ಉಳಿತಾಯ ಖಾತೆ ತೆರೆದರೆ ಹಣ ವರ್ಗಾವಣೆ ವದಂತಿ; ಬೆಂಗಳೂರಿನಲ್ಲಿ ಅಂಚೆ ಕಚೇರಿಗಳ ಮುಂದೆ ಮಹಿಳೆಯರ ಸರತಿ ಸಾಲು, ಸುಳ್ಳು ಸುದ್ದಿ ನಂಬದಂತೆ ತಾಕೀತು
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆೆರೆದರೆ ಉಚಿತವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂಬುದು ಸುಳ್ಳು ಸುದ್ದಿ. ಇದನ್ನು ಯಾರೂ ನಂಬಬೇಡಿ ಎಂದು ಅಧಿಕಾಗಳು ಮಹಿಳೆಯರಿಗೆ ತಾಕೀತು ಮಾಡಿದ್ದಾರೆ. (ವರದಿ: ಎಚ್.ಮಾರುತಿ)

ಬೆಂಗಳೂರು: ರಾಜಧಾನಿ ಬೆಂಗಳೂರು ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಮಹಿಳೆಯರು ಅಂಚೆ ಕಚೇರಿಗಳಿಗೆ ದಾಂಗುಡಿಯಿಡುತ್ತಿದ್ದಾರೆ. ಒಂದೊಂದು ನಗರದಲ್ಲಿ ಒಂದೊಂದು ರೀತಿಯ ವದಂತಿ ಹರಡಿತ್ತು. ಬೆಂಗಳೂರಿನಲ್ಲಿ ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರುವ ಮಹಿಳೆಯರಿಗೆ ಕೆಲವು ರಾಜಕೀಯ ಪಕ್ಷಗಳು 8 ಸಾವಿರ ರೂಪಾಯಿ ಜಮಾ ಮಾಡುತ್ತವೆ ಎಂಬ ವದಂತಿ ಹಬ್ಬಿದ್ದರೆ, ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆಯಡಿಯಲ್ಲಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ 3 ಸಾವಿರ ರೂಪಾಯಿ ಜಮಾ ಮಾಡಲಾಗುವುದು ಎಂಬ ವದಂತಿ ಹುಬ್ಬಳ್ಳಿಯಲ್ಲಿ ಹರಿದಾಡುತ್ತಿತ್ತು. ಇದನ್ನು ನಂಬಿದ ಮಹಿಳೆಯರು ಅಂಚೆ ಕಚೇರಿಗಳಿಗೆ ಮುಗಿ ಬಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಸೋಮವಾರ ಮುಂಜಾನೆ 6 ಗಂಟೆಯಿಂದಲೇ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಮಹಿಳೆಯರು ಸರತಿ ಸಾಲುಗಟ್ಟಿ ನಿಂತಿದ್ದರು. ಈ ಅಂಚೆ ಕಚೇರಿಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಖಾತೆಗಳನ್ನು ತೆರಯಲು ಅವಕಾಶ ಮಾಡಿಕೊಡಲಾಗಿತ್ತು. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಕೌಂಟ್ ತೆರೆದವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂಬ ವದಂತಿಗಳು ಕಳೆದ ವಾರಾಂತ್ಯದಲ್ಲಿ ಹರಿದಾಡುತ್ತಿದ್ದವು. ಇದರಿಂದ ಮಹಿಳೆಯರು ಸೋಮವಾರ (ಮೇ 27) ಪೋಸ್ಟ್ ಆಫೀಸ್ ಗಳಿಗೆ ಮುಗಿ ಬಿದ್ದಿದ್ದರು.
