B R Patil: ಮೋದಿ ಮುಂದಿನ ಲೋಕಸಭಾ ಚುನಾವಣೆ ಗೆಲ್ಲುವುದಕ್ಕೆ ರಾಮಮಂದಿರದ ಮೇಲೆ ತಾವೇ ಬಾಂಬ್ ಹಾಕಿ.., ಕಾಂಗ್ರೆಸ್ ಶಾಸಕ ಪಾಟೀಲ್ ಹೇಳಿಕೆ ವಿವಾದ
ಕರ್ನಾಟಕ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಶಾಸಕ ಬಿ.ಆರ್.ಪಾಟೀಲ್ ಹೇಳಿಕೆಯ ವಿಡಿಯೋ ತುಣುಕನ್ನು ಶೇರ್ ಮಾಡಿ ಗಮನಸೆಳೆದಿದೆ. ಮೋದಿ ಮುಂದಿನ ಲೋಕಸಭಾ ಚುನಾವಣೆ ಗೆಲ್ಲುವುದಕ್ಕೆ ರಾಮಮಂದಿರದ ಮೇಲೆ ತಾವೇ ಬಾಂಬ್ ಹಾಕಿ… ಎಂಬ ಮಾತುಗಳೊಂದಿಗೆ ವಿಡಿಯೋ ತುಣುಕು ಶುರುವಾಗಿದೆ..

ಲೋಕಸಭೆ ಚುನಾವಣೆ 2024ರ ಹಿನ್ನೆಲೆಯಲ್ಲಿ ಈಗಾಗಲೇ ರಾಜಕೀಯವಾಗಿ ಮತ ಧ್ರುವೀಕರಣ ಮಾಡುವ ಕೆಲಸ ಶುರುವಾಗಿದೆ. ರಾಜಕೀಯ ವಾಕ್ಸಮರ, ವಿವಾದಾತ್ಮಕ ಹೇಳಿಕೆಗಳು ಒಂದೊಂದಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಕಾಣಲಾರಂಭಿಸಿವೆ. ಈ ಪೈಕಿ ಹೊಸದು ಕರ್ನಾಟಕದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರ ಹೇಳಿಕೆ.
ಟ್ರೆಂಡಿಂಗ್ ಸುದ್ದಿ
ಕರ್ನಾಟಕ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಶಾಸಕ ಬಿ.ಆರ್.ಪಾಟೀಲ್ ಹೇಳಿಕೆಯ 13 ಸೆಕೆಂಡ್‌ನ ವಿಡಿಯೋ ತುಣುಕನ್ನು ಶೇರ್ ಮಾಡಿ ಗಮನಸೆಳೆದಿದೆ. ಶಾಸಕ ಬಿಆರ್ ಪಾಟೀಲ್ ಅವರು ವಾರ್ತಾಭಾರತಿಗೆ ನೀಡಿದ ಸಂದರ್ಶನದ ತುಣುಕಿನಂತೆ ಇದು ಅದು.
ಆ ವಿಡಿಯೋದಲ್ಲಿ ಶಾಸಕ ಬಿ.ಆರ್.ಪಾಟೀಲ್, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದಂತೆ ಕಾಣುತ್ತಿದೆ. ಆದರೆ ನೇರವಾಗಿ ಪ್ರಧಾನಿ ಮೋದಿ ಅವರ ಹೆಸರನ್ನು ಉಲ್ಲೇಖ ಮಾಡಿ, ಮುಂಬರುವ ಲೋಕಸಭೆ ಚುನಾವಣೆಗೆ ಹಿಂದೂ ಮತಗಳನ್ನು ಕ್ರೋಢೀಕರಿಸಲು ಕೇಸರಿ ಪಕ್ಷವು ರಾಮಮಂದಿರಕ್ಕೆ ಬಾಂಬ್ ಹಾಕಬಹುದು ಮತ್ತು ಅದರ ಆರೋಪವನ್ನು ಮುಸ್ಲಿಂ ಸಮುದಾಯದ ಮೇಲೆ ಹೊರಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಶಾಸಕ ಬಿ.ಆರ್.ಪಾಟೀಲ್ ಕುರಿತು ಕರ್ನಾಟಕ ಬಿಜೆಪಿ ಹೇಳಿರುವುದೇನು
ಹಿಂದೂ ಧರ್ಮದ ಬುನಾದಿಯನ್ನೇ ಪ್ರಶ್ನಿಸಲು ಹೊರಟ ಕಾಂಗ್ರೆಸ್ಸಿಗರು ಈಗಲೇ ರಾಮಮಂದಿರದ ಮೇಲೆ ಕಾಕದೃಷ್ಟಿ ಬೀರಿದ್ದಾರೆ. ರಾಮಮಂದಿರವನ್ನೇ ಅಲುಗಾಡಿಸಿ ಹಿಂದೂ-ಮುಸ್ಲಿಂ ದಂಗೆಯೆಬ್ಬಿಸಿ ಅದನ್ನು ಸರ್ಕಾರದ ತಲೆಗೆ ಕಟ್ಟಲು ಕಾಂಗ್ರೆಸ್ (@INCIndia) ಈಗಾಗಲೇ ಸಜ್ಜಾಗಿರುವ ವಿಚಾರವನ್ನು ಸಚಿವರಾದ ಬಿ. ಆರ್. ಪಾಟೀಲರು ಬಾಯಿ ತಪ್ಪಿ ಹೇಳಿದ್ದಾರೆ ಎಂದು ಆ ವಿಡಿಯೋ ಜತೆಗೆ ಬಿಜೆಪಿ ಟೀಕಿಸಿದೆ.
