ಬೆಂಗಳೂರು ಮಾರುಕಟ್ಟೆಯಲ್ಲಿ ತರಕಾರಿ ದುಬಾರಿ; ಟೊಮ್ಯಾಟೊ 100 ರೂಪಾಯಿ, ಬೀನ್ಸ್ 200 ರೂಪಾಯಿ ಗಡಿ ದಾಟಿವೆ ಯಾಕೆ, ಇಲ್ಲಿದೆ ವಿವರ
ಬರ ಪರಿಸ್ಥಿತಿ ಮುಗಿದು ಮಳೆ ಶುರುವಾಗುತ್ತಿದ್ದಂತೆ ತರಕಾರಿ ಬೆಲೆಗಳು ಗಗನಮುಖಿಯಾಗಿವೆ. ಬೆಂಗಳೂರು ಮಾರುಕಟ್ಟೆಯಲ್ಲಿ ತರಕಾರಿ ದುಬಾರಿಯಾಗಿದ್ದು, ಟೊಮ್ಯಾಟೊ 100 ರೂಪಾಯಿ, ಬೀನ್ಸ್ 200 ರೂಪಾಯಿ ಗಡಿ ದಾಟಿವೆ ಯಾಕೆ, ಇಲ್ಲಿದೆ ವಿವರ.

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಟೊಮ್ಯಾಟೊ ಬೆಲೆ ಕಿಲೋಗೆ 100 ರೂಪಾಯಿ ದಾಟಿದ್ದು, ಬೀನ್ಸ್ ಬೆಲೆ 200 ರೂಪಾಯಿ ಗಡಿ ದಾಟಿದೆ. ರಾಜ್ಯದ ಇತರೆ ನಗರಗಳಲ್ಲೂ ಟೊಮ್ಯಾಟೊ ಬೆಲೆ 100 ರೂಪಾಯಿ ಸಮೀಪ ಇದ್ದರೆ, ಬೀನ್ಸ್ ಬೆಲೆ 175ರ ಗಡಿ ದಾಟಿದೆ.
ಬರ ಪರಿಸ್ಥಿತಿಯ ಕಾರಣ ಕಳೆದ 3 ತಿಂಗಳಿಂದ ಏರುಗತಿಯಲ್ಲಿದ್ದ ತರಕಾರಿ ಬೆಲೆ 2-3 ವಾರಗಳ ಹಿಂದೆಯಷ್ಟೇ ಕೊಂಚಮಟ್ಟಿಗೆ ತಗ್ಗಿತ್ತು. ಆದರೆ ಒಂದು ವಾರದಿಂದೀಚೆಗೆ ಇದೀಗ ಮತ್ತೆ ತರಕಾರಿ ಬೆಲೆ ಏರಿಕೆ ಕಂಡಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.
ಕರ್ನಾಟಕದ ವಿವಿಧ ಮಾರುಕಟ್ಟೆಗಳಿಗೆ ಪೂರೈಕೆಯಾಗುವ ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ಅನೇಕ ಕಡೆ ಮಳೆ ಕೊರತೆ, ಇನ್ನು ಕೆಲ ಪ್ರದೇಶಗಳಿಗೆ ಅತಿಯಾದ ಮಳೆ ಜೊತೆಗೆ ರೋಗಬಾಧೆ ಕಾಣಿಸಿಕೊಂಡ ಕಾರಣ ಸೊಪ್ಪು, ತರಕಾರಿ ಹಾಗೂ ಹಣ್ಣುಗಳ ಪೂರೈಕೆ ಕಡಿಮೆಯಾಗಿದೆ ಇದು ದರ ಏರಿಕೆ ಕಾರಣವಾಗಿದೆ. ಪೂರ್ವ ಮುಂಗಾರು ಅಧಿಕ ಪ್ರಮಾಣದಲ್ಲಿ ಸುರಿದ ಪರಿಣಾಮ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ತರಕಾರಿಗಳ ಉತ್ಪಾದನೆ ಕುಂಠಿತಗೊಂಡಿದೆ.
