಯಲ್ಲಿ
4. ಸಿದ್ದಯ್ಯ ರಸ್ತೆಯ ಊರ್ವಶಿ ಚಿತ್ರಮಂದಿರ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ 12 ನೇ ಕ್ರಾಸ್ ವರೆಗಿನ ರಸ್ತೆಯ ಎರಡೂ ಬದಿ,
5. ಬಿಟಿಎಸ್ ರಸ್ತೆಯ ಬಿಎಂಟಿಸಿ ಜಂಕ್ಷನ್ ನಿಂದ ಪೋಸ್ಟ್ ಆಫೀಸ್ ವರೆಗಿನ ಎರಡೂ ಬದಿ,
6. ಕ್ರುಂಬಿಗಲ್ ರಸ್ತೆಯ ಎರಡೂ ಬದಿ,
7. ಲಾಲ ಬಾಗ್ ಪ್ಚಿಮ ದ್ವಾರದಿಂದ ಆರ್.ವಿ. ಟೀಚರ್ಸ್ ಕಾಲೇಜುವರೆಗಿನ ರಸ್ತೆ ಎರಡೂ ಬದಿ,
8. ಆರ್.ವಿ. ಟೀಚರ್ಸ್ ಕಾಲೇಜಿನಿಂದ ಅಶೋಕ ಪಿಲ್ಲರ್ ವೆರೆಗಿನ ರಸ್ತೆಯ ಎರಡೂ ಬದಿ,
9. ಅಶೋಕ ಪಿಲ್ಲರ್ ನಿಂದ ಸಿದ್ದಾಪುರ ಜಂಕ್ಷನ್ ವರೆಗಿನ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಸಾರ್ವಜನಿಕ ಸಂಚಾರ ವ್ಯವಸ್ಥೆ ಬಳಸಲು ಮನವಿ: ಫಲಪುಷ್ಪ ಪ್ರದರ್ಶನಕ್ಕೆ ಬರುವವರು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ನಮ್ಮ ಮೆಟ್ರೋ, ಬಿಎಂಟಿಸಿ ಮತ್ತು ಕ್ಯಾಬ್ ಬಳಸಲು ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಲಾಲ್ ಬಾಗ್ ಒಳಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪ್ರವಾಸಿಗರು ಕ್ಯಾಮೆರಾಗಳನ್ನು ಕೊಂಡೊಯ್ಯಬಹುದಾಗಿದೆ. ಪ್ಲಾಸ್ಟಿಕ್ ಬಳಕೆಯನ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ. 1ರಿಂದ 10ನೇ ತರಗತಿವರೆಗಿನ ಶಾಲಾ ಸಮವಸ್ತ್ರದೊಡನೆ ಆಗಮಿಸುವ ಮಕ್ಕಳು ರಜಾದಿನಗಳನ್ನು ಹೊರತುಪಡಿಸಿ ಪ್ರದರ್ಶನದ ಪೂರ್ಣ ಸಮಯದಲ್ಲಿ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. ಲಾಲ್ ಬಾಗ್ ನ ಎಲ್ಲಾ 4 ಪ್ರವೇಶ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್ ಗಳನ್ನು ಅಳವಡಿಸಲಾಗಿದೆ. ಲಾಲ್ ಬಾಗ್ ಮತ್ತು ಗಾಜಿನಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಈ ಹಿಂದೆ ಲಾಲ್ ಬಾಗ್ ನಲ್ಲಿ ಜೇನು ನೊಣಗಳು ಕಚ್ಚಿ ಬಾಲಕಿಯೊಬ್ಬಳು ಮೃತಪಟ್ಟಿದ್ದರು. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜೇನು ನೊಣ ಮತ್ತು ನಾಯಿ ಕಚ್ಚುವಿಕೆ ಚಿಕಿತ್ಸೆ ನೀಡಲು ಅಗತ್ಯ ಔಷಧಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರವೇಶ ಟಿಕೆಟ್ ಗಳನ್ನು ಗಾಜಿನ ಮನೆಯ ಬಳಿ ಮುಂಜಾನೆ 6 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಎಲ್ಲ ಪ್ರವೇಶ ದ್ವಾರಗಳ ಬಳಿ ಬೆಳಗ್ಗೆ 9 ಗಂಟೆಯಿಂದ ಸಂಜೆ 6,30ರವರೆಗೆ ಟಿಕೆಟ್ ನೀಡಲು ಅವಕಾಶ ಕಲ್ಪಿಸಲಾಗಿದೆ.
(ವರದಿ -ಎಚ್.ಮಾರುತಿ, ಬೆಂಗಳೂರು)