ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಕರ್ನಾಟಕದಲ್ಲಿ 3.25 ಕೋಟಿ, ಬೆಂಗಳೂರಲ್ಲಿ 2.68 ಕೋಟಿ, ದಂಡ ವಸೂಲಿಗೆ ಬಾಕಿ-bengaluru news more than 3 crore traffic violations still pending for collection in karnataka including bangalore mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಕರ್ನಾಟಕದಲ್ಲಿ 3.25 ಕೋಟಿ, ಬೆಂಗಳೂರಲ್ಲಿ 2.68 ಕೋಟಿ, ದಂಡ ವಸೂಲಿಗೆ ಬಾಕಿ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಕರ್ನಾಟಕದಲ್ಲಿ 3.25 ಕೋಟಿ, ಬೆಂಗಳೂರಲ್ಲಿ 2.68 ಕೋಟಿ, ದಂಡ ವಸೂಲಿಗೆ ಬಾಕಿ

ಕರ್ನಾಟಕದಲ್ಲಿ 3.25ಕೋಟಿ ಸಂಚಾರಿ ನಿಯಮ ಉಲ್ಲಂಘಿಸಿದ ಪ್ರಕರಣಗಳು ದಂಡ ವಸೂಲಿಗೆ ಬಾಕಿ ಇವೆ. ಈ ಪೈಕಿ ಬೆಂಗಳೂರಿನಲ್ಲಿ 2.68 ಕೋಟಿ ಪ್ರಕರಣಗಳಿದ್ದು, ದಂಡ ವಸೂಲಿ ಬಾಕಿ ಮೊತ್ತ 1,475 ಕೋಟಿ ರೂ ಇದೆ. ಇದರ ವಿವರ ಇಲ್ಲಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಕರ್ನಾಟಕದಲ್ಲಿ 3.25 ಕೋಟಿ ಇದ್ದು, ಅದರಲ್ಲಿ ಬೆಂಗಳೂರಲ್ಲಿ 2.68 ಕೋಟಿ ಪ್ರಕರಣಗಳಿವೆ. ಈ ಪ್ರಕರಣ ದಂಡ ವಸೂಲಿಗೆ ಬಾಕಿ ಇರುವ ಕಾರಣ ಪೊಲೀಸರು ವಸೂಲಿಗೆ ಕ್ರಮ ತೆಗೆದುಕೊಳ್ಳಲಿದ್ದಾರೆ. (ಸಾಂಕೇತಿಕ ಚಿತ್ರ)
ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಕರ್ನಾಟಕದಲ್ಲಿ 3.25 ಕೋಟಿ ಇದ್ದು, ಅದರಲ್ಲಿ ಬೆಂಗಳೂರಲ್ಲಿ 2.68 ಕೋಟಿ ಪ್ರಕರಣಗಳಿವೆ. ಈ ಪ್ರಕರಣ ದಂಡ ವಸೂಲಿಗೆ ಬಾಕಿ ಇರುವ ಕಾರಣ ಪೊಲೀಸರು ವಸೂಲಿಗೆ ಕ್ರಮ ತೆಗೆದುಕೊಳ್ಳಲಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳು ಎಷ್ಟಿರಬಹುದು? ಸಾವಿರ ಲಕ್ಷ, ಕೋಟಿ ಊಹೂಂ, 3.25 ಕೋಟಿ ಹಳೆಯ ಪ್ರಕರಣಗಳಿವೆ. ಈ ಪ್ರಕರಣಗಳು ಇದುವರೆಗೂ ಇತ್ಯರ್ಥವಾಗಿಲ್ಲ. ಕಳೆದ ವರ್ಷ ಗೃಹ ಇಲಾಖೆ ದಂಡದಲ್ಲಿ ರಿಯಾಯಿತಿ ತೋರಿಸಿ ದಂಡ ಪಾವತಿಸಲು ಸಮಯಾವಕಾಶ ನೀಡಿದ್ದರೂ ಕೋಟಿ ಕೋಟಿ ಪ್ರಕರಣಗಳು ಬಾಕಿ ಇರುವುದು ಅಚ್ಚರಿ ಮೂಡಿಸಿದೆ.

