Bangalore News: ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ನಡುವೆ ವಾಹನ ಅತಿ ವೇಗ ಚಾಲನೆ, ಈ ವರ್ಷ ದಾಖಲಾಗಿದ್ದು 8 ಸಾವಿರಕ್ಕೂ ಹೆಚ್ಚು ಪ್ರಕರಣ !
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ನಡುವೆ ವಾಹನ ಅತಿ ವೇಗ ಚಾಲನೆ, ಈ ವರ್ಷ ದಾಖಲಾಗಿದ್ದು 8 ಸಾವಿರಕ್ಕೂ ಹೆಚ್ಚು ಪ್ರಕರಣ !

Bangalore News: ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ನಡುವೆ ವಾಹನ ಅತಿ ವೇಗ ಚಾಲನೆ, ಈ ವರ್ಷ ದಾಖಲಾಗಿದ್ದು 8 ಸಾವಿರಕ್ಕೂ ಹೆಚ್ಚು ಪ್ರಕರಣ !

Bangalore Traffic ಉದ್ಯಾನ ನಗರಿ ಬೆಂಗಳೂರಿನಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಟ್ರಾಫಿಕ್ ಕಿರಿಕಿರಿ ತಪ್ಪಿಲ್ಲ. ಈ ಟ್ರಾಫಿಕ್‍ನಲ್ಲಿ ಹೇಗಪ್ಪಾ ಹೋಗುವುದು ಅಂತಾ ವಾಹನ ಸವಾರರು ತಲೆಬಿಸಿ ಮಾಡುತ್ತಿದ್ದರೆ, ಅತಿ ವೇಗವಾಗಿ ವಾಹನ ಓಡಿಸುವವರ ಪ್ರಕರಣವಂತೂ ದಿನೇ ದಿನೇ ಹೆಚ್ಚುತ್ತಿದೆ.ವರದಿ: ಪ್ರಿಯಾಂಕ ಗೌಡ, ಬೆಂಗಳೂರು

ಬೆಂಗಳೂರಿನಲ್ಲಿ ಟ್ರಾಫಿಕ್‌ ಕಿರಿಕಿರಿ ನಡುವೆಯೂ ನಿಯಮ ಉಲ್ಲಂಘಿಸಿದ ಪ್ರಕರಣಗಳು ಏರಿಕೆ ಕಂಡಿವೆ.
ಬೆಂಗಳೂರಿನಲ್ಲಿ ಟ್ರಾಫಿಕ್‌ ಕಿರಿಕಿರಿ ನಡುವೆಯೂ ನಿಯಮ ಉಲ್ಲಂಘಿಸಿದ ಪ್ರಕರಣಗಳು ಏರಿಕೆ ಕಂಡಿವೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್‍ ದಟ್ಟಣೆಗೆ ಕುಖ್ಯಾತಿ ಪಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮಳೆಯೇ ಬರಲಿ.. ಬಿಸಿಲೇ ಇರಲಿ.. ಟ್ರಾಫಿಕ್ ಕಿರಿಕಿರಿಯಂತೂ ತಪ್ಪಿದ್ದಲ್ಲ. ಆದರೆ, ಇಷ್ಟೊಂದು ಸಂಚಾರ ದಟ್ಟಣೆ ನಡುವೆ ಕೆಲವರು ವೇಗವಾಗಿ ವಾಹನ ಚಲಾಯಿಸುವುದು ಮಾತ್ರ ಆಘಾತವನ್ನುಂಟು ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 5,000ಕ್ಕೂ ಹೆಚ್ಚು ವೇಗದ ಪ್ರಕರಣಗಳು ದಾಖಲಾಗಿವೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.ನಗರದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಅತಿ ವೇಗದ ಸವಾರರಿಗೆ ಮಾತ್ರ ಇದ್ಯಾವುದೂ ಲೆಕ್ಕಕ್ಕಿಲ್ಲ. 2024ರಲ್ಲಿ (ಜೂನ್) ಸಂಚಾರಿ ಪೊಲೀಸರು ನಗರದಲ್ಲಿ 8,173 ಪ್ರಕರಣಗಳನ್ನು ದಾಖಲಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 5,899 ಪ್ರಕರಣಗಳು ಹೆಚ್ಚಾಗಿವೆ. ಬರೋಬ್ಬರಿ ಶೇ. 259.4ರಷ್ಟು ಪ್ರಕರಣಗಳು ಹೆಚ್ಚಾಗಿರುವುದು ಕಳವಳ ಮೂಡಿಸಿದೆ. 2023ರಲ್ಲಿ ವೇಗದ ಚಾಲನೆ ಪ್ರಕರಣಗಳ ಸಂಖ್ಯೆಯು ಇಡೀ ವರ್ಷದಲ್ಲಿ 2,274ರಷ್ಟು ದಾಖಲಾಗಿತ್ತು. ಆದರೆ, 2022ರಲ್ಲಿ 50,095 ಪ್ರಕರಣಗಳು ದಾಖಲಾಗಿತ್ತು.

ಇನ್ನು, ಬಾಡಿಗೆಗೆ ತೆರಳು ನಿರಾಕರಣೆ ಪ್ರಕರಣ ಹಾಗೂ ದೋಷಯುಕ್ತ ಸೈಲೆನ್ಸರ್ ಗಳ ಪ್ರಕರಣಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಬಾಡಿಗೆಗೆ ತೆರಳಲು ನಿರಾಕರಿಸಿರುವ ಕೇಸ್ನಲ್ಲಿ 2024ರಲ್ಲಿ (ಜೂನ್‍ವರೆಗೆ) ಸಂಚಾರಿ ಪೊಲೀಸರು 2,028 ಪ್ರಕರಣಗಳನ್ನು ಮತ್ತು 2023ರಲ್ಲಿ 1,537 ಪ್ರಕರಣಗಳನ್ನು ದಾಖಲಿಸಿದ್ದರು. 2024ರಲ್ಲಿ 724 ದೋಷಯುಕ್ತ ಸೈಲೆನ್ಸರ್ ಗಳ ಪ್ರಕರಣವನ್ನು ದಾಖಲಿಸಿದ್ದಾರೆ.

ಒಟ್ಟಾರೆಯಾಗಿ, ಇಲ್ಲಿಯವರೆಗೆ ಸಂಚಾರ ಪೊಲೀಸರು 46,07,877 ವಿವಿಧ ಸಂಚಾರ ಅಪರಾಧಗಳ ಪ್ರಕರಣವನ್ನು ದಾಖಲಿಸಿದ್ದಾರೆ. ಕಳೆದ ವರ್ಷದ ಪ್ರಕರಣಗಳಿಗೆ ಹೋಲಿಸಿದರೆ ಇದು 51.20 ಶೇಕಡಾ ಹೊಂದಿದೆ. ಕಳೆದ ವರ್ಷ ಇಡೀ ವರ್ಷದಲ್ಲಿ 89,99,379 ಪ್ರಕರಣಗಳನ್ನು ಸಂಚಾರ ಉಲ್ಲಂಘಿಸಿದ್ದಕ್ಕೆ ಸಂಚಾರಿ ಪೊಲೀಸರು ದಾಖಲಿಸಿದ್ದರು. ಈ ಬಗ್ಗೆ ‘ಬೆಂಗಳೂರು ಮಿರರ್’ ವರದಿ ಉಲ್ಲೇಖಿಸಿದೆ.

ನಾವು ತಪಾಸಣೆ ಮತ್ತು ಜಾರಿಯನ್ನು ಹೆಚ್ಚಿಸಿದ್ದೇವೆ. ಇದಕ್ಕಾಗಿ ಪ್ರತಿ ವಾರ ವಿಶೇಷ ಅಭಿಯಾನವನ್ನು ನಡೆಸುತ್ತಿದ್ದೇವೆ. ದಕ್ಷಿಣ ವಿಭಾಗದ ವ್ಯಾಪ್ತಿಯಲ್ಲಿ, ಅತಿ ವೇಗದ ಚಾಲನೆಯಿಂದ ಅಪಘಾತಕ್ಕೀಡಾಗುತ್ತಿರುವ ಕೆಲವು ಪ್ರದೇಶಗಳನ್ನು ಗುರುತಿಸಿದ್ದೇವೆ. ನೈಸ್ ರಸ್ತೆಗೆ ಸಂಪರ್ಕ ಹೊಂದಿರುವ ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ ಮತ್ತು ಸರ್ಜಾಪುರ ರಸ್ತೆಗಳನ್ನು ಇದಕ್ಕಾಗಿ ನಿಗದಿಪಡಿಸಲಾಗಿದೆ. ಸ್ಪೀಡೋಮೀಟರ್ ಗಳಿಲ್ಲದ ಕಾರಣ ರಸ್ತೆಯಲ್ಲಿಯೇ ಹುಡುಕಿ ಅಂತಹ ಅಪರಾಧಿಗಳನ್ನು ಪತ್ತೆಮಾಡಬೇಕಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ನಗರದ ಕೆಲವು ರಸ್ತೆಗಳಲ್ಲಿ ಕೆಲವರು ಅತಿ ವೇಗವಾಗಿ ವಾಹನ ಚಲಾಯಿಸುತ್ತಿರುವುದು ಗಮನಕ್ಕೆ ಬಂದಿದೆ. ರಸ್ತೆಯಲ್ಲಿ ವಾಹನಗಳನ್ನು ಮಾರ್ಪಡಿಸುವ ಮತ್ತು ಗುಣಮಟ್ಟವಿಲ್ಲದ ವಾಹನಗಳನ್ನು ಚಲಾಯಿಸುವ ಆರೋಪಿಗಳನ್ನು ಸಂಚಾರಿ ಪೊಲೀಸರೇ ಕಂಡುಹಿಡಿಯಬೇಕು. ವೇಗವಾಗಿ ಚಲಾಯಿಸದಂತೆ ಹಾಗೂ ಪಾದಚಾರಿಗಳಿಗೆ ಹಾದಿಯನ್ನು ಸುಗಮಗೊಳಿಸಲು, ಆಯ್ದ ಸ್ಥಳಗಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ಮೇಲ್ಸೇತುವೆಯಂಥವುಗಳನ್ನು ಸ್ಥಾಪಿಸಬೇಕು. ಉದಾಹರಣೆಗೆ, ಜೈನ್ ಆಸ್ಪತ್ರೆ ಬಳಿಯ ಮಿಲ್ಲರ್ಸ್ ರಸ್ತೆಯಲ್ಲಿ, ವಾಹನಗಳು ಚಂದ್ರಿಕಾ ವೃತ್ತದಿಂದ ಅತಿ ವೇಗದಿಂದ ಬರುತ್ತವೆ. ಹೀಗಾಗಿ ಈ ಪ್ರದೇಶದಲ್ಲಿ ಎಚ್‍ಆರ್‍ಪಿಸಿಗಾಗಿ ವರ್ಷಗಳಿಂದ ವಿನಂತಿಸುತ್ತಿದ್ದೇವೆ ಎಂದು ನಾಗರಿಕ ಸಂಚಾಲಕ ರಾಜ್‍ಕುಮಾರ್ ದುಗರ್ ತಿಳಿಸಿದ್ದಾರೆ.

(ವರದಿ: ಪ್ರಿಯಾಂಕ ಗೌಡ, ಬೆಂಗಳೂರು)