ವಿಡಿಯೋ ತುಣುಕಿನಲ್ಲಿರುವಂತೆ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದು ಇಷ್ಟು -
“ಮೋದಿ ಮುಂದಿನ ಲೋಕಸಭಾ ಚುನಾವಣೆ ಗೆಲ್ಲುವುದಕ್ಕೆ ರಾಮಮಂದಿರದ ಮೇಲೆ ತಾವೇ ಬಾಂಬ್ ಹಾಕಿ ಮುಸಲ್ಮಾನರ ಮೇಲೆ ಆರೋಪ ಹೊರಿಸಿ ಹಿಂದೂಗಳಲ್ಲಿ ಒಗ್ಗಟ್ಟು ಜೋಡಿಸಿ ಮತ್ತೆ ಚುನಾವಣೆ ಗೆಲ್ಲುವಂತಹ ಸಾಧ್ಯತೆಗಳು ಇದಾವೆ. ಅವರು ಇದಕ್ಕು ಕೂಡ ಹೇಸುವುದಿಲ್ಲ”
ಜುಲೈನಲ್ಲಿ "ಸಿಎಂಗೆ ಪತ್ರ"ದ ಮೂಲಕ ಗಮನಸೆಳದವರು ಬಿ ಆರ್ ಪಾಟೀಲ್
ಜುಲೈನಲ್ಲಿ ವೈರಲ್ ಆಗಿದ್ದ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸಿದ್ದು ಎನ್ನಲಾದ ಬಿ.ಆರ್.ಪಾಟೀಲ್ ಅವರ ಲೆಟರ್ ಹೆಡ್ ನಕಲಿ ಎಂದು ಹೇಳಲಾಯಿತು. ಆ ಬಳಿಕ, ಆ ಪತ್ರದ ವಿಚಾರಕ್ಕೆ ನಾನು ಕ್ಷಮೆ ಕೇಳಲ್ಲ. ನಾನು ಹೇಡಿಯಲ್ಲ ಎಂದು ಹೇಳಿದ್ದ ಬಿ.ಆರ್. ಪಾಟೀಲ್ ಅವರು ಅಳಂದ ಕ್ಷೇತ್ರದ ಶಾಸಕ. ಕಲಬುರಗಿಯ ಇಬ್ಬರು ಸಚಿವರ ವಿರುದ್ಧ ಅವರಿಗೆ ಅಸಮಾಧಾನ ಇತ್ತು ಎಂಬ ಆರೋಪವೂ ಕೇಳಿ ಬಂದಿತ್ತು. ಬಳಿಕ ಆ ವಿಚಾರ ಅಲ್ಲಿಗೆ ತಣ್ಣಗಾಗಿತ್ತು.
ನನ್ನ ಹೆಸರಲ್ಲಿ ಹರಿದಾಡುತ್ತಿರುವುದು ಫೇಕ್ ಲೆಟರ್, ಸಿಎಂಗೆ ನಾನು ಯಾವುದೇ ಪತ್ರ ಬರೆದಿಲ್ಲ ಎಂದು ಶಾಸಕ ಬಿ.ಆರ್. ಪಾಟೀಲ ಅಂದು ಸ್ಪಷ್ಟೀಕರಣ ಕೂಡ ನೀಡಿದ್ದರು.
ಅದಾದ ಬಳಿಕ, ವೈರಲ್ ಆಗುತ್ತಿರುವ ನಕಲಿ ಪತ್ರದ ಕುರಿತು ತನಿಖೆ ನಡೆಸಬೇಕು ಎಂದು ಕಲಬುರಗಿ ಎಸ್ಪಿಗೆ ಆಳಂದ ಶಾಸಕ ಬಿಆರ್ ಪಾಟೀಲ್ ದೂರು ಕೂಡ ಕೊಟ್ಟಿದ್ದರು.