Bengaluru News: ಬೆಂಗಳೂರಲ್ಲಿ ಬೈಕ್ ಚಲಾಯಿಸುತ್ತಿದ್ದ ಯುವಕನ ಪ್ಯಾಂಟ್ ಜೇಬಲ್ಲಿದ್ದ ಮೊಬೈಲ್ ಸ್ಫೋಟ; ಆಸ್ಪತ್ರೆಗೆ ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಂಗಳೂರಲ್ಲಿ ಬೈಕ್ ಚಲಾಯಿಸುತ್ತಿದ್ದ ಯುವಕನ ಪ್ಯಾಂಟ್ ಜೇಬಲ್ಲಿದ್ದ ಮೊಬೈಲ್ ಸ್ಫೋಟ; ಆಸ್ಪತ್ರೆಗೆ ದಾಖಲು

Bengaluru News: ಬೆಂಗಳೂರಲ್ಲಿ ಬೈಕ್ ಚಲಾಯಿಸುತ್ತಿದ್ದ ಯುವಕನ ಪ್ಯಾಂಟ್ ಜೇಬಲ್ಲಿದ್ದ ಮೊಬೈಲ್ ಸ್ಫೋಟ; ಆಸ್ಪತ್ರೆಗೆ ದಾಖಲು

ಬೆಂಗಳೂರಿನ ವೈಟ್‌ಫೀಲ್ಡ್‌ ಪ್ರದೇಶದಲ್ಲಿ ಬೈಕ್‌ ರೈಡ್ ಮಾಡುತ್ತಿದ್ದ ಯುವಕನ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟವಾಗಿ, ಆತ ಗಂಭೀರ ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಇಂತಹ ಘಟನೆಗಳು ಪದೇಪದೆ ನಡೆಯುತ್ತಿದ್ದು, ಅನುಸರಿಸಬೇಕಾದ 3 ಸುರಕ್ಷಾ ಸಲಹೆಗಳು.

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಯುವಕನೊಬ್ಬನ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟವಾಗಿದ್ದು, ಆತ ಗಂಭೀರ ಗಾಯಗೊಂಡಿದ್ದಾನೆ. ಬೈಕ್ ಚಲಾಯಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಯುವಕನೊಬ್ಬನ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟವಾಗಿದ್ದು, ಆತ ಗಂಭೀರ ಗಾಯಗೊಂಡಿದ್ದಾನೆ. ಬೈಕ್ ಚಲಾಯಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಬೆಂಗಳೂರು: ಬೈಕ್‌ ಸವಾರಿ ಮಾಡುವಾಗ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌ ಸ್ಫೋಟವಾಗಿ ಯುವಕನೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ವರದಿಯಾಗಿದೆ.

ಗಂಭೀರ ಗಾಯಗೊಂಡ ಯುವಕನನ್ನು ಪ್ರಸಾದ್‌ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪ್ರಸಾದ್ ಬುಧವಾರ (ಜ.3) ಬೈಕ್ ರೈಡ್ ಮಾಡುವಾಗ ಮೊಬೈಲ್ (ಸ್ಮಾರ್ಟ್‌ಫೋನ್‌) ಅನ್ನು ಪ್ಯಾಂಟ್ ಜೇಬಿನಲ್ಲಿರಿಸಿದ್ದರು. ಆಗ ಅಕಸ್ಮಾತ್ ಆಗಿ ಅದು ಸ್ಫೋಟವಾಗಿದೆ. ಸ್ಫೋಟದ ತೀವ್ರತೆಗೆ ಸೊಂಟದ ಕೆಳಭಾಗ ಸುಟ್ಟು ಹೋಗಿದ್ದು, ಗಂಭೀರ ಗಾಯಗಳಾಗಿವೆ. ಕೂಡಲೇ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಟ್‌ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ನಡುವೆ, ಮೊಬೈಲ್ ಸ್ಫೋಟವಾಗಿ ಪ್ರಸಾದ್ ಗಾಯಗೊಂಡ ಘಟನೆ ಅವರು ಮೊಬೈಲ್ ಖರೀದಿಸಿದ್ದ ಶೋರೂಂ ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ಅವರು ಸ್ಪಂದಿಸಿದ್ದು, ಪ್ರಸಾದ್ ಅವರ ಅಲ್ಪ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಮತ್ತು ಮೊಬೈಲ್‌ನ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರ ಗಾಯಗೊಂಡಿರುವ ಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದ್ದು, 4 ಲಕ್ಷ ರೂಪಾಯಿ ವೆಚ್ಚಬರಬಹುದು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಮೊಬೈಲ್ ಶೋರೂಂನವರೇ ಭರಿಸಬೇಕು ಎಂದು ಯುವಕನ ಆಪ್ತರು ಒತ್ತಾಯಿಸಿದ್ದಾರೆ. ಆದರೆ ಶೋರೂಂನವರು ಅದಕ್ಕೆ ಸಿದ್ಧರಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ .

ಕಳೆದ ಕೆಲವು ತಿಂಗಳ ಅವಧಿಯಲ್ಲಿ ಈ ರೀತಿ ಮೊಬೈಲ್‌ ಸ್ಫೋಟಗೊಂಡ ಪ್ರಕರಣಗಳು ದೇಶದಲ್ಲಿ ಸಂಭವಿಸಿವೆ.

ಶಿವಮೊಗ್ಗ ಜಿಲ್ಲೆಯಲ್ಲೂ ಇದೇ ರೀತಿ ಮೊಬೈಃಲ್‌ ಸ್ಫೋಟ: ಕಳೆದ ಸೆಪ್ಟೆಂಬರ್‌ನಲ್ಲಿ (2023 ಸೆಪ್ಟೆಂಬರ್‌) ಶಿವಮೊಗ್ಗ ಸೊರಬ ತಾಲೂಕು ಕುಪ್ಪಗಡ್ಡೆ ಗ್ರಾಮದಲ್ಲಿ ಯುವಕನೊಬ್ಬ ಇದೇ ರೀತಿ ಬೈಕ್‌ನಲ್ಲಿ ಹೋಗುವಾಗ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟವಾಗಿತ್ತು. ಸ್ಫೋಟದ ತೀವ್ರತೆಗೆ ಚಾಲನೆಯ ನಿಯಂತ್ರಣ ಕಳೆದುಕೊಂಡ ಯುವಕ ಬೈಕ್‌ನೊಂದಿಗೆ ಕೆರೆಗೆ ಬಿದ್ದಿದ್ದ. ತವನಂದಿ ಗ್ರಾಮದ ಬಿ.ಶರತ್ ಈ ರೀತಿ ಗಾಯಗೊಂಡ ಯುವಕ. ತವನಂದಿ ಗ್ರಾಮದಿಂದ ಕುಪ್ಪಗಡ್ಡೆಗೆ ತೆರಳುವ ಸಂದರ್ಭದಲ್ಲಿ ಮೊಬೈಲ್ ಸ್ಫೋಟಗೊಂಡಿತ್ತು. ಅದೃಷ್ಟವಶಾತ್ ಪ್ರಾಣಕ್ಕೆ ಅಪಾಯವಾಗಿಲ್ಲ.

ಆದರೆ, ಯುವಕನ ಬಲ ತೊಡೆ ಭಾಗದಲ್ಲಿ ಗಂಭೀರ ಗಾಯವಾಗಿತ್ತು. ಚೀನಾ ನಿರ್ಮಿತ ಮೊಬೈಲ್ ಆಗಿದ್ದು, ಬೆಂಗಳೂರಿನಿಂದ ಖರೀಸಿದ್ದಾಗಿ ಶರತ್ ಹೇಳಿಕೊಂಡಿದ್ದ.

ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿ ಶರ್ಟ್‌ ಜೇಬಲ್ಲಿದ್ದ ಮೊಬೈಲ್ ಸ್ಫೋಟ: ಕೇರಳದ ತ್ರಿಶೂರ್ ಜಿಲ್ಲೆಯ ಮರೋಟ್ಟಿಚ್ಚಾಲ್‌ ಪ್ರದೇಶದ ಟೀ ಅಂಗಡಿಯಲ್ಲಿ ಕುಳಿತಿದ್ದ 76ರ ವರ್ಷದ ವೃದ್ಧರೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ಹೊತ್ತಿ ಉರಿದಿತ್ತು. ಅವರು ಕೂಡಲೇ ಜೇಬಿನಿಂದ ಫೋನ್ ತೆಗೆದು ಹೊರ ಬಿಸಾಕಿದ್ದರು. ಹೀಗಾಗಿ ಅವರ ಎದೆಯ ಭಾಗದಲ್ಲಿ ಸಣ್ಣಪುಟ್ಟ ಸುಟ್ಟಗಾಯಗಳಾಗಿದ್ದವು. ಇದರ ವಿಡಿಯೋ ವೈರಲ್ ಆಗಿತ್ತು. ಈ ಘಟನೆ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದಿತ್ತು.