ಸೊಪ್ಪು, ತರಕಾರಿ ಚಿಲ್ಲರೆ ಮಾರಾಟ ದರ ಗಗನಮುಖಿ
ಎರಡು ವಾರಗಳ ಹಿಂದೆ ಬೀನ್ಸ್ ಬೆಲೆ ಕೆಜಿಗೆ 250 ರೂಪಾಯಿ ಇದ್ದದ್ದು 150 ರೂಪಾಯಿಗೆ ಇಳಿದಿತ್ತು. ಆದರೆ ನಂತರ ಈಗ ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಮತ್ತೆ 180 ರೂಪಾಯಿಯಿಂದ 220 ರೂಪಾಯಿ ನಡುವೆೆ ಮಾರಾಟವಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲೂ ಕೆ.ಜಿ.ಗೆ 80 ರಿಂದ 120 ರೂಪಾಯಿಗೆ ಏರಿದೆ. ನಿತ್ಯವೂ ಏರಿಳಿತ ಕಾಣುತ್ತಿರುವ ಟೊಮೇಟೊ ಬೆಲೆ ಕೆಲ ದಿನಗಳ ಹಿಂದೆ ಕೆಜಿಗೆ 50 ರೂಪಾಯಿಯಿಂದ - 60 ರೂಪಾಯಿ ಇದ್ದದ್ದು ಈಗ 80 ರೂಪಾಯಿಯಿಂದ 100 ರೂಪಾಯಿಗೆ ತಲುಪಿದೆ.
ಕೆ.ಆರ್.ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೆಜಿಗೆ 80 ರೂಪಾಯಿಯಂತೆ ಮಾರಾಟವಾಗುತ್ತಿದೆ. ಬದನೆಕಾಯಿ, ಮೂಲಂಗಿ, ಕ್ಯಾಪ್ಸಿಕಂ ಮತ್ತು ಈರುಳ್ಳಿ ಕೂಡ ಚಿಲ್ಲರೆ ಮಾರುಕಟ್ಟೆಗಳಲ್ಲಿ 100 ರೂಪಾಯಿ ಗಡಿ ದಾಟಿದೆ. ಹೀಗೆ, ನಿತ್ಯ ಬಳಕೆ ಇರುವಂತಹ ಬಹುಬೇಡಿಕೆಯ ಟೊಮ್ಯಾಟೊ, ಹಸಿ ಮೆಣಸಿನಕಾಯಿ, ಬೀನ್ಸ್, ಕೊತ್ತಂಬರಿ ಸೊಪ್ಪು ದುಬಾರಿಯಾಗಿದೆ. ಏಲಕ್ಕಿಬಾಳೆ, ಟೊಮ್ಯಾಟೊ ನೂರರ ಗಡಿ ದಾಟಿದರೆ ಬೀನ್ಸ್ ಡಬಲ್ ಸೆಂಚುರಿ ಬಾರಿಸಿದೆ. ಇತರೆ ತರಕಾರಿಗಳ ದರವೂ ಏರುಮುಖದತ್ತ ಸಾಗಿವೆ.
ಬೀನ್ಸ್ ಮತ್ತು ಟೊಮ್ಯಾಟೊ ಪೂರೈಕೆಯು ಸ್ವಲ್ಪ ಸಮಯದಿಂದ ಕಡಿಮೆಯಾಗಿದೆ ಆದರೆ ಬೆಂಗಳೂರಿನಲ್ಲಿ ಬೇಡಿಕೆ ಹೆಚ್ಚುತ್ತಲೇ ಇದೆ. ಈಗ ಮಳೆಯಿಂದ ಬೆಳೆ ಕಟಾವಿಗೆ ಅಡ್ಡಿಯಾಗಿದ್ದು, ಬೆಲೆ ಗಗನಕ್ಕೇರಿದೆ.
