ಮದ್ಯಪ್ರಿಯರಿಗೆ ನಿರಾಸೆ, ಮದ್ಯ ಉತ್ಪಾದಕ ಕಂಪನಿಗಳ ಅಸಹಕಾರ; ಪ್ರೀಮಿಯಂ ಮದ್ಯದ ದರ ಇಳಿಕೆ ಮುಂದೂಡಿಕೆ, ಇಂದಿನಿಂದ ಅಗ್ಗವಾಗಬೇಕಿದ್ದ ಮದ್ಯ
ಮದ್ಯ ಪ್ರಿಯರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಮದ್ಯದ ದರ ಇಳಿಕೆ ಇಂದು ಅನುಷ್ಠಾನಕ್ಕೆ ಬರುತ್ತಿಲ್ಲ. ಮದ್ಯಪ್ರಿಯರಿಗೆ ನಿರಾಸೆ ಉಂಟಾಗಿದೆ. ಮದ್ಯ ಉತ್ಪಾದಕ ಕಂಪನಿಗಳ ಅಸಹಕಾರ ನೀಡಿದ ಕಾರಣ ಪ್ರೀಮಿಯಂ ಮದ್ಯದ ದರ ಇಳಿಕೆ ಮುಂದೂಡಿಕೆಯಾಗಿದೆ. ಜುಲೈ 1 ರಿಂದ ಅಗ್ಗವಾಗಬೇಕಿದ್ದ ಮದ್ಯದ ಇಳಿಕೆಯಾಗಿಲ್ಲ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಮದ್ಯಪ್ರಿಯರಿಗೆ ಸಧ್ಯಕ್ಕೆ ನಿರಾಸೆ ಕಟ್ಟಿಟ್ಟ ಬುತ್ತಿ. ಸರ್ಕಾರ ಬಯಸಿದಂತೆ ನಡೆದಿದ್ದರೆ ಇಂದಿನಿಂದ ಮದ್ಯದ ದರ ಇಳಿಕೆಯಾಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಗಾಗಿ ಬೆಲೆ ಇಳಿಕೆಯಾಗುತ್ತಿಲ್ಲ. ಹಳೆಯ ದರವನ್ನೇ ನೀಡಿ ಕುಡಿಯುವುದು ಅನಿವಾರ್ಯವಾಗಿದೆ. ಮದ್ಯದ ಮೇಲಿನ ಅಬಕಾರಿ ತೆರಿಗೆಯನ್ನು ರಾಜ್ಯ ಸರ್ಕಾರ ಇಳಿಕೆ ಮಾಡಿದ್ದು, ಜುಲೈ 1 ರಿಂದ ಅಗ್ಗವಾಗಿ ಲಭ್ಯವಾಗಬೇಕಿತ್ತು. ಉತ್ಪಾದನಾ ವೆಚ್ಚದ ಮಾಹಿತಿಯನ್ನು ಹಂಚಿಕೊಳ್ಳಲು ಮದ್ಯ ಉತ್ಪಾದಕ ಕಂಪನಿಗಳು ಆಕ್ಷೇಪ ಎತ್ತಿರುವುದರಿಂದ ಮದ್ಯದ ದರಗಳ ಇಳಿಕೆ ಮುಂದಕ್ಕೆ ಹೋಗಿದೆ. ಈಪ್ರಕ್ರಿಯೆಯನ್ನು ಅಬಕಾರಿ ಇಲಾಖೆಯು ತಾತ್ಕಾಲಿಕವಾಗಿ ತಡೆ ಹಿಡಿದಿದೆ ಎಂದೂ ತಿಳಿದು ಬಂದಿದೆ.
ದರ ಇಳಿಕೆ ಪ್ರಕ್ರಿಯೆಗೆ ಚಾಲನೆ ನೀಡಲು ಹೆಚ್ಚುವರಿ ಅಬಕಾರಿ ಸುಂಕ (ಎಇಡಿ) ಇಳಿಕೆ ಮತ್ತು ಇತರ ರಾಜ್ಯಗಳಿಗೆ ಸರಿಸಮನಾಗಿ ಮದ್ಯದ ಘೋಷಿತ ದರ ನಿಗದಿಪಡಿಸುವ ಮೂಲಕ ದರ ಇಳಿಕೆಗೆ ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರಲು ಇಲಾಖೆ ಎರಡು ಕರಡು ಅಧಿಸೂಚನೆಗಳನ್ನು ಹೊರಡಿಸಿತ್ತು.
