Bengaluru News: ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ; 11 ಇಂಜಿನಿಯರ್‌ಗಳ ಹೆಸರು ಸೇರಿ 1,100 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
2023ರ ಜನವರಿ 10 ರಂದು ಬೆಂಗಳೂರಿನಲ್ಲಿ ಸಂಭವಿಸಿದ್ದ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣದಲ್ಲಿ 1,100 ಪುಟಗಳ ಸಮಗ್ರ ಚಾರ್ಜ್ ಶೀಟ್ ಸಲ್ಲಿಸಿರುವ ಪೊಲೀಸರು, 11 ಮಂದಿ ಇಂಜಿನಿಯರ್‌ಗಳ ಪಾತ್ರದ ಬಗ್ಗೆ ಉಲ್ಲೇಖಿಸಿದ್ದಾರೆ.
ಬೆಂಗಳೂರು: ಹೆಣ್ಣೂರು ಮುಖ್ಯರಸ್ತೆಯಲ್ಲಿ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣದ (Metro Pillar Collapse Case) ತನಿಖೆ ನಡೆಸಿರುವ ಪೊಲೀಸರು ಐದು ತಿಂಗಳ ಬಳಿಕ ಬಿಎಂಆರ್‌ಸಿಎಲ್‌ನ 11 ಮಂದಿ ಇಂಜಿನಿಯರ್‌ಗಳ ವಿರುದ್ಧ 1,100 ಪುಟಗಳ ಸಮಗ್ರ ಚಾರ್ಜ್ ಶೀಟ್ (Charge Sheet) ಸಲ್ಲಿಸಿದ್ದಾರೆ.
ಖಾಸಗಿ ಕಂಪನಿಯಾದ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ) ಹಾಗೂ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್( ಬಿಎಂಆರ್‌ಸಿಎಲ್) ಇಂಜಿನಿಯರ್‌ಗಳ ಲೋಪವನ್ನು ಉಲ್ಲೇಖಿಸಲಾಗಿದೆ. ಐಟಿ ತಜ್ಞರು, ಎಫ್‌ಎಸ್ಎಲ್ ಸೇರಿದಂತೆ ವಿವಿಧ ತಂಡಗಳು ಘಟನಾ ಸ್ಥಳದಲ್ಲಿ ಪರಿಶೀಲಿಸಿ ನೀಡಲಾಗಿದ್ದ ವರದಿ ಹಾಗೂ ಪೊಲೀಸರ ತನಿಖೆಯಿಂದ ತಿಳಿದು ಬಂದ ಮಾಹಿತಿ ಆಧಾರದ ಮೇಲೆ ಚಾರ್ಜ್ ಶೀಟ್ ಸಿದ್ಧಪಡಿಸಲಾಗಿತ್ತು.
2023ರ ಜನರಿ 10 ರಂದು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ತೇಜಸ್ವಿನಿ (28) ಅವರು ತಮ್ಮ ಇಬ್ಬರು ಮಕ್ಕಳ ಹಾಗೂ ಪತಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಇವರ ಮೇಲೆ ನಿರ್ಮಾಣ ಹಂತದ ಪಿಲ್ಲರ್ ಬಿದ್ದಿತ್ತು. ದುರಂತದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ತೇಜಸ್ವಿ ಮತ್ತು ಆಕೆಯ ಪುತ್ರ ಸ್ಥಳದಲ್ಲೇ ಮೃತಪಟ್ಟಿದ್ದರು. ಪತಿ ಹಾಗೂ ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿದ್ದರು.
ಐಐಟಿ ಹೈದರಾಬಾದ್ ನೀಡಿದ್ದ ವರದಿಯನ್ನೂಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದದೆ. ಸಾಕಷ್ಟು ಬೆಂಬಲದ ಕೊರತೆ, ಅಸಮರ್ಪಕ ವಿನ್ಯಾಸವೂ ನಿರ್ಮಾಣ ಹಂತದ ಪಿಲ್ಲರ್ ಕುಸಿತಕ್ಕೆ ಕಾರಣವಾಗಿದೆ. ಇದು ಬಿಎಂಆರ್‌ಸಿಎಲ್‌ನ ಬೇಜವಾಬ್ದಾರಿ ಎಂದು ತಜ್ಞರು ಹೇಳಿದ್ದರು.
