ಬೆಂಗಳೂರು; 30 ಕೋಟಿ ರೂ ತೆರಿಗೆ ಬಾಕಿ, ಮಲ್ಲೇಶ್ವರಂ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಜಡಿದ ಬಿಬಿಎಂಪಿ, ಈ ವರ್ಷ 2ನೇ ಬಾರಿ ಬಂದ್
ಬೆಂಗಳೂರು; ಮಲ್ಲೇಶ್ವರಂ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಜಡಿದ ಬಿಬಿಎಂಪಿ ಅಧಿಕಾರಿಗಳು, 30 ಕೋಟಿ ರೂ ತೆರಿಗೆ ಬಾಕಿ ಉಳಿಸಿದ್ದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಮಂತ್ರಿ ಮಾಲ್ ಈ ವರ್ಷ 2ನೇ ಬಾರಿ ಈ ರೀತಿ ಬಂದ್ ಆಗುತ್ತಿರುವುದು. ಇದರ ವಿವರ ಇಲ್ಲಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂತ್ರಿ ಮಾಲ್ ಗೆ ಬೀಗ ಹಾಕಿದೆ. ಬೆಂಗಳೂರಿನ ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್ ಗೆ ಈ ವರ್ಷದಲ್ಲಿ ಎರಡನೇ ಬಾರಿಗೆ ಬೀಗ ಹಾಕಲಾಗಿದೆ. ಬೀಗ ಹಾಕಿಸಿದ ಅಧಿಕಾರಿಗಳು ಮಾಲ್ ನ ವ್ಯಾಪಾರ ಪರವಾನಗಿಯನ್ನೂ ಅಮಾನತುಗೊಳಿಸಿದ್ದಾರೆ.
ಮಂತ್ರಿ ಮಾಲ್ ಸುಮಾರು 30 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವರ್ಷದ ಮಾರ್ಚ್ ತಿಂಗಳ 16ರಂದು ಅಧಿಕಾರಿಗಳು ಬೀಗ ಹಾಕಿಸಿದ್ದರು. ಇಂದು ಶುಕ್ರವಾರ ಮತ್ತೆ ಬೀಗ ಹಾಕಲಾಗಿದೆ. ಆಸ್ತಿ ತೆರಿಗೆ ಬಾಕಿ ಪಾವತಿಸದ ಕಾರಣಕ್ಕೆ ಆಸ್ತಿಯನ್ನು ಮಾಲ್ ಗೆ ಸೀಲ್ ಮಾಡಲಾಗಿದೆ ಮತ್ತು ವ್ಯಾಪಾರದ ಪರವಾನಗಿ ಅಮಾನತುಗೊಳಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಲ್ಲೇಶ್ವರಂ ಮಂತ್ರಿ ಮಾಲ್ ಮತ್ತು ಬಿಬಿಎಂಪಿ ಸುತ್ತೋಲೆ
ಬಿಬಿಎಂಪಿ 2023ರ ಡಿಸೆಂಬರ್ 6ರಂದು ಹೊರಡಿಸಿರುವ ಸುತ್ತೋಲೆಯ ಅನ್ವಯ ಈ ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ ನಲ್ಲಿ ಬೀಗ ಜಡಿದಿದ್ದಾಗ ಮಂತ್ರಿ ಮಾಲ್ ನ್ಯಾಯಾಲಯದ ಆದೇಶ ತರುವ ಮೂಲಕ ವಹಿವಾಟನ್ನು ಆರಂಭಿಸಿತ್ತು. ಕೆಲ ದಿನಗಳ ನಂತರ ಕೇವಲ ರೂ. 5 ಕೋಟಿಯಷ್ಟು ಮಾತ್ರ ಆಸ್ತಿ ತೆರಿಗೆ ಪಾವತಿಸಿ, ಉಳಿದ ಪಾವತಿಗೆ ಕಾಲಾವಕಾಶ ಕೇಳಿತ್ತು. ಸಮಯಾವಕಾಶ. ನೀಡಿದ್ದರೂ ತೆರಿಗೆ ಪಾವತಿ ಮಾಡಿರಲಿಲ್ಲ. ತೆರಿಗೆ ಪಾವತಿ ಮಾಡುವಂತೆ ಮೇನಲ್ಲಿ ಮತ್ತೊಂದು ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ತೆರಿಗೆ ಪಾವತಿ ಕುರಿತಂತೆ ಸ್ಪಷ್ಟ ಉತ್ತರ ನೀಡಿರಲಿಲ್ಲ. ಆದ್ದರಿಂದ ಮತ್ತೆ ಬೀಗ ಹಾಕಲಾಗಿದೆ ಎಂದು ಪಾಲಿಕೆ ಹೇಳಿದೆ.