ಪ್ರೀಮಿಯಂ ಮದ್ಯದ ದರ ಇಳಿಕೆ ತಾತ್ಕಾಲಿಕ ಮುಂದೂಡಿಕೆ
ಮದ್ಯ ಉತ್ಪಾದನಾ ಕಂಪನಿಗಳು ದರ ನಿಗದಿಯಲ್ಲಿ ತಾರತಮ್ಯ ಎಸಗುತ್ತಿವೆ. ಬೇರೆ ರಾಜ್ಯಗಳಿಗೆ ಕಡಿಮೆ ಮೊತ್ತದ ಘೋಷಿತ ದರ ನಿಗದಿಪಡಿಸಿದ್ದರೆ ಕರ್ನಾಟಕದಲ್ಲಿ ಹೆಚ್ಚಿನ ಮೊತ್ತದ ಘೋಷಿತ ದರ ನಿಗದಿಪಡಿಸುತ್ತಿವೆ. ಇದಕ್ಕೆ ನಿಯಂತ್ರಣ ಹಾಕಲು ಲೆಕ್ಕಪರಿಶೋಧಕರು ಮತ್ತು ವೆಚ್ಚ ಪರಿಶೋಧಕರ ಪ್ರಮಾಣ ಪತ್ರಗಳೊಂದಿಗೆ ಪ್ರತಿ ಬ್ರ್ಯಾಂಡ್ ಮದ್ಯದ ಉತ್ಪಾದನಾ ವೆಚ್ಚಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಅಬಕಾರಿ ಇಲಾಖೆ ನಿರ್ಧರಿಸಿತ್ತು.
ಆದರೆ ಮದ್ಯ ಉತ್ಪಾದನಾ ಕಂಪನಿಗಳು ಹೆಚ್ಚುವರಿ ಅಬಕಾರಿ ತೆರಿಗೆ ಇಳಿಸುವುದು ಸರ್ಕಾರಕ್ಕೆ ಬಿಟ್ಟ ನಿರ್ಧಾರವಾಗಿದೆ. ಅದಕ್ಕಾಗಿ ಉತ್ಪಾದನಾ ವೆಚ್ಚದ ಮಾಹಿತಿ ಹಂಚಿಕೊಳ್ಳಲು ಸಾಧ್ಯವಾಗದು ಎಂದು ಹಲವು ಉತ್ಪಾದಕರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಇದರಿಂದ ಭವಿಷ್ಯದಲ್ಲಿ ಕಾನೂನು ತೊಡಕುಂಟಾಗುವ ಸಂಭವ ಎದುರಾಗಬಹುದು. ಆದ್ದರಿಂದ ಉತ್ಪಾದನಾ ಕಂಪನಿಗಳ ತಕರಾರು ಕುರಿತು ಬಗ್ಗೆ ಪರಿಶೀಲಿಸಲು ದರ ಇಳಿಕೆಯ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.
ಈ ವರ್ಷದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ಹಣಕಾಸು ಇಲಾಖೆಯ ಜವಬ್ದಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆ ರಾಜ್ಯಗಳ ಮದ್ಯದ ದರಗಳಿಗೆ ಅನುಗುಣವಾಗಿ ದೇಶಿಯವಾಗಿ ತಯಾರಿಸಿದ ಮದ್ಯ (ಐಎಂಎಲ್) ಮತ್ತು ಬಿಯರ್ ನ ಸ್ಲ್ಯಾಬ್ ದರಗಳನ್ನು ಪರಿಷ್ಕರಿಸುವುದಗಿ ಭರವಸೆ ನೀಡಿದ್ದರು.