ಬೆಂಗಳೂರಿನಲ್ಲಿ ಈ ಹಿಂದೆಯೂ ಇದೇ ರೀತಿಯ ಪ್ರಕರಣಗಳ ಹಲವು ಬಾರಿ ಮಾಡಿದ್ದಾರೆ. ಇಂಜಿನಿಯರ್‌ಗಳ ಪಠ್ಯಪುಸ್ತಕದಲ್ಲಿರುವುದನ್ನೇ ಅವಲಂಬಿಸುವ ಬದಲು ಭಾಗಶಃ ತಮ್ಮ ಅದೃಷ್ಟ ಮತ್ತು ಪರಿಣತಿಯ ಮೇಲೆ ಅವಲಂಬಿತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಬಿಎಂಆರ್‌ಸಿಎಲ್‌ನಿಂದ ಮಾಹಿತಿ ಪಡೆಯು ಹಿಂದೂಸ್ತಾನ್ ಟೈಮ್ಸ್ ಸಂಪರ್ಕಿಸುವ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ. ಐಐಎಸ್‌ಸಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪೊ.ಜೆ.ಎಂ.ಚಂದ್ರ ಕಿಶನ್ ಅವರರು ವಿಚಾರಣೆ ನಡೆಸಿ ಬಿಎಂಆರ್‌ಸಿಎಲ್‌ಗೆ ವರದಿ ಸಲ್ಲಿಸಿದ್ದು, ಮೆಟ್ರೋ ಪಿಲ್ಲರ್ ಕುಸಿತಕ್ಕೆ ಎತ್ತರದ ಬಲವರ್ಧನೆಯ ಕೇಜ್‌ಗೆ ಅಸಮರ್ಪಕ ವಿನ್ಯಾಸವೇ ಪ್ರಮುಖ ಕಾರಣ ಎಂಬುದನ್ನು ಪರಿಶೀಲನೆ ವೇಳೆ ಕಂಡುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಕುಸಿತದ ಪ್ರಕರಣ ಸಂಬಂಧ ಜನವರಿ 13 ರಂದು ಕರ್ನಾಟಕ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿತ್ತು. ನಿರ್ಮಾಣ ಕಾರ್ಯವನ್ನು ಕೈಗೊಳ್ಳುವಾಗ ಸೂಚಿಲಾಗಿರುವ ಸುರಕ್ಷತಾ ಕ್ರಮಗಳು ಹಾಗೂ ಅಂತರ ಸುರಕ್ಷಾ ಕ್ರಮಗಳು ಟೆಂಡರ್ ಡಾಕ್ಯುಮೆಂಟ್ ಅಥವಾ ಒಪ್ಪಂದದ ಭಾಗವಾಗಿದೆಯೇ ಎಂಬ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು.
ದುರಂತದ ಬಗ್ಗೆ ತನಿಖೆ ನಡೆಸಿದ್ದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರಿನ ತಜ್ಞರ ತಂಡ, 18 ಮೀಟರ್ ಎತ್ತರದ ಕಂಬಕ್ಕೆ ಯಾವುದೇ ಆಸರೆ ಇಲ್ಲದಿದ್ದರಿಂದ ರಸ್ತೆಗೆ ವಾಲಿದೆ ಎಂಬುದು ಪರಿಶೀಲನೆ ವೇಳೆ ಗೊತ್ತಾಗಿದೆ. ಅನಾಹುತಕ್ಕೆ ಇದೇ ಕಾರಣ. ಚೌಕಟ್ಟಿಗೆ ಆಸರೆಯಾಗಿ ಕಟ್ಟಲಾಗಿದ್ದ ಐರನ್ ರೋಪ್ಗಳನ್ನು ತೆರವುಗೊಳಿಸಿದ ಬಳಿಕ ಒಂದು ದಿನ ಪೂರ್ತಿ ಅಸುರಕ್ಷಿತ ಸ್ಥಿತಿಯಲ್ಲಿ ಇತ್ತು ಎಂದು ವರದಿಯಲ್ಲಿ ತಿಳಿಸಿತ್ತು.
ಜನವರಿ 10 ರಂದು ಬೆಳಗ್ಗೆ ಹೆಣ್ಣೂರು ಮುಖ್ಯರಸ್ತೆಯ ಎಚ್‌ಆರ್‌ಬಿಆರ್ ಲೇಔಟ್‌ನ ರಿಂಗ್ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದಿತ್ತು. ಬೈಕ್‌ನಲ್ಲಿ ಹೋಗುತ್ತಿದ್ದ ತೇಜಸ್ವಿನಿ, ಮೂರು ವರ್ಷದ ಗುಂಡು ಮಗು ಮೃತಪಟ್ಟಿತ್ತು. ಪತಿ ಲೋಹಿತ್ ಕುಮಾರ್ ಹಾಗೂ ಒಂದು ವರ್ಷದ ಹೆಣ್ಣು ಮಗು ಗಂಭೀರವಾಗಿ ಗಾಯಗೊಂಡಿದ್ದರು.
ಈ ಸಂಬಂಧ ಮೃತಳ ಪತಿ ಲೋಹಿತ್ ಕುಮಾರ್ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಬಿಎಂಆರ್‌ಸಿಎಲ್ ಹಾಗೂ ಪಿಲ್ಲರ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ನಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿಯ 8 ಮಂದಿ ವಿರುದ್ಧ ಕೇಸ್ ದಾಖಲಾಗಿತ್ತು. ಬಿಎಂಪಿಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಸೇರಿ 15 ಅಧಿಕಾರಿಗಳ ವಿಚಾರಣೆ ನಡೆಸಿತ್ತು. ಕಳೆದ ಗುರುವಾರ (ಜೂನ್ 22) ಪೊಲೀಸರು ಹೈಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.