ಕನ್ನಡ ಸುದ್ದಿ  /  Karnataka  /  Bengaluru News Lok Sabha Elections Election Officials Seize <Span Class='webrupee'>₹</span>1 40 Cr Cash <Span Class='webrupee'>₹</span>90 Lakh Gold In One Day Mrt

ಲೋಕಸಭೆ ಚುನಾವಣೆ; ಬೆಂಗಳೂರಲ್ಲಿ ಒಂದೇ ದಿನ 1.40 ಕೋಟಿ ರೂ ನಗದು, 90 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿನ್ನೆ (ಮಾರ್ಚ್ 23) ಒಂದೇ ದಿನ ಒಂದೇ ದಿನ ರೂ. 1.40 ಕೋಟಿ ನಗದು, 90ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದುವರೆಗೂ ವಶಪಡಿಸಿಕೊಂಡ ನಗದು, ಆಭರಣ, ಮದ್ಯ ಮಾದಕವಸ್ತು ಮೌಲ್ಯ ಮತ್ತು ಇತರೆ ಅಪರಾಧ ಸುದ್ದಿಗಳ ವಿವರ ಇಲ್ಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು 1.39 ಕೋಟಿ ರೂಪಾಯಿ ನಗದು ಮತ್ತು ಸುಮಾರು 60 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪೈಕಿ ಸಂಪಂಗಿ ರಾಮನಗರದಲ್ಲಿ 28.75 ಲಕ್ಷ ರೂಪಾಯಿ, ಕೋರಮಂಗಲದ ಎರಡು ಪ್ರದೇಶಗಳಲ್ಲಿ 1.10 ಕೋಟಿ ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಮುರುಗೇಶಪಾಳ್ಯದಲ್ಲಿ 71.16 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 9 ಲಕ್ಷ ರೂಪಾಯಿ ಮೌಲ್ಯದ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಐಟಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಚುನಾವಣಾ ಅಕ್ರಮ ನಿಯಂತ್ರಣದ ಅಂಗವಾಗಿ ನಡೆದ ಕಾರ್ಯಾಚರಣೆಗಳಲ್ಲಿ ಇದುವರೆಗೆ 9.68 ಕೋಟಿ ರೂಪಾಯಿ ನಗದು, 1.78 ಕೋಟಿ ರೂ ಮೌಲ್ಯದ ಉಡುಗೊರೆಗಳು, 22.85 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತು ಹಾಗೂ 36.41 ಕೋಟಿ ರೂ. ಬೆಲೆ ಬಾಳುವ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಹಾರಿದ ಗುಂಡು, ಮುಖ್ಯಪೇದೆಗೆ ಗಾಯ, ತನಿಖೆಗೆ ಆದೇಶ

ಲೋಕಸಭಾ ಚುನಾವಣೆ ನಿಮಿತ್ತ ಪರವಾನಗಿ ಹೊಂದಿದ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಿಕೊಳ್ಳುತ್ತಿರುವಾಗ ಪಿಸ್ತೂಲ್ ಒಂದರಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಮುಖ್ಯಪೇದೆಯೊಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ಸಂಬಂಧ ಪಿಸ್ತೂಲ್ ಮಾಲೀಕ ಮುಕುಂದ ರೆಡ್ಡಿ ಮತ್ತು ಪೊಲೀಸ್ ಠಾಣೆಯ ಪೇದೆಯೊಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಪರವಾನಗಿದಾರರು ಮನೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವಂತಿಲ್ಲ. ಬದಲಾಗಿ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಬೇಕಾಗುತ್ತದೆ. ಹೀಗಾಗಿ ಮುಕುಂದ್ ಅವರು ಠೇವಣಿ ಇರಿಸಲು ಬಂದಿದ್ದರು. ಪಿಸ್ತೂಲ್ ನಲ್ಲಿ ಗುಂಡು ಇದ್ದರೂ ಮಾಲೀಕ ಮುಕುಂದ್ ಅವರು ಗುಂಡು ಇಲ್ಲ ಎಂದು ತಿಳಿಸಿದ್ದರು.

ಅವರ ಮಾತನ್ನು ನಂಬಿದ ಪೇದೆ ವೆಂಕಣ್ಣ ಎಂಬುವರು ಪಿಸ್ತೂಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ಪರಿಶೀಲನೆ ನಡೆಸಿದ್ದಾರೆ. ಆಗ ಗುಂಡು ಹಾರಿ ಮುಖ್ಯ ಪೇದೆ ಅನ್ಬುದಾಸ್ ಅವರ ಕಾಲಿಗೆ ಗುಂಡು ತಗುಲಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಆದರೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದು ಆಕಸ್ಮಿಕ ಘಟನೆಯೇ ಅಥವಾ ಉದ್ದೇಶಪೂರ್ವಕವೋ ಎಂದು ತಿಳಿದುಕೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ; ಕಟ್ಟುನಿಟ್ಟಿನ ಕ್ರಮಕ್ಕೆ ಚುನಾವಣಾಧಿಕಾರಿ ಸೂಚನೆ

ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕು ಮತ್ತು ಅಂತಹ ಘಟನೆಗಳು ಕಂಡು ಬಂದಲ್ಲಿ ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಅಂಗವಾಗಿ ಅವರು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಸೂಚನೆ ನೀಡಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ ಶಂಕಾಸ್ಪದ ವಾಹನಗಳ ತಪಾಸಣೆ ನಡೆಸಬೇಕು. ಸೂಕ್ತ ದಾಖಲಾತಿಗಳಿಲ್ಲದೆ ಸಾಗಾಟ ಮಾಡುವ ನಗದು ಅಥವಾ ಇನ್ನಿತರೆ ವಸ್ತುಗಳನ್ನು ಸಾಗಿಸುತ್ತಿದ್ದರೆ ವಶಕ್ಕೆ ಪಡೆದುಕೊಳ್ಳಬೇಕು.

ಯಾರೇ ಅದರೂ 10 ಲಕ್ಷ ರೂ.ಗಳಿಗಿಂತ ಹೆಚ್ಚು ಹಣ ಕಂಡು ಬಂದಲ್ಲಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು. ವಶಪಡಿಸಿಕೊಂಡ ಹಣಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ ಜಿಲ್ಲಾ ಮಟ್ಟದ ದೂರು ಸಮಿತಿಯ ಆದೇಶದ ಅನ್ವಯ ಬಿಡುಗಡೆ ಮಾಡಬೇಕು ಎಂದೂ ಅವರು ತಿಳಿಸಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

IPL_Entry_Point