ಕೇರಳದ ಕಲ್ಲಿಕೋಟೆಯಲ್ಲಿ ಕಳೆದ ಮೇ ತಿಂಗಳಲ್ಲಿ ಮೊಬೈಲ್ ಸ್ಫೋಟ: ಕೇರಳದ ಕಲ್ಲಿಕೋಟೆಯಲ್ಲಿ ಯುವಕನೊಬ್ಬನ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟವಾಗಿ ಗಂಭೀರಗಾಯಗೊಂಡಿದ್ದ. ಅದೃಷ್ಟವಶಾತ್ ಪ್ರಾಣಕ್ಕೆ ಅಪಾಯವಾಗಿಲ್ಲ. ಕಲ್ಲಿಕೋಟೆಯ ಪಯ್ಯನಕಾಲ್‌ ನಿವಾಸಿ 23 ವರ್ಷ ಫರೀಸ್ ರೆಹಮಾನ್‌ ಗಾಯಗೊಂಡ ಯುವಕ. ಈತ ಬಳಿಕ ಗ್ರಾಹಕ ನ್ಯಾಯಾಲಯದಲ್ಲಿ ಶೋರೂಂ ವಿರುದ್ಧ ದೋಷಪೂರಿತ ಬ್ಯಾಟರಿ ಹೊಂದಿದ ಮೊಬೈಲ್ ಮಾರಾಟ ಮಾಡಿದ್ದಕ್ಕೆ ಕೇಸ್ ದಾಖಲಿಸಿದ್ದ ಎಂದು ವರದಿಯಾಗಿದೆ.

ಮೊಬೈಲ್ ಫೋನ್ (ಸ್ಮಾರ್ಟ್‌ಫೋನ್‌/ ಫೀಚರ್ ಫೋನ್‌) ಗಳನ್ನು ಪ್ಯಾಂಟ್ ಜೇಬು ಅಥವಾ ಶರ್ಟ್‌ ಜೇಬಿನಲ್ಲಿಡುವಾಗ ಗಮನಿಸಬೇಕಾದ 3 ಅಂಶಗಳು

1. ಬೈಕ್‌/ ಸ್ಕೂಟರ್‌ಗಳಲ್ಲಿ ಅಥವಾ ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಅನ್ನು ಪ್ಯಾಂಟ್ ಜೇಬಿನಲ್ಲಿ ಇರಿಸಿಕೊಳ್ಳಬೇಡಿ. ಕುಳಿತುಕೊಳ್ಳುವ ಭಂಗಿಯಲ್ಲಿ ಉಂಟಾಗುವ ಬಿಗಿಯಿಂದಾಗಿ ಮೊಬೈಲ್‌ ಬಿಸಿಯಾದರೆ ಅದನ್ನು ಜೇಬಿನಿಂದ ಹೊರ ತೆಗೆಯುವುದು ಕಷ್ಟವಾದೀತು. ಮೊಬೈಲ್ ಫೋನ್ ಇಡುವುದಕ್ಕೆ ಒಂದು ವ್ಯವಸ್ಥೆ ಮಾಡಿಕೊಳ್ಳಬೇಕು.

2 ಫೋನ್ ಬಿಸಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಂಡೇ ಉಳಿದ ಸಮಯದಲ್ಲಿ ಜೇಬಿನಲ್ಲಿಡಿ. ಪ್ರಯಾಣದ ಸಂದರ್ಭದಲ್ಲಿ ಫೋನ್ ಹಾಕುವುದಕ್ಕೆ ಒಂದು ಚೀಲ(ಪೌಚ್) ಇಟ್ಟುಕೊಂಡರೆ ಸುಗಮ.

3. ಒಂದೆಡೆ ಕುಳಿತುಕೊಳ್ಳುವುದಾದರೆ ಆಗ ಫೋನ್ ತೆಗೆದು ಹೊರಗಿಡಿ. ಶರ್ಟ್‌ ಜೇಬು ಅಥವಾ ಪ್ಯಾಂಟ್‌ ಜೇಬಿನಲ್ಲಿ ಫೋನ್ ಇರಿಸಿಕೊಂಡೇ ಕೂರುವುದು ಸುರಕ್ಷಿತ ಕ್ರಮವಲ್ಲ. ಅದರಿಂದ ಶಾರೀರಿಕ ಆರೋಗ್ಯಕ್ಕೂ ಹಾನಿ ಇದೆ.

Whats_app_banner