ಎರಡು ವರ್ಷಗಳ ಹಿಂದೆಯೇ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಕೌಂಟ್ ಯೋಜನೆಯನ್ನು ಪರಿಚಯಿಸಲಾಗಿದ್ದು, ಇದು ಉಳಿತಾಯ ಖಾತೆಯಾಗಿರುತ್ತದೆ. 7,200 ರೂಪಾಯಿ ಪಾವತಿಸಿ ಯಾರು ಬೇಕಾದರೂ ಈ ಖಾತೆಯನ್ನು ಆರಂಭಿಸಬಹುದು. ಆದರೆ ಈಗ ವದಂತಿ ಹರಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಖಾತೆ ತೆರೆಯಲು ಮುಂದಾಗಿದ್ದಾರೆ ಎಂದು ಅಂಚೆ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಕೆಲವು ಅಂಚೆ ಕಚೇರಿಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ಬಳಸಿಕೊಂಡು ರಾತ್ರಿ 11 ಗಂಟೆಯವರೆಗೂ ಕೆಲಸ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಣ ವರ್ಗಾಯಿಸುವ ಯಾವುದೇ ಯೋಜನೆ ಇಲ್ಲ ಎಂದರೂ ನಂಬದ ಜನ
ಈ ಖಾತೆ ತರೆದರೆ ಹಣ ಪಾವತಿಯಾಗುತ್ತದೆ ಎಂದು ಕೆಲವರು ನಂಬಿದ್ದರೆ ಈಗಾಗಲೇ ಈ ಖಾತೆ ಹೊಂದಿರುವ ಮಹಿಳೆಯರಿಗೆ ಹಣ ವರ್ಗಾವಣೆಯಾಗುವ ಪ್ರಕ್ರಿಯೆ ಆರಂಭವಾಗಿದೆ ಎಂದೂ ನಂಬಿಕೊಂಡಿದ್ದಾರೆ. ಅಂಚೆ ಕಚೇರಿಯ ಪ್ರವೇಶ ದ್ವಾರದಲ್ಲಿಯೇ ಈ ರೀತಿ ಹಣ ವರ್ಗಾಯಿಸುವ ಯಾವುದೇ ಯೋಜನೆ ಇಲ್ಲ ಎಂದು ಪೋಸ್ಟರ್ ಹಾಕಿದ್ದರೂ ಸಾರ್ವಜನಿಕರು ನಂಬುತ್ತಿಲ್ಲ. ಖಾತೆಯನ್ನು ತೆರೆಯಲೇಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಎಂದೂ ಅಂಚೆ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಗೆ ಸೋಮವಾರ (ಮೇ 27) ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಮಹಿಳೆಯರು ಆಗಮಿಸಿದ್ದಾರೆ. ಆದರೆ ದಿನವೊಂದಕ್ಕೆ ಗರಿಷ್ಠ 200 ಖಾತೆಗಳನ್ನು ತೆರೆಯಲು ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲೂ ಇದೇ ಪರಿಸ್ಥಿತಿ ಮುಂದುವರೆದಿತ್ತು. ನಗರದ ವಿವಿಧ ಅಂಚೆ ಕಚೇರಿಗಳ ಬಳಿ ಮಹಿಳೆಯರು 8 ಗಂಟೆಯಿಂದಲೇ ಸಾಲುಗಟ್ಟಿ ನಂತಿದ್ದರು. ಮೋದಿ ಕಾರ್ಡ್ , ಮೋದಿ ಖಾತೆ ಎಂಬ ಯಾವುದೇ ಯೋಜನೆ ಇಲ್ಲ ಎಂದು ಅಂಚೆ ಕಚೇರಿ ಅಧಿಕಾರಿಗಳು ಮನವರಿಕೆ ಮಾಡಿಕೊಡುತ್ತಿದ್ದರೂ ಮಹಿಳೆಯರು ನಂಬುವ ಸ್ಥಿತಿ ಇರಲಿಲ್ಲ. ಕೇವಲ ಬಾಯಿ ಮಾತಿನ ಮೂಲಕ ಇಂತಹ ವದಂತಿಗಳು ಹರಿದಾಡುತ್ತಿವೆ. ಮಹಿಳೆಯರು ನಂಬುತ್ತಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 6000 ರೂಪಾಯಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 8,500 ರೂಪಾಯಿ ಪಾವತಿಸುತ್ತಾರೆ ಎಂಬ ಸುದ್ದಿ ಇದೆ. ಆದ್ದರಿಂದ ಈಗಲೇ ಖಾತೆ ತೆರಯಲು ಆಗಮಿಸಿದ್ಧೇವೆ ಎಂದು ಮಹಿಳೆಯರು ಹೇಳುತ್ತಿದ್ದಾರೆ. ಒಟ್ಟಾರೆ ಇಂತಹ ವದಂತಿಗಳನ್ನು ನಂಬಿದ ಮಹಿಳೆಯರು ಅಂಚೆ ಕಚೇರಿಗಳ ಮುಂದೆ ಜಮಾಯಿಸುತ್ತಿದ್ದಾರೆ. ಆದರೆ ಇದರಿಂದ ಅಂಚೆ ಕಚೇರಿ ಸಿಬ್ಬಂದಿ ಮಾತ್ರ ಹೈರಾಣಾಗಿದ್ದಾರೆ ಎನ್ನುವುದಂತೂ ಸತ್ಯ. (ವರದಿ: ಎಚ್.ಮಾರುತಿ)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
