ಬೆಂಗಳೂರು: ಮಾತು ಬಾರದ 3 ವರ್ಷದ ಮಗುವನ್ನು ಕೊಂದ ಹೆತ್ತ ತಾಯಿ; ಈಜಲೆಂದು ಈಜುಕೊಳಕ್ಕೆ ಇಳಿದು ಹೆಣವಾದ 7 ವರ್ಷದ ಬಾಲಕಿ, ಎಫ್‌ಐಆರ್ ದಾಖಲು
ಬೆಂಗಳೂರಿನ ಮಂಜುನಾಥ ನಗರದಲ್ಲಿ ಮಾತು ಬಾರದ 3 ವರ್ಷದ ಮಗುವನ್ನು ಕೊಂದ ಹೆತ್ತ ತಾಯಿ, ಬಳಿಕ ಪೊಲೀಸರಿಗೆ ಶರಣಾಗಿದ್ದಾಳೆ. ಇನ್ನೊಂದು ಪ್ರಕರಣದಲ್ಲಿ, ಈಜಲೆಂದು ಈಜುಕೊಳಕ್ಕೆ ಇಳಿದು 7 ವರ್ಷದ ಬಾಲಕಿ ಮೃತಪಟ್ಟ ಘಟನೆ ವರದಿಯಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ರಾಜಾಜಿನಗರಕ್ಕೆ ಹೊಂದಿಕೊಂಡಿರುವ ಮಂಜುನಾಥ ನಗರದಲ್ಲಿ 35 ವರ್ಷದ ತಾಯಿಯೊಬ್ಬರು ತನ್ನ ಮೂರು ವರ್ಷ ಹತ್ತು ತಿಂಗಳ ಮಗುವನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ನಡೆದಿದೆ. ರಮ್ಯಾ ವೆಂಕಟೇಶ್ ಎಂಬ ಮಹಿಳೆ ಈ ದುಷ್ಕೃತ್ಯ ನಡೆಸಿ ಸುಬ್ರಹ್ಮಣ್ಯಪುರ ಪೊಲೀಸರಿಗೆ ಶರಣಾಗಿದ್ದಾರೆ.
ಈಕೆ ತನ್ನ ಮಗು ಪ್ರತಿಕಾಳನ್ನು ವೇಲ್‌ನಿಂದ ಕತ್ತು ಹಿಸುಕಿ ಸಾಯಿಸಿದ್ದಾರೆ. ಗುರುವಾರ ಮಧ್ಯಾಹ್ನ 12.30ರ ವೇಳೆಗೆ ಈ ಘಟನೆ ನಡೆದಿದೆ. ಪ್ರತಿಕಾಗೆ ಸರಿಯಾಗಿ ಮಾತು ಬರುತ್ತಿರಲಿಲ್ಲ, ತೊದಲುತ್ತಿದ್ದಳು. ಈಕೆಗೆ ಮತ್ತೊಂದು ಅವಳಿ ಮಗು ಇದೆ. ಮಾತು ಬಾರದೆ ಇರುವುದರಿಂದ ತನ್ನ ಮಗು ಮೂಕಿಯಾಗಬಹುದು ಎಂಬ ಆತಂಕದಿಂದ ರಮ್ಯಾ ಮಗುವನ್ನು ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ಕತ್ತು ಹಿಸುಕಿದ ನಂತರ ಮಗುವಿನ ಚಲನವಲನ ನಿಂತು ಹೋಗಿದೆ. ಭಯಭೀತರಾದ ರಮ್ಯಾ ಮಗುವನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದರಿಂದ ರಮ್ಯಾ ಮತ್ತಷ್ಟು ಗಾಬರಿಗೊಳಗಾಗಿದ್ದಾರೆ. ಕೂಡಲೇ ಆಕೆ ತನ್ನ ಮೈದುನನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇಬ್ಬರೂ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಮೈದುನ ದೂರು ಸಲ್ಲಿಸಿದ್ದು ರಮ್ಯಾ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಮ್ಯಾ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮಂಜುನಾಥ ನಗರದ ಅಪಾರ್ಟ್ ಮೆಂಟ್‌ನಲ್ಲಿ ನೆಲೆಸಿದ್ದರು. ಖಾಸಗಿ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತಿದ್ದ ರಮ್ಯಾ ಮಕ್ಕಳನ್ನು ನೋಡಿಕೊಳ್ಳಲೆಂದು ಇತ್ತೀಚೆಗಷ್ಟೇ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆಕೆಯ ಪತಿ ನಾರ್ವೆ ದೇಶದಲ್ಲಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಜಲೆಂದು ಈಜುಕೊಳಕ್ಕೆ ಇಳಿದು ಹೆಣವಾದ 7 ವರ್ಷದ ಬಾಲಕಿ
ಬೆಂಗಳೂರಿನ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ರಾಮ್ಕಿ ಒನ್ ನಾರ್ತ್ ಅಪಾರ್ಟ್ ಮೆಂಟ್ ನ ಈಜುಕೊಳಕ್ಕೆ 7 ವರ್ಷದ ಬಾಲಕಿಯೊಬ್ಬಳು ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಈ ಸಾವು ಕುರಿತು ರಾಮ್ಕಿ ಒನ್ ನಾರ್ತ್ ಅಪಾರ್ಟ್ ಮೆಂಟ್ ನಿವಾಸಿಗಳ ಸಹಕಾರ ಸಂಘದ ಅಧ್ಯಕ್ಷ ವಿದ್ಯಾಧರ್ ದುರ್ಗೇಕರ್ ಅವರು ಮುಖ್ಯಮಂತ್ರಿ, ಗೃಹ ಸಚಿವ ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗಳಿಗೆ ದೂರು ಸಲ್ಲಿಸಿದ್ದಾರೆ.
ಅಪಾರ್ಟ್ ಮೆಂಟ್ ನಿವಾಸಿಗಳ ರಕ್ಷಣೆ ಅಪಾರ್ಟ್ ಮೆಂಟ್ ನ ಕಳಪೆ ನಿರ್ವಹಣೆ ಮತ್ತು ಉದಾಸೀನ ಕುರಿತು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈಜುಕೊಳದ ಬಳಿ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಮತ್ತೊಂದು ಕೆಲಸ ವಹಿಸಲಾಗಿತ್ತು. ಆ ಸಮಯದಲ್ಲಿ ಈ ಬಾಲಕಿ ಈಜಾಡಲೆಂದು ಈಜುಕೊಳಕ್ಕೆ ಇಳಿದಿದ್ದಾಳೆ. ಆದರೆ ಹೆಣವಾಗಿ ಹೊರಬಂದಿದ್ದಾಳೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಕ್ಯೂರಿಟಿ ಸಂಸ್ಥೆಯನ್ನು ಬದಲಾಯಿಸುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಅಪಾರ್ಟ್ ಮೆಂಟ್ ಮಾಲೀಕ ನಿರ್ಲಕ್ಷ್ಯ ತೋರಿದ್ದು ಯಾವುದೇ ಪ್ರಯೋಜನವಾಗಿಲ್ಲ ಎಂದೂ ಹೇಳಿದ್ದಾರೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
(ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.