ಬೆಂಗಳೂರಲ್ಲಿ ಹಾಪ್‌ಕಾಮ್ಸ್ ತರಕಾರಿ ದರ
ಹಾಪ್‌ಕಾಮ್ಸ್‌ನಲ್ಲಿ, ಸಾಮಾನ್ಯವಾಗಿ ಕೆ.ಜಿ.ಗೆ 10 ರಿಂದ 15 ರೂಪಾಯಿಯಷ್ಟಿದ್ದ ಬೂದಿ ಸೋರೆಕಾಯಿ ಸಗಟು ದರ ಕೆ.ಜಿ.ಗೆ 30 ರೂಪಾಯಿಗೆ ಜಿಗಿದಿದೆ.
ಬೀನ್ಸ್‌ನ ಮಾರಾಟ ಬೆಲೆ ಕಳೆದ ವಾರ ಕೆಜಿಗೆ 70 ರೂಪಾಯಿಯಿಂದ 220 ರೂಪಾಯಿಗೆ ಏರಿದೆ. ಕ್ಯಾಪ್ಸಿಕಂ ಕೆಜಿಗೆ 65 ರೂಪಾಯಿಯಿಂದ 140 ರೂಪಾಯಿಗೆ ಏರಿತು. ಕಳೆದ ಕೆಲವು ತಿಂಗಳುಗಳಲ್ಲಿ ಹವಾಮಾನ ಏರಿಳಿತಗಳು ಬೆಲೆ ಏರಿಕೆಗೆ ಕಾರಣವೆಂದು ಹಾಪ್‌ಕಾಮ್ಸ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೀನ್ಸ್ ಮತ್ತು ಟೊಮೆಟೊಗಳ ಪೂರೈಕೆಯು ಸ್ವಲ್ಪ ಸಮಯದಿಂದ ಕಡಿಮೆಯಾಗಿದೆ ಆದರೆ ಬೇಡಿಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವಾಗಿ ಈಗ ಮಳೆಯೂ ಸೇರ್ಪಡೆಯಾಗಿರುವುದರಿಂದ ಬೆಲೆಗಳು ಗಗನಕ್ಕೇರಿವೆ.
“ಬೂದಿ ಸೋರೆಕಾಯಿ ಬೆಲೆ ಏರಿದಾಗ, ತರಕಾರಿಗಳು ದುಬಾರಿಯಾಗುತ್ತಿವೆ ಎಂಬುದು ಸಹಜ ಸಂಕೇತ. ಇದು ಇತರ ತರಕಾರಿಗಳಿಗಿಂತ ಹೆಚ್ಚು ಬೇಡಿಕೆಯಿಲ್ಲದ ತರಕಾರಿಯಾಗಿದೆ. ಆದರೆ, ಬೆಳೆ ಕಟಾವು ಆಗಬೇಕಿದ್ದ ವೇಳೆಗೆ ಸರಿಯಾಗಿ ಮಳೆ ಸುರಿದಿದ್ದರಿಂದ ಮಾರುಕಟ್ಟೆಗೆ ತರಕಾರಿ ಪೂರೈಕೆ ಕಡಿತಗೊಂಡಿದೆ’ ಎಂದು ಕೆ.ಆರ್ ಮಾರುಕಟ್ಟೆಯ ವ್ಯಾಪಾರಿ ಕೃಷ್ಣ ವಿವರಿಸಿದರು.
ಇನ್ನೂ ಮೂರು ತಿಂಗಳು ಇದೇ ಪರಿಸ್ಥಿತಿ ಇರಬಹುದು ಎಂಬುದು ವ್ಯಾಪಾರಿಗಳ ಅನಿಸಿದೆ. ಕೆಟ್ಟ ಹವಾಮಾನ ಮತ್ತು ಕಡಿಮೆ ಇಳುವರಿ ಕಾರಣ ಸೊಪ್ಪು, ತರಕಾರಿ ದುಬಾರಿಯಾಗಿದೆ. ಸೊಪ್ಪು, ತರಕಾರಿಗಳು ಸರಿಯಾಗಿ ಮಾರುಕಟ್ಟೆಗೆ ಪೂರೈಕೆಯಾಗಲು ತೊಡಗಿದ ಬಳಿಕ ಬೆಲೆ ಇಳಿಯಬಹುದು ಎನ್ನುತ್ತಾರೆ ವ್ಯಾಪಾರಿಗಳು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