ವಾಹನ ಮಾಲೀಕರು ದಂಡ ಪಾವತಿಸಿ ಪ್ರಕರಣ ಮುಕ್ತರಾಗುವ ಮನಸ್ಸು ಮಾಡುತ್ತಿಲ್ಲ. ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸಂಚಾರಿ ನಿಯಮಗಳು ಉಲ್ಲಂಘನೆಯಾಗಿದ್ದರೆ ಬೆಂಗಳೂರಿನಲ್ಲಿ ಎಷ್ಟು ಪ್ರಕರಣಗಳಿರಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2.68 ಕೋಟಿ ಪ್ರಕರಣಗಳು ಇತ್ಯರ್ಥಕ್ಕಾಗಿ ಕಾಯುತ್ತಿವೆ. ಇಡೀ ರಾಜ್ಯದಲ್ಲಿ 3.25 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ 1,700 ಕೋಟಿ ಹಣ ಪಾವತಿಯಾಗಬೇಕಿದ್ದರೆ ಬೆಂಗಳೂರಿನಲ್ಲಿ 1,425 ಕೋಟಿ ರೂ. ಪಾವತಿಯಾಗಬೇಕಿದೆ.

ದಂಡಕ್ಕೆ ರಿಯಾಯಿತಿ ನೀಡಿದಾಗ 138.19 ಕೋಟಿ ರೂ. ಸಂಗ್ರಹ

ಅಂಕಿಅಂಶಗಳ ಪ್ರಕಾರ ರಿಯಾಯಿತಿ ನೀಡಿದಾಗ ನಿಯಮ ಉಲ್ಲಂಘಿಸಿದವರು ಮೊದಲ ಬಾರಿಗೆ ತುಂಬು ಉತ್ಸಾಹದಿಂದ ದಂಡ ಪಾವತಿಸಲು ಮುಂದಾಗಿದ್ದಾರೆ. 2023 ರ ಫೆಬ್ರವರಿಯಲ್ಲಿ ದಂಡದಲ್ಲಿ ರಿಯಾಯಿತಿ ಪ್ರಕಟಿಸಿದಾಗ ಒಂದೇ ಬಾರಿಗೆ 138.19 ಕೋಟಿ ರೂ. ಸಂಗ್ರಹವಾಗಿತ್ತು. ಇದರಲ್ಲಿ ಬೆಂಗಳೂರುವೊಂದರಲ್ಲೇ 125.5 ಕೋಟಿ ರೂ. ಸಂಗ್ರಹವಾಗಿತ್ತು ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಹೇಳುತ್ತಾರೆ.

ನಂತರವೂ ರಿಯಾಯಿತಿ ಪ್ರಕಟಿಸಿದರೂ ನಿಯಮ ಉಲ್ಲಂಘಿಸಿದವರು ಉತ್ಸಾಹ ತೋರಲಿಲ್ಲ. 2023 ಮಾರ್ಚ್ ನಲ್ಲಿ ಮತ್ತೆ ರಿಯಾಯಿತಿ ಪ್ರಕಟಿಸಿದಾಗ 17.63 ಕೋಟಿ ರೂ.ಗಳಷ್ಟು ಮಾತ್ರ ದಂಡ ಸಂಗ್ರಹವಾಗಿತ್ತು. ಮೂರನೇ ಬಾರಿ ಜುಲೈ 6ರಿಂದ ಸೆಪ್ಟಂಬರ್ 9 ರವರೆಗೂ ರಿಯಾಯಿತಿ ಅವಧಿ ಮುಂದುವರೆಸಿದ್ದರೂ ದಂಡ ಸಂಗ್ರಹ ಇಳಿಮುಖವಾಗಿತ್ತು. ಮೂರನೇ ಬಾರಿಗೆ ಉತ್ಸಾಹ ಕಡಿಮೆಯಾಗಿ ಕೇವಲ 12.41ಕೋಟಿ ರೂ. ಮಾತ್ರ ದಂಡ ಸಂಗ್ರಹವಾಗಿತ್ತು.

