Muda Case: ಮುಡಾ ಹಗರಣ; ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ಮುಕ್ತಾಯ, ದೂರು ಅಂಗೀಕರಿಸಬೇಕೆ, ಬೇಡವೇ? ಆಗಸ್ಟ್‌ 13ಕ್ಕೆ ನಿರ್ಧಾರ-bengaluru news muda case hearing of case in which cbi had requested an investigation order was announced on august 13 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Muda Case: ಮುಡಾ ಹಗರಣ; ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ಮುಕ್ತಾಯ, ದೂರು ಅಂಗೀಕರಿಸಬೇಕೆ, ಬೇಡವೇ? ಆಗಸ್ಟ್‌ 13ಕ್ಕೆ ನಿರ್ಧಾರ

Muda Case: ಮುಡಾ ಹಗರಣ; ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ಮುಕ್ತಾಯ, ದೂರು ಅಂಗೀಕರಿಸಬೇಕೆ, ಬೇಡವೇ? ಆಗಸ್ಟ್‌ 13ಕ್ಕೆ ನಿರ್ಧಾರ

ಮುಡಾ ಹಗರಣ ಕುರಿತಾದ ಖಾಸಗಿ ದೂರನ್ನು ಅಂಗೀಕರಿಸುವಂತೆ ಕೋರಿ ಹೈಕೋರ್ಟ್‌ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್‌ ಶುಕ್ರವಾರ ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ಎದುರು ವಾದಿಸಿದರು. (ವರದಿ: ಎಚ್.ಮಾರುತಿ)

 ಮುಡಾ ಹಗರಣ, ಸಿಬಿಐ ತನಿಖೆ ಕೋರಿದ್ದ ಪ್ರಕರಣದ ವಿಚಾರಣೆ, ಆಗಸ್ಟ್‌ 13ರಂದು ಆದೇಶ ಪ್ರಕಟ
ಮುಡಾ ಹಗರಣ, ಸಿಬಿಐ ತನಿಖೆ ಕೋರಿದ್ದ ಪ್ರಕರಣದ ವಿಚಾರಣೆ, ಆಗಸ್ಟ್‌ 13ರಂದು ಆದೇಶ ಪ್ರಕಟ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿ 14 ನಿವೇಶನಗಳನ್ನು ಅಕ್ರಮವಾಗಿ ಪಡೆದಿರುವ ಪ್ರಕರಣ ಕುರಿತು ಸಿಬಿಐ ಅಥವಾ ಬೇರೆ ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿದ್ದ ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸುವ ಕುರಿತಾದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಯ್ದಿರಿಸಿದೆ.

ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಮುಡಾ ಹಗರಣ ಕುರಿತಾದ ಖಾಸಗಿ ದೂರನ್ನು ಅಂಗೀಕರಿಸುವಂತೆ ಕೋರಿ ಹೈಕೋರ್ಟ್‌ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್‌ ಶುಕ್ರವಾರ ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ಎದುರು ವಾದಿಸಿದರು.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ಮೈಸೂರಿನ ಪ್ರತಿಷ್ಠಿತ ಬಡಾವಣೆಯಾಗಿರುವ ವಿಜಯನಗರದಲ್ಲಿ ಬದಲಿ ನಿವೇಶನಗಳನ್ನು ತಮ್ಮ ಪತ್ನಿ ಹೆಸರಿಗೆ ಮಂಜೂರು ಮಾಡಿಸಿಕೊಂಡಿದ್ದಾರೆ. ಪತಿ ಆಧಿಕಾರದಲ್ಲಿರುವಾಗ ಪತ್ನಿ ಅಕ್ರಮ ಆಸ್ತಿ ಗಳಿಕೆಯ ಪ್ರಕರಣ ಇದಾಗಿದೆ ಎಂದು ವಾದಿಸಿದರು. ಮುಂದುವರೆದ ಅವರು ಈ ನಿವೇಶನಗಳನ್ನು ಬಿಟ್ಟುಕೊಡಬೇಕಾದರೆ ತಮ್ಮ ಪತ್ನಿಗೆ 65 ಕೋಟಿ ರೂ. ಹಣ ನೀಡಬೇಕಾಗುತ್ತದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳುತ್ತಿದ್ದಾರೆ. ಆದ್ದರಿಂದ ಇದು ತನಿಖೆಗೆ ಅರ್ಹವಾದ ಪ್ರಕರಣ ಎನ್ನುವುದರಲಿ ಸಂಶಯವೇ ಇಲ್ಲ. ಆದ್ದರಿಂದ ಈ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಲು ಆದೇಶ ಹೊರಡಿಸಬೇಕು ಎಂದು ವಿಶೇಷ ನ್ಯಾಯಾಲಯದ ನ್ಯಾಯಾದೀಶ ಗಜಾನನ ಭಟ್‌ ಅವರ ಎದುರು ವಾದಿಸಿದರು.