ಘೋಷಿತ ದರ ನಿಗದಿಗೆ ಸಂಬಂಧಿಸಿದಂತೆ ಎಲ್ಲ ಮದ್ಯ ಉತ್ಪಾದನಾ ಕಂಪನಿಗಳ ಜತೆ ಶೀಘ್ರದಲ್ಲೇ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಆ ನಂತರವಷ್ಟೇ ಮದ್ಯದ ದರ ಇಳಿಕೆಯ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಿದೆ.
ಕಾಂಗ್ರೆಸ್ ಸರಕಾರ ಆದಾಯ ಸಂಗ್ರಹವನ್ನು ಹೆಚ್ಚಿಸಿಕೊಳ್ಳಲು ಮದ್ಯದ ಮೇಲಿನ ಅಬಕಾರಿ ತೆರಿಗೆಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಬಂದಿತ್ತು. 2023ರ ಜುಲೈನಲ್ಲಿ ದೇಶೀಯ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಹೆಚಿಸಿದ್ದರೆ 2024ರ ಜನವರಿಯಲ್ಲಿ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಹೆಚ್ಚಿಸಿತ್ತು. ಇದೇ ಮೊದಲ ಬಾರಿಗೆ ತೆರಿಗೆಯನ್ನು ಕಡಿಮೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.
ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಮದ್ಯದ ಬೆಲೆ ಹೆಚ್ಚು. ಗಡಿ ಭಾಗದ ಸಾರ್ವಜನಿಕರು ನೆರೆಯ ರಾಜ್ಯಗಳಿಗೆ ಹೋಗಿ ಮದ್ಯ ಖರೀದಿ ಮಾಡಿಕೊಂಡು ಬರುತ್ತಿದ್ದಾರೆ. ಈ ಕಾರಣಗಳಿಂದ ರಾಜ್ಯದ ವರಮಾನದಲ್ಲಿ ಖೋತಾ ಆಗಿದ್ದು, ಅಬಕಾರಿ ತೆರಿಗೆಯಲ್ಲಿ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಮದ್ಯ ಮಾರಾಟವನ್ನು ಹೆಚ್ಚಳ ಮಾಡಿ ಅಬಕಾರಿ ತೆರಿಗೆ ಮೂಲದ ವರಮಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶ ಹೊಂದಿದೆ.
ಮದ್ಯದ ದರ ಮತ್ತು ಸ್ಲ್ಯಾಬ್ ಲೆಕ್ಕಾಚಾರ
ರಾಜ್ಯದಲ್ಲಿ 18 ಸ್ಲ್ಯಾಬ್ ಗಳಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಸ್ಲ್ಯಾಬ್ ಗಳ ಸಂಖ್ಯೆಯನ್ನು 16ಕ್ಕೆ
ಇಳಿಸಿದೆ. ಪ್ರತಿ ಬಲ್ಕ್ ಲೀಟರ್ ಮದ್ಯದ ಘೋಷಿತ ಉತ್ಪಾದನಾ ದರ ರೂ. 449 ಮೊದಲ ಸ್ಲ್ಯಾಬ್ ನಲ್ಲಿದ್ದರೆ 15,001ರಿಂದ ಮೇಲಿನ ಘೋಷಿತ ದರದ ಎಲ್ಲಾ ಮಾದರಿಯ ಮದ್ಯಗಳನ್ನು 18ನೇ ಸ್ಲ್ಯಾಬ್ ನಲ್ಲಿ ಇರಿಸಲಾಗಿತ್ತು.
ಪರಿಷ್ಕೃತ ದರ ಪಟ್ಟಿಯಲ್ಲಿರುವಂತೆ ಪ್ರತಿ ಬಲ್ಕ್ ಲೀಟರ್ ಘೋಷಿತ ಉತ್ಪಾದನಾ ದರ ರೂ.450 ಹೊಂದಿರುವ ಮದ್ಯ ಮೊದಲ ಸ್ಲ್ಯಾಬ್ ನಲ್ಲಿದ್ದರೆ 20,001 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಉತ್ಪಾದನಾ ದರ ಹೊಂದಿರುವ ಮದ್ಯವನ್ನು 16ನೇ ಸ್ಲ್ಯಾಬ್ ಗೆ ಸೇರಿಸಲಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
(ವರದಿ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.