ಎರಡನೇ ಬಾರಿಗೆ ರಿಯಾಯಿತಿ ಪ್ರಕಟಿಸಿದಾಗ ಇದೊಂದು ನಿರಂತರ ಪ್ರಕ್ರಿಯೆ ಎಂದು ಸಾರ್ವಜನಿಕರು ಭಾವಿಸಿದ್ದರಿಂದ ದಂಡ ಸಂಗ್ರಹ ಕಡಿಮೆಯಾಗಿದೆ. ಆದರೆ ಸಂಚಾರ ಪೊಲೀಸರು ದಂಡ ಸಂಗ್ರಹಿಸದೇ ಬಿಡುವುದಿಲ್ಲ. ನಿರಂತರವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವವರಿಂದ ದಂಡ ಸಂಗ್ರಹಿಸುವ ಪ್ರಕ್ರಿಯೆ ಮುಂದುವರದಿದೆ. ಭಾರಿ ಪ್ರಮಾಣದಲ್ಲಿ ದಂಡ ಉಳಿಸಿಕೊಂಡಿರುವವರ ಹೆಸರನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ಮೇ 15 ರ ನಂತರ ಬೆಂಗಳೂರಿನಲ್ಲಿ 25,000 ರೂ ಗಳಿಗೂ ಹೆಚ್ಚು ದಂಡ ಪಾವತಿಸಬೇಕಾಗಿರುವವರಿಗೆ ನೋಟಿಸ್ ನೀಡಲು ಸಿದ್ದತೆಗಳು ನಡೆದಿವೆ. ಇತರ ನಗರಗಳಲ್ಲಿ 10,000 ರೂ ದಂಡ ಉಳಿಸಿಕೊಂಡಿರುವವರಿಗೆ ನೋಟಿಸ್ ನೀಡಲಾಗುವುದು. ದಂಡ ಪಾವತಿಸಲು ಎಲ್ಲರಿಗೂ 15 ದಿನಗಳ ಕಾಲಾವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ- ವಾಹನ ಹರಾಜು?

ನಿರಂತರವಾಗಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವವರ ವಾಹನಗಳನ್ನು ಹರಾಜು ಹಾಕಲು ಸಹಾಯಕವಾಗುವಂತೆ ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ತರುವಂತೆಯೂ ಸಾರಿಗೆ ಇಲಾಖೆಗೆ ಪತ್ರ ಬರೆದಿದೆ. ಆದರೆ ಸಾರಿಗೆ ಇಲಾಖೆ ಮೂಲಗಳ ಪ್ರಕಾರ ಸಧ್ಯದಲ್ಲಿ ಇಂತಹ ನಿಯಮಗಳನ್ನು ಜಾರಿಗೊಳಿಸಲು ಕಾಯಿದೆಯಲ್ಲಿ ಅವಕಾಶಗಳಿಲ್ಲ. ಆದರೂ ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಕಟ್ಟಲು ಪಜೀತಿ ಪಡುವುದಕ್ಕಿಂತ ಸಂಚಾರ ನಿಯಮಗಳನ್ನು ಪಾಲನೆ ಮಾಡುವುದು ಜಾಣತನ. ನಿಯಮಗಳನ್ನು ಜಾರಿಗೊಳಿಸಿರುವುದು ವಾಹನ ಸವಾರರ ಹಿತಕ್ಕಾಗಿಯೇ ಹೊರತು ಸರಕಾರದ ರಕ್ಷಣೆಗೆ ಅಲ್ಲ ಎನ್ನುವುದನ್ನು ನೆನಪಿನಲ್ಲಿಡಿ.

(ವರದಿ- ಎಚ್. ಮಾರುತಿ, ಬೆಂಗಳೂರು)