2020-21ನೇ ಸಾಲಿನಿಂದ ಮಂತ್ರಿ ಮಾಲ್ ಆಸ್ತಿ ತೆರಿಗೆ ಪಾವತಿಸಿಲ್ಲ. 2009-10 ರಿಂದ 2019- 20 ರವರೆಗೆ ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಡಿಯಲ್ಲಿ ಘೋಷಣೆ ಮಾಡಿಕೊಂಡಿರುವ ಕ್ರಮವೂ ತಪ್ಪಾಗಿದೆ. ಬಾಕಿ ಉಳಿಸಿಕೊಂಡಿರುವ ತೆರಿಗೆ ಮೊತ್ತ 27.75 ಕೋಟಿ ರೂಪಾಯಿ ಮತ್ತು ವ್ಯತ್ಯಾಸದ ತೆರಿಗೆ ಬಾಕಿ ರೂಪಾಯಿ 74.87 ಕೋಟಿ ಪಾವತಿಸಲು ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆ ಮತ್ತು ದಂಡದ ಹಣದಲ್ಲಿ ಮೊತ್ತದಲ್ಲಿ ಸಾಕಷ್ಟು ರಿಯಾಯಿತಿ ನೀಡಲಾಗಿದೆ. ಆದರೂ ಮಾಲ್ ಮಾಲೀಕರು ಬಾಕಿ ಪಾವತಿ ಮಾಡಿಲ್ಲ ಎಂದು ಪಾಲಿಕೆ ಮಾಹಿತಿ ನೀಡಿದೆ. ದಂಡ ಪಾವತಿಸದ ಮಂತ್ರಿ ಮಾಲ್ ಎಂಬ ಫಲಕವನ್ನು ಪ್ರವೇಶ ದ್ವಾರ ಸೇರಿದಂತೆ ಹಲವು ಕಡೆ ಬಿಬಿಎಂಪಿ ಅಂಟಿಸಿದೆ.
ಜೆ.ಬಿ.ನಗರ ಪಲ್ಲಕ್ಕಿ ಉತ್ಸವ: ಮದ್ಯ ಮಾರಾಟ ನಿಷೇಧ
ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೂರ್ವ ವಿಭಾಗದ ಜೆ.ಬಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೀರಭದ್ರಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೇ 11ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ.
ಉತ್ಸವದಲ್ಲಿ ಸುಮಾರು 30 ಪಲ್ಲಕ್ಕಿಗಳು ಭಾಗವಹಿಸಿವೆ ಮತ್ತು ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಗಳಿವೆ ಮತ್ತು ದುಷ್ಕೃತ್ಯ ಗಳಲ್ಲಿ ಭಾಗಿಯಾಗುವ ಸಂಭವವಿರುತ್ತದೆ.
ಆದ್ದರಿಂದ ಮೇ 11, ಶನಿವಾರ ಬೆಳಿಗ್ಗೆ 6ರಿಂದ ಮೇ 12ರ ಮಧ್ಯಾಹ್ನ 1 ಗಂಟೆ ವರೆಗೆ ಜೆ.ಬಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಮದ್ಯದ ಅಂಗಡಿ, ಬಾರ್ ಹಾಗೂ ರೆಸ್ಟೋರೆಂಟ್ ಗಳನ್ನು ಬಂದ್ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಸ್ಟಾರ್ ಹೋಟೆಲ್ ಹಾಗೂ ಕ್ಲಬ್ ಗಳಿಗೆ ಆದೇಶ ಅನ್ವಯವಾಗುವುದಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.