ವಾದವನ್ನು ಆಲಿಸಿದ ನ್ಯಾಯಾದೀಶ ಭಟ್‌ ಅವರು ಈ ದೂರನ್ನು ಅಂಗೀಕರಿಸಬೇಕೋ ಬೇಡವೋ ಎಂದು ಇದೇ 13ರಂದು ಪ್ರಕಟಿಸುವುದಾಗಿ ತಿಳಿಸಿದರು. ಹೈಕೋರ್ಟ್‌ ವಕೀಲ ವಸಂತ ಕುಮಾರ್‌ ಅರ್ಜಿದಾರರ ಪರ ವಕಾಲತ್ತು ವಹಿಸಿದರು. ಗುರುವಾರ ಕೃಷ್ಣ ಅವರು ವಿಶೇಷ ನ್ಯಾಯಾಲಯದಲ್ಲಿ ಸಿದ್ದರಾಮಯ್ಯ, ಪಾರ್ವತಿ, ಅವರ ಸಹೋದರ ಮಲ್ಲಿಕಾರ್ಜುನಸ್ವಾಮಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ಹತ್ತಾರು ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದೂ ಆರೋಪಿಸಿದ್ದರು. ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ಇಂತಹ ಸುಳ್ಳು ಹಗರಣಗಳನ್ನು ಎದುರಿಸುವ ಶಕ್ತಿ ನನಗಿದೆ. ಕಾನೂನು ಎದುರು ಇಂತಹ ಸುಳ್ಳು ಆರೋಪಗಳು ನಿಲ್ಲುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮೈಸೂರು ಮುಡಾ ಹಗರಣ ಕುರಿತು ಆಡಳಿತಾರೂಢ ಕಾಂಗ್ರೆಸ್‌ ಮತ್ತು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಪ್ರತಿಷ್ಠೆಯನ್ನಾಗಿಸಿಕೊಂಡಿವೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಜೆಡಿಎಸ್‌ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ಶನಿವಾರ ಮುಕ್ತಾಯಗೊಳ್ಳಲಿದೆ.

ಪಾದಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಒಂದು ದಿನ ಮುಂಚಿತವಾಗಿ ಕಾಂಗ್ರೆಸ್‌ ಜನಾಂದೋಲನ ಸಭೆ ಹಮ್ಮಿಕೊಳ್ಳುತ್ತಾ ಬಂದಿದೆ. ಶುಕ್ರವಾರ ಮೈಸೂರಿನನಲ್ಲಿ ಕಾಂಗ್ರೆಸ್‌ ಬೃಹತ್‌ ಸಮಾವೇಶ ಹಮ್ಮಿಕೊಂಡಿದ್ದರೆ ಶನಿವಾರ ಅದೇ ಮೈದಾನದಲ್ಲಿ ಬಿಜೆಪಿ ಜೆಡಿಎಸ್‌ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ. ಮುಂಗಾರು ಆಧಿವೇಶನದಲ್ಲೂ ಇದೇ ಹಗರಣ ಪ್ರತಿಧ್ವನಿಸಿ ಸದನದ ಬಹುತೇಕ ಸಮಯವನ್ನು ನುಂಗಿ ಹಾಕಿತ್ತು. ಈ ಹಗರಣದ ಪ್ರಸ್ತಾಪದಿಂದ ಮೂರೂ ಪಕ್ಷಗಳ ರಾಜಕಾರಣಿಗಳು ಒಂದೇ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದ್ದು ಸುಳ್ಳಲ್ಲ. ಪ್ರತಿಯೊಬ್ಬರೂ ಮತ್ತೊಬ್ಬರತ್ತ ಬೊಟ್ಟು ಮಾಡಿ ತೋರಿಸಿದರೇ ಹೊರತು ತಾವು ಎಷ್ಟು ಪ್ರಾಮಾಣಿಕ ಎಂದು ಯಾರೊಬ್ಬರೂ ಸಾಬೀತು ಮಾಡುವ ಧೈರ್ಯ ಮಾಡಲಿಲ್ಲ ಎನ್ನುವುದು ಅಷ್ಟೇ ಸತ್ಯ.