ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆ; ಬೆಂಗಳೂರಲ್ಲಿ ಏಪ್ರಿಲ್ 24ರಿಂದ 26 ರವರೆಗೆ ಸೆಕ್ಷನ್ 144 ಜಾರಿ, ಯಾವುದಕ್ಕೆಲ್ಲ ನಿರ್ಬಂಧ, ಇಲ್ಲಿದೆ ವಿವರ

ಲೋಕಸಭಾ ಚುನಾವಣೆ; ಬೆಂಗಳೂರಲ್ಲಿ ಏಪ್ರಿಲ್ 24ರಿಂದ 26 ರವರೆಗೆ ಸೆಕ್ಷನ್ 144 ಜಾರಿ, ಯಾವುದಕ್ಕೆಲ್ಲ ನಿರ್ಬಂಧ, ಇಲ್ಲಿದೆ ವಿವರ

Lok Sabha Election: ಲೋಕಸಭೆ ಚುನಾವಣೆ ಪ್ರಗತಿಯಲ್ಲಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26ಕ್ಕೆ ನಡೆಯಲಿದೆ. ಇದರಂತೆ, ಬೆಂಗಳೂರಲ್ಲಿ ಏಪ್ರಿಲ್ 24ರಿಂದ 26 ರವರೆಗೆ ಸೆಕ್ಷನ್ 144 ಜಾರಿಯಲ್ಲಿ ಇರಲಿದೆ. ಯಾವುದಕ್ಕೆಲ್ಲ ನಿರ್ಬಂಧ ವಿಧಿಸಲಾಗಿದೆ ಎಂಬುದವ ವಿವರ ಇಲ್ಲಿದೆ.(ವರದಿ- ಪ್ರಿಯಾಂಕಾ, ಬೆಂಗಳೂರು)

ಕರ್ನಾಟಕ ಪೊಲೀಸ್‌ (ಸಾಂಕೇತಿಕ ಚಿತ್ರ)
ಕರ್ನಾಟಕ ಪೊಲೀಸ್‌ (ಸಾಂಕೇತಿಕ ಚಿತ್ರ) (ANI)

ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನಕ್ಕೆ ಬೆಂಗಳೂರಿನಲ್ಲಿ ದಿನಗಣನೆ ಶುರುವಾಗಿದೆ. ಈಗಾಗಲೇ ಅಭ್ಯರ್ಥಿಗಳು, ಕಾರ್ಯಕರ್ತರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಏಪ್ರಿಲ್ 26 ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹಲವು ನಿರ್ಬಂಧ ಆದೇಶಗಳನ್ನು ಹೊರಡಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಲೋಕಸಭೆ ಚುನಾವಣೆ ನಿಮಿತ್ತ ಏಪ್ರಿಲ್ 24 ರಂದು ಸಂಜೆ 6 ರಿಂದ ಏಪ್ರಿಲ್ 26ರ ಮಧ್ಯರಾತ್ರಿಯವರೆಗೆ ಸಿಆರ್‌ಪಿಸಿಯ ಸೆಕ್ಷನ್ 144 ಜಾರಿಯಲ್ಲಿರಲಿದೆ. ಚುನಾವಣಾ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಕೆಲವು ನಿರ್ಬಂಧಗಳು ಈ ರೀತಿ ಇವೆ.

ಯಾವುದಕ್ಕೆಲ್ಲ ನಿರ್ಬಂಧ

ಐದು ಜನರಿಗಿಂತ ಹೆಚ್ಚು ಜನ ಗುಂಪುಗೂಡಬಾರದು, ರ‍್ಯಾಲಿಗಳು, ಸಾರ್ವಜನಿಕ ಸಭೆಗಳನ್ನು ನಡೆಸುವಂತೆ ಇಲ್ಲ. ಮಾರಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಹೊಂದಿರಬಾರದು. ಪ್ರತಿಮೆಗಳನ್ನು ಪ್ರದರ್ಶಿಸುವುದು ಮತ್ತು ಬೆಂಕಿ ಹಚ್ಚಿ ಸುಟ್ಟು ಹಾಕುವುದು ಮಾಡಬಾರದು. ಪ್ರಚೋದನಕಾರಿ ಭಾಷಣ ಮಾಡಬಾರದು. ಸಾರ್ವಜನಿಕವಾಗಿ ರಾಜಕೀಯ ಘೋಷಣೆ ಕೂಗಬಾರದು.

ಇನ್ನು ಈ ಅವಧಿಯಲ್ಲಿ, ಮತದಾನ ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿ, ಪ್ರಚಾರ ಮಾಡಲು ಮತ್ತು ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಬಳಸಲು ಅನುಮತಿಯಿಲ್ಲ. ಮತದಾನ ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್‌ಗಳು, ಕಾರ್ಡ್‌ಲೆಸ್ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನ ಕೊಂಡೊಯ್ಯುವಂತೆ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಜಿಲ್ಲಾ ಚುನಾವಣಾ ಅಧಿಕಾರಿ (ಡಿಇಒ) ಯ ಅನುಮತಿಯೊಂದಿಗೆ ಅಧಿಕಾರಿಗಳು ಅಥವಾ ಸಿಬ್ಬಂದಿಗೆ ವಿನಾಯಿತಿ ಸಿಗಲಿದೆ.

ಈಗಾಗಲೇ ನಿಗದಿಯಾಗಿರುವ ವಿವಾಹ ಮುಂತಾದ ಕಾರ್ಯಕ್ರಮಗಳಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುವಂತಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಬೀರದೆ, ಅನುಮತಿಸಲಾದ ಮೆರವಣಿಗೆಗಳನ್ನು ನಡೆಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ. ಆದರೆ, ಈ ನಿಷೇಧವು ಅಂತ್ಯಕ್ರಿಯೆಯ ಮೆರವಣಿಗೆಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮದ್ಯ ಮಾರಾಟ ನಿಷೇಧ

ಮತದಾನ ನಡೆಯುವ ಏಪ್ರಿಲ್ 26ರ ಮಧ್ಯರಾತ್ರಿ 12 ಗಂಟೆಯಿಂದ ಏಪ್ರಿಲ್ 27ರ ಮಧ್ಯರಾತ್ರಿವರೆಗೆ ಹಾಗೂ ಜೂನ್ 3ರ ಮಧ್ಯರಾತ್ರಿಯಿಂದ ಜೂನ್ 4ರ ಮಧ್ಯರಾತ್ರಿವರೆಗೆ ಮತಗಳ ಎಣಿಕೆಯ ಕಾರಣದಿಂದಾಗಿ, ನಗರದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಆದೇಶ ಹೊರಡಿಸಲಾಗಿದೆ. ಈ ವೇಳೆ ಅಂಗಡಿಗಳು, ಬಾರ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲುಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗುವುದು. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಗೆ ಆಹಾರ ಮತ್ತು ಆಲ್ಕೊಹಾಲ್ ಮುಕ್ತ ಪಾನೀಯಗಳನ್ನು ಪೂರೈಸಲು ಮಾತ್ರ ಅನುಮತಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.

ದೇಶದಲ್ಲಿ ಚುನವಾಣಾ ರಣ ಕಣ ರಂಗೇರುತ್ತಿದೆ. ಏಪ್ರಿಲ್ 19 ರಿಂದ ಜೂನ್ 1ರ ವರೆಗೆ ಮತದಾನ ನಡೆಯಲಿದ್ದು, ಒಟ್ಟು 543 ಕ್ಷೇತ್ರಗಳನ್ನು ಒಳಗೊಂಡಿದೆ. ರಾಜ್ಯ ರಾಜಧಾನಿ ಬೆಂಗಳೂರು ಮತದಾನಕ್ಕೆ ಸಜ್ಜಾಗುತ್ತಿದೆ. ಕರ್ನಾಟಕದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, 28 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಂಗಳೂರಿನ 4 ಲೋಕಸಭಾ ಸ್ಥಾನಗಳಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಬೆಂಗಳೂರು

ಉತ್ತರ, ಬೆಂಗಳೂರು ಮಧ್ಯ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶಗಳಲ್ಲಿ ಏಪ್ರಿಲ್ 26 ರಂದು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ.

(ವರದಿ- ಪ್ರಿಯಾಂಕಾ, ಬೆಂಗಳೂರು)

IPL